ಮೈಸೂರು : ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾಲಯ ಈ ಶೈಕ್ಷಣಿಕ ಸಾಲಿನಲ್ಲೇ ಪಿಎಚ್.ಡಿ ನಿಯಮಾವಳಿಗಳಿಗೆ ತಿದ್ದುಪಡಿ ತರಲು ತೀರ್ಮಾನಿಸಿದೆ.
ಈ ಬಗ್ಗೆ ಇಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಈ ಸಂಬಂಧ ಸಮಿತಿ ರಚನೆ ಮಾಡಿ ವರದಿ ಪಡೆಯಲಾಗುವುದು. ಮುಂದೆ ಎಲ್ಲಾ ವಿಭಾಗದವರಿಗೂ ಅನ್ವಯವಾಗುವಂತೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.
ಹಾಜರಾತಿಗೆ ಮಾರ್ಗಸೂಚಿ:
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 9 ವಿದ್ಯಾರ್ಥಿಗಳಿಗೆ ಹಾಜರಾತಿ ಕಡಿಮೆ ಇದ್ದ ಕಾರಣಕ್ಕೆ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂಬ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಸರಕಾರದ ನಾಮನಿರ್ದೇಶನ ಸದಸ್ಯ ಶಶಿಕುಮಾರ ಮಾತನಾಡಿ, ಶೇ.75ರಷ್ಟು ಹಾಜರಾತಿ ಕಡ್ಡಾಯ ಇರುವಾಗ ಪರೀಕ್ಷೆ ಬರೆಯಲು ಹೇಗೆ ಅವಕಾಶ ಕೊಡಲಾಯಿತು? ಈ ರೀತಿ ಅವಕಾಶ ಕೊಟ್ಟರೆ ತರಗತಿಗೆ ಪ್ರಾಮಾಣಿಕವಾಗಿ ಬರುವ ವಿದ್ಯಾರ್ಥಿಗಳಿಗೆ ಮೋಸ ಆದಂತೆ ಆಗುತ್ತದೆ. ಎಲ್ಲಾ ವಿಷಯದಲ್ಲೂ ಹಾಜರಾತಿ ಸರಿ ಇದ್ದು, ಒಂದು ವಿಷಯದಲ್ಲಿ ಯಾಕೆ ಕಡಿಮೆ ಆಯಿತು ಎಂದು ಪ್ರಶ್ನಿಸಿದರು. ಕೆ-ಸೆಟ್ ಸಮನ್ವಯಾಧಿಕಾರಿ ಪ್ರೊ.ರಾಜಶೇಖರ್ ಮಾತನಾಡಿ, ಈ ವಿಷಯದಲ್ಲಿ ಪ್ರಾಧ್ಯಾಪಕರ ಜವಾಬ್ದಾರಿಯೂ ಹೆಚ್ಚಿರುತ್ತದೆ. ಪ್ರತಿ ತಿಂಗಳು ಹಾಜರಾತಿ ವಿವರಗಳನ್ನು ನೋಟಿಸ್ ಬೋರ್ಡ್ಗೆ ಹಾಕಬೇಕಿತ್ತು. ವಿಶೇಷ ತರಗತಿ ತೆಗೆದುಕೊಂಡು ಹಾಜರಾತಿ ಸರಿದೂಗಿಸಬೇಕಿತ್ತು ಎಂದರು.
ಬಜೆಟ್ ನಲ್ಲಿ ಗ್ರಂಥಾಲಯಕ್ಕೆ ಅನುದಾನ ತಡೆ ಹಿಡಿದಿರುವ ಬಗ್ಗೆ ಡೀನ್ ಸರಸ್ವತಿ ಅವರು ಗಮನ ಸೆಳೆದರು. ಅನುದಾನ ಕೊಡಿಸುವ ಭರವಸೆಯನ್ನು ವಿಸಿ ಹೇಮಂತಗ ಕುಮಾರ್ ನೀಡಿದರು. 2018-19ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯ ಆಕ್ಷೇಪಣೆಗಳಿಗೆ ಅನುಪಾಲನಾ ವರದಿ ಬಗ್ಗೆ ಚರ್ಚೆ ಆಗಬೇಕಾದ ಹಿನ್ನೆಲೆಯಲ್ಲಿ ಅನುಮೋದನೆ ಸಿಗಲಿಲ್ಲ. ಮೈಕ್ರೋ ಬಯೋಲಜಿ ಪ್ರೊ.ಎನ್.ಲಕ್ಷ್ಮಿದೇವಿ ಚಿನ್ನದ ಪದಕ ದತ್ತಿ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು. ಈ ಸಂದ್ರಭದಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಹಣಕಾಸು ಅಧಿಕಾರಿ ಸಂಗೀತ ಗಜಾನನ ಸೇರಿದಂತೆ ಇತರರು ಇದ್ದರು.