ಮೈಸೂರು ನಗರಪಾಲಿಕೆ ಆರಂಭಿಸಿದ್ದ ಪ್ಲಾಸ್ಟಿಕ್ ನಿಯಂತ್ರಣದ ಭಯ ಈಗ ಮಾಯ, ಮತ್ತೆ ಎಗ್ಗಿಲ್ಲದೇ ನಡೆದಿದೆ ವಹಿವಾಟು
ಎಚ್.ಎಸ್.ದಿನೇಶ್‌ಕುಮಾರ್
ಮೈಸೂರು: ಮೈಸೂರಿನಲ್ಲಿ ಮಿತಿ ಮೀರಿರುವ ಪ್ಲಾಸ್ಟಿಕ್ ಹಾವಳಿ ನಿಯಂತ್ರಿಸಿ ಲಕ್ಷಾಂತರ ದಂಡ ವಸೂಲಿ ಮಾಡಿದ್ದ ಹಿರಿಯ ಕೆಎಎಸ್ ಅಧಿಕಾರಿಯನ್ನು ವಾರದ ಹಿಂದೆ ವರ್ಗಗೊಳಿಸಲಾಗಿದ್ದು, ವ್ಯಾಪಾರಿಗಳ ಪ್ಲಾಸ್ಟಿಕ್ ಲಾಬಿ ಕೈವಾಡವಿರುವ ಚರ್ಚೆಗಳು ಪಾಲಿಕೆ ಅಂಗಳದಲ್ಲಿ ನಡೆದಿವೆ.
ಐದು ತಿಂಗಳ ಹಿಂದಿನ ಮಾತು. ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಉಲ್ಲಿ ನಗರಪಾಲಿಕೆ ವ್ಯಾಪ್ತಿಯ ಸಂತೇಪೇಟೆ, ಶಿವರಾಂಪೇಟೆ ಮತ್ತಿತರ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ಮಾಡಿದ್ದ ನಗರಪಾಲಿಕೆ ಅಧಿಕಾರಿಗಳು ಟನ್‌ಗಟ್ಟಲೇ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ ಭಾರೀ ದಂಡ ವಿಧಿಸಿ ವ್ಯಾಪಾರಸ್ಥರಿಗೆ ಬಿಸಿಮುಟ್ಟಿಸಿದ್ದರು.
ಪ್ರತೀದಿನ ಒಂದಲ್ಲಾ ಒಂದು ಬಡಾವಣೆಗಳಲ್ಲಿ ಪ್ಲಾಸ್ಟಿಕ್ ವಶ ಕಾರ್ಯಚರಣೆ ನಡೆಸಲಾಗುತ್ತಿತ್ತು. ಇದರಿಂದಾಗಿ ಕದ್ದುಮುಚ್ಚಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರು ಲಕ್ಷಾಂತರ ರೂ. ನಷ್ಟ ಅನುಭವಿಸಿದರು. ಇದು ಸಹಜವಾಗಿ ನಗರಪಾಲಿಕೆ ಅಧಿಕಾರಿಗಳ ವಿರುದ್ಧ ಅವರನ್ನು ಕೆರಳಿಸಿತು.
ನಿಷೇಧಿತ ಪ್ಲಾಸಿಕ್ ವಸ್ತುಗಳ ಮಾರಾಟ ಮಳಿಗೆಯ ಮೇಲೆ ದಾಳಿ ನಡೆಸುವ ನೇತೃತ್ವವನ್ನು ಹಿರಿಯ ಕೆಎಎಸ್ ಅಧಿಕಾರಿ ಡಾ.ಎಂ.ಜೆ.ರೂಪ ಅವರು ವಹಿಸಿದ್ದರು. ಯಾವುದೇ ಲಾಬಿಗೆ ಮಣಿಯದೆ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಅವರ ಕೈಕೆಳಗಿನ ಸಿಬ್ಬಂದಿಯೇ ಹೇಳುತ್ತಾರೆ. ಹೀಗಾಗಿ ಅವರ ವಿರುದ್ಧ ಕೆಲಸ ಆರಂಭಿಸಿದ ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರ ಲಾಬಿ, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಧಿಕಾರಿಯ ವರ್ಗಾವಣೆಗೆ ಯತ್ನ ಆರಂಭಿಸಿತು.ಕೊನೆಗೂ ವ್ಯಾಪಾರಸ್ಥರ ಲಾಬಿಗೆ ಮಣಿದ ಸರ್ಕಾರ ರೂಪ ಅವರನ್ನು ಸ್ಥಳವನ್ನೂ ತೋರಿಸದೆ ವರ್ಗಾವಣೆ ಮಾಡಿದೆ ಎಂದು ಪಾಲಿಕೆಯ ಆವರಣದಲ್ಲಿ ಚರ್ಚೆಗಳು ನಡೆದಿವೆ. ಆದರೆ ಯಾವುದೇ ಅಧಿಕಾರಿ, ಸಿಬ್ಬಂದಿ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಿದ್ದಾರೆ.
ನಿಂತ ಪ್ಲಾಸ್ಟಿಕ್ ದಾಳಿ!
ರೂಪ ಅವರು ಇದೀಗ ಅವರು ಕೆಎಟಿ ಯಲ್ಲಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಹೀಗಾಗಿ ನಮಗೇಕಪ್ಪಾ ಬೇಡದ ಉಸಾಬರಿ ಎಂದು ನಗರಪಾಲಿಕೆ ಸಿಬ್ಬಂದಿ ಹಾಗೂ ಕಿರಿಯ ಅಧಿಕಾರಿಗಳು ಪ್ಲಾಸ್ಟಿಕ್ ವಶ ಕಾರ್ಯಚರಣೆಯನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ಅದಕ್ಕೆ ಪೂರಕವೆಂಬಂತೆ. ಕಳೆದ ಒಂದು ತಿಂಗಳಿನಿಂದ ನಗರಪಾಲಿಕೆ ಅಧಿಕಾರಿಗಳು ಅಥವಾ ಸಿಬ್ಬಂದಿ ಪ್ಲಾಸ್ಟಿಕ್ ಮಾರಾಟಗಾರರ ಮಳಿಗೆಯತ್ತ ತಿರುಗಿಯೂ ನೋಡುತ್ತಿಲ್ಲ. ಹೀಗಾಗಿ ಶಿವರಾಂಪೇಟೆ, ಸಂತೇಪೇಟೆ, ಬಂಡೀಪಾಳ್ಯದ ಮಾರಾಟ ಮಳಿಗೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಕವರ್, ತಟ್ಟೆ, ಲೋಟ, ಪ್ಲಾಸ್ಟಿಕ್ ಹಾಳೆಗಳು ಈಗ ಎಗ್ಗಿಲ್ಲದೆ ಮಾರಾಟವಾಗುತ್ತಿವೆ.
ಇದರ ಜೊತೆಗೆ ನಗರಪಾಲಿಕೆ ಅಧಿಕಾರಿಗಳ ಕಣ್ತಪ್ಪಿಸಿ ಕವರ್, ಲೋಟ, ಪ್ಲೇಟ್ ಹಾಗೂ ಇನ್ನಿತರ ಪ್ಲಾಸ್ಟಿಕ್ ವಸ್ತುಗಳನ್ನು ಕದ್ದುಮುಚ್ಚಿ ಮಾರಾಟ ಮಾಡಬೇಕು ಎಂದು ಹೇಳಿಕೊಂಡು ಹೋಟೆಲ್, ದಿನಸಿ ಮಾರಾಟ ಮಳಿಗೆಯವರಿಂದ ದುಪ್ಪಟ್ಟು ಹಣವನ್ನು ಪಡೆದು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.
ಸರ್ಕಾರ ರೂಪಿಸುವ ಕಾಯ್ದೆಗಳ ಜಾರಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಇದೇ ವೇಳೆ ಲಾಬಿಗೆ ಮಣಿದು ಅಧಿಕಾರಿ ವರ್ಗಕ್ಕೆ ಕಿರುಕುಳ ನೀಡಿದಲ್ಲಿ ನಿಯಮ ಉಲ್ಲಂಘಿಸಿ ಹಣ ಮಾಡುವವರಿಗೆ ಹೇಳುವವರು, ಕೇಳುವವರು ಇಲ್ಲದಂತಾಗುತ್ತದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂತಹ ಲಾಬಿಯ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಲಾಬಿಗೆ ಮಣಿಯೋಲ್ಲ: ಪುನಾರಂಭಿಸುತ್ತೇವೆ
ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ತಡೆಯುವ ಉದ್ದೇಶದಿಂದ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರ ಮೇಲೆ ಇದುವರೆವಿಗೂ ೨೪ ಲಕ್ಷ ರೂ. ದಂಡ ವಿಧಿಸಿ ವಸೂಲು ಮಾಡಲಾಗಿದೆ. ಇತ್ತೀಚೆಗೆ ಕಾರ್ಯಾಚರಣೆ ಕುಂಠಿತಗೊಂಡಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು. ಯಾವುದೇ ಲಾಬಿಗೂ ಮಣಿಯುವ ಪ್ರಶ್ನೆೆಯೇ ಇಲ್ಲ.
-ಲಕ್ಷ್ಮೀಕಾಂತರೆಡ್ಡಿ, ನಗರಪಾಲಿಕೆ ಆಯುಕ್ತರು.
ಕುವೆಂಪು ಮಲೆನಾಡಿನಲಿ ಹುಟ್ಟಿದರು ಮೈಸೂರಿಗೆ ಕಾಲಿಟ್ಟರು ಕವಿಯಾಗಿ ಕನ್ನಡದ ಮೊದಲ ಜ್ಞಾನಪೀಠ ಗಳಿಸಿದರು ಮೂಢನಂಬಿಕೆಯನು ಬದಿಗೊತ್ತಿ ವಿಜ್ಞಾನದ ಬೀಜ ಬಿತ್ತಿ…
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಒಯು) ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಈ…
ಹೆಗ್ಗಡದೇವನಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದಿಂದ ಜಿನ್ನಹಳ್ಳಿ -ಮಲಾರದಹುಂಡಿಗೆ ತೆರಳುವ ಮುಖ್ಯ ರಸ್ತೆ ಹಾಳಾಗಿದ್ದು, ವಿಪರೀತ ಹಳ್ಳ-ಕೊಳ್ಳಗಳಿಂದ ಕೂಡಿದೆ. ಹಲವಾರು ಬಾರಿ…
ಹೊಸ ವರ್ಷದ ಆಚರಣೆ ಡಿ.೩೧ರ ರಾತ್ರಿ ಮತ್ತು ಜನವರಿ ೧ ರಂದು ನಡೆಯುತ್ತದೆ. ಯುವ ಜನತೆಗೆ ಹೊಸ ವರ್ಷದ ಆಚರಣೆ…
ಡಾ.ಪಿ.ಮಂಜುನಾಥ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರ ಅಗತ್ಯ ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗಲಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ…
೨೦೨೫ ನೇ ಸಾಲಿನಲ್ಲಿ ಹಲವಾರು ಸಾಧಕರು ಹೊರಹೊಮ್ಮಿದ್ದು, ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ,…