ಉಪ ಮಹಾಪೌರ ಪಟ್ಟಕಳೆದುಕೊಂಡ ಜಾ.ದಳದಿಂದ ನಾಲ್ಕು ಸ್ಥಾನಗಳಿಗೂ ಪಟ್ಟು
ವರದಿ: ಕೆ.ಬಿ.ರಮೇಶನಾಯಕ
ಮೈಸೂರು: ಕಾಂಗ್ರೆಸನ್ನು ಅಧಿಕಾರದಿಂದ ದೂರವಿಡಲು ಆಂತರಿಕವಾಗಿ ಅಧಿಕಾರದ ಹೊಂದಾಣಿಕೆ ಮಾಡಿಕೊಂಡಿದ್ದ ಬಿಜೆಪಿ-ಜಾ.ದಳವು ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳ ಹಂಚಿಕೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದೆ ಪರಸ್ಪರ ಹಗ್ಗ-ಜಗ್ಗಾಟದಲ್ಲಿ ತೊಡಗಿರುವುದರಿಂದ ಚುನಾವಣೆಯು ನನೆಗುದಿಗೆ ಬಿದ್ದಿದೆ. ಮಹಾಪೌರ ಹಾಗೂ ಉಪ ಮಹಾಪೌರರ ಚುನಾವಣೆ ನಡೆದು ಐವತ್ತು ದಿನಗಳು ಕಳೆಯುತ್ತಿದ್ದರೂ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ನಡೆಯದಿರುವುದು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎರಡೂ ಪಕ್ಷಗಳ ಸದಸ್ಯರಲ್ಲಿ ಅಸಮಾಧಾನ ಮೂಡಿಸಿದೆ.
ಇದರಿಂದಾಗಿ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಎರಡೂ ಪಕ್ಷಗಳ ನಾಯಕರು ಒಟ್ಟಿಗೆ ಕುಳಿತು ಅಧಿಕಾರ ಹಂಚಿಕೊಳ್ಳುವ ಕುರಿತು ಸಮಾಲೋಚನೆ ನಡೆಸಬೇಕೆಂಬ ಒತ್ತಡವು ಉಭಯ ಪಕ್ಷಗಳ ಸದಸ್ಯರಲ್ಲಿ ಜೋರಾಗಿದೆ. ಸೆ.೬ ರಂದು ನಡೆದ ಮೈಸೂರು ಮಹಾನಗರಪಾಲಿಕೆ ಮಹಾಪೌರ ಹಾಗೂ ಉಪ ಮಹಾಪೌರರ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರವಿಡುವ ಜತೆಗೆ ಮಹಾಪೌರ ಸ್ಥಾನವನ್ನು ಬಿಟ್ಟುಕೊಡಲು ನಿರಾಕರಿಸಿ ಕೊನೆಯ ಕ್ಷಣದಲ್ಲಿ ಜಾ.ದಳವು ಬಿಜೆಪಿಯೊಂದಿಗೆ ಕೊಡುಕೊಳ್ಳುವಿಕೆಯ ಜಾಣ ನಡೆಯನ್ನು ಅನುಸರಿಸಿತ್ತು. ಉಪ ಮಹಾಪೌರ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಜಾ.ದಳ ಅಭ್ಯರ್ಥಿ ರೇಷ್ಮಾಬಾನು ಪರ ಕೈಎತ್ತಬೇಕಾಗಿತ್ತಾದರೂ ಅಭ್ಯರ್ಥಿ ನಾಮಪತ್ರವೇ ತಿರಸ್ಕೃತಗೊಂಡಿದ್ದರಿಂದ ಉಪ ಮಹಾಪೌರ ಸ್ಥಾನವು ಬಿಜೆಪಿ ಪಾಲಾಗುವಂತಾಯಿತು. ಇದರಿಂದಾಗಿ ತೀವ್ರ ನಿರಾಶೆ, ಮುಜುಗರ ಅನುಭವಿಸಿದ್ದ ಜಾ.ದಳದ ಮುಖಂಡರು ಸ್ಥಾಯಿ ಸಮಿತಿ ಸ್ಥಾನಕ್ಕೆ ಬೇಡಿಕೆ ಇಟ್ಟು, ಉಪಮಹಾಪೌರರ ಆಯ್ಕೆಗೆ ಬಿಜೆಪಿಗೆ ಬೆಂಬಲ ನೀಡಿದ್ದರು. ಹೀಗಾಗಿಯೇ, ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಜಾ.ದಳದ ಮುಖಂಡರು ಪಟ್ಟು ಹಾಕಿದ್ದರೆ, ಬಿಜೆಪಿ ಎರಡು ಸ್ಥಾನಗಳನ್ನು ಮಾತ್ರ ಕೊಡುವುದಾಗಿ ಪ್ರತಿಪಟ್ಟು ಹಿಡಿದು ಕುಳಿತಿರುವ ಕಾರಣದಿಂದಾಗಿ ಚುನಾವಣೆ ನನೆಗುದಿಗೆ ಬೀಳಲು ಕಾರಣವಾಗಿದೆ.
ಹಣಕಾಸು ಸ್ಥಾಯಿ ಸಮಿತಿ ಬಿಡದಿರಲು ಬಿಜೆಪಿ ನಿರ್ಧಾರ: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗಳು ಇವೆ. ನಾಲ್ಕು ಸ್ಥಾನಗಳನ್ನೂ ಬಿಟ್ಟುಕೊಡಲು ಕೆಲವು ನಾಯಕರು ಒಲವು ತೋರಿದರೂ ಪಕ್ಷದ ಪ್ರಮುಖರು ಮಾತ್ರ ಎರಡನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಮಹಾಪೌರ, ಉಪ ಮಹಾಪೌರ ಸ್ಥಾನ ಬಿಜೆಪಿಗೆ ಇರುವ ಕಾರಣ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಯನ್ನು ತನ್ನ ಬಳಿಯೇ ಇಟ್ಟುಕೊಂಡರೆ ಒಂದಿಷ್ಟು ಜನಪರವಾದ ನಿಲುವುಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರ ಹೊಂದಲಾಗಿದೆ. ವಿಶೇಷವಾಗಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಎಂ.ಯು.ಸುಬ್ಬಯ್ಯ, ಮ.ವಿ.ರಾಮಪ್ರಸಾದ್ ಕಣ್ಣಿಟ್ಟಿದ್ದಾರೆ.
ದೀಪಾವಳಿ ಹಬ್ಬದ ನಂತರ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ದಿನಾಂಕ ಪ್ರಕಟ ಮಾಡುತ್ತೇವೆ ಅಂತ ಹೇಳಿದ್ದಾರೆ. ಜಾ.ದಳಕ್ಕೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಬಿಟ್ಟುಕೊಡಲು ಅವರೇ(ಬಿಜೆಪಿ) ಒಪ್ಪಿಕೊಂಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡು ನಮಗೆ ಬಿಡುವ ವಿಶ್ವಾಸವಿದೆ.
-ಕೆ.ಟಿ.ಚೆಲುವೇಗೌಡ, ನಗರಾಧ್ಯಕ್ಷ, ಜಾ.ದಳ.
ನಗರಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳನ್ನು ಜಾ.ದಳಕ್ಕೆ ಬಿಟ್ಟುಕೊಡಬೇಕೆಂಬ ತೀರ್ಮಾನವಾಗಲಿ, ಚರ್ಚೆಯಾಗಲೀ ನಡೆದಿಲ್ಲ. ನಾಲ್ಕರಲ್ಲಿ ತಲಾ ಎರಡು ಅಧ್ಯಕ್ಷ ಸ್ಥಾನಗಳನ್ನು ಹಂಚಿಕೊಳ್ಳುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಮಾಡದೆ ನಿರ್ಧರಿಸಲಾಗದು. -ಟಿ.ಎಸ್.ಶ್ರೀವತ್ಸ, ನಗರಾಧ್ಯಕ್ಷ, ಬಿಜೆಪಿ.
ದಸರಾ ಮಹೋತ್ಸವ ಸೇರಿದಂತೆ ಇನ್ನಿತರ ಕಾರಣಕ್ಕಾಗಿ ಸ್ಥಾಯಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ದೀಪಾವಳಿ ಹಬ್ಬ ಮುಗಿದ ಬಳಿಕ ಆಯುಕ್ತರೊಂದಿಗೆ ಸಮಾಲೋಚಿಸಿ ದಿನಾಂಕ ಪ್ರಕಟಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. -ಶಿವಕುಮಾರ್, ಮಹಾಪೌರರು.
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…
ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…
ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…
ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…
ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…