Young organizers brought life to the dilapidated Pushkarani
ನಳನಳಿಸುತ್ತಿರುವ ಗಜೇಂದ್ರಮೋಕ್ಷ ಕೊಳ, ಮಾಂಡವ್ಯ ಯೋಗ ಮಂಟಪ
ಮಂಡ್ಯ : ಪುರಾತನ ಕಾಲದ ಪುಷ್ಕರಣಿ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದ್ದನ್ನು ಜೀರ್ಣೋದ್ಧಾರಗೊಳಿಸಿದ ಪರಿಣಾಮ ಇಂದು ಕಲ್ಯಾಣಿ ಮತ್ತು ಯೋಗ ಮಂಟಪ ಜೀವ ಕಳೆಯಿಂದ ಕಂಗೊಳಿಸುತ್ತಿದೆ. ಇದು ಸಂಘಟಿತ ಪ್ರಯತ್ನದಿಂದ ಯಾವುದೇ ಕಾರ್ಯ ಸಾಧಿಸಬಹುದು ಎನ್ನುವುದಕ್ಕೆ ಒಂದು ನಿದರ್ಶನ.
ನಗರದ ಕಾಳಿಕಾಂಬ ದೇವಾಲಯದ ಮುಂಭಾಗದಲ್ಲಿ ಮೈಶುಗರ್ ಕಾಂಪೌಂಡ್‌ಗೆ ಹೊಂದಿಕೊಂಡಿರುವ, ಶ್ರೀಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯಕ್ಕೆ ಸೇರಿದ ಗಜೇಂದ್ರಮೋಕ್ಷ ಕೊಳ ಇಂದು ಸ್ವಚ್ಛ ನೀರಿನಿಂದ ಕಂಗೊಳಿಸುತ್ತಿದ್ದು, ಸುತ್ತಮುತ್ತಲ ವಾತಾವರಣ ಆಹ್ಲಾದಕರವಾಗಿ ಮಾರ್ಪಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಈ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ, ಇಂದಿನ ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ. ಕಲ್ಯಾಣಿಯ ಈ ದುಃಸ್ಥಿತಿಯನ್ನು ಕಂಡ ಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್‌ನ ಅಧ್ಯಕ್ಷ, ಯುವ ಮುಖಂಡ ಎಂ.ಬಿ.ರಮೇಶ್ ಹಾಗೂ ಮಂಡ್ಯ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಜಗದೀಶ್, ವೆಂಕಟೇಶ್, ಮೆಡಿಕಲ್ ಅಸೋಸಿಯೇಷನ್, ವರ್ತಕರ ಸಂಘ ಮುಂತಾದವರ ಸಹಯೋಗದಲ್ಲಿ ನಡೆದ ಶ್ರಮದಾನದಿಂದ ಪಾಳು ಬಿದ್ದ ಕಲ್ಯಾಣಿಗೆ ಮೋಕ್ಷ ಸಿಕ್ಕಿದೆ.
ಡಾ.ಎಚ್.ಎಲ್.ನಾಗರಾಜು ಅವರು ತಹಸಿಲ್ದಾರರಾಗಿ ಕರ್ತವ್ಯ ನಿರ್ವಹಿಸಿದ ಎಲ್ಲ ಕಡೆ ಇಂತಹ ಕಲ್ಯಾಣಿ, ಮಂಟಪಗಳ ಅಭಿವೃದ್ಧಿಗೆ ಅಲ್ಲಿನ ಯುವಕರನ್ನು ಪ್ರೇರೇಪಿಸಿ ಅಭಿವೃದ್ಧಿಗೊಳಿಸಲು ಕಾರಣರಾಗಿದ್ದಾರೆ. ಅದರಂತೆ ಅವರು ಮಂಡ್ಯ ಅಪರ ಜಿಲ್ಲಾಧಿಕಾರಿಗಳಾಗಿದ್ದಾಗ ಈ ಗಜೇಂದ್ರಮೋಕ್ಷ ಕೊಳದ ಇತಿಹಾಸ ತಿಳಿದು, ಇದನ್ನು ಅಭಿವೃದ್ಧಿಪಡಿಸಲು ಮುಂದಾಗಿ, ನಿಮ್ಮ ನೆರವಿಗೆ ನಾನಿದ್ದೇನೆಂದು ಎಂ.ಬಿ.ರಮೇಶ್ ಅವರಿಗೆ ಪ್ರೇರೇಪಣೆ ನಿಡಿದ್ದರು. ಅದರಂತೆ ಕಲ್ಯಾಣಿ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು, ಪಾಚಿಕಟ್ಟಿದ ನೀರು ಮತ್ತು ಹೂಳನ್ನು 2 ಬಾರಿ ಹೊರತೆಗೆದು, ಅಂತರ್ಜಲ ಮರುಪೂರಣಗೊಳಿಸಿ, ಆವರಣವನ್ನು ಸ್ವಚ್ಛಗೊಳಿಸಿದರು.
ಅಲ್ಲಿದ್ದ ಅರಳಿಕಟ್ಟೆಗೊಂದು ಹೊಸ ರೂಪು ನಿಡಿದ್ದು, ಶಾಸಕರು ಹಾಗೂ ನಗರಸಭೆ ಅಧ್ಯಕ್ಷರ ಅನುದಾನದಿಂದ ಬೋರ್‌ವೆಲ್ ತೆಗೆಸಿದ್ದು, ಆ ನೀರಿನಿಂದ ಸುತ್ತಲೂ ಉದ್ಯಾನ, ಔಷಧ ಸಸ್ಯಗಳು ಹಾಗೂ ನವಗ್ರಹ ಗಿಡಗಳನ್ನು ಬೆಳೆಸಲಾಗುತ್ತಿದೆ. ಮುಖ್ಯವಾಗಿ ಮಂಡ್ಯ ಸಂಸದರಾಗಿದ್ದ ಸುಮಲತಾ ಅಂಬರೀಶ್ ಅವರ ಅನುದಾನದಿಂದ ನಿರ್ಮಿತಿ ಕೇಂದ್ರದ ಜಯಪ್ರಕಾಶ್ ಅವರು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮವಾದ ಯೋಗ ಮಂಟಪ, ಕಾಂಪೌಂಡ್ ಮತ್ತು ಸ್ವಾಗತ ಕಮಾನು ನಿರ್ಮಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಯತೀಶ್ ಅವರು ಹಳ್ಳಕೊಳ್ಳಗಳಿಗೆ ಮಣ್ಣು ಭರ್ತಿ ಮಾಡಿಸಿಕೊಟ್ಟಿದ್ದಾರೆ. ಇಂತಹ ಸಂಘಟಿತ ಪ್ರಯತ್ನದಿಂದಾಗಿ ಇಂದು ಗಜೇಂದ್ರಮೋಕ್ಷ ಕೊಳ ಪ್ರಶಾಂತ ವಾತಾವರಣದಿಂದ ಯೋಗಾಸಕ್ತರು, ಭರತನಾಟ್ಯ ಕಲಾವಿದರು ಇಲ್ಲಿನ ಮಾಂಡವ್ಯ ಯೋಗ ಮಂಟಪವನ್ನು ಬಳಸಿಕೊಳ್ಳುವಂತಾಗಿದೆ.
ಜಿಲ್ಲೆಯಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳ ಸ್ಮಾರಕಗಳಾಗಿರುವ ಕಲ್ಯಾಣಿ, ಮಂಟಪಗಳು ಸಾಕಷ್ಟಿವೆ. ಪೂರ್ವಿಕರು ನಿರ್ಮಿಸಿರುವ ಕೆರೆ, ಕಟ್ಟೆ, ಕಲ್ಯಾಣಿ, ಮಂಟಪಗಳನ್ನು ಮುಂದಿನ ಪೀಳಿಗೆಗೆ ನಾವು ಇದನ್ನು ಸಂರಕ್ಷಿಸಿ ಉಳಿಸಬೇಕಾದುದು ಅತ್ಯವಶ್ಯವಾಗಿದೆ. ಹಾಗಾಗಿ ಪೂರ್ವಾಶ್ರಮದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ದಾಗ ಈ ಗಜೇಂದ್ರಮೋಕ್ಷ ಕೊಳವನ್ನು ಅಭಿವೃದ್ಧಿಪಡಿಸಲು ಯುವ ಮುಖಂಡ ಎಂ.ಬಿ.ರಮೇಶ್ ಅವರಿಗೆ ಪ್ರೋತ್ಸಾಹ ನೀಡಿದೆ. ಅವರು ಕೂಡ ಇದರ ಹೊಣೆಹೊತ್ತು ನಿರೀಕ್ಷೆಮೀರಿ ಕೆಲಸ ಮಾಡಿದ್ದಾರೆ. ಇಲ್ಲಿ ಧಾರ್ಮಿಕ ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯಲಿ ಎಂಬುದು ನಮ್ಮ ಹಾರೈಕೆ. -ಡಾ.ನಿಶ್ಚಲಾನಂನಾಥ ಸ್ವಾಮೀಜಿ, ಪೀಠಾಧಿಪತಿಗಳು, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ.
ಇದೊಂದು ಸಂಘಟಿತ ಪ್ರಯತ್ನ. ಪಾಳು ಬಿದ್ದಿದ್ದ ಮಂಟಪವನ್ನು ಜೀರ್ಣೋದ್ಧಾರಗೊಳಿಸಬೇಕೆಂಬ ತುಡಿತ ನನ್ನಲ್ಲಿತ್ತು. ಅದಕ್ಕೆ ಪ್ರೇರೇಪಣೆ ನೀಡಿದವರು ಡಾ.ಎಚ್.ಎಲ್.ನಾಗರಾಜು ಅವರು. ನಂತರ ನನ್ನ ಸಮಯ, ಹೋರಾಟ ಎಲ್ಲವೂ ಇದಕ್ಕೆ ಸೀಮಿತವಾಯಿತು. ಪರಿಣಾಮ ಸಂಸದರು, ಶಾಸಕರು, ಸಂಘಟನೆಗಳ ಬೆನ್ನುಬಿದ್ದು ಅನುದಾನ ತಂದಿದ್ದರಿಂದ ಇಂದು ಈ ಹಂತಕ್ಕೆ ಬಂದಿದೆ. ಇಂದು ಪ್ರತಿನಿತ್ಯ ಯೋಗ ನಡೆಯುತ್ತಿದೆ. ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲು ಅನುವಾಗಿದೆ. -ಎಂ.ಬಿ.ರಮೇಶ್, ಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷರು. ಮಂಡ್ಯ.
ವರದಿ : ಹೇಮಂತ್‌ಕುಮಾರ್
ಮೈಸೂರು : ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಡಿ.31ರಿಂದ ಎರಡು ದಿನ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ…
ಹೊಸದಿಲ್ಲಿ : ಮುಂಬರುವ ಕೇಂದ್ರ ಬಜೆಟ್ ಕುರಿತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆರ್ಥಿಕ ತಜ್ಞರು…
ಮಳವಳ್ಳಿ : ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣಕ್ಕೆ ನುಗ್ಗಿದ್ದ ಕಾಡಾನೆಗಳು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಇಳಿಯುವ ಎರಡು ಕಡೆಗಳಲ್ಲೂ ಹಾಕಲಾಗಿದ್ದ…
ಮೈಸೂರು : ಇನ್ನೇನು ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್…
ಬೆಂಗಳೂರು : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.…
ಚಾಮರಾಜನಗರ : ರಾಷ್ಟ್ರ ಮಟ್ಟದ ಪುರುಷರ ಮೈಕಟ್ಟು ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ತಾಲ್ಲೂಕಿನ ಕೋಡಿಮೋಳೆ ಬಸವನಪುರ ಬಿ.ಆರ್.ಹೇಮಂತ್ ಅವರು ಮಿಸ್ಟರ್…