ಮಂಡ್ಯ : ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸುವ ಸಂಬಂಧ 56 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸದರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಸೂಚಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ಸಿಇಓ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೋಡಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಶಾಲೆಗಳಿಗೆ ಡಿಸೆಂಬರ್ 20 ರೊಳಗಾಗಿ ಭೇಟಿ ನೀಡಿ ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಡಿಡಿಪಿಐ ಅವರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಕೆಲವು ಶಾಲೆಗಳಲ್ಲಿ ಪಠ್ಯಗಳನ್ನು ಸರಿಯಾಗಿ ಭೋದಿಸುತ್ತಿಲ್ಲ, ಕೆಲವು ಶಿಕ್ಷಕರು ಆನೇಕ ಕಾರಣಗಳನ್ನು ನೀಡಿ ತರಗತಿಗಳನ್ನು ತೆಗೆದುಕೊಳ್ಳುತ್ತಿಲ್ಲ, ಯಾವುದೇ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿಲ್ಲ ಹಾಗೂ ಮಾದರಿ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆಗೆ ಸಜ್ಜುಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂಬ ಬಗ್ಗೆ ಆನೇಕ ದೂರುಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಈ ಬಗ್ಗೆ ಶಾಲೆಗಳಿಗೆ ಭೇಟಿ ನೀಡಿ ಸ್ವತಃ ಪರಿಶೀಲಿಸಿ ಖಚಿತಪಡಿಸಿಕೊಂಡು ಸಮಸ್ಯೆಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಮಾದರಿ ಪರೀಕ್ಷೆಗಳನ್ನು ಮಾಡಲು ಕರೆ
ಜಿಲ್ಲೆಯ ಎಲ್ಲಾ 253 ಹೈಸ್ಕೂಲ್ ಗಳಲ್ಲಿಯೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆಗಳನ್ನು ಮಾಡಬೇಕು. ಸದರಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಅಂತರ ತಾಲ್ಲೂಕು ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಲು ಜಿ.ಪಂ. ಸಿಇಓ ಸೂಚಿಸಿದರು.
ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಿ ಯಾವ ವಿಷಯಗಳಲ್ಲಿ ದುರ್ಬಲರಾಗಿದ್ದಾರೆ ಎಂಬ ಬಗ್ಗೆ ಪರಿಶೀಲಿಸಿ ಸದರಿ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ ಪುನಾರಾವರ್ತನೆ ಮತ್ತು ವಿಶೇಷ ತರಗತಿಗಳ ಮೂಲಕ ವಿಷಯವನ್ನು ಮನದಟ್ಟು ಮಾಡಿಸಲು ಪ್ರಯತ್ನಿಸಬೇಕು.
ಕಳೆದ ಸಾಲಿನಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿ:
ನೋಡಲ್ ಅಧಿಕಾರಿಗಳು ತಮಗೆ ನೀಡಲಾಗಿರುವ 6ರಿಂದ 8 ಶಾಲೆಗಳ ಪೈಕಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಆದ್ಯತೆ ನೀಡಿ ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳ ಕಲಿಕೆಯ ಮಟ್ಟದಲ್ಲಿನ ಬದಲಾವಣೆ, ಶಿಕ್ಷಕರು ವೇಳಾಪಟ್ಟಿಯಂತೆ ತರಗತಿಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ, ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿರುವ ಬಗ್ಗೆ, ಮಾದರಿ ಪರೀಕ್ಷೆಗಳನ್ನು ನಡೆಸುತ್ತಿರುವ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದರು.
ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಬೇಕು, ಓದಿನಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪೋಷಕರೊಂದಿಗೆ ಚರ್ಚಿಸಿ ಮನೆಯಲ್ಲಿಯೂ ಓದಲು ಉತ್ತಮ ವಾತಾವರಣ ನಿರ್ಮಾಣ ಮಾಡುವಂತೆ ತಿಳಿಸಬೇಕು, ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕವಾಗಿ ಚರ್ಚಿಸಿ ಯಾವುದಾದರೂ ವಿಷಯಗಳಲ್ಲಿ ಸಮಸ್ಯೆ ಇದಯೇ ಎಂಬ ಬಗ್ಗೆ ತಿಳಿಯಬೇಕು ಎಂದು ತಿಳಿಸಿದರು.
*ಶಿಕ್ಷಕರು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ:* ಪ್ರತಿಯೊಬ್ಬ ವ್ಯಕ್ತಿಯು ತಾನು ಎಷ್ಟೇ ಎತ್ತರಕ್ಕೆ ಬೆಳೆದರೂ ತನಗೆ ಪಾಠ ಕಲಿಸಿದ ಗುರುವನ್ನು ಮರೆಯುವುದಿಲ್ಲ ಹಾಗೂ ಬಹಳ ಗೌರವದಿಂದ ಕಾಣುತ್ತಾನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜೀವನ ಶಿಕ್ಷಕರ ಪಾತ್ರ ಬಹಳ ಪ್ರಮುಖವಾದುದಾಗಿದೆ. ಆದ್ದರಿಂದ ಎಲ್ಲಾ ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಎಸ್.ಎಸ್.ಎಲ್.ಸಿ. ಎನ್ನುವುದು ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖವಾದ ಘಟ್ಟವಾಗಿದ್ದು, ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಬಹುತೇಕ ವಿದ್ಯಾರ್ಥಿಗಳ ಶಿಕ್ಷಣ ಅಂತಿಮಗೊಳ್ಳುತ್ತದೆ. ಅದರಲ್ಲಿಯೂ ಹೆಣ್ಣುಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಮತ್ತೊಮ್ಮೆ ಶಿಕ್ಷಣ ಮುಂದುವರೆಸುವುದು ಕಷ್ಟಸಾದ್ಯವಾದುದಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ವಾಟ್ಸಪ್ ಗುಂಪು ರಚಿಸಿ ಜಿ.ಪಂ. ಕಚೇರಿಯಿಂದ ಮೇಲ್ವಿಚಾರಣೆ:
ನೋಡಲ್ ಅಧಿಕಾರಿಗಳು, ಬಿಇಓ ಗಳು, ಡಿಡಿಪಿಐ ಸೇರಿದಂತೆ ಇತರೆ ಅಧಿಕಾರಿಗಳ ವಾಟ್ಸಪ್ ಗುಂಪು ಸೃಜಿಸಿ ಜಿ.ಪಂ. ಕಚೇರಿಯಿಂದ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾಗಿದ್ದು, ಇಂದಿನಿಂದಲೇ ಎಲ್ಲಾ ನೋಡಲ್ ಅಧಿಕಾರಿಗಳು ಕಾರ್ಯಪವೃತ್ತರಾಗಿ ಶಾಲಾ ಭೇಟಿಯ ಛಾಯಾಚಿತ್ರಗಳು, ಫಲಿತಾಂಶ ಉತ್ತಮಗೊಳಿಸಲು ಸಲಹೆಗಳು, ಫಲಿತಾಂಶ ಉತ್ತಮಗೊಳಿಸಲು ಹಮ್ಮಿಕೊಳ್ಳಲಾಗಿರುವ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಲೋಕೇಶ್ ಜಿ., ಡಯಟ್ ಪ್ರಾಂಶುಪಾಲರಾದ ಯೋಗೇಶ್, ಜಿಲ್ಲಾ ಪಂಚಾಯತ್ ನ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಜಿಲ್ಲೆಯ ಎಲ್ಲಾ ಬಿಇಓ ಗಳು, ಬಿ.ಆರ್.ಸಿ. & ಸಿ.ಆರ್.ಸಿ. ಗಳು ಸೇರಿದಂತೆ ಇತರರು ಹಾಜರಿದ್ದರು.
ಮಿಷನ್ 90 ಗೆ ಚಾಲನೆ:
ಪರೀಕ್ಷೆ ಆರಂಭವಾಗಲೂ ಇನ್ನೂ 92 ದಿನಗಳು ಬಾಕಿ ಇದ್ದು, ಎಲ್ಲಾ ದಿನಗಳಲ್ಲಿಯೂ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಗೊಳಿಸಲು ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು ಕಾರ್ಯಪವೃತ್ತರಾಗಬೇಕು. ನಾಳೆಯಿಂದ 3 ದಿನಗಳ ಕಾಲ ಅಂದರೆ ಗುರುವಾರ, ಶುಕ್ರವಾರ ಮತ್ತು ಶನಿವಾರ ಗಳಂದು ಪ್ರತಿ ದಿನ 2 ವಿಷಯಗಳಂತೆ ಪರೀಕ್ಷೆ ಹಮ್ಮಿಕೊಳ್ಳಬೇಕು. ಪ್ರಶ್ನೆ ಪತ್ರಿಕೆಯನ್ನು ಜಿಲ್ಲಾ ಹಂತದಿಂದ ನೀಡಬೇಕು. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು. ಉತ್ತರ ಪತ್ರಿಕೆಗಳನ್ನು ಬೇರೆ ತಾಲ್ಲೂಕಿನ ಶಿಕ್ಷಕರಿಂದ ಮೌಲ್ಯಮಾಪನ ನಡೆಸಬೇಕು. ಶೇಕಡ 50ಕ್ಕಿಂತ ಕಡಿಮೆ ಅಂಕ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಗಮನ ನೀಡಬೇಕು.
ರಾಜ್ಯ ಕಚೇರಿಯಿಂದ ನೀಡಲಾಗಿರುವ Student Corner ನಲ್ಲಿ ಲಭ್ಯವಿರುವ ನೀಲಿ ನಕ್ಷೆ ಯಂತೆ ಎಲ್ಲಾ ಆರು ವಿಷಯಗಳಿಗೆ 2 ದಿನ ಪಾಠ 3ನೇ ದಿನ ಕಿರು ಪರೀಕ್ಷೆ ನಡೆಸಬೇಕು. Student Corner ನಲ್ಲಿ ಲಭ್ಯವಿರುವ ಪ್ರಶ್ನೆಗಳ ಪೈಕಿ ಪ್ರಶ್ನೆಗಳ ಅಂಕಗಳ ಆಧಾರದಲ್ಲಿ ಪ್ರತ್ಯೇಕ ಬುಕ್ ಲೆಟ್ ಸಿದ್ದಪಡಿಸಿ ಎಲ್ಲಾ ಶಾಲೆಗಳಿಗೆ ವಿತರಿಸಬೇಕು. ಈ ಜವಬ್ದಾರಿಯನ್ನು ಡಯಟ್ ಪ್ರಾಂಶುಪಾಲರು ವಹಿಸಿಕೊಳ್ಳಬೇಕು.
ಅನುದಾನಿತ ಮತ್ತು ಖಾಸಗಿ ಶಾಲೆಗಳ ಫಲಿತಾಂಶ ಹೆಚ್ಚಿಸಲು ಕ್ರಿಯಾ ಯೋಜನೆ ಸಿದ್ದಪಡಿಸಿ: ಈ ಸಭೆಗೆ ಅನುಪಾಲನಾ ಸಭೆಯನ್ನು 15 ದಿನಗಳ ನಂತರ ಏರ್ಪಡಿಸಲಾಗುತ್ತಿದ್ದು, ಸದರಿ ಸಭೆಗೆ ಅನುದಾನಿತ ಮತ್ತು ಖಾಸಗಿ ಶಾಲೆಗಳ ಫಲಿತಾಂಶ ಹೆಚ್ಚಿಸುವ ಸಂಬಂಧ ಕ್ರಿಯಾ ಯೋಜನೆಯೊಂದಿಗೆ ಬರುವಂತೆ ನೋಡಲ್ ಅಧಿಕಾರಿಗಳು ಮತ್ತು ಡಿಡಿಪಿಐ ರವರಿಗೆ ತಿಳಿಸಿದರು.