ಮಂಡ್ಯ: ಸಾಹಿತ್ಯ ಸಮ್ಮೇಳನ ನಾಡು ನುಡಿಯ ಅಭಿಮಾನದ ಪ್ರತೀಕವಾಗಿದೆ. ಕನ್ನಡ ನಾಡು, ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಯಾವುದೇ ಗೊಂದಲವಿಲ್ಲದೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಕರೆ ನೀಡಿದರು.
ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿಗುರುವಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವ ಸಂಬಂಧ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20, 21 ಹಾಗೂ 22 ರಂದು 3 ದಿನಗಳ ಕಾಲ ನಡೆಯಲಿದೆ. ಜಿಲ್ಲೆಗೆ 3 ನೇ ಬಾರಿ ಸಾಹಿತ್ಯ ಹಬ್ಬದ ಆತಿಥ್ಯ ದೊರಕಿದ್ದು, ಇದು ಕೇವಲ ಸರ್ಕಾರ, ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾಡಳಿತದ ಹಬ್ಬವಾಗಿರದೆ ಪ್ರತಿ ಮನೆಯ ಹಬ್ಬವಾಗಿದೆ. ನಮ್ಮೆಲ್ಲರ ಮನೆಯ ಹಬ್ಬವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ಸಮ್ಮೇಳನಕ್ಕೆ ಸಂಬಂಧಿಸಿದಂತೆ ವೇದಿಕೆ ಸಮಿತಿ, ವಸತಿ ಸಮಿತಿ, ನೋಂದಣಿ ಸಮಿತಿ, ಸಾಂಸ್ಕೃತಿಕ ಸಮಿತಿ, ಮಹಿಳಾ ಸಮಿತಿ, ಮೆರವಣಿಗೆ ಸಮಿತಿ, ನಗರ ವಿದ್ಯುತ್ ಮತ್ತು ಅಲಂಕಾರ ಸಮಿತಿ, ಆಹಾರ ಸಮಿತಿ, ವಸ್ತು ಪ್ರದರ್ಶನ ಸಮಿತಿ ಸೇರಿದಂತೆ ಒಟ್ಟು 28 ಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಂದು ಸಮಿತಿಯು ಉಪ ಸಮಿತಿಗಳನ್ನು ಮಾಡಿ, ಸಭೆಗಳನ್ನು ನಡೆಸಿ ಚರ್ಚಿಸುವ ಮೂಲಕ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದೆ ಎಂದರು.
ಕನ್ನಡ ಜ್ಯೋತಿ ರಥಯಾತ್ರೆ: ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿ ರಥವು ನಾನಾ ಜಿಲ್ಲೆ, ತಾಲ್ಲೂಕುಗಳಲ್ಲಿ ಸಂಚರಿಸಿದ್ದು ಸಮ್ಮೇಳನದ ಪ್ರಚಾರ ಉತ್ತಮ ರೀತಿಯಲ್ಲಿಆಗಿದೆ. ರಥ ಸಂಚರಿಸಿದ ಕಡೆಯಲೆಲ್ಲಾ ಅಲ್ಲಿನ ಜನರು ಅತ್ಯಂತ ಸಂತೋಷ, ಸಡಗರದಿಂದ ರಥಕ್ಕೆ ಸ್ವಾಗತ ಕೋರಿ ಸಂಭ್ರಮಿಸುತ್ತಿದ್ದಾರೆ. ರಥವು ಶೀಘ್ರದಲ್ಲಿ ಜಿಲ್ಲೆಗೆ ವಾಪಸ್ಸಾಗಲಿದೆ. ಜೊತೆಗೆ ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸಾಹಿತ್ಯ ಪರಿಷತ್ ನ ವತಿಯಿಂದ ಪ್ರತ್ಯೇಕವಾದ ಜ್ಯೋತಿ ರಥವು ಸಂಚರಿಸುತ್ತಿದ್ದು ಒಳ್ಳೆಯ ಪ್ರತಿಕ್ರಿಯೆ ದೊರಕುತ್ತಿದೆ ಎಂದರು.
ಗೋಷ್ಠಿಗೆ ಸಲಹೆ: ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗೆ ಸಂಬಂಧಿಸಿದಂತೆ ಸಮಿತಿಗಳು ಹಾಗೂ ಅನೇಕ ಸಾಹಿತಿಗಳು ಹಲವಾರು ಸಲಹೆಗಳನ್ನು ನೀಡಿದ್ದು, ಸಮ್ಮೇಳನದಲ್ಲಿ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸುವ ಗೋಷ್ಠಿ, ಮಕ್ಕಳ ಸಾಹಿತ್ಯ ಹಾಗೂ ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾದ್ದರಿಂದ ಕೃಷಿಯ ತಾಂತ್ರಿಕತೆಯನ್ನೊಳಗೊಡಂತೆ ರೈತರಿಗೆ ಅನುಕೂಲವಾಗುವ ಮಾಹಿತಿಯ ಬಗ್ಗೆ ವಿಚಾರಗೋಷ್ಠಿಯನ್ನು ಏರ್ಪಡಿಸುವ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಿಗೆ ತಿಳಿಸಲಾಗಿದೆ ಎಂದರು.
ಮೆರವಣಿಗೆ ಸಿದ್ಧತೆ: ಸಮ್ಮೇಳನದಲ್ಲಿ ಮೆರವಣಿಗೆಗೆ ಸಂಬಂಧಿಸಿದಂತೆ ಅನೇಕ ಸಿದ್ಧತೆಗಳು ನಡೆಯುತ್ತಿದ್ದು, ವಿವಿಧ ಜಿಲ್ಲೆಗಳಿಂದ ಸಾಕಷ್ಟು ಕಲಾ ತಂಡಗಳು ಆಗಮಿಸಲಿವೆ. ಸಮ್ಮೇಳನದ ಮೊದಲ ದಿನವಾದ ಡಿಸೆಂಬರ್ 20 ರಂದು ಬೆಳಿಗ್ಗೆ 7 ಗಂಟೆಗೆ ಮೆರವಣಿಗೆಯು ನಗರದಲ್ಲಿ ಶುರುವಾಗಿ ಬೆಳಿಗ್ಗೆ 10 ಗಂಟೆಗೆ ವೇದಿಕೆಯ ಬಳಿ ಸಮಾವೇಶಗೊಳ್ಳಲಿದೆ ಎಂದರು.
ಸಾಧಕರಿಗೆ ಸನ್ಮಾನ: 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವಾಗಿರುವುದರಿಂದ ಕರ್ನಾಟಕದ, ಬೇರೆ ರಾಜ್ಯ ಹಾಗೂ ಬೇರೆ ದೇಶದಲ್ಲಿರುವ ಅನೇಕ ಕನ್ನಡಿಗ ಸಾಧಕರುಗಳನ್ನು ಗುರುತಿಸಿ 87 ಜನ ಸಾಧಕರಿಗೆ ಸನ್ಮಾನಿಸಿ, ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿಕ್ಕೆ ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದರು.
ನೋಂದಣಿ ಪ್ರಕ್ರಿಯೆ: ಸಮ್ಮೇಳನಕ್ಕೆ ಆಗಮಿಸುವವರಿಗೆ ಆನ್ಲೈನ್ ನೋಂದಣಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾದ ಕಬ್ಬಿನಿಂದ ತಯಾರಿಸಿದ ಅರ್ಧ ಕೆಜಿ ಬೆಲ್ಲವನ್ನು ನೋಂದಣಿಯಾದ ಪ್ರತಿನಿಧಿಗಳಿಗೆ ನೀಡಲಾಗುತ್ತದೆ ಎಂದು ಹೇಳಿದರು.
ಪಾರ್ಕಿಂಗ್ ವ್ಯವಸ್ಥೆ: ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇತರೆ ಜಿಲ್ಲೆಗಳು ಮುಂದಿನ ದಿನಗಳಲ್ಲಿಯೂ ಸಹ ನೆನೆಯುವಂತೆ ಬಹಳ ಅರ್ಥಪೂರ್ಣವಾಗಿ ಸಮ್ಮೇಳನವನ್ನು ಆಚರಿಸುವ ಮೂಲಕ ಜಿಲ್ಲೆಗೆ ಉತ್ತಮ ಹೆಸರು ಬರುವಂತೆ ಕಾರ್ಯ ನಿರ್ವಹಿಸೋಣ. ಸಮ್ಮೇಳನಕ್ಕೆ ಬಂದವರು ಜಿಲ್ಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಪ್ರತಿಯೊಬ್ಬರು ಶ್ರಮಿಸೋಣ ಎಂದರು.
ಸಭೆಯಲ್ಲಿ ಅನೇಕ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಾಕಷ್ಟು ಸಲಹೆಗಳನ್ನು ನೀಡಿದ್ದು, ಈ ಬಗ್ಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಿಗೆ ಪತ್ರ ಬರೆಯಲಾಗುವುದು. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಯಾವುದೇ ಲೋಪದೋಷಗಳು ಕಂಡು ಬಂದರೆ ಕೂಡಲೇ ನಮ್ಮ ಗಮನಕ್ಕೆ ತನ್ನಿ. ಈ ಬಗ್ಗೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಕಸಾಪ ಸಂಚಾಲಕಿ ಡಾ ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ, ಕೃಷ್ಣೇಗೌಡ ಹುಸ್ಕೂರು, ಕೋಶಾಧ್ಯಕ್ಷ ಅಪ್ಪಾಜಪ್ಪ, ಚಂದ್ರುಲಿಂಗು, ಧನಂಜಯ, ಭಾಸ್ಕರ್, ಸುಜಾತ ಕೃಷ್ಣ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…