ಮಂಡ್ಯ

ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನಿಲ್ಲಿಸಲು ಆಗ್ರಹ : ಸೆ. 2ರಂದು ಜಾ.ದಳ ಉಗ್ರ ಹೋರಾಟ

ಮಂಡ್ಯ : ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಜಾತ್ಯತೀತ ಜನತಾದಳ, ಎರಡು ದಿನಗಳೊಳಗೆ ನೀರು ನಿಲ್ಲಿಸದಿದ್ದಲ್ಲಿ ಸೆ.2ರ ಶನಿವಾರ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಾ.ದಳದ ಹಾಲಿ ಹಾಗೂ ಮಾಜಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜಾ.ದಳ ಕಚೇರಿಯಲ್ಲಿ ಬುಧವಾರ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಚ್.ಟಿ. ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಕೆ.ಟಿ. ಶ್ರೀಕಂಠೇಗೌಡ, ಡಾ. ಕೆ. ಅನ್ನದಾನಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರು, ಜಿಲ್ಲಾ ಜಾ.ದಳ ಅಧ್ಯಕ್ಷ ಡಿ.ರಮೇಶ್ ಅವರು, ಕೂಡಲೇ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಿ ರಾಜ್ಯದ ರೈತರ ಹಿತ ಕಾಪಾಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಕಾವೇರಿ ನೀರಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಈಗ ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಈ ಸರ್ಕಾರದಲ್ಲಿ ರೈತರ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ. ಯಾರ ಒತ್ತಡಕ್ಕೆ ಮಣಿದು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಸರ್ವಪಕ್ಷ ಸಭೆಯಲ್ಲಿ ರೈತರ ಹಾಗೂ ರಾಜ್ಯದ ಹಿತಕ್ಕೆ ಬದ್ಧ ಎಂದಿದ್ದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಮಂಗಳವಾರ ರಾತ್ರಿಯಿಂದಲೇ 2ನೇ ಬಾರಿ ನೀರು ಬಿಟ್ಟಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಎಲ್ಲ ಸರ್ಕಾರಗಳು ಈ ಹಿಂದೆ ನೀರು ಬಿಟ್ಟಿರುವುದು ಸತ್ಯ. ಆದರೆ, ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದ ನಂತರ ಸರ್ವ ಪಕ್ಷಗಳ ಸಭೆ ನಡೆಸಿ ರಾಜ್ಯದ ಹಿತವನ್ನೂ ಗಮನದಲ್ಲಿಟ್ಟುಕೊಂಡು ನೀರು ಬಿಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಏಕಾಏಕಿ ನೀರು ಬಿಟ್ಟ್ಟು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಓಲೈಕೆಗೆ ಮುಂದಾಗಿದೆ ಎಂದು ಆರೋಪಿಸಿದರು.

ಸ್ಟಾಲಿನ್ ಓಲೈಕೆಗಾಗಿ ನೀರು : ಮೇಕೆದಾಟು ಯೋಜನೆ ಹೆಸರೇಳಿಕೊಂಡು ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಅದನ್ನು ಮರೆತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ದಾಹದಿಂದಾಗಿ ಕಾಂಗ್ರೆಸ್ ಪಕ್ಷದ ಪರವಾಗಿರುವ ತಮಿಳುನಾಡು ಮುಖ್ಯಮಂತ್ರಿಯ ಓಲೈಕೆಗೆ ಮುಂದಾಗಿ ನೀರು ಹರಿಸುವ ಮೂಲಕ ರಾಜ್ಯದ ರೈತರು ಹಾಗೂ ಜನರನ್ನು ಬಲಿಕೊಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನಿಂದ ಅಕ್ಕಿ ತರುವ ಯೋಚನೆಯೇ : 135 ಸ್ಥಾನಗಳನ್ನು ಗೆದ್ದಿದ್ದೇವೆ ಎಂಬ ಅಹಂನಿಂದ ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ. ಈಗಾಗಲೇ ರೈತರು ಸಾಲ ಸೂಲ ಮಾಡಿ ಒಟ್ಟಲು ಹಾಗೂ ನಾಟಿ ಮಾಡಿದ್ದಾರೆ. ಇಲ್ಲಿಯ ರೈತರ ಬೆಳೆಗಳನ್ನು ರಕ್ಷಿಸದೆ ತಮಿಳುನಾಡಿನವರು ಮೂರನೇ ಬೆಳೆಯಾಗಿ ಬೆಳೆಯುವ ಕುರುವೈ ಬೆಳೆಗೆ ನೀರು ಹರಿಸಿ ಅಲ್ಲಿಂದಲೇ ಅಕ್ಕಿ ತರುವ ಯೋಚನೆ ಮಾಡಿದ್ದಾರೆಯೇ ಎಂದು ಟೀಕಿಸಿದರು.

ಜನರಿಂದ ಬೈಯಿಸಿಕೊಳ್ಳಲು ಸಿದ್ಧರಿದ್ದೀರಾ : ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟಿನಿಂದ ಬೈಯಿಸಿಕೊಳ್ಳಲು ನಾನು ಸಿದ್ಧನಿಲ್ಲ. ಅದಕ್ಕಾಗಿ ನೀರು ಬಿಟ್ಟಿದ್ದೇವೆ ಎಂದು ಸಮಜಾಯಿಸಿ ನೀಡುವ ಜಲಸಂಪನ್ಮೂಲ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನರಿಂದ ಬೈಯಿಸಿಕೊಳ್ಳಲು ಸಿದ್ಧರಿದ್ದಾರೆಯೇ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳುವುದೊಂದು, ಮಾಡುವುದೊಂದು ಆಗಿದೆ. ರೈತರ ಬಗ್ಗೆ ಬಹಳ ಉದಾಸೀನವಾಗಿ ಮಾತನಾಡುತ್ತಾರೆ. ಕಟ್ಟುಪದ್ಧತಿಯಲ್ಲಿ 15 ದಿನಕ್ಕೊಮ್ಮೆ ನೀರು ಬಿಟ್ಟರೆ ಬೆಳೆಗಳು ಉಳಿಯುತ್ತವೆಯೇ ಎಂದು ಪ್ರಶ್ನಿಸಿದರು.

ಬ್ರಾಹ್ಮಣರಿಂದ ಕ್ರಮವಾಗಿ ಪೂಜೆ ಮಾಡಿಸಿಲ್ಲ : ಮಳೆಗಾಗಿ ಪ್ರಾರ್ಥಿಸಿ ಕೃಷ್ಣರಾಜಸಾಗರದಲ್ಲಿ ಪೂಜೆ ಮಾಡಿಸಿದವರು ಬೇಕಾಬಿಟ್ಟಿ ಮಾಡಿಸಿದ್ದಾರೆ. ಮಾಂಸ ಬೇಯಿಸಿದ ದೊಡ್ಡ ಪಾತ್ರೆಯಲ್ಲಿ ಬ್ರಾಹ್ಮಣರನ್ನು ಕೂರಿಸಿ ಪೂಜೆ ಮಾಡಿಸಿದ್ದಾರೆ. ಇದರಿಂದಾಗಿ ಮಳೆ ಬರುತ್ತದೆಯೇ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಹೆಸರೇಳದೆ ರವೀಂದ್ರ ಶ್ರೀಕಂಠಯ್ಯ ಹರಿಹಾಯ್ದರು.

ಕೈ ತುಂಬಾ ದಾರ ಕಟ್ಟಿಕೊಂಡು ಮೋಡಿ ಮಾಡುವರಂತೆ ಓಡಾಡಿದರೆ ಏನೂ ಮಾಡಲಾಗದು. ಯಾವುದೇ ಪೂಜೆ, ಪುರಸ್ಕಾರ ಮಾಡಬೇಕಾದರೆ ಕ್ರಮಬದ್ಧವಾಗಿ ಮಾಡಬೇಕು. ತೋರಿಕೆಗಾಗಿ ಇಂತಹ ಕರ‍್ಯಗಳನ್ನು ಮಾಡಬಾರದು ಎಂದು ಸಲಹೆ ನೀಡಿದರು.

ರೈತರ ಬಗ್ಗೆ ಅಯ್ಯೋ ಎನಿಸಲಿಲ್ಲವೇ : ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದ್ದರೂ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಂಸದರಿಗೆ ರೈತರ ಬಗ್ಗೆ ಅಯ್ಯೋ ಎನಿಸುವುದಿಲ್ಲವೇ ಎಂದು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ಮಂಡ್ಯ ಸಂಸದರು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಿ ಜಿಲ್ಲೆಯ ರೈತರಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ಐಷರಾಮಿ ಹೊಟೇಲ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಮೋಜು ಮಸ್ತಿ ಮಾಡುತ್ತಿರುವುದು ಎಷ್ಟು ಸರಿ. ಇಂತಹವರನ್ನು ಗೆಲ್ಲಿಸಿ ಏನನ್ನು ನಿರೀಕ್ಷಿಸಬಹುದು ಎಂದು ಟೀಕಿಸಿದರು.

ಕೆ.ಆರ್.ಎಸ್.ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸುಳ್ಳು ಹೇಳಿ ರೈತರಲ್ಲಿ ಗೊಂದಲ ಮೂಡಿಸಿದ್ದ ಸಂಸದರು, ಕ್ವಾರೆಗಳಿಗೆ ಭೇಟಿ ನೀಡಿದ್ದಷ್ಟೇ ಸಾಧನೆಯಾಗಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದ್ದರೂ ಕ್ವಾರೆ ವಿಚಾರದಲ್ಲಿ ತೋರಿದ ಆಸಕ್ತಿಯನ್ನು ನೀರಿನ ವಿಚಾರದಲ್ಲಿ ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

lokesh

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

11 mins ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago