ಮಂಡ್ಯ

ಕರ್ವಾಲೋಗೆ 50 ವರ್ಷ ; ಧ್ಯಾನಸ್ಥ ಮನಸ್ಸಿನ ಪ್ರಕೃತಿಯ ದರ್ಶನವೇ ಕರ್ವಾಲೋ : ನಾಗತಿಹಳ್ಳಿ ಚಂದ್ರಶೇಖರ್

ಮಂಡ್ಯ : ಕಳೆದ ಐದು ದಶಕಗಳಲ್ಲಿ ಕರ್ವಾಲೋ ಅಂತಹ ಮತ್ತೊಂದು ಕೃತಿ ರಚನೆಯಾಗಿಲ್ಲ, ಪೂರ್ಣಚಂದ್ರ ತೇಜಸ್ವಿ ಅವರು ಪ್ರಕೃತಿಯನ್ನು ಆರಾಧಿಸಿದ, ಧ್ಯಾನಿಸಿದ, ತಮ್ಮ ಒಳನೋಟದಿಂದ ಅನುಭವಿಸಿದ ಸಕಲವನ್ನು ಕರ್ವಾಲೋ ಕೃತಿಯಲ್ಲಿ ಅಭಿವ್ಯಕ್ತಿಸಿದ್ದಾರೆ, ಅದು ಧ್ಯಾನಸ್ಥ ಮನಸ್ಸಿನ ದರ್ಶನ ಎಂದು ಖ್ಯಾತ ಸಾಹಿತಿ ಚಲನ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ,ಮಂಡ್ಯ ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆಯಡಿ “ಕರ್ವಾಲೋ 50 ವರ್ಷ- ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಳೆದ 50 ವರ್ಷಗಳಲ್ಲಿ 87 ಮುದ್ರಣಗಳನ್ನು ಕಂಡಿರುವ ಕರ್ವಾಲೊ ಕನ್ನಡದ ಅತ್ಯಂತ ವಿಶಿಷ್ಟವಾದ ಕೃತಿಯಾಗಿದೆ, ಈ ಕಾದಂಬರಿಯ ವಿಸ್ಮಯತೆ ಇರುವುದೇ ಅದರ ಸರಳತೆಯಲ್ಲಿ. ತಮ್ಮ ತಂದೆಯ ಪ್ರಭಾವಳಿಯಿಂದ ಹೊರಬಂದು ಎಲ್ಲ ರೀತಿಯ ಲೌಕಿಕದ ಆಮಿಷಗಳನ್ನ ಮೀರಿ ಕಾಡಿನಲ್ಲಿ ಕಳೆದು ಹೋಗಿ ,ಕಾಡಿನ ಪಾಡುಗಳನ್ನು ಅನುಭವಿಸಿ ,ಅದನ್ನೇ ಬರಹದ ಬಂಡವಾಳ ಮಾಡಿಕೊಂಡು ಅನನ್ಯವಾದ ಕೃತಿ ರಚನೆ ಮಾಡಿದ ತೇಜಸ್ವಿ ಕನ್ನಡ ನಾಡು ಕಂಡ ಅತ್ಯಂತ ಅದ್ಭುತ ಬರಹಗಾರ ಎಂದು ಅವರು ಬಣ್ಣಿಸಿದರು.

ಪ್ರಕೃತಿಯನ್ನು ನೋಡುವ ಎರಡು ತಲೆಮಾರುಗಳ ದೃಷ್ಟಿಕೋನ ಹೇಗಿರುತ್ತದೆ ಎಂಬುದಕ್ಕೆ ಕುವೆಂಪು ಹಾಗೂ ತೇಜಸ್ವಿ ಅತ್ಯುತ್ತಮ ಉದಾಹರಣೆ ಎಂದು ಅವರು ಹೇಳಿದರು. ಕರ್ವಾಲೋ ಕೃತಿಯಲ್ಲಿ ಬರುವ ಮಂದಣ್ಣ ಇತರ ಕಥೆ, ಕಾದಂಬರಿಗಳಲ್ಲಿ ಬರುವ ನಾಯಕನ ಎಲ್ಲಾ ಕಲ್ಪನೆಗಳನ್ನು ಮೀರಿದ ಅತ್ಯಂತ ಸರಳ ಸ್ವಾಭಾವಿಕ, ನಮ್ಮ ನೆರೆಮನೆಯ ವ್ಯಕ್ತಿಯಾಗಿ ಮೂಡಿಬಂದಿದ್ದಾನೆ. ಆತನ ಮತ್ತು ನಿಸರ್ಗ ವಿಜ್ಞಾನಿ ಕರ್ವಾಲೋ ಅವರ ನಡುವಿನ ಅನುಬಂಧ ಕಾದಂಬರಿಯಲ್ಲಿ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ. ನಿಸರ್ಗದೊಳಗಿನ ರಹಸ್ಯ ಭೇದಿಸುವ ಅವರ ತವಕ, ಹಾರುವ ಓತಿಯನ್ನು ಹಿಡಿಯುವ ಸಾಹಸ ಎಲ್ಲವೂ ಕರ್ವಾಲೋ ದೊಳಗೆ ರೋಚಕವಾಗಿ ಮೂಡಿ ಬಂದಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಓದಲೇ ಬೇಕಾದ ಅನುಭವಿಸಬೇಕಾದ ಕಾದಂಬರಿ ಕರ್ವಾಲೊ ಎಂದ ಅವರು ಎ ಐ ತಂತ್ರಜ್ಞಾನವೂ ಸಹ ಇಂತಹ ಅದ್ಭುತ ಸೃಜನಶೀಲ ಕೃತಿ ರಚನೆ ಮಾಡಲಾರದು ಎಂದು ತಿಳಿಸಿದರು.

ಇದನ್ನು ಓದಿ: ಶಬರಿ ಮಲೆ ಅಯ್ಯಪ್ಪ ಭಕ್ತರಿಗೆ ವಂಚನೆ : ನಕಲಿ ವೆಬ್‌ಸೈಟ್ ಪತ್ತೆ

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿ. ಚಂದ್ರೇಗೌಡರು ತೇಜಸ್ವಿ ಅವರ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು ತೇಜಸ್ವಿ ಕಾಡಿನೊಳಗೆ ಹೇಗೆ ಬದುಕಿದ್ದರು, ಅವರ ಜೀವನ ದೃಷ್ಟಿ ಹೇಗೆ ಪ್ರಕೃತಿಯ ಜೊತೆ ಥಳುಕು ಹಾಕಿಕೊಂಡಿತ್ತು ಎಂಬ ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡರು.

ಪರಿಸರ ನಾಶದ ಬಗ್ಗೆ ತೇಜಸ್ವಿ ಅವರು ಕೊಟ್ಟ ಎಚ್ಚರಿಕೆಯ ಬಗ್ಗೆ ಇಂದಿನ ಜನಾಂಗ ಗಮನಹರಿಸಬೇಕು. ಪ್ರಕೃತಿಯೊಂದಿಗೆ ಅವರಿಗಿದ್ದ ಅಗಾಧ ತಾಧ್ಯಾತ್ಮಿಕತೆ , ಸಾಮಾನ್ಯರೊಂದಿಗಿನ ಅವರ ಒಡನಾಟ ಇವೆಲ್ಲವೂ ವಿಸ್ಮಯ ಹುಟ್ಟಿಸುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಮಾತನಾಡಿ ಮಕ್ಕಳು ಪುಸ್ತಕ ಪ್ರೇಮಿಗಳಾಗಬೇಕು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಜೀವನದ ಪರೀಕ್ಷೆ ಎದುರಿಸಲು ಅಗತ್ಯವಾದ ಸಾಧನೆವೇ ಸಾಹಿತ್ಯ ಹಾಗಾಗಿ ಸಾಹಿತ್ಯ ಕೃತಿಗಳ ಅಧ್ಯಯನವನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ ಶಿವಚಿತ್ತಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕುಲ ಸಚಿವ ಎಂಪಿ ಕೃಷ್ಣಕುಮಾರ್ ಪ್ರೊಫೆಸರ್ ಯೋಗ ನರಸಿಂಹಾಚಾರಿ, ಉಪ ಕುಲಸಚಿವ ಡಾ.ಎಂ ವೈ ಶಿವರಾಮು ಹಾಗೂ ಪ್ರಾಂಶುಪಾಲರಾದ ಸ್ವರ್ಣ ಬಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಅವರು ಪ್ರಾಸ್ತಾವಿಕ ಮಾತನಾಡಿದರು. ಮಂಡ್ಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲೋಕೇಶ್ ಕೆ ಪಿ ಸ್ವಾಗತಿಸಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

36 mins ago

ಓದುಗರ ಪತ್ರ: ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆ ಅಕ್ಷಮ್ಯ

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…

38 mins ago

ಓದುಗರ ಪತ್ರ: ಅಮೆರಿಕ ಅಧ್ಯಕ್ಷರ ಹುಚ್ಚುತನ

ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…

41 mins ago

ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮ

ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…

44 mins ago

ಬಾಚಳ್ಳಿ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…

49 mins ago