ಮಂಡ್ಯ : ತಮಿಳುನಾಡಿಗೆ ನೀರು ಬಿಡುಗಡೆ ಮಾಡಿ ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಆ. 21ರಂದು ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲು ಬಿಜೆಪಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಐದು ಜಿಲ್ಲೆಗಳ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮುಖಂಡರ ಸಭೆಯಲ್ಲಿ ಕಾವೇರಿ ಕಣಿವೆ ರೈತರಿಗೆ ಅನ್ಯಾಯ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಯಿತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಅವರು, ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವಂತೆ ಆದೇಶ ಇಲ್ಲದಿದ್ದರೂ ರಾಜ್ಯ ಸರ್ಕಾರ ನೀರು ಬಿಡುಗಡೆ ಮಾಡುವ ಮೂಲಕ ರೈತರಿಗೆ ದ್ರೋಹ ಮಾಡಿದೆ ಎಂದು ಹೇಳಿದರು.
3 ಲಕ್ಷ ಹೆಕ್ಟೇರ್‌ನಲ್ಲಿ ಕುರುವೈ ಬೆಳೆ : ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಜಲಾಶಯಗಳಲ್ಲಿ ನೀರು ಸಹ ಕಡಿಮೆ ಇದೆ. ಆದರೂ ಸಹ ಏಕಾಏಕಿ ತೀರ್ಮಾನ ಕೈಗೊಂಡು ನೀರು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದ ನೀರು ಲಭ್ಯವಿದೆ, ಅಷ್ಟೇ ಅಲ್ಲದೆ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪಿನಲ್ಲಿ ಕುರುವೈ ಬೆಳೆ ಪ್ರದೇಶ 1.80 ಹೆಕ್ಟೇರ್ ಮೀರಿರಬಾರದು ಎಂದು ಹೇಳಿದೆ. ಆದರೆ, ತಮಿಳುನಾಡಿನಲ್ಲಿ ಮೂರು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆಯಲಾಗಿದ್ದು, ಅಲ್ಲಿನ ರೈತರ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ನೀರು ಬಿಡುಗಡೆ ಮಾಡಿದೆ ಎಂದರು.
ಒಳ ಒಪ್ಪಂದದಂತೆ ನೀರು ಬಿಡುಗಡೆ : ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಸಭೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಭಾಗವಹಿಸಿದ್ದು, ಅವರ ಓಲೈಕೆಗಾಗಿ ಮತ್ತು ಡಿ.ಕೆ.ಶಿವಕುಮಾರ್ ಹಾಗೂ ಸ್ಟಾಲಿನ್ ನಡುವೆ ಆಗಿರುವ ಒಳ ಒಪ್ಪಂದದಂತೆ ನೀರು ಬಿಡಲಾಗಿದೆ ಎಂದು ಹೇಳಿದರು.ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಯಾವುದೇ ಹೊಸ ಬೆಳೆ ಹಾಕಬಾರದು ಎಂದು ಕೃಷಿ ಸಚಿವರು ಹೇಳುತ್ತಾರೆ. ಆದರೆ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವ ಮೂಲಕ ರಾಜ್ಯದ ರೈತರ ಕಣ್ಣಿಗೆ ಸುಣ್ಣ ಹಾಕಿ ತಮಿಳುನಾಡು ರೈತರಿಗೆ ಬೆಣ್ಣೆ ಉಣಬಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾವೇರಿ ಕಣಿವೆಯ ರೈತರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದ್ದು, ಆ.21ರ ಸೋಮವಾರ ಬೆಳ್ಳಿಗ್ಗೆ 11 ಗಂಟೆಗೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಇಂಡವಾಳು ಮತ್ತು ಯಲಿಯೂರು ವೃತ್ತದಲ್ಲಿ ಬಂದ್ ಮಾಡಿ ಪ್ರತಿಭಟಿಸಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಪ್ರತಿಭಟನೆಯ ನೇತೃತ್ವ ವಹಿಸಲು ಆಹ್ವಾನಿಸಲಾಗುವುದು. ಜತೆಗೆ ಜಿಲ್ಲೆಯ ಜನಪರ, ರೈತ, ಕನ್ನಡಪರ ಮತ್ತು ಆಟೋ ಟ್ಯಾಕ್ಸಿ ಮಾಲೀಕರನ್ನು ಸಹ ಭಾಗವಹಿಸುವಂತೆ ಕೋರಲಾಗುವುದು ಎಂದರು.
ರೈತಪರ ನಿಲುವಿಗೆ ಬದ್ಧರಾಗಬೇಕು : ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಇದೊಂದು ರಾಜಕೀಯ ಹೋರಾಟ ಅಲ್ಲ, ನಾವೆಲ್ಲರೂ ರೈತರ ಪರ ನಿಲ್ಲಬೇಕು, ರೈತಪರ ನಿಲುವಿಗೆ ಬದ್ಧರಾಗಬೇಕು ಹಾಗಾಗಿ ಎಲ್ಲರನ್ನೂ ಒಳಗೊಂಡು ಹೋರಾಟ ರೂಪಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಕಡೆ ರಾಜ್ಯ ಸರ್ಕಾರ ಕೈ ತೋರಿಸಬಹುದು. ಆದರೆ, ಅಂಬರೀಶ್ ಕೇಂದ್ರ ಸಚಿವರಾಗಿದ್ದಾಗ ರಾಜೀನಾಮೆ ನೀಡಿದ ನಿದರ್ಶನ ನಿಮ್ಮ ಮುಂದಿದೆ. ಕೇಂದ್ರ ಸರ್ಕಾರ ಇತ್ಯರ್ಥ ಮಾಡುವುದಾಗಿದ್ದರೆ ಅವರೇಕೆ ರಾಜೀನಾಮೆ ನೀಡುತ್ತಿದ್ದರು ಎಂಬುದನ್ನ ತಿಳಿಯಬೇಕು. ಇಂತಹ ವಿಷಯದಲ್ಲಿ ಸುಮ್ಮನೆ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಮಾಜಿ ಶಾಸಕರಾದ ಕೆ.ಎಲ್. ನಾಗೇಂದ್ರ, ನಿರಂಜನ್ ಕುಮಾರ್, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಸಿದ್ದರಾಮಯ್ಯ, ರಾಜೇಂದ್ರ ಸೇರಿದಂತೆ ಇತರೆ ಜಿಲ್ಲೆಗಳ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…