ಮಂಡ್ಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿನ ದೃಷ್ಟಿಯಿಂದ ಪ್ರಚಾರ ಕಾರ್ಯ ಮಹತ್ವದ್ದು : ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ: ಮುಂಬರುವ ಡಿಸೆಂಬರ್ 20, 21ಮತ್ತು 22ರಂದು ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚು ಜನರನ್ನು ಸೇರಿಸಿ ಸಮ್ಮೇಳನ ಯಶಸ್ವಿಗೊಳಿಸಲು ಪ್ರಚಾರ ಕಾರ್ಯ ಮಹತ್ವದ್ದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಾವೇರಿಯಲ್ಲಿ ೯ ಲಕ್ಷ ಜನ ಸೇರಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಅದಕ್ಕಿಂತ ಹೆಚ್ಚು ಜನರನ್ನು ಸೇರಿಸುವ ದೃಷ್ಟಿಯಿಂದ ಪ್ರಚಾರವನ್ನು ವಿವಿಧ ಆಯಾಮಗಳಲ್ಲಿ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಮಿತಿಯ ಜವಾಬ್ದಾರಿ ಅತ್ಯಂತ ಹೆಚ್ಚಾಗಿರುತ್ತದೆ. ಉಪಸಮಿತಿಗಳನ್ನು ರಚಿಸಿ ಸದಸ್ಯರಿಗೆ ಕಾರ್ಯಹಂಚಿಕೆ ಮಾಡಲಾಗುವುದು ಎಂದರು.

ವೈವಿಧ್ಯಮಯ ರೀತಿಯಲ್ಲಿ ಪ್ರಚಾರ: ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಗ್ರಾಫಿಕ್ ಡಿಸೈನ್, ಸಾಮಾಜಿಕ‌ ಜಾಲತಾಣ ಮತ್ತು ಆ್ಯಪ್ ತಂತ್ರಜ್ಞಾನಗಳ ಮೂಲಕ ಪ್ರಚಾರ ನಡೆಸಲು ಅನುಕೂಲವಾಗುವಂತೆ ಪರಿಣತ ಕಂಪನಿಗಳಿಗೆ ತಮ್ಮ ಯೋಜನೆ ಮಂಡಿಸಲು ಅವಕಾಶ ನೀಡಿ,ಆಯಾ ಕ್ಷೇತ್ರದ ತಜ್ಞರು ವೀಕ್ಷಿಸಿದ ನಂತರ ಆಯ್ಕೆ ಮಾಡಿ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಚಟುವಟಿಕೆ ನೀಡಿ ಪ್ರಚಾರ
ನಾಗಮಂಗಲ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ರಸಪ್ರಶ್ನೆ,ಪ್ರಬಂಧ ಮುಂತಾದ ಸಾಹಿತ್ಯಿಕ ಚಟುವಟಿಕೆ ನಡೆಸಿ ಅವರಲ್ಲಿ ಜಾಗೃತಿ ಮೂಡಿಸಿ ಅವರ ಮೂಲಕ ಹಳ್ಳಿಗಳಿಗೆ ಸಮ್ಮೇಳನದ ವಿಷಯ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಕಸಾಪ ಗೌ||ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಗ್ರಾಮ ಮಟ್ಟದಲ್ಲಿ ಸೈಕಲ್ ಮತ್ತು ಬೈಕ್ ಜಾಥಾಗಳನ್ನು ಹಮ್ಮಿಕೊಳ್ಳಬೇಕು. ಡಿಸೆಂಬರ್ ಮಾಹೆಯಲ್ಲಿ ಮನೆಯ ಮುಂದೆ‌ ಕನ್ನಡ ಸಾಹಿತ್ಯ ಕುರಿತು ರಂಗೋಲಿಗಳು ಹಾಗೂ ಸಂಜೆ ಕನ್ನಡ ದೀಪ ಹಚ್ಚುವ ರೀತಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದರು.

ಮಂಡ್ಯ ಜಿಲ್ಲೆ ಮಾತ್ರವಲ್ಲ ಬೇರೆ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಕ್ರಮವನ್ನು ‌ಆಯೋಜಿಸಿ ಹೆಚ್ಚು ಜನರನ್ನು ಸಮ್ಮೇಳನದಲ್ಲಿ ಭಾಗವಹಿಸುವಂತೆ‌ ಮಾಡಬೇಕು. ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸಮ್ಮೇಳನದ ವಿಶೇಷತೆ ಇರುವ ಸ್ಥಬ್ದಚಿತ್ರವನ್ನು ಸಿದ್ಧಪಡಿಸಿ ಭಾಗವಹಿಸಲು ಕಳುಹಿಸಬೇಕು. ದಸರಾ ಕಾರ್ಯಕ್ರಮ ನಡೆಯುವ ಎಲ್ಲಾ ಜಿಲ್ಲೆಗಳಲ್ಲಿ ಸಮ್ಮೇಳನದ ಪ್ರಚಾರ ನೀಡಬೇಕು ಎಂದು ಸಮಿತಿಯ ಸದಸ್ಯ ಹಾಗೂ ಮಾಧ್ಯಮ ಪ್ರತಿನಿಧಿ ರೋಹಿತ್ ತಿಳಿಸಿದರು.

ಪತ್ರಕರ್ತ ಕೆ.ಶಂಭು ಕಬ್ಬನಹಳ್ಳಿ ಮಾತನಾಡಿ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಕನ್ನಡ ಬಗ್ಗೆ ಆಸಕ್ತಿ ಹೊಂದಿರುವ ಆನೇಕ ಜನರು ಇದ್ದರೆ. ಸಮ್ಮೇಳನದಲ್ಲಿ ದೇಶ-ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಪಾಲ್ಗೊಳ್ಳಲು ಪ್ರಚೋದಿಸಬೇಕು ಎಂದರು.

ಸಮಿತಿ ಸದಸ್ಯರಾದ ಯತೀಶ್ ಮಾತನಾಡಿ, ಪ್ರಚಾರ ಕನ್ನಡದ ಕಂಪನ್ನು ಬೀರುವ ಜೊತೆಗೆ ಮಂಡ್ಯ ಜಿಲ್ಲೆಯ ಸೊಗಡನ್ನು ಪಸರಿಸಬೇಕು. ಕೃಷಿ ಆಧಾರಿತ ಜಿಲ್ಲೆ ಆಗಿರುವುದರಿಂದ ಮುಖ್ಯವಾಗಿ ರೈತ ಕೇಂದ್ರಿತ ವಿಷಯಗಳನ್ನು ಮುನ್ನೆಲೆಗೆ ತಂದು ಪ್ರಚಾರ ರೂಪಿಸಬೇಕು. ಜಿಲ್ಲೆಯ ಪ್ರವಾಸಿ ತಾಣ, ಜನಪದ ವಿಷಯಗಳನ್ನು ಬಳಸಿಕೊಳ್ಳಬೇಕು ಎಂದರು.

ಪಾಂಡವಪುರ ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ್ ಮೇನಾಗರ ಮಾತನಾಡಿ ‘ಸಾಹಿತ್ಯ ಪರಿಷತ್ತಿನ ನಡೆ ಶಾಲೆಗಳ ಕಡೆ’ ಎಂಬ ಪರಿಕಲ್ಪನೆಯಲ್ಲಿ ಸಾಹಿತ್ಯ, ಸಂಸ್ಕೃತಿ, ಸಾಹಿತಿಗಳ ಪರಿಚಯ ಮಾಡಿಸುವ ಸಾಹಿತ್ಯ ಅಭಿಯಾನ ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಿದರು.

ಕೃಷಿ ಮೂಲ ಜಿಲ್ಲೆ ಆಗಿರುವುದರಿಂದ ಕಬ್ಬು ಕಡಿಯುವುದು, ನಾಟಿ ಮಾಡುವುದು ಮುಂತಾದ ಕೃಷಿ ಚಟುವಟಿಕೆಗಳ ಸ್ಪರ್ಧೆ ಏರ್ಪಡಿಸಿ ಜಾಗೃತಿ ಮೂಡಿಸಬಹುದು ಮಂಡ್ಯ ನಗರದಿಂದ ಹೆಚ್ಚು ಜನ ಸಮ್ಮೇಳನಕ್ಕೆ ಬರುವಂತೆ ಮಾಡಲು ೩೫ ವಾರ್ಡ್ಗಳ ನಗರಸಭಾ ಸದಸ್ಯರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾಗಿ ಮದ್ದೂರು ಮತ್ತು ಮಳವಳ್ಳಿ ತಾಲೂಕುಗಳಲ್ಲಿ ಮ್ಯಾರಥಾನ್ ಓಟ ಹಾಗೂ ಕಬ್ಬು ಕಡಿಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದಾಗಿ ಸಮಿತಿ ಸದಸ್ಯ ಶಿವಪ್ರಸಾದ್ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ,ಪ್ರಚಾರ ಸಮಿತಿ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ ರಾಜ್ಯಾದ್ಯಂತ ಇರುವ ಸರ್ಕಾರಿ ಹೋರ್ಡಿಂಗ್ಸ್ ಗಳನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದರು.

ಶನಿವಾರ ಬೆಳಿಗ್ಗೆ ೯ ಗಂಟೆಗೆ ನಡೆಯುವ ಮತ್ತೊಂದು ಸುತ್ತಿನ ಸಭೆಗೆ ಪ್ರಚಾರ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಬೇಕೆಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚಿಸಿದರು.

ಪ್ರಚಾರ ಸಮಿತಿ ಸಭೆಯಲ್ಲಿ ಕಸಾಪ ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ, ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಹೆಚ್.ನಿರ್ಮಲಾ, ಜಿಲ್ಲಾ ಕಸಾಪ ಕಾರ್ಯದರ್ಶಿ ಹರ್ಷ ವಿ ಪಣ್ಣೆ ದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಪದಾಧಿಕಾರಿಗಳಾದ ಧನಂಜಯ, ಚಂದ್ರಲಿಂಗು,ಗುರುಪ್ರಸಾದ್, ಶಿವಪ್ರಸಾದ್.ಕೆ.ಎಂ, ಬಲ್ಲೇನಹಳ್ಳಿ ಮಂಜುನಾಥ್, ಹೊಳಲು ಶ್ರೀಧರ್ ಮುಂತಾದವರು ಭಾಗವಹಿಸಿದ್ದರು.

ಮೈಸೂರು ವಿಭಾಗಕ್ಕೆ ರಥಯಾತ್ರೆಯಲ್ಲಿ ಆದ್ಯತೆ ಇರಲಿ

ಕನ್ನಡ ಜ್ಯೋತಿ ರಥಯಾತ್ರೆ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಸೆ.೨೨ ರಿಂದ ಉತ್ತರಕನ್ನಡ ಜಿಲ್ಲೆ ಶಿರಸಿಯ ಭುವನಗಿರಿಯಿಂದ ಹೊರಡುವ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ೮೭ ದಿನಗಳ ಕಾಲ ಸಂಚರಿಸುತ್ತದೆ. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಮೈಸೂರು ವಿಭಾಗಕ್ಕೆ ಸೇರಿದ ಮಂಡ್ಯ,ಮೈಸೂರು, ಹಾಸನ, ಚಾಮರಾಜನಗರ, ಕೊಡಗು, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ರಥಯಾತ್ರೆಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಸಂಚರಿಸುವ ರಥಕ್ಕೂ ಚಾಲನೆ ನೀಡಲಾಗುವುದು.ನಿರ್ಮಾಣವಾಗುವ ರಥ ಸುಸಜ್ಜಿತವಾಗಿರಬೇಕು ಎಂದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಹೊರಡುವ ರಥಯಾತ್ರೆ ಸಂಚರಿಸುವ ಜಿಲ್ಲೆಯ ತಾಲೂಕಿಗೆ ಅನುಗುಣವಾಗಿ ದಿನಗಳನ್ನು ನಿಗದಿಪಡಿಸಿ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯರಿಗೆ ವಿವಿಧ ಜಿಲ್ಲೆಗಳ ಜವಾಬ್ದಾರಿ ವಹಿಸಲಾಯಿತು.

ಜವಾಬ್ದಾರಿ ವಹಿಸಿಕೊಂಡಿರುವ ಸದಸ್ಯರು ಮತ್ತು ಅಧಿಕಾರಿಗಳು ಆಯಾ ಜಿಲ್ಲೆಯ ಮುಖ್ಯ ಜಿಲ್ಲಾಧಿಕಾರಿ,ಜಿಪಂ ಸಿಇಒ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಸಂಪರ್ಕಿಸಿ ಸಂಚರಿಸುವ ಮಾರ್ಗ,ಪ್ರಯಾಣ ದೂರ,ದಿನ,ತಂಗುವ ಸ್ಥಳಗಳನ್ನು ನಿರ್ಧರಿಸಬೇಕು ಎಂದರು.

ರಥಯಾತ್ರೆ ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

19 mins ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

30 mins ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

36 mins ago

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ಆರು ನಿರ್ಣಯಗಳನ್ನು ಮಂಡಿಸಿದ ಕಸಾಪ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…

1 hour ago

ಮಂಡ್ಯದಲ್ಲಿ ಬರ್ಬರ ಕೊಲೆ ಪ್ರಕರಣ: ಸಾಲ ತೀರಿಸಲು ದರೋಡೆಗೆ ಇಳಿದಿದ್ದ ಪಾತಕಿ

ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್‌ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್‌ ವಿಚಾರ ಬಾಯ್ಬಿಟ್ಟಿದ್ದಾನೆ.…

2 hours ago

ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…

3 hours ago