ಸಿಎಫ್‌ಟಿಆರ್‌ಐ ಕ್ಯಾಂಪಸ್ ನಲ್ಲಿ ಚಿರತೆ ಕಾಣಿಸಿಕೊಂಡ ಆತಂಕ, ಶಾಲೆಗೆ ರಜೆ
ಮೈಸೂರು: ಜಿಲ್ಲೆಯಲ್ಲಿ ಚಿರತೆಗಳ ಸದ್ದು ಮುಂದುವರಿದಿದೆ. ನಗರದ ಇಲವಾಲದ ಬಳಿ ಇರುವ ಆರ್‌ಎಂಪಿ ಘಟಕದ ಬಳಿ ಮಂಗಳವಾರ ರಾತ್ರಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಇದೇ ವೇಳೆ ನಗರದ ಸಿಎಫ್ ಟಿಆರ್ ಐ ಕ್ಯಾಂಪಸ್ ನಲ್ಲಿ ಮಂಗಳವಾರ ರಾತ್ರಿ 1 ಗಂಟೆ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಇಲವಾಲ ಭಾಗದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆರ್ ಎಂಪಿ ಘಟಕ ಸೇರಿದಂತೆ ನಾನಾ ಭಾಗಗಳಲ್ಲಿ ಬೋನು ಇರಿಸಲಾಗಿತ್ತು. ಮಂಗಳವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ.
ಐದರಿಂದ ಆರು ವರ್ಷದ ಗಂಡು ಚಿರತೆ ಇದಾಗಿದ್ದು, ಚಿರತೆಯನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ ಬಳಿಕ ಕಾಡಿಗೆ ಬಿಡಲಾಗುವುದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಆಂದೋಲನ ಡಿಜಿಟಲ್ ಗೆ ತಿಳಿಸಿದ್ದಾರೆ. ಮೈಸೂರು ಜಿಲ್ಲೆಯೊಂದರಲ್ಲಿಯೇ ಕಳೆದ ಮೂರು ವಾರಗಳಲ್ಲಿ ಸೆರೆಸಿಕ್ಕ 9ನೇ ಚಿರತೆ ಇದಾಗಿದೆ.
ಇದೇ ವೇಳೆ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ಮಂಗಳವಾರ ರಾತ್ರಿ ಚಿರತೆ ಕಾಣಿಸಿಕೊಂಡಿರುವ ವಿಚಾರ ಸಿಎಫ್ ಟಿ ಆರ್ ಐ ಸಿಬ್ಬಂದಿ ಮತ್ತು ಶಾಲಾ ಮಕ್ಕಳಲ್ಲಿ ಬುಧವಾರ ಆತಂಕಕ್ಕೆ ಕಾರಣವಾಯಿತು. ಚಿರತೆ ಕಾಣಿಸಿಕೊಂಡ ಸುದ್ದಿ ಹಿನ್ನೆಲೆಯಲ್ಲಿ ಸಿಎಫ್ ಟಿಆರ್ ಐ ಕ್ಯಾಂಪಸ್ ನಲ್ಲಿರುವ ಒಂದರಿಂದ 12 ತರಗತಿ ಮಕ್ಕಳಿಗೆ ರಜೆ ಘೋಷಿಸಲಾಯಿತು. ಪೋಷಕರು ಆತಂಕದಲ್ಲಿಯೇ ಬಂದು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದರು.
ಚಿರತೆಯ ಓಡಾಟವನ್ನು ಸಂಸ್ಥೆಯ ಕಾವಲು ಸಿಬ್ಬಂದಿ ಪ್ರಭಾಕರ್ ಎಂಬವರು ಗಮನಿಸಿ ಸಿಎಫ್‌ಟಿಆರ್‌ಐ ನಿರ್ದೇಶಕರಿಗೆ ತಿಳಿಸಿದ್ದು ಅವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೆನ್ನಲಾಗಿದೆ.
ಅರಣ್ಯ ಇಲಾಖೆ ಬುಧವಾರ ಬೆಳಗ್ಗಿನಿಂದಲೇ ಕಾರ್ಯ ಪ್ರವೃತ್ತವಾಗಿದ್ದು 10 ಮಂದಿ ಸಿಬ್ಬಂದಿಗಳನ್ನು ಚಿರತೆ ಜಾಡು ಪತ್ತೆಗೆ ನೇಮಿಸಲಾಯಿತು. ಆದರೆ ಚಿರತೆಯ ಹೆಜ್ಜೆ ಗುರುತು ಎಲ್ಲೂ ಪತ್ತೆಯಾಗಿಲ್ಲ. ಕ್ಯಾಂಪಸ್ ನಲ್ಲಿರುವ ಪಾಳು ಬಿದ್ದ ಸುಮಾರು 60 ಕ್ವಾರ್ಟರ್ಸ್ ನಲ್ಲೂ ಶೋಧ ನಡೆಸಲಾಯಿತು. ಆದರೆ ಎಲ್ಲೂ ಚಿರತೆಯ ಕುರುಹು ಕಂಡು ಬಂದಿಲ್ಲ.
ಸದ್ಯ ಕ್ಯಾಂಪಸ್ಸಿನಲ್ಲಿ ಒಂದು ಬೋನು ಇಡಲಾಗಿದೆ. ಅಗತ್ಯ ಬಿದ್ದರೆ ಮತ್ತೊಂದು ಬೋನು ಇಡಲಾಗುತ್ತದೆ. ಕ್ಯಾಂಪಸ್ ನಲ್ಲಿ ರಾತ್ರಿ ದೃಶ್ಯಗಳನ್ನು ಸೆರೆ ಹಿಡಿಯುವ ಸಿಸಿ ಕೆಮೆರಾ ಗಳಿಲ್ಲ. ಇದಕ್ಕಾಗಿ ತಕ್ಷಣವೇ ನಾಲ್ಕು ನೈಟ್ ಕ್ಯಾಪ್ಚರಿಂಗ್ ಸಿಸಿ ಕೆಮೆರಾ ಅಳವಡಿಸಲಾಗುತ್ತಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಆಂದೋಲನ ಡಿಜಿಟಲ್ ಗೆ ತಿಳಿಸಿದ್ದಾರೆ. ನಾಳೆಯಿಂದ ಎಂದಿನಂತೆ ಶಾಲೆ ನಡೆಯಲಿದೆ. ಚಿರತೆಯ ಬಗ್ಗೆ ಭಯ ಬೇಕಾಗಿಲ್ಲ ಎಂದವರು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಮೇಟಗಳ್ಳಿಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ (ಆರ್‌ಬಿಐ) ಆವರಣದಲ್ಲಿ ಚಿರತೆಯು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಚಿರತೆಯ ಕಾರಣಕ್ಕೆ ಆರ್ ಬಿ ಐ ಸನಿಹದ ಕೇಂದ್ರೀಯ ವಿದ್ಯಾಲಯಕ್ಕೆ ಸೆಪ್ಟೆಂಬರ್ 1 ರಿಂದ ಸುಮಾರು ಎರಡು ವಾರ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಮರಿಗಳೊಂದಿಗೆ ಕಾಣಿಸಿಕೊಂಡಿದ್ದ ಚಿರತೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ಆರ್ ಬಿ ಐ ಕ್ಯಾಂಪಸ್ ನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬೋನುಗಳನ್ನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತಾದರೂ ಚಿರತೆ ಬಲೆಗೆ ಬಿದ್ದಿರಲಿಲ್ಲ. ಈ ಹಿಂದೆ ಬೆಮೆಲ್ ಕ್ಯಾಂಪಸ್, ಗೋಕುಲಂ, ಹೆಬ್ಬಾಳ, ಚಾಮುಂಡಿ ಬೆಟ್ಟ, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಚಿರತೆ ಕಾಣಿಸಿಕೊಂಡಿತ್ತು.
ನಾಗರ ಹೊಳೆ, ಬಂಡೀಪುರ ಅಭಯಾರಣ್ಯಗಳು ಮೈಸೂರಿಗೆ ಸನಿಹದಲ್ಲಿವೆ. ಚಾಮುಂಡಿ ಬೆಟ್ಟವೂ ಸನಿಹದಲ್ಲೇ ಇರುವುದರಿಂದ ಆಗಾಗ್ಗೆ ಮೈಸೂರಿನ ಜನ ವಸತಿ ಪ್ರದೇಶಗಳತ್ತ ಚಿರತೆಗಳು ಬರುವುದು ಸಾಮಾನ್ಯ. ಆಹಾರ ಹುಡುಕಿಕೊಂಡು ಬರುವ ಚಿರತೆಗಳು ಒಂದೇ ಕಡೆ ನೆಲೆ ನಿಲ್ಲುವುದಿಲ್ಲ. ಸಾಮಾನ್ಯವಾಗಿ ರಾತ್ರಿ ವೇಳೆ ಸಂಚರಿಸುತ್ತವೆ. ಹಗಲು ಹೊತ್ತಿನಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಹಾಗಾಗಿ ಜನರು ರಾತ್ರಿ ವೇಳೆ ಓಡಾಡುವಾಗ ಎಚ್ಚರಿಕೆಯಿಂದ ಇದ್ದರೆ ಸಾಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…
ಚಿಕ್ಕೋಡಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಯಾವುದೇ…
ಹುಣಸೂರು : ತಾಲ್ಲೂಕಿನ ಗುರುಪುರದ ಟಿಬೆಟ್ ನಿರಾಶ್ರಿತರ ಕೇಂದ್ರದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಾಗರಹೊಳೆ ರಾಷ್ಟ್ರೀಯ…
ಬೆಂಗಳೂರು : ಭಾರತವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲಿಡುತ್ತಿದೆ. ಆದರೆ, ಉತ್ತಮ…