ಬೆಟ್ಟಕ್ಕೆ ಹೊರಟಿದ್ದವನ ಮೇಲೆ ದಾಳಿ ಮಾಡಿದ ಚಿರತೆ
ತಿ. ನರಸೀಪುರ: ಮೈಸೂರು ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿರುವ ನಡುವೆಯೇ ಕಾರ್ತಿಕ ಜಾತ್ರೆಗೆಂದು ಹೊರಟಾಗ ಚಿರತೆ ದಾಳಿ ಮಾಡಿ ವಿದ್ಯಾರ್ಥಿ ಮೃತಪಟ್ಟ ಘಟನೆ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನ ಹುಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿ, ಗ್ರಾಮದ ಚನ್ನಮಲ್ಲದೇವರು ಎಂಬುವವರ ಪುತ್ರ ಮಂಜುನಾಥ್( ೧೯) ಮೃತ ಯುವಕ. ತಿ.ನರಸೀಪುರ ತಾಲ್ಲೂಕಿನ ಸೋಸಲೆ ಹೋಬಳಿ ಉಕ್ಕಲಗೆರೆ ಸುತ್ತಮುತ್ತ ಚಿರತೆ ಕಾಟವಿದ್ದರೂ ಎಂದೂ ಜನರಿಗೆ ತೊಂದರೆ ನೀಡಿರಲಿಲ್ಲ. ಆದರೆ ಜನಸಂದಣಿ ಇದ್ದರೂ ಚಿರತೆ ದಾಳಿಗೆ ವಿದ್ಯಾರ್ಥಿ ಬಲಿಯಾಗಿರುವುದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಎಚ್‌ಡಿಕೋಟೆ ಎಸಿಎಫ್ ಶಿವರಾಮ್, ಆರ್‌ಎಫ್‌ಒ ಅವರ ನೇತೃತ್ವದ ತಂಡ ಮೂರು ಬೋನುಗಳನ್ನು ಇರಿಸಿದೆ. ಮೃತನ ಶವವನ್ನು ಮೈಸೂರು ಕೆಆರ್‌ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಶವ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.
ಕಾರ್ತಿಕ ಸೋಮವಾರ ಇದ್ದುದರಿಂದ ಮಲ್ಲಪ್ಪನ ಬೆಟ್ಟದ ಸಮೀಪವಿರುವ ಮುದ್ದು ಮಾರಮ್ಮ ದೇವಾಲಯದ ಬಳಿ ಸ್ನೇಹಿತರ ಜತೆ ಪೂಜೆಗೆಂದು ಮಂಜುನಾಥ್ ಹೋಗಿದ್ದರು. ಮುಂದೆ ಸಾಗುತ್ತಿದ್ದ ವೇಳೆ ಪೊದೆಯಿಂದ ಜಿಗಿದ ಚಿರತೆ ಮಂಜುನಾಥ್ ಮೇಲೆ ದಾಳಿ ನಡೆಸಿ, ಎಳೆದಾಡಿ ಕತ್ತಿನ ನಾಳವನ್ನು ಕಚ್ಚಿ ರಕ್ತ ಹೀರಿದೆ. ಸ್ನೇಹಿತರು ಕಲ್ಲು ಹೊಡೆದು ರಕ್ಷಿಸಲು ಪ್ರಯತ್ನ ಮಾಡಿದ್ದಾದರೂ ಪ್ರಯೋಜನವಾಗದೆ ಗ್ರಾಮಸ್ಥರಿಗೆ ತಿಳಿಸಿದಾಗ ಬಂದು ನೋಡುವಷ್ಟರಲ್ಲಿ ಮಂಜುನಾಥನ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಲ ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಟವಿದೆ. ಮಹದೇವಮ್ಮ ಎಂಬುವರ ಮನೆಗೆ ನುಗ್ಗಿ ಮೇಕೆಗಳನ್ನು ಚಿರತೆ ಹೊತ್ತೊಯ್ದಿತ್ತು. ನಾಯಿಗಳ ಮೇಲೂ ದಾಳಿ ಮಾಡಿದೆ. ಮಲ್ಲಪ್ಪನ ಬೆಟ್ಟದ ಸುತ್ತ ಮುತ್ತಲಿನ ಗ್ರಾಮದ ಜನ ರಾತ್ರಿ ವೇಳೆ ಹೊರಗೆ ಬರಲು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಗಸ್ತು ತಿರುಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಅರಣ್ಯ ಇಲಾಖೆ ದೌಡು: ವಿಷಯ ತಿಳಿದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿಶೇಷ ಕಾರ‌್ಯಪಡೆಯ ೧೫ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಟ್ಟದ ಸುತ್ತಮುತ್ತಲ ಪೊದೆಗಳನ್ನು ತೆರವುಗೊಳಿಸಿದರು. ಸಿಎಫ್ ಡಾ.ಮಾಲತಿಪ್ರಿಯ, ಡಿಸಿಎಫ್ ಕಮಲಾ ಕರಿಕಾಳನ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಶಿವರಾಮ್ ಹಾಗೂ ತಂಡ ಗ್ರಾಮದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿತು.
ಈಗಾಗಲೇ ಘಟನೆ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ೨ ಲಕ್ಷ ರೂ. ಪರಿಹಾರವನ್ನು ಕುಟುಂಬಕ್ಕೆ ನೀಡಲಾಗುತ್ತದೆ. ಪ್ರಕ್ರಿಯೆ ಮುಗಿದ ನಂತರ ಉಳಿಕೆ ೫.೫೦ ಲಕ್ಷ ರೂ.ಗಳನ್ನು ಅರಣ್ಯ ಇಲಾಖೆಯಿಂದ ನೀಡಲಾಗುತ್ತದೆ ಎಂದು ಡಿಸಿಎಫ್ ಕಮಲಾ ಕರಿಕಾಳನ್ ತಿಳಿಸಿದರು.
ಸ್ಥಳಕ್ಕೆ ಬನ್ನೂರು ಪೊಲೀಸ್ ಠಾಣೆಯವರು ಭೇಟಿ ನೀಡಿದ್ದರು ಶಾಸಕ ಎಂ. ಅಶ್ವಿನ್ ಕುಮಾರ್ ಕೂಡ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.
ಮೃತನ ಮನೆಗೆ ಮೈಮುಲ್ ವಾಜಿ ಅಧ್ಯಕ್ಷ ಸಿ.ಓಂಪ್ರಕಾಶ್, ಉಕ್ಕಲಗೆರೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಅಡುಗೆ ಕುವಾರ್, ರೈತ ಮುಖಂಡ ಕಳ್ಳಿಪುರ ಮಹದೇವಸ್ವಾಮಿ, ಕೊನಿಕ್ಸ್ ವಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
೧೫ ಚಿರತೆ ಸೆರೆ!
ಮೈಸೂರು ಭಾಗದಲ್ಲಿ ಈ ವರ್ಷದ ಏಪ್ರಿಲ್ ನಂತರ ೧೫ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಕೆಆರ್‌ಎಸ್, ಮೈಸೂರಿನ ಆರ್‌ಬಿಐ ಘಟಕದ ಆವರಣದಲ್ಲಿ ಚಿರತೆ ಕಾಟ ಇರುವ ದೂರು ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಭಾಗದಲ್ಲಿ ಈವರೆಗೂ ಚಿರತೆ ದಾಳಿ ಅಲ್ಲಲ್ಲಿ ಆಗಿದ್ದರೂ ವ್ಯಕ್ತಿ ಮೃತಪಟ್ಟಿರುವುದು ಇದೇ ಮೊದಲು. ಚಿರತೆ ಸೆರೆಗೆ ಬೋನುಗಳನ್ನು ಇರಿಸಲಾಗಿದ್ದು, ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತೇವೆ.
–ಡಾ.ಮಾಲತಿ ಪ್ರಿಯ, ಸಿಎಫ್ ಮೈಸೂರು ವೃತ
ಮೈಸೂರು : ಕರ್ನಾಟಕದಲ್ಲಿ ಬಿಜೆಪಿ-ಜಾ.ದಳ ಒಂದಾದರೂ ಅಧಿಕಾರಕ್ಕೆ ಬರಲ್ಲವೆಂದು ಭವಿಷ್ಯ ನುಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2028ಕ್ಕೂ ನಾವೇ ಅಧಿಕಾರಕ್ಕೆ ಬರುವುದು…
ಬೆಂಗಳೂರು : ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಪೊಲೀಸರಿಗೆ ತಾವು ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೊಡಮಾಡುವ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು,…
ಬೆಳಗಾವಿ : ಕರ್ನಾಟಕ-ಗೋವಾ-ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ದೇಶದ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ…
ಹುಣಸೂರು : ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಅಪಾಯಕಾರಿ ಬೈಕ್ ವೀಲಿಂಗ್ ಮಾಡಿದ 17 ವರ್ಷದ ಅಪ್ರಾಪ್ತ ಯುವಕನನ್ನು…
ಹೊಸದಿಲ್ಲಿ : ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ವ್ಯವಸ್ಥೆಯ ಜೀವಾಳವೇ ಮತದಾರ. ಪ್ರತಿ ವರ್ಷ ಜನವರಿ 25…
ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…