ಕುಶಾಲನಗರ : ಸಾಕಾನೆ ಶಿಬಿರಗಳ ಆನೆ ಮಾವುತರು ಹಾಗೂ ಕಾವಾಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ವರ್ಷದ ದಸರಾಗೆ ಆನೆಗಳನ್ನು ಕಳುಹಿಸುವ ಕಾರ್ಯವನ್ನು ಬಹಿಷ್ಕರಿಸಿ ಪ್ರತಿಭಟಿಸಲು ಆನೆ ಮಾವುತ ಮತ್ತು ಕಾವಾಡಿಗರ ಸಂಘ ಇಂದು ದುಬಾರಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ನಿರ್ಧರಿಸಿದೆ.
ತಮಗೆ ನೀಡುತ್ತಿರುವ ವೇತನದಲ್ಲಿ ತಾರತಮ್ಯವನ್ನು ಮಾಡುತ್ತಿದ್ದು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡಿದರು ಸಹ ಇದುವರೆಗೂ ಈಡೇರದ ಕಾರಣ ನಾವು ಪ್ರತಿಭಟಿಸಲು ನಿರ್ಧಾರ ಮಾಡಿದ್ದೇವೆ ಎಂದು ಕುಶಾಲನಗರ ವಲಯ ದುಬಾರೆ ಸಂಘದ ಅಧ್ಯಕ್ಷ ಅಣ್ಣಯ್ಯ ದೊರೆಯಪ್ಪ ತಿಳಿಸಿದ್ದಾರೆ.
ಆಯಾ ಶಿಬಿರಗಳಲ್ಲಿ ಆನೆಗಳ ನಿರ್ವಹಣೆ ಹೊರತುಪಡಿಸಿ, ಹುಲಿ ಹಿಡಿಯುವುದು, ಕಾಡನೆ ಹಿಡಿಯುವುದು ಸೇರಿದಂತೆ ದಸರಾ ಗೆ ಆನೆಗಳನ್ನು ಕಳುಹಿಸುವ ಕಾರ್ಯವನ್ನು ನಾವು ಬಹಿಷ್ಕರಿಸಿ ಪ್ರತಿಭಟನೆಯನ್ನು ನಡೆಸಲು ಒಮ್ಮತದ ಅಭಿಪ್ರಾಯದಿಂದ ತೀರ್ಮಾನ ಕೈಗೊಂಡಿದ್ದೇವೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಖಿತ ರೂಪದಲ್ಲಿ ಭರವಸೆ ನೀಡಿದಾಗ ಮಾತ್ರ ನಾವು ಹೆಚ್ಚುವರಿ ಕೆಲಸ ನಿರ್ವಹಿಸಲು ಸಾಧ್ಯ ಎಂದು ಎಂದು ಸಂಘದ ಪ್ರಮುಖರಾದ ಮೇಘರಾಜ್ ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಸಂಘದ ರಾಜ್ಯ ಅಧ್ಯಕ್ಷ ಗೌಸ್ ಖಾನ್, ಉಪಾಧ್ಯಕ್ಷ ಜೆ.ಕೆ ಡೋಬಿ, ಪ್ರಧಾನ ಕಾರ್ಯದರ್ಶಿ ಪರ್ವೀನ್ ಪಾಷಾ, ಸೇರಿದಂತೆ ಮತ್ತಿಗೋಡಿನ ಜೆ.ಕೆ.ವಸಂತ, ರಾಂಪುರದ ನಾಗೇಶ್, ಜೈವಾಲ್ ಹಾಗೂ ಮತ್ತಿಗೋಡು, ದುಬಾರೆ, ಸಕ್ರೆ ಬೈಲು, ಕೆ. ಗುಡಿ, ರಾಂಪುರ ಶಿಬಿರಗಳ ಮಾವುತರು, ಕವಾಡಿಗರು ಸಭೆಯಲ್ಲಿ ಪಾಲ್ಗೊಂಡಿದ್ದರು.