ಕೊಡಗಿನ ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಜೆ.ಎಸ್.ಶರಣ್ಯ ಅವರ ಮನದಾಳದ ಮಾತು
ಪ್ರಶ್ನೆ : ನೀವು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾಡಿಗೆ ಹೋಗಿದ್ದು, ನಾಪತ್ತೆ ಆಗಿದ್ದು, ಮತ್ತೆ ಮರಳಿದ್ದು, ಈ ಕುರಿತು ಜನರ ಊಹಾಪೋಹಾಗಳನ್ನು ಕೇಳಿರಬಹುದು. ಹೀಗೆ ಆಗಬೇಕು ಅಂತ ಮೊದಲೇ ಪ್ಲಾನ್ ಮಾಡಿದ ಹಾಗೆ ತೋರುತ್ತದೆ ಅಂತೆಲ್ಲ ಗಾಳಿಸುದ್ದಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನರು, ನೀವೇ ಸೃಷ್ಟಿ ಮಾಡಿದ ನಾಟಕವಿದು ಎಂಬಂತೆಯೂ ಕುಹಕವಾಡುತ್ತಿದ್ದಾರೆ. ಅವರಿಗೆ ನಿಮ್ಮ ಪ್ರತಿಕ್ರಿಯೆ ಏನು?
ಶರಣ್ಯ: (ನಗುತ್ತಾ) ಯಾರು ತಾನೆ ಅವರಾಗಿಯೇ ಅವರ ಬದುಕನ್ನು ಹಾಳುಮಾಡಿಕೊಳ್ಳುತ್ತಾರೆ ಹೇಳಿ? ನಿಮಗನ್ನಿಸುತ್ತಾ ಯಾವುದೋ ಅಷ್ಟಾಗಿ ಗೊತ್ತಿಲ್ಲದ ಭಯಾನಕ ಕಾಡಿನಲ್ಲಿ ಮರೆಯಾಗಿ, ಕಳೆದುಹೋಗಿದ್ದೀನಿ ಅಂತ ನಟಿಸಬೇಕಾದ ಅಗತ್ಯ ಇದೆ ಅಂತ?
ಪ್ರಶ್ನೆ: ಜನರ ಪ್ರಶ್ನೆ ಸಹಜವಾಗಿಯೇ ಇದೆ ಅಲ್ವಾ? ಇವತ್ತಿನ ಯುವ ತಲೆಮಾರು ಪ್ರಚಾರ ಗಿಟ್ಟಿಸಿಕೊಳ್ಳುವ ಭರದಲ್ಲಿ ಎಂಥಾ ದುಸ್ಸಾಹಸಕ್ಕೂ ಕೈ ಹಾಕುತ್ತಾರೆ. ತಾವು ಮುನ್ನೆಲೆಗೆ ಬರಬೇಕು ಅಂತ ಏನೇನೊ ಗಿಮಿಕ್‌ಗಳನ್ನು ಮಾಡುತ್ತಲೇ ಇರುತ್ತಾರೆ.
ಶರಣ್ಯ: ಹಾಗೆ ನನಗೆ ಪ್ರಚಾರದಲ್ಲಿರಬೇಕಾದ ಯಾವ ಆಸೆಯೂ ಇಲ್ಲ. ಆವತ್ತು ಪೊಲೀಸರು ಜೊತೆ ನಿಂತಿದ್ದರು. ವೈದ್ಯರೂ ಉಪಚರಿಸಿದ್ದಾರೆ. ಹೆಲಿಕಾಪ್ಟರ್ ಕೂಡ ಬಂದಿತ್ತು. ಇನ್ನೇನು ಸ್ಪಷ್ಟನೆ ಕೊಟ್ಟು ಸಾಬೀತುಪಡಿಸಲಿ!
ಪ್ರಶ್ನೆ: ಕಾಣೆಯಾದ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಇರುವಂತಹ ಯಾವ ಭಯದ ಚಹರೆಯಾಗಲಿ ಅಥವಾ ಆತಂಕದ ಭಾವವಾಗಲಿ ನಿಮ್ಮ ಮುಖದಲ್ಲಿ ಇರಲಿಲ್ಲ ಎನ್ನುವುದು ಬಹಳಷ್ಟು ಮಂದಿಯ ಮಾತು. ಮೂರು ರಾತ್ರಿ ಅಂತಹ ದುರ್ಗಮ ಕಾಡಿನಲ್ಲಿ ಇದ್ದಾಗಲೂ ನಿಮ್ಮ ಪ್ರಸನ್ನತೆ, ಲವಲವಿಕೆ ಕಂಡವರು ಆಕೆಯೇ ಹೆಣೆದ ಸುಳ್ಳು ಜಾಲವಿರಬಹುದೇ ಎನ್ನುತ್ತಿದ್ದಾರೆ.
ಶರಣ್ಯ: ಜೀವನದಲ್ಲಿ ಏನೊ ನಡೆದಾಗ ತಕ್ಷಣ ಭಯಗೊಳ್ಳುವುದು ಒಬ್ಬರ ಸ್ವಭಾವವಾದರೆ, ಇನ್ನೂ ಕೆಲವರು ಅದರಿಂದ ಪಾರಾಗುವುದು ಹೇಗೆ ಅಂತ ಯೋಚಿಸುತ್ತಾರೆ. ಇದೆಲ್ಲವನ್ನು ಸಂದರ್ಭವೇ ಕಲಿಸುತ್ತದೆ. ಕೆಲವೊಂದು ಸನ್ನಿವೇಶಗಳು ನಮ್ಮ ಬದುಕನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಬದುಕಿನ ಬಗ್ಗೆ ನಮಗಿರುವ ಕನಸುಗಳೇ ನಮ್ಮನ್ನು ಬದುಕಿಸುತ್ತವೆ ಅನ್ನೋದು ನನ್ನ ನಂಬಿಕೆ. ಸಾಮಾಜಿಕ ಜಾಲತಾಣದ ತುಂಬ ಅನೇಕರು ಈ ಬಗ್ಗೆ ಆಗ್ರಹಿಸಿರುವುದನ್ನು ನಾನೂ ಗಮನಿಸಿದ್ದೇನೆ. ನನಗೇನೂ ಆಗಿಲ್ಲ ಅಂತ ಹೇಳಿಕೆ ನೀಡಿದ್ದೆ ನಿಜ. ಗಂಭೀರವಾಗಿ ಏನೂ ಆಗಿರಲಿಲ್ಲ, ಹಾಗಾಗಿ ಸತ್ಯವನ್ನೇ ಹೇಳಿದೆ.
ಪ್ರಶ್ನೆ: ಜನರ ಮಾತುಗಳು ನಿಮ್ಮನ್ನೂ ತಲುಪಿವೆ ಎಂದ ಮೇಲೆ ಅವರಿಗೆ ಏನು ಹೇಳಲು ಬಯಸುತ್ತೀರಿ?
ಶರಣ್ಯ: ಬಹುಶಃ ಏನೂ ಆಗದಿದ್ದರೂ ಏನೋ ಆಗಿದೆ ಎನ್ನುವ ಹಾಗೆ ಬಿಂಬಿಸುತ್ತಾರಲ್ಲಾ ಅದನ್ನೇ ನೋಡಿದ ಜನರಿಗೆ ನಾನು ಇರುವುದನ್ನು ಇರುವಂತೆಯೇ ಹೇಳಿದ್ದು ಆಶ್ಚರ್ಯ ಅನಿಸಿರಬಹುದು. ಭಯಂಕರವಾದದ್ದು ಏನೊ ಆಗಿರಬಹುದು ಎಂದು ಭಾವಿಸಿರಬೇಕು, ನಾನು ಭಯಬಿಟ್ಟು ಬದುಕಿಬಂದಿದ್ದೆ. ಮೇಲ್ನೋಟಕ್ಕೆ ಏನು ಮಾಧ್ಯಮಗಳು ತೋರಿಸುತ್ತದೋ ಅದನ್ನೇ ಸತ್ಯವೆಂದು ನಂಬಿದ ಜನರಿಗೆ ಏನು ಹೇಳಲಿ? ಪರಾಮರ್ಶಿಸಿ ನೋಡಿದಾಗ ಸತ್ಯದ ಅರಿವಾಗಬಹುದು. ಹಾಗಂತ ನನಗೆ ಏನೇನೂ ಆಗಿಲ್ಲ ಅಂತಲ್ಲ. ಸಣ್ಣಪುಟ್ಟ ಗಾಯಗಳಾಗಿವೆ. ಈಗಲೂ ಕೂತಾಗ, ಬಗ್ಗಿದಾಗ ದೇಹವೇ ನೋಯುತ್ತದೆ. ಪಶ್ಚಿಮ ಘಟ್ಟದ ಕಾಡುಗಳು ಅಂದ ಮೇಲೆ ಜಿಗಣೆ, ಇತರ ಕೀಟಗಳೂ ಇರುತ್ತಾವಲ್ಲಾ, ಅವುಗಳೂ ಕಚ್ಚಿವೆ. ಅಲೆದೂ ಅಲೆದೂ ದೇಹ ದಣಿದಿತ್ತು, ಕಾಲೂ ಊದಿಕೊಂಡಿತ್ತು. ಅದಕ್ಕೆ ಬೇಕಾದ ಚಿತ್ರಗಳನ್ನೆಲ್ಲ ಒದಗಿಸಬಲ್ಲೆ.
ಪ್ರಶ್ನೆ:ಶರಣ್ಯ ನಿಮ್ಮನ್ನು ಲೇಡಿ ಟಾರ್ಜನ್ ಎನ್ನುತ್ತಾರೆ. ಈ ಬಗ್ಗೆ ತಿಳಿದಿದೆಯಾ?
ಶರಣ್ಯ: (ನಗುತ್ತಾ) ಇಲ್ಲ. ಅದಕ್ಕಿಂತ ತಮಾಷೆ ಎಂದರೆ ಒಂದಷ್ಟು ಮಂದಿ ಕಾಡಿನಲ್ಲಿದ್ದಾಗ ಇವಳು ಡ್ರಗ್ಸ್, ಮಾದಕ ವಸ್ತುಗಳನ್ನು ಸೇವಿಸಿರಬಹುದು ಅಂದಿದ್ದರು!
ಪ್ರಶ್ನೆ: ವೈದ್ಯಕೀಯ ಪರೀಕ್ಷೆ ನಡೆದಿತ್ತಲ್ಲವೆ?
ಶರಣ್ಯ: ಖಂಡಿತ. ಪೊಲೀಸ್ ಇಲಾಖೆಯೇ ಇತ್ತು. ಅಧಿಕಾರಿಗಳೆಲ್ಲ ನನ್ನನ್ನು ಕಂಡು ಮಾತಾಡಿಸಿದ್ದರು. ನಾನು ಆರಾಮಾಗಿದ್ದೇನೆ ಅಂತ ಹೇಳಿದ ಮೇಲೆ ಹಾಗಿದ್ದರೆ ಮನೆಗೆ ಹೋಗಿ ಅಂತಲೂ ತಿಳಿಸಿದ್ದರು. ಅಲ್ಲಿದ್ದ ನನ್ನ ಸಹೋದರ ಕಾಣೆಯಾದವರು ಮರಳಿ ಸಿಕ್ಕ ಮೇಲೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ನಿಯಮ ಎಂದಿದ್ದ. ಹೌದೆನಿಸಿತು. ವಿರಾಜಪೇಟೆಯ ಸರಕಾರಿ ಆಸ್ಪತ್ರೆಗೆ ಹೋಗಿ, ರಕ್ತಪರೀಕ್ಷೆ ಮಾಡಿಸಿದ್ದೇನೆ. ನನ್ನ ಸ್ಥಿತಿಯನ್ನು ಕಂಡ ವೈದ್ಯರು, ಎಲ್ಲವೂ ಸರಿಯಾಗಿದೆ. ಪ್ರಯಾಣ ಮಾಡಲು ಆಗದಿದ್ದರೆ ಇಲ್ಲೇ ಒಂದು ದಿನ ಅಡ್ಮಿಟ್ ಆಗಿ ಎಂದಿದ್ದರು.
ಪ್ರಶ್ನೆ: ಹೇಗೆ ನೀವು ಪ್ರಭಾವಿಗಳಾಗಿದ್ದೀರಿ? ಮುಖ್ಯಮಂತ್ರಿಗಳು ನಿಮ್ಮ ಕುರಿತು ಶೀಘ್ರವಾಗಿ ತನಿಖೆಯನ್ನು ಮಾಡುವಂತೆ ಹೇಳಿದ್ದರು. ತಮ್ಮ ಅತ್ಯಾಪ್ತರಾಗಿದ್ದ ಪೊನ್ನಣ್ಣ ಅವರಿಗೆ ನಿಗಾ ವಹಿಸಲೂ ತಿಳಿಸಿದ್ದರು. ರಾಜಕೀಯವಾಗಿಯೂ ಬೆಂಬಲ ಸಿಗಲು ಕಾರಣವೇನು? ರಾಜಕೀಯ ವಲಯಕ್ಕೂ ನಿಮಗೂ ಇದ್ದ ನಂಟೇನು?
ಶರಣ್ಯ: ಹಾಂ, ಈಗಾಗಲೇ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಅವರು ನನ್ನ ಕುಟುಂಬಕ್ಕೆ ಪರಿಚಿತರು. ಜೊತೆಗೆ, ನನ್ನ ಕುಟುಂಬದಲ್ಲಿ ಅನೇಕರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರಶ್ನೆ: ನಿಮ್ಮ ಪೊಲಿಟಿಕಲ್ ಐಡಿಯಾಲಜಿ ಏನು? ಪ್ರೋ ಬಿಜೆಪಿ, ಪ್ರೋ ಕಾಂಗ್ರೆಸ್ ಅಥವಾ ಪ್ರೋ ಕಮ್ಯುನಿಸ್ಟ್, ಏನಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತೀರಿ?
ಶರಣ್ಯ: ಏನಾಗಿಯೂ ಅಲ್ಲ. ನಾನೊಬ್ಬಳು ಮನುಷ್ಯಳು. ಮಾನವೀಯತೆಯೇ ಮನುಷ್ಯನಿಗೆ ಎಲ್ಲಕಿಂತ ಮುಖ್ಯ. ಹಾಗಾಗಿ ಯಾವ ರಾಜಕೀಯ ಪಕ್ಷವನ್ನೂ ಅನುಸರಿಸುವುದಿಲ್ಲ. (ನಗುತ್ತಾ) ಆ ವಿಷಯದಲ್ಲಿ ನ್ಯೂಟ್ರಲ್‌ಆಗಿದ್ದೇನೆ.
ಪ್ರಶ್ನೆ: ನಿಮ್ಮ ರೋಚಕ ಅನುಭವದ ಬಗ್ಗೆಯೇ ಎಲ್ಲೆಲ್ಲೂ ಸುದ್ದಿ. ರಾತ್ರಿ ಕಳೆದು ಹಗಲಾಗುವುದರೊಳಗೆ ಶರಣ್ಯ ಸ್ಟಾರ್ ಆಗಿದ್ದಾರೆ. ಕೆಲಸದ ವಾತಾವರಣದಲ್ಲೂ ಅಭಿನಂದನೆಗಳ ಸುರಿಮಳೆಯೇ ಬರುತ್ತಿರಬಹುದು. ಈಗ ನಿಮ್ಮ ಬದುಕನ್ನು ಹೇಗೆ ಹೊಂದಿಸಿಕೊಳ್ಳುತ್ತಿದ್ದೀರಿ?
ಶರಣ್ಯ: ಹೋದ ಕಡೆಯಲ್ಲೆಲ್ಲ ವಿಶೇಷವಾಗಿ ನೋಡುತ್ತಾರೆ. ಮನೆಯಿಂದ ಹೊರಗೆ ಹೋಗುವುದಕ್ಕೇ ಕಷ್ಟ ಆಗುತ್ತಿದೆ. ಈ ರೀತಿಯ ಬದುಕು ನಿಜಕ್ಕೂ ಇಷ್ಟವಿಲ್ಲ. ನಾನು ಹೀಗೆ ಪ್ರಸಿದ್ಧಿ ಪಡೆಯಬೇಕು ಎಂದೂ ಬಯಸಿಲ್ಲ. ನಾನು ಸ್ಟಾರ್ ಅಲ್ಲವೇ ಅಲ್ಲ.
ಪ್ರಶ್ನೆ: ಮುಂದೊಂದು ದಿನ ನಿಮ್ಮ ಬದುಕಿನ ಈ ಅನುಭವವನ್ನೇ ಸಿನೆಮಾ ಮಾಡುತ್ತೀನಿ ಅಂತ ನಿರ್ದೇಶಕರು, ಕಥೆಗಾರರು ಹುಡುಕಿ ಬರಬಹುದು.
ಶರಣ್ಯ: (ನಗುತ್ತಾ) ಇಲ್ಲ. ಹಾಗಾಗದಿರಲಿ.
ಟೆಹ್ರಾನ್ : ಇರಾನಿನ ಬಂದರುಗಳು ಸಾಗುವ ಸಮುದ್ರ ಸಂಚಾರದ ಮೇಲೆ ಅಮೆರಿಕ ಮಿಲಿಟರಿ ದಿಗ್ಬಂಧನವನ್ನು ನಿಗದಿತ ಗಡುವಿನಂತೆ ಆರಂಭಿಸಿದೆ. ಈ…
ನವದೆಹಲಿ : ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮಧ್ಯಂತರ…
ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ…
ಚಾಮರಾಜನಗರ : ವಯನಾಡು ಸಂಸದೆ ಪ್ರಿಯಾಂಕ ವಾದ್ರಾ ಅವರು ಬಂಡೀಪುರ ರಾತ್ರಿ ಸಂಚಾರ ನಿಷೇಧ ಮುಕ್ತ ಮಾಡುವುದಾಗಿ ಹೇಳಿರುವುದು ಮತ್ತು…
ಮಡಿಕೇರಿ : ಕಾಡಾನೆ ಮರಿಯೊಂದು ಬಾವಿಗೆ ಬಿದ್ದು ನರಳಾಡಿದ ಘಟನೆ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ…
ಟೆಹ್ರಾನ್ : ಕದನ ವಿರಾಮ ಒಪ್ಪಂದಕ್ಕೆ ಬರಲು ವಿಫಲವಾದ ನಂತರ, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ಬಂಧನ ವಿಧಿಸುವುದಾಗಿ…