ಕೊಡಗು

ಪತ್ನಿ ಕೊಲೆ ಆರೋಪದಡಿ ಪತಿ ಜೈಲು; ಐದು ವರ್ಷದ ಬಳಿಕ ಲವರ್‌ ಜೊತೆ ಪತ್ನಿ ಪ್ರತ್ಯಕ್ಷ

ನವೀನ್ ಡಿ ಸೋಜ ಮಡಿಕೇರಿ.

ಆಕೆಯನ್ನು ಗಂಡನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಭಾವಿಸಲಾಗಿತ್ತು. ಆ ತಪ್ಪಿಗಾಗಿ ಗಂಡ ಎರಡು ವರ್ಷ ಜೈಲುಪಾಲಾಗಿದ್ದ. ಮಾತ್ರವಲ್ಲ ಗಂಡನೇ ಹೆಂಡತಿಯ ಅಸ್ಥಿಪಂಜರದ ಅಂತ್ಯಸಂಸ್ಕಾರ ಕೂಡ ಮಾಡಿದ್ದ. ಶಿಕ್ಷೆ ಅನುಭವಿಸಿದ ಬಳಿಕ ಜೈಲಿನಿಂದ ಹೊರಬಂದಿದ್ದ. ಆದರೆ, ಸೋಮವಾರ ಸಂಜೆ ಆತನಿಗೆ, ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಅದೇ ಹೆಂಡತಿ ಹೋಟೆಲ್​​ನಲ್ಲಿ ಕುಳಿತುಕೊಂಡು ತಿಂಡಿ ತಿನ್ನುತ್ತಿರುವುದು ಕಾಣಿಸಿದೆ! ಅದೂ ಕೂಡ ಲವರ್​ ಜೊತೆ!

ಇದೇನು ಸಿನಿಮಾ ಕಥೆ ಅಂದುಕೊಂಡಿರಾ? ಖಂಡಿತಾ ಅಲ್ಲ. ಕೊಡಗಿನ ಕುಶಾಲನಗರದ ಮಲ್ಲಿಗೆ ಎಂಬುವವಳ ಸಿನಿಮೀಯ ಕಥೆ ಇಲ್ಲಿದೆ.

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದ್ದ ಕೊಲೆ ಪ್ರಕರಣವೊಂದಕ್ಕೆ ಇದೀಗ ಭಾರಿ ಟ್ವಿಸ್ಟ್ ದೊರೆತಿದೆ. ಅಷ್ಟೇ ಅಲ್ಲ, ಯಾವ ಸಸ್ಪೆನ್ಸ್​, ಹಾರರ್, ಥ್ರಿಲ್ಲರ್, ರೊಮ್ಯಾಂಟಿಕ್ ಸಿನಿಮಾಗೂ ಕಡಿಮೆ ಇಲ್ಲದ ರೀತಿಯಲ್ಲಿ ಇದೀಗ ಅನಾವರಣಗೊಂಡಿದೆ.

ಪೊಲೀಸರ ದಾಖಲೆಗಳ ಪ್ರಕಾರ ಮಲ್ಲಿಗೆ ಎಂಬಾಕೆ ಆಕೆಯ ಗಂಡನ ಕೈಯಿಂದಲೇ ಹತ್ಯೆ ಆಗಿ ಅದಾಗಲೇ ಐದು ವರ್ಷ ಆಗಿ ಹೋಗಿದೆ. ಆಕೆಯನ್ನು ಕೊಲೆ ಮಾಡಿದ್ದಕ್ಕಾಗಿ ಗಂಡ ಸುರೇಶ್​ ಎರಡು ವರ್ಷ ಜೈಲೂಟ ಕೂಡ ಮಾಡಿ ಬಂದಿದ್ದಾರೆ. ಆದರೆ, ವಿಚಿತ್ರ ಎಂದರೆ, ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಲ್ಲಿಗೆ ಮಂಗಳವಾರ ಸಂಜೆ ಮಡಿಕೇರಿ ನಗರದ ಹೋಟೆಲ್​ ಒಂದರಲ್ಲಿ ತಿಂಡಿ ತಿನ್ನುತ್ತಾ ಇರುವುದು ಸುರೇಶ್​ಗೆ ಕಾಣಿಸಿದೆ. ಅದೂ ಕೂಡ ಆಕೆಯ ಲವರ್ ಜತೆ! ಇದನ್ನು ಗಂಡ ಸುರೇಶ್​ನ ಸ್ನೇಹಿತರು ನೋಡಿ, ತಕ್ಷಣವೇ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಡಿಕೇರಿ ನಗರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲೇ ನೋಡಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು!

ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಲ್ಲಿಗೆ:
ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಆದಿವಾಸಿ ಜನಾಂಗದ ಯುವಕ ಸುಮಾರು 18 ವರ್ಷಗಳ ಹಿಂದೆ ಮಲ್ಲಿಗೆ ಎಂಬಾಕೆಯನ್ನು ವಿವಾಹವಾಗಿರುತ್ತಾರೆ. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ, 2020 ರ ನವೆಂಬರ್​ನಲ್ಲಿ ಇದ್ದಕ್ಕಿದ್ದಂತೆ ಒಂದಿನ ಪತ್ನಿ ಮಲ್ಲಿಗೆ ನಾಪತ್ತೆಯಾಗಿದ್ದಾಳೆ. ಹಾಗಾಗಿ ಸುರೇಶ್ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪೊಲಿಸರು ಒಂದಷ್ಟು ದಿನ ಹುಡುಕಿದರೂ ಮಲ್ಲಿಗೆ ಸಿಕ್ಕಿಲ್ಲ. ಹಾಗಾಗಿ ಎಲ್ಲರೂ ಸುಮ್ಮನಾಗಿದ್ದರು. ಪತ್ನಿ ಗಣೇಶ್​ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಓಡಿ ಹೋಗಿರುವುದು ಗೊತ್ತಿದ್ದರೂ ಸುರೇಶ್​ ಮನನೊಂದು ಸುಮ್ಮನಾಗಿದ್ದರು.

ಸುರೇಶನ ದುರಾದೃಷ್ಟ, ವಕ್ಕರಿಸಿತು ಕೊಲೆ ಆರೋಪ:

ಆದರೆ ಸುರೇಶ್​ಗೆ ದುರಾದೃಷ್ಟ ವಕ್ಕರಿಸಿತು. 2021ರ ಜೂನ್​ ಮೂರನೇ ವಾರದಲ್ಲಿ ಕುಶಾಲನಗರಕ್ಕೆ ಖಾಸಗಿ ಕಾರಿನಲ್ಲಿ ಒಂದಷ್ಟು ಮಂದಿ ಪೊಲೀಸರು ಬಂದಿದ್ದಾರೆ. ಬಂದವರು, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಪೊಲಿಸ್ ಠಾಣೆಯ ಸಿಬ್ಬಂದಿಯಾಗಿರುತ್ತಾರೆ. ಅವರು ಸುರೇಶನನ್ನು ಬರ ಹೇಳಿ, ಮಹಿಳೆಯೊಬ್ಬಳ ಮೃತದೇಹ ಸಿಕ್ಕಿದೆ, ಬಂದು ಗುರುತು ಪತ್ತೆ ಮಾಡು ಎಂದು ಬಲವಂತದಿಂದ ಬೆಟ್ಟದಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯಾವುದೋ ಮಹಿಳೆಯ ಸೀರೆ ಲಂಗ, ಒಳ ಉಡುಪು ಚಪ್ಪಲಿ ಎಲ್ಲಾ ತೋರಿಸಿ, ‘ಇದು ನಿನ್ನದೇ ಹೆಂಡತಿಯದ್ದು. ನೀನೇ ಕೊಲೆ ಮಾಡಿದ್ದೀ, ಒಪ್ಪಿಕೋ’ ಎಂದು ಚಿತ್ರ ಹಿಂಸೆ ಕೊಟ್ಟಿದ್ದರಂತೆ.

ಇದೇ ಪ್ರಕರಣದಲ್ಲಿ 18-07-2021ರಲ್ಲಿ ಬೆಟ್ಟದಪುರ ಠಾಣೆಯಲ್ಲಿ ಸುರೇಶ್ ವಿರುದ್ಧ ಪ್ರಕರಣ ಕೂಡ ದಾಖಲಾಗಿ ನಂತರ ಅವರು ಜೈಲು ಸೇರಿದ್ದಾರೆ.

ಡಿಎನ್​ಎ ಪರೀಕ್ಷೆ ಮಾಡಿದಾಗ ಹೊರಬಂತು ರಹಸ್ಯ!:

ಜೈಲುಪಾಲಾದ ಸುರೇಶ್​ ಗೆ ಮೈಸೂರಿನ ಪಾಂಡು ಪೂಜಾರಿ ಎಂಬ ವಕೀಲರ ರೂಪದಲ್ಲಿ ಸಹಾಯ ಬರುತ್ತದೆ. 2022ರ ಜನವರಿಯಲ್ಲಿ ವಕೀಲರ ಕೊರಿಕೆ ಮೇರೆಗೆ ಪೊಲೀಸರು ಸತ್ತಿದ್ದಾಳೆ ಎಂದು ತಿಳಿಸಿದ್ದ ಮಹಿಳೆಯ ಅಸ್ತಿ ಪಂಜರ ಹಾಗೂ ಮಲ್ಲಿಗೆಯ ತಾಯಿಯ ರಕ್ತದ ಮಾದರಿ ಸಂಗ್ರಹಿಸಿ ಡಿಎನ್​ಎ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅಲ್ಲಿ ಬೆಟ್ಟದಪುರ ಪೊಲಿಸರು ಮಲ್ಲಿಗೆಯದ್ದು ಎಂದು ಪ್ರತಿಪಾದಿಸಿದ ದೇಹ ಆಕೆಯದ್ದಲ್ಲ ಎಂಬ ವರದಿ ಬರುತ್ತದೆ. ಆದರೂ ಬೆಟ್ಟದಪುರ ಪೊಲೀಸರು ಸುರೇಶನನ್ನು ಎರಡು ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಿರುತ್ತಾರೆ. ಇದಾದ ಬಳಿಕ ವಕೀಲ ಪಾಂಡು, ಹರಸಾಸಹಪಟ್ಟು ಹೈಕೋರ್ಟ್​ ಮೊರೆ ಹೋಗಿ 2024ರಲ್ಲಿ ಸುರೇಶ್​​ ಅವರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದಿದ್ದರು.

ಪತ್ನಿಯ ಹುಡುಕಿಕೊಡುವಂತೆ ಮತ್ತೆ ಪೊಲೀಸ್ ಮೊರೆ ಹೋಗಿದ್ದ ಸುರೇಶ್:
ಇಷ್ಟೆಲ್ಲ ಆದ ಬಳಿಕ, ಕೊಲೆಯಾಗಿರುವ ಮಹಿಳೆ ತನ್ನ ಹೆಂಡತಿಯಲ್ಲ. ತಾನು ಕೊಲೆ ಮಾಡಿಲ್ಲ, ಹೆಂಡತಿಯನ್ನು ಹುಡುಕಿಕೊಡಿ ಎಂದು ಸುರೇಶ್ ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ.

ಮಡಿಕೇರಿಯಲ್ಲಿ ಲವರ್ ಜತೆ ಮಲ್ಲಿಗೆ ಪ್ರತ್ಯಕ್ಷ: ಸುರೇಶ್ ಸ್ನೇಹಿತರು ಶಾಕ್:

ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗ ಇದ್ದಕ್ಕಿದ್ದ ಹಾಗೆ ಕೊಲೆಯಾಗಿದ್ದಾಳೆ ಎಂಬುದಾಗಿ ಭಾವಿಸಲಾಗಿದ್ದ ಮಲ್ಲಿಗೆ ಜೀವಂತವಾಗಿ ಮಡಿಕೇರಿ ಹೋಟೆಲ್​​ನಲ್ಲಿ ತಿಂಡಿ ತಿನ್ನುತ್ತಾ ಇರುವುದು ಸುರೇಶ್ ಹಾಗೂ ಅವರ ಸ್ನೇಹಿತರ ಕಣ್ಣಿಗೆ ಬಿದ್ದಿದೆ. ಈ ಅವಕಾಶ ಬಿಟ್ಟರೆ ಮತ್ತೆ ಸಿಗಲ್ಲ ಎಂದು ಯೋಚಿಸಿದ ಸುರೇಶ್​ ಮತ್ತು ಆತನ ಸ್ನೇಹಿತರು ಮಡಿಕೇರಿ ಪೊಲಿಸರ ಸಹಾಯ ಪಡೆದು ಮಲ್ಲಿಗೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಕೆ ತನ್ನ ಪ್ರಿಯಕರ ಗಣೇಶನ ಜೊತೆ ವಿರಾಜಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ವಾಸವಿರುವುದಾಗಿ ಹೇಳಿದ್ದಾಳೆ.

ಸದ್ಯ ಮಲ್ಲಿಗೆಯನ್ನು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಬೆಟ್ಟದಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ವಕೀಲ ಪಾಂಡು ಅವರ ಶ್ರಮದಿಂದಾಗಿ ಮಲ್ಲಿಗೆಯನ್ನು ಇದೀಗ ಮೈಸೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಇದೀಗ ಸುಳ್ಳು ಆರೋಪ ಪಟ್ಟಿ ದಾಖಲಿಸಿದ ಬೆಟ್ಟದಪುರ ಠಾಣೆಯ ತನಿಖಾಧಿಕಾರಿ, ಮೈಸೂರು ಎಸ್​ಪಿ ಸೇರಿದಂತೆ ಹಲವು ಅಧಿಕಾರಿಗಳನ್ನು ವಿಚಾರಣೆಗೆ ಕರೆದಿದೆ. ಕುಶಾಲನಗರ ಗ್ರಾಮಾಂತರ ಠಾಣೆ ಪೊಲಿಸರು ಯಾಕೆ ಮಲ್ಲಿಗೆಯನ್ನು ಹುಡುಕಲಿಲ್ಲ? ಇತ್ತ ಬೆಟ್ಟದಪುರ ಠಾಣೆ ಪೊಲೀಸರು ಯಾವುದೋ ಮಹಿಳೆಯ ಮೃತದೇಹವನ್ನು ಮಲ್ಲಿಗೆಯದ್ದೇ ಮೃತದೇಹ ಎಂದು ಯಾಕೆ ಕೇಸ್ ದಾಖಲಿಸಿದ್ದರು? ಹಾಗೆಯೇ ಅಂದು ಪತ್ತೆಯಾದ ದೇಹ ಯಾರದ್ದು? ಆಕೆಯನ್ನು ಯಾರು ಕೊಲೆ ಮಾಡಿದ್ದು? ಈ ಎಲ್ಲಾ ವಿಚಾರಗಳು ಇದೀಗ ಹೊಸ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಹಾಗೆಯೇ ಈ ಮೂಲಕ ಅಮಾಯಕ ಆದಿವಾಸಿ ಸುರೇಶ್​ ಮತ್ತು ಆತನ ಕುಟುಂಬಕ್ಕೆ ನ್ಯಾಯ ದೊರಕಬೇಕಿದೆ.

ಆಂದೋಲನ ಡೆಸ್ಕ್

Recent Posts

IPL 2025 | ಆರ್‌ಸಿಬಿ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

ಬೆಂಗಳೂರು: ಕನ್ನಡಿಗ ಕೆ.ಎಲ್‌ ರಾಹುಲ್‌ ಅವರ ಅಜೇಯ ಅರ್ಧಶತಕದಾಟದ ಬಲದಿಂದ ಅತಿಥೇಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 6 ವಿಕೆಟ್‌ಗಳ…

2 hours ago

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ : ಡಿಸಿಎಂ ಡಿಕೆಶಿ

ಬೆಂಗಳೂರು : ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್ ಬೆಲೆ  ಏರಿಕೆ ಖಂಡಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಏಪ್ರಿಲ್‌ 17ರಂದು ರಾಜ್ಯ…

2 hours ago

Padma awards | ಪದ್ಮ ಪುರಸ್ಕಾರಕ್ಕೆ ನಾಮನಿರ್ದೇಶನ ಆರಂಭ

ಹೊಸದಿಲ್ಲಿ: ಮುಂದಿನ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪುರಸ್ಕಾರಕ್ಕೆ ಆನ್‌ಲೈನ್‌ನಲ್ಲಿ ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭವಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ…

3 hours ago

ಮಹಾವೀರರ ತತ್ವದಿಂದ ವಿಶ್ವಶಾಂತಿ ಸಾಧ್ಯ

ಮೈಸೂರು : ಭಗವಾನ್‌ ಮಹಾವೀರ ಆದರ್ಶ ಹಾಗೂ ತತ್ವಗಳು ಅಮೂಲ್ಯವಾದವು. ಅವರ ತತ್ವ ಪಾಲಿಸದರೆ ವಿಶ್ವದಲ್ಲಿ ಶಾಂತಿ, ನೆಮ್ಮದಿ ಉಂಟಾಗಲಿದೆ…

3 hours ago

ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿ ; ಪ್ರೊ.ಅರವಿಂದ ಮಾಲಗತ್ತಿ

ಮೈಸೂರು :  ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ ಎಂದು ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.…

4 hours ago

ಮೈಸೂರು | ಅತ್ಯಾಚಾರ ಖಂಡಿಸಿ ಏಕಾಂಗಿ ಪ್ರತಿಭಟನೆ

ಮೈಸೂರು: ಉತ್ತರ ಪ್ರದೇಶದ ವಾರಣಾಸಿಯಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದನ್ನು ಖಂಡಿಸಿ ಗಂಧದಗುಡಿ ಫೌಂಡೇಶನ್‌ನ ಅಧ್ಯಕ್ಷ ಆರ್ಯನ್…

5 hours ago