ಮೈಸೂರು : ವಿಜಯನಗರ ೩ನೇ ಹಂತದ ‘ಸಿ’ ಬ್ಲಾಕ್ ನಲ್ಲಿರುವ ಯುರೋ ಶಾಲೆ ಎದುರು ರಸ್ತೆ ಕೆಸರುಗದ್ದೆಯಂತಾಗಿದ್ದು ಶಾಲೆಯ ಮಕ್ಕಳು ಓಡಾಡಲು ತುಂಬಾ ಕಷ್ಟಪಡುತ್ತಿದ್ದಾರೆ.
ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಕೆಸರು ಗದ್ದೆಯಂತಾಗಿದ್ದು, ಪುಟಾಣಿ ಮಕ್ಕಳು ಕೆಸರಿನಲ್ಲಿಯೇ ಶಾಲೆ ಸೇರಬೇಕಾದ ದುಸ್ಥಿತಿ ಬಂದಿದೆ.
ಒಂದು ತಿಂಗಳ ಹಿಂದೆ ಒಳಚರಂಡಿ ಕಾಮಗಾರಿಗಾಗಿ ಅಗೆಗಿದ್ದ ಮಣ್ಣನ್ನು ಡಾಂಬರು ರಸ್ತೆಯಲ್ಲಿಯೇ ಹಾಕಿದ್ದರಿಂದ ಕೆಸರು ಗದ್ದೆಯಂತಾಗಿ ಪೋಷಕರು ಮಕ್ಕಳನ್ನು ಬಿಡುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ.
ಸೊಳ್ಳೆಗಳ ಕಾಟ: ಶಾಲೆಯ ಪಕ್ಕದಲ್ಲೇ ಚರಂಡಿ ಹಾದುಹೋಗಿದ್ದು, ಮಣ್ಣು, ತ್ಯಾಜ್ಯ ಚರಂಡಿಯಲ್ಲಿ ಶೇಖರಣೆಯಾಗಿ ನೀರು ಸರಾಗವಾಗಿ ಹರಿಯದೆ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದ್ದು, ಇದರಿಂದ ಸಾಂಕ್ರಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ. ಸೊಳ್ಳೆಗಳ ಕಾಟದಿಂದ ಸಣ್ಣ ಮಕ್ಕಳು ಶಾಲೆಯಲ್ಲಿ ಕುಳಿತು ಪಾಠ ಕೇಳಲು ಕಿರಿಕಿರಿ ಅನುಭವಿಸುವಂತಾಗಿದೆ.
ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





