-ಗಿರೀಶ್ ಹುಣಸೂರು
ಮೈಸೂರು: ಎಲ್ಲವೂ ಸರಿಯಾಗಿದ್ದರೆ ಈ ಅರಮನೆ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಬೇಕಿತ್ತು. ಪ್ರತಿ ದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡಬೇಕಿತ್ತು. ರಾಜ ಪ್ರಭುತ್ವದ ವೈಭವದಿಂದ ಹಿಡಿದು ಜನಪದ ಸಂಸ್ಕೃತಿವರೆಗೆ ಎಲ್ಲವನ್ನೂ ಇಲ್ಲಿ ಕಣ್ತುಂಬಿಕೊಳ್ಳಬೇಕಿತ್ತು. ಆದರೆ ಇತಿಹಾಸ ಮತ್ತು ವರ್ತಮಾನ ಎರಡರ ಬಗ್ಗೆಯೂ ಕಾಳಜಿ ಇಲ್ಲದ ನಾವು ಈ ಭವ್ಯ ಕಟ್ಟಡದ ದು:ಸ್ಥಿತಿಯನ್ನು ಕಾಣದಷ್ಟು ಕುರುಡರಾಗಿದ್ದೇವೆ.
ಇದು ಮೈಸೂರು ವಿವಿಯ ಮಾನಸ ಗಂಗೋತ್ರಿ ಆವರಣಲ್ಲಿರುವ ಜಯಲಕ್ಷ್ಮೀ ವಿಲಾಸ ಮ್ಯಾನ್‌ಷನ್ ನ ವ್ಯಥೆಯ ಕಥೆ. ಗಂಗೋತ್ರಿಯ ಹಚ್ಚ ಹಸಿರಿನ ಆವರಣದಲ್ಲಿರುವ 117 ವರ್ಷಗಳ ಪುರಾತನ ಕಟ್ಟಡ -ಪಾರಂಪರಿಕ ಕಟ್ಟಡದ ಎರಡು ಕೊಠಡಿಗಳು ಈಗಾಗಲೇ ಕುಸಿದಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇಡೀ ಕಟ್ಟಡ ಕುಸಿದು ಬೀಳುವ ಆತಂಕ ಎದುರಾಗಿದೆ.
ಜಯಲಕ್ಷ್ಮಿ ವಿಲಾಸ ಅರಮನೆಯನ್ನು 1905ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯಾರ್ ಅವರು ಸಹೋದರಿ ಜಯಲಕ್ಷ್ಮಿ ಅಮ್ಮಣ್ಣಿ ಅವರಿಗಾಗಿ ಕಟ್ಟಿಸಿದ್ದರು. ರಾಜಕುಮಾರಿ ಜಯಲಕ್ಷ್ಮಿ 1897 ರಲ್ಲಿ ಕಾಂತರಾಜ್ ಅರಸ್ ಅವರನ್ನು ವಿವಾಹವಾದರು ಮತ್ತು ಕಾಂತರಾಜ್ ಅರಸ್ ನಂತರ ಮೈಸೂರಿನ ದಿವಾನರಾಗಿ ನೇಮಕ ಗೊಂಡರು. ಈ ಅರಮನೆಯನ್ನು ವಿವಾಹಿತ ದಂಪತಿಗೆ ಉಡುಗೊರೆಯಾಗಿ ನೀಡಲಾಗಿತ್ತು.
127 ಕೋಣೆಗಳನ್ನು ಒಳಗೊಂಡ ಈ ಅರಮನೆ ಮೂರು ಪ್ರತ್ಯೇಕ ಕಟ್ಟಡಗಳನ್ನು ಹೊಂದಿದೆ. ಒಂದರಿಂದ ಮತ್ತೊಂದು ಅರಮನೆಗೆ ಸಂಪರ್ಕಕ್ಕಾಗಿ ಮೇಲ್ಸೇತುವೆಯನ್ನೂ ನಿರ್ಮಿಸಲಾಗಿದೆ. ಅರಮನೆಯ ಒಳಗೆ ಒಂದು ದೊಡ್ಡ ಕಲ್ಯಾಣ ಮಂಟಪ, ನೃತ್ಯ ಶಾಲೆ, ಅರಮನೆ ಖಜಾನೆ ಕಟ್ಟಡವೂ ಇತ್ತು.
ಸ್ವಾತಂತ್ರ್ಯಾ ನಂತರ ರಾಜರ ಆಳ್ವಿಕೆ ಕೊನೆಗೊಂಡು ಪ್ರಜಾ ಸರ್ಕಾರ ರಚನೆಯಾದ ನಂತರ 1956ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಕುಲಪತಿಗಳಾಗಿದ್ದ ಕುವೆಂಪು ಅವರು ಮಾನಸಗಂಗೋತ್ರಿ ಕಟ್ಟಲು ಮಹಾರಾಜ ಜಯಚಾಮರಾಜ ಒಡೆಯರ್ ಬಳಿ ಭೂಮಿ ಕೇಳಿದ್ದರು. ಮಹಾರಾಜರು ಜಯಲಕ್ಷ್ಮೀ ವಿಲಾಸ ಅರಮನೆ ಸೇರಿದಂತೆ ಅದರ ಸುತ್ತಲಿನ ಸುಮಾರು 380 ಎಕರೆ ಜಾಗವನ್ನು ಕೇವಲ ೧೦ ಲಕ್ಷ ರೂ.ಗಳಿಗೆ ನೀಡಿದ್ದರು. ಬಳಿಕ ಕುಲ ಸಚಿವರನ್ನು ಕರೆಸಿದ ಮಹಾರಾಜರು 2 ಲಕ್ಷ ರೂ.ಗಳನ್ನು ವಾಪಸ್ ನೀಡಿದ್ದರು ಎನ್ನಲಾಗಿದೆ.
ನವೀಕೃತ ಜಯಲಕ್ಷ್ಮೀ ವಿಲಾಸ ಮ್ಯಾನ್‌ಷನ್ ಕಟ್ಟಡವನ್ನು 1962ರಲ್ಲಿ ಅಂದಿನ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರು ಉದ್ಘಾಟಿಸಿದ್ದರು. 1969ರ ಸುಮಾರಿನಲ್ಲಿ ಅಂದಿನ ಕುಲಪತಿ ದೇಜಗೌ ಅವರ ಒತ್ತಾಸೆಯಂತೆ ಇಲ್ಲಿ ಜಾನಪದ ಸಂಗ್ರಹಾಲಯಗಳ ಗ್ಯಾಲರಿ ಮಾಡಲಾಗಿತ್ತು. ಇಲ್ಲಿ ಜಾನಪದ ಕಲೆ,ಸಾಹಿತ್ಯ ಹಾಗೂ ಬುಡಕಟ್ಟು ಸಂಸ್ಕೃತಿಗೆ ಸಂಬಂಧಿಸಿದ ಪರಿಕರಗಳನ್ನು ಸಂಗ್ರಹಿಸಿಡಲಾಗಿದೆ.
ಇನ್ಫೋಸಿಸ್ ಪ್ರತಿಷ್ಠಾನ ಕೈಜೋಡಿಸಿತ್ತು
ಕಾಲಾ ನಂತರ ನಿರ್ವಹಣೆ ಇಲ್ಲದೆ ಸೊರಗಿದ್ದ ಜಯಲಕ್ಷ್ಮೀ ವಿಲಾಸ ಮ್ಯಾನ್‌ಷನ್ ಕಟ್ಟಡದ ಕಾಯಕಲ್ಪಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರು ಕೈಜೋಡಿಸಿ 1.17 ಕೋಟಿ ರೂ. ಹಣ ನೀಡಿದ್ದರು. ಆ ಹಣವನ್ನು ಬಳಸಿ 2004ರಲ್ಲಿ ಜಯಲಕ್ಷ್ಮೀ ವಿಲಾಸ ಮ್ಯಾನ್‌ಷನ್ ಕಟ್ಟಡವನ್ನು ನವೀಕರಿಸಲಾಗಿತ್ತು. ನವೀಕೃತ ಕಟ್ಟಡದ ಉದ್ಘಾಟನೆಯಾದ ನಂತರ ಕಟ್ಟಡ ಹಾಗೂ ಅದರ ಸುತ್ತಲಿನ ಪರಿಸರದ ಸ್ವಚ್ಛತೆಗಾಗಿಯೇ 15 ಜನ ಸಿಬ್ಬಂದಿ ನೇಮಿಸಿ, ಅವರ ಸಂಬಳಕ್ಕಾಗಿಯೇ ನಾಲ್ಕು ಲಕ್ಷ ರೂ. ವೆಚ್ಚ ಮಾಡಲಾಗುತ್ತಿತ್ತು.
ದಿನ ಕಳೆದಂತೆ ವಿವಿ ಅಧಿಕಾರಿಗಳ ಆರಂಭ ಶೂರತ್ವ ಕೊನೆಗೊಂಡು ಪಾಳು ಬಂಗಲೆಯಾಯಿತು. ಎರಡು ವರ್ಷಗಳ ಹಿಂದೆ ಧಾರಾಕಾರ ಮಳೆಗೆ ಜಯಲಕ್ಷ್ಮಿ ವಿಲಾಸ ಅರಮನೆಯ ಮೊದಲ ಅಂತಸ್ತಿನಲ್ಲಿರುವ ಜಾನಪದ ವಿಭಾಗದ ಎರಡು ಕೊಠಡಿಗಳ ಚಾವಣಿ ಕುಸಿದಿದೆ. ಕುಸಿದ ಜಾಗದಲ್ಲಿ ತಾತ್ಕಾಲಿಕ ಶೀಟ್‌ಗಳನ್ನು ಅಳವಡಿಸಿ ಮಳೆ ನೀರು ಸುರಿಯದಂತೆ ಎಚ್ಚರ ವಹಿಸಲಾಗಿದೆ. ಚಾವಣಿಗೆ ಕಬ್ಬಿಣದ ಕಂಬಗಳನ್ನು ಒತ್ತಾಸೆಯಾಗಿ ನಿಲ್ಲಿಸಲಾಗಿದೆ. ಇದರ ದುರಸ್ತಿಗೆ ಸುಮಾರು 25 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಸರಕಾರಕ್ಕೂ ಈ ಬಗ್ಗೆ ಪ್ರಸ್ತಾವ ಸಲ್ಲಿಸಿದ್ದು ಮೈಸೂರು ವಿಶ್ವವಿದ್ಯಾಲಯ ಅನುದಾನಕ್ಕಾಗಿ ಕಾಯುತ್ತಿದೆ.
ಕಟ್ಟಡದ ದು:ಸ್ಥಿತಿಯ ಬಗ್ಗೆ ಜಯಲಕ್ಷ್ಮೀ ವಿಲಾಸ ಮ್ಯಾನ್‌ಷನ್ ನಿರ್ದೇಶಕಿಯಾಗಿರುವ ಡಾ.ವಿಜಯಕುಮಾರಿ ಕರೀಕಲ್ ಅವರನ್ನು ಪ್ರಶ್ನಿಸಿದಾಗ,ತಾವು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಜಯಲಕ್ಷ್ಮೀ ವಿಲಾಸ ಮ್ಯಾನ್‌ಷನ್‌ನ ಪರಿಸ್ಥಿತಿ ಕೆಟ್ಟಿಲ್ಲ. ಇಲ್ಲಿರುವ ಮ್ಯೂಸಿಯಂ ನಡೆಯುತ್ತಿದ್ದು, ನಿತ್ಯ ವೀಕ್ಷಕರು ಬಂದು ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಮಹಾರಾಜರು ಕೊಡುಗಡೆಯಾಗಿ ಬಿಟ್ಟು ಹೋಗಿರುವ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳದಿದ್ದರೆ, ಮೈಸೂರಿನ ಪರಂಪರೆ ಉಳಿಯುವುದಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮೈಸೂರಿನಲ್ಲಿ ಪ್ರವಾಸಿಗರಿಗೆ ತೋರಿಸಲು ಏನೂ ಉಳಿಯುವುದಿಲ್ಲ. ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಿ ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕು ಎನ್ನುತ್ತಾರೆ ಪಾರಂಪರಿಕ ತಜ್ಞ
ಪ್ರೊ.ರಂಗರಾಜು.
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ದರ್ಶನ್ ಅವರು ನಾಡಿನ…
ನವದೆಹಲಿ: ಇನ್ನು ಮುಂದೆ ಐದು ಹಾಗೂ ಎಂಟನೇ ತರಗತಿಗಳಲ್ಲೂ ವಿದ್ಯಾರ್ಥಿಗಳನ್ನು ಫೇಲ್ ಮಾಡಬಹುದು ಎಂಬ ಹೊಸ ತಿದ್ದುಪಡಿಯನ್ನು ಕೇಂದ್ರ ಸರ್ಕಾರ…
ಮೈಸೂರು: ಸಿ.ಟಿ.ರವಿ ತಪ್ಪು ಮಾಡಿದ್ದರೆ ಸಭಾಪತಿಗಳು ಶಿಕ್ಷೆಯ ಬಗ್ಗೆ ತೀರ್ಮಾನ ಮಾಡಬೇಕು. ಆದರೆ ರಾಜ್ಯದಲ್ಲಿ ಆ ದಿನ ಸಿ.ಟಿ.ರವಿ ಅವರನ್ನು…
ಥಾಣೆ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಹಾರಾಷ್ಟ್ರದ ಥಾಣೆಯ ಖಾಸಗಿ ಆಸ್ಪತ್ರೆಗೆ…
ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರು ಸರಣಿ ಸಾವನ್ನಪ್ಪುತ್ತಿದ್ದು, ಕೂಡಲೇ ರಾಜ್ಯ ಸರ್ಕಾರ ಉನ್ನತ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ…
ಮೈಸೂರು: ಸರ್ಕಾರ ರೈತರಿಗೆ ಬರುತ್ತಿದ್ದ ಹಲವಾರು ಯೋಜನೆಗಳನ್ನು ನಿಲ್ಲಿಸಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ರಾಜ್ಯ ಸರ್ಕಾರದ ವಿರುದ್ಧ…