ಮೈಸೂರು: ನಗರದ ಜೆಎಎಸ್ ಎಸ್ ಆಸ್ಪತ್ರೆ ಹಿಂಭಾಗದಲ್ಲಿರುವ ಎಲೆ ತೋಟದ ರಾಜಕಾಲುವೆಯಲ್ಲಿ ಪದೇ ಪದೆ ಮೊಸಳೆ ಕಾಣಿಸಿಕೊಳ್ಳುತ್ತಿದ್ದು, ಭಾನುವಾರ ಕರುವೊಂದನ್ನು ಬಲಿ ತೆಗೆದುಕೊಂಡ ಜಾಗಕ್ಕೆ ಸಮೀಪದಲ್ಲಿಯೇ ಮತ್ತೊಂದು ಮೊಸಳೆ ಮತ್ತೆ ಕಾಣಿಸಿಕೊಂಡಿದೆ. ಸ್ಥಳೀಯರ ಪ್ರಕಾರ ಭಾನುವಾರ ಕಾಣಿಸಿಕೊಂಡ ಮೊಸಳೆಗಿಂತ ಇದು ಆಕಾರದಲ್ಲಿ ಭಿನ್ನವಾಗಿದ್ದು ಈ ಮೊಸಳೆಯೇ ಬೇರೆ ಎಂದು ಹೇಳುತ್ತಾರೆ.
ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ಮೊಸಳೆ ಮತ್ತೆ ಕಾಣಿಸಿಕೊಂಡಿದ್ದು, ಸ್ಥಳೀಯರು ನೋಡುತ್ತಿರುವಾಗಲೇ ಚರಂಡಿ ನೀರಿಗೆ ಹಾರಿ ಮಾಯವಾಗಿದೆ. ಭಾನುವಾರ ಕರುವನ್ನು ಬಲಿ ತೆಗೆದುಕೊಂಡ ಮೊಸಳೆ ಪಕ್ಕದ ಕೆರೆಯಲ್ಲಿ ಅವಿತುಕೊಂಡಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆರ್‌ಎಫ್‌ಓ ಸುರೇಂದ್ರ, ಡಿ ಆರ್‌ಎಫ್‌ಓ ವೆಂಕಟಾಚಲ ಹಾಗೂ ಸಿಬ್ಬಂದಿಗಳು ಸೇರಿ ಒಟ್ಟು 6 ಜನ ಸಿಬ್ಬಂದಿಗಳು ಮೊಸಳೆಯನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಮೋಟಾರ್ ಬಳಸಿ ಕೆರೆಯ ನೀರನ್ನು ಹೊರಚೆಲ್ಲಿ ಮೊಸಳೆಯನ್ನು ಹಿಡಿಯುವ ಪ್ರಯತ್ನ ಮಾಡಲಾಗಿತ್ತು. ಆದರೆ ನೀರನ್ನು ಖಾಲಿ ಮಾಡುವಷ್ಟರಲ್ಲಿ ಸಂಜೆಯಾಗಿ ಕತ್ತಲಾವರಿಸಿತ್ತು. ಕಾರ್ಯಾಚರಣೆ ಕೈ ಬಿಟ್ಟ ಅಧಿಕಾರಿಗಳು ಬರಿಗೈಯಲ್ಲಿ ತೆರಳಿದ್ದರು.
ಸೋಮವಾರ ಈ ಕೆರೆಗೆ ಸಮೀಪದಲ್ಲಿಯೇ ಚರಂಡಿ ನೀರಿನಿಂದ ಮೇಲೆ ಬಂದ ಮೊಸಳೆ ಬಹು ಹೊತ್ತಿನವೆರೆಗೂ ಮುರಿದು ಬಿದ್ದ ತೆಂಗಿನ ಮರವೊಂದರ ಮೇಲೆ ಮಲಗಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡುವಷ್ಟರಲ್ಲಿ ಮೊಸಳೆ ಮತ್ತೆ ಚರಂಡಿ ನೀರು ಸೇರಿಕೊಂಡಿತ್ತು. ಎಲೆತೋಟದಲ್ಲಿ ಒಂದಕ್ಕಿಂತ ಹೆಚ್ಚು ಮೊಸಳೆಗಳಿವೆ. ನಾವು ಹಲವು ಬಾರಿ ಈ ಮೊಸಳೆಗಳನ್ನು ನೋಡಿದ್ದೇವೆ ಎಂದು ರಾಮಾನುಜ ರಸ್ತೆ ನಿವಾಸಿ ಮಧುಕರ್, ಎಲೆ ತೋಟದಲ್ಲಿಅಡಿಕೆ ತೋಟ ಹೊಂದಿರುವ ಮರಿಸ್ವಾಮಿ ಮತ್ತು ಚಾಮರಾಜು ನಿವಾಸಿ ಆಂದೋಲನಕ್ಕೆ ತಿಳಿಸಿದರು.
ಕಳೆದ ಒಂದು ತಿಂಗಳಲ್ಲಿ ಹಲವು ಬಾರಿ ಮೊಸಳೆ ಕಾಣಿಸಿಕೊಂಡಿದ್ದು ಸ್ಥಳೀಯರನ್ನು ಆತಂಕಕ್ಕೆ ತಳ್ಳಿದೆ. ಇಲ್ಲಿನ ಅಡಿಕೆ ತೋಟದ ಮಧ್ಯೆ ವೀಳ್ಯದೆಲೆ ಬೆಳೆಯುವ ಜನರು ಈಗ ತೋಟಕ್ಕೆ ಹೋಗಲು ಹೆದರುತ್ತಿದ್ದಾರೆ. ಮೊಸಳೆ ಆಗಾಗ ಇಲ್ಲಿನ ಸಣ್ಣ ಸೇತುವೆ ಮೇಲೆ ಬಂದು ಮಲಗಿರುತ್ತದೆ, ಮನುಷ್ಯರ ಹೆಜ್ಜೆ ಸಪ್ಪಳವಾದ ತಕ್ಷಣ ಚರಂಡಿಗೆ ಹಾರಿ ಮಾಯವಾಗುತ್ತದೆ ಎಂದು ಅವರು ತಿಳಿಸಿದರು. ನಾವು ನೋಡಿದ ಮೊಸಳೆಗಳಲ್ಲಿ ಒಂದು ಆರಡಿಗಳಷ್ಟು ಉದ್ದವಿದ್ದು, ಇನ್ನೊಂದು ಇದಕ್ಕಿಂತ ಚಿಕ್ಕದು ಎಂದು ಅವರು ತಿಳಿಸಿದರು.
ಎಲೆತೋಟದ ಬಳಿ ಅಡಿಕೆ ತೋಟದ ಮಧ್ಯೆಯೇ ಚರಂಡಿ ನೀರು ಹಾದುಹೋಗುತ್ತಿದ್ದು ಅಕ್ಕಪಕ್ಕ ಪೊದೆಗಳು ಬೆಳೆದು ನಿಂತಿರುವುದರಿಂದ ಮೊಸಳೆಯ ಪಾಲಿಗೆ ಇದು ಸುರಕ್ಷಿತ ತಾಣವಾಗಿದೆ. ಎಲೆ ತೋಟ ನಿವಾಸಿಗಳು ಮತ್ತು ರಾಮಾನುಜ ರಸ್ತೆ ನಿವಾಸಿಗಳ ಹಸುಕರುಗಳು ಇದೇ ತೋಟಕ್ಕೆ ಮೇಯಲು ಹೋಗುತ್ತವೆ. ಒಂದು ಬಾರಿ ಕರುವಿನ ರಕ್ತದ ರುಚಿ ನೋಡಿರುವ ಮೊಸಳೆ ಮತ್ತೆ ಇದೇ ಭಾಗದಲ್ಲಿ ಠಿಕಾಣಿ ಹೂಡುವ ಸಾಧ್ಯತೆ ಇದೆ ಎಂದು ಸ್ಥಳೀಯ ನಿವಾಸಿ ಮಲ್ಲೇಶ್ ತಿಳಿಸಿದರು.
ಎಲೆತೋಟ, ಸೀವೇಜ್ ಫಾರಂ ಸಮೀಪ ಕಳೆದ ಮೂರು ವರ್ಷಗಳಿಂದ ಮೊಸಳೆ ಕಾಣಿಸಿಕೊಳ್ಳುತ್ತಿದ್ದು ಅಕ್ಟೋಬರ್, ನವೆಂಬರ್ ತಿಂಗಳಲ್ಲಿಯೇ ಕಾಣಿಸಿಕೊಂಡಿರುವುದು ವಿಶೇಷ. ಈ ವರ್ಷ ಜಿಎಲ್ ಬಿ ರಸ್ತೆಯ ಚಾಮುಂಡಿಪುರಂ ಸಮೀಪದ ರಾಜಕಾಲುವೆಯಲ್ಲಿ ಅಕ್ಟೋಬರ್ 15ರಂದು ಮೊದಲ ಬಾರಿಗೆ ಮೊಸಳೆ ಕಾಣಿಸಿಕೊಂಡಿತ್ತು. ಮೂರ್ನಾಲ್ಕು ಗಂಟೆಗಳ ತನಕ ಈ ಮೊಸಳೆ ಇಲ್ಲಿಯೇ ಇತ್ತು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಬರುವಷ್ಟರಲ್ಲಿ ಅದು ಪೊದೆಗಳ ಮಧ್ಯೆ ಮರೆಯಾಗಿತ್ತು. ಅಕ್ಟೋಬರ್ 29 ರಂದು ಎಲೆತೋಟದ ಕಿರು ಸೇತುವೆ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆ ಮೊಬೈಲ್ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. 2020 ಮತ್ತು 2021ರಲ್ಲೂ ನವೆಂಬರ್ ತಿಂಗಳಲ್ಲಿ ಸೀವೇಜ್ ಫಾರಂ ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಮೊಸಳೆ ಪತ್ತೆಯಾಗಿತ್ತು.
ನಮ್ಮ ಸಿಬ್ಬಂದಿ ಮೊಸಳೆ ಹಿಡಿಯಲು ಎರಡು ಬಾರಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಚರಂಡಿಯ ಕೊಳಚೆ ನೀರಿನೊಳಗೆ ಸೇರಿಕೊಂಡಾಗ ಅದರ ಇರುವು ಪತ್ತೆ ಮಾಡುವುದು ಕಷ್ಟ. ನೀರಿನಿಂದ ಮೇಲೆ ಬಂದರಷ್ಟೇ ಹಿಡಿಯಲು ಸಾಧ್ಯ. ನಾವು ಸೆರೆ ಕಾರ್ಯಾಚರಣೆ ಮುಂದುವರಿಸುತ್ತೇವೆ. – ಕರಿಕಾಳನ್, ಡಿಸಿಎಫ್ ಮೈಸೂರು
ಒಂದು ತಿಂಗಳಿನಿಂದ ಕಾಣಿಸಿಕೊಳ್ಳುತ್ತಿರುವ ಮೊಸಳೆಗೆ ನನ್ನ ಕರು ಬಲಿಯಾಗಿದೆ. ಇಲ್ಲಿ ಒಂದಕ್ಕಿಂತ ಹೆಚ್ಚು ಮೊಸಳೆಗಳಿವೆ. ಇದನ್ನು ಹಿಡಿಯುವಂತೆ ಶಾಸಕರಿಗೆ, ಸ್ಥಳೀಯ ನಗರಪಾಲಿಕೆ ಸದಸ್ಯರಿಗೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಸೆರೆ ಹಿಡಿಯುವ ಕಾರ್ಯಾಚರಣೆ ಸಫಲವಾಗಿಲ್ಲ. ಅಧಿಕಾರಿಗಳು ಗಂಭೀರವಾದ ಕ್ರಮ ಕೈಗೊಳ್ಳದಿದ್ದಲ್ಲಿ ಪಾಲಿಕೆ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ. -ಮಧುಕರ್, ರಾಮಾನುಜ ರಸ್ತೆ ನಿವಾಸಿ
ನಂಜನಗೂಡು: ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ನಗರದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14…
ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…
ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…
ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…
ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…
ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ…