ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆ; ಜಾ.ದಳ ನಡೆಯ ಬಗ್ಗೆ ಕುತೂಹಲ; ಸದ್ದು ಮಾಡುತ್ತಿರುವ ವರ್ತೂರು ಪ್ರಕಾಶ್
ಬೆಂಗಳೂರು: ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಉಮೇದಿನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಳೆದು ತೂಗಿ ಚಿನ್ನದ ನಾಡು ಕೋಲಾರವನ್ನು ಮುಂದಿನ ಚುನಾವಣೆ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಕೋಲಾರ ಅವರ ಪಾಲಿಗೆ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆ ಆರಂಭವಾಗಿದೆ.
ಸಿದ್ದರಾಮಯ್ಯ ಅವರು ತಮ್ಮ ಪಾಲಿಗೆ ಸುರಕ್ಷಿತವಾಗಿದ್ದ ವರುಣ ಬದಲು ಕೋಲಾರವನ್ನೇ ಆಯ್ಕೆ ಮಾಡಿಕೊಂಡಿರುವ ಹಿಂದೆ ಹಲವು ಲೆಕ್ಕಾಚಾರಗಳಿವೆ. ಆದರೆ, ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಒಳ ಜಗಳ, ಜಾ.ದಳ ನಾಯಕರ ತಂತ್ರ, ಜಾತಿ ಸಮೀಕರಣ, ತನ್ನದೇ ಸಮುದಾಯದ ಎದುರಾಳಿಗಳ ಕಾರಣದಿಂದ ಅಹಿಂದ ಮತಗಳು ಹಂಚಿ ಹೋದರೆ ಸಂಕಷ್ಟ ತಪ್ಪಿದ್ದಲ್ಲ ಎಂಬ ಅಳುಕು ಸಿದ್ದು ಬೆಂಬಲಿಗರನ್ನು ಕಾಡುತ್ತಿದೆ.
ಜಾ.ದಳ ನಡೆಯ ಬಗ್ಗೆ ಕುತೂಹಲ: ಕೋಲಾರ ಕ್ಷೇತ್ರದಲ್ಲಿ ಜಾ.ದಳ ಅಭ್ಯರ್ಥಿ ಕಳೆದ ಬಾರಿ 43 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಿಜಯಿ ಅಭ್ಯರ್ಥಿ ಶ್ರೀನಿವಾಸಗೌಡ ಸದ್ಯ ಕಾಂಗ್ರೆಸಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಒಕ್ಕಲಿಗರೆಲ್ಲರೂ ಶ್ರೀನಿವಾಸ ಗೌಡರ ಪರ ನಿಲ್ಲುವ ಸಾಧ್ಯತೆಗಳಿಲ್ಲ. ನ.18ಕ್ಕೆ ‘ಪಂಚರತ್ನ’ ಯಾತ್ರೆಗೆ ಚಾಲನೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡಿ ಗ್ರಾಮವಾಸ್ತವ್ಯ ನಡೆಸಿ ಹೋಗಿದ್ದಾರೆ. ಜಾ.ದಳ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಪ್ರಚಾರ ನಡೆಸುತ್ತಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸಡ್ಡು ಹೊಡೆಯಲು ಜಾ.ದಳ ಚಿಂತನೆ ನಡೆಸಿದೆ ಎನ್ನಲಾಗಿದೆ. ಒಂದು ವೇಳೆ ಜಾ.ದಳ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮುಸ್ಲಿಂ ಹಾಗೂ ಒಕ್ಕಲಿಗ ವೋಟ್‌ಗಳು ಚದುರಿ ಹೋದರೆ ಚಾಮುಂಡಿ ಕ್ಷೇತ್ರದಂತೆ ಇಲ್ಲೂ ಸಂಕಷ್ಟ ಎದುರಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ವರ್ತೂರು ದರ್ಬಾರು: ಹಿಂದೊಮ್ಮೆ ತನ್ನ ಶಿಷ್ಯನಾಗಿದ್ದ, ಅಹಿಂದ ಸಮಾವೇಶ ಸಂಘಟಿಸಿ ಸದ್ದು ಮಾಡಿದ್ದ ವರ್ತೂರು ಪ್ರಕಾಶ್ ಈಗ ಬಿಜೆಪಿ ಅಭ್ಯರ್ಥಿ. ಕ್ಷೇತ್ರದ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿರುವ ತನ್ನದೇ ಸಮುದಾಯದ ನಾಯಕ ಸಿದ್ದು ಅವರಿಗೆ ಮುಳುವಾಗುವ ಭಯವಿದೆ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವರ್ತೂರು, ಮೂರು ಬಾರಿ ಶಾಸಕರಾಗಿದ್ದ ಕೆ.ಶ್ರೀನಿವಾಸಗೌಡ ಅವರನ್ನು ಸೋಲಿಸಿದ್ದರು. ಬಿಜೆಪಿ ಸರ್ಕಾರ ಬೆಂಬಲಿಸಿ ಸಚಿವರೂ ಆಗಿದ್ದರು. ಆಗ ಸಿದ್ದರಾಮಯ್ಯ ಶ್ರೀರಕ್ಷೆ ಮತ್ತು ಕೆ.ಎಚ್.ಮುನಿಯಪ್ಪ ಬಣದ ಬೆಂಬಲ ಸಿಕ್ಕಿತ್ತು. ಪ್ರಸ್ತುತ ಬಿಜೆಪಿಯಲ್ಲಿರುವ ವರ್ತೂರು ಪಕ್ಷ ಸಂಘಟನೆ ಜತೆಗೆ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿಯ ಸಾಂಪ್ರದಾಯಿಕ ಮತಗಳ ಜತೆ ಅಹಿಂದ ಮತಗಳು ದೊರೆತರೆ ವಿಜಯ ಖಚಿತ ಎನ್ನುವುದು ವರ್ತೂರು ಲೆಕ್ಕಾಚಾರ.
ಸಿದ್ದು ವಿರುದ್ಧ ಚಕ್ರವ್ಯೂಹ: ಕೋಲಾರದ ಕಾಂಗ್ರೆಸ್ ಒಳ ರಾಜಕೀಯವೂ ಸಿದ್ದರಾಮಯ್ಯ ಅವರಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ರಮೇಶ್ ಕುಮಾರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಕೋಲಾರ ಕ್ಷೇತ್ರವನ್ನು ಅಂತಿಮಗೊಳಿಸಿದ್ದಾರೆ. ಆದರೆ, ಪಕ್ಷದೊಳಗಿನ ರಮೇಶ್ ಕುಮಾರ್ ವಿರೋಧಿ ಬಣ ಬೆಂಬಲ ನೀಡದೇ ಹೋದರೆ ಸಿದ್ದರಾಮಯ್ಯ ಅವರಿಗೆ ತೊಂದರೆ ತಪ್ಪಿದ್ದಲ್ಲ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಮತ್ತು ಹಾಲಿ ಶಾಸಕರಾದ ಶ್ರೀನಿವಾಸಪುರದ ಕೆ.ಆರ್.ರಮೇಶ್ ಕುಮಾರ್, ಮಾಲೂರಿನ ಕೆ.ವೈ.ನಂಜೇಗೌಡ, ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಸೋಲಿಸಲು ಜಾ.ದಳ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಸಚಿವರಾದ ಡಾ.ಕೆ.ಸುಧಾಕರ್, ಮುನಿರತ್ನ, ಸಂಸದ ಮುನಿಸ್ವಾಮಿ, ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಮತ್ತು ಜಾ.ದಳ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ನಡುವೆ ಉತ್ತಮ ಒಡನಾಟವಿದೆ. ಇವರೆಲ್ಲರ ರಾಜಕೀಯ ವೈರತ್ವ ರಮೇಶ್ ಕುಮಾರ್ ಮೇಲಿದ್ದು, ಈ ಸೇಡಿನ ಕಿಡಿ ಸಿದ್ದು ಅವರಿಗೆ ಮುಳುವಾಗಬಹುದೆಂಬ ಮಾತುಗಳು ಕೇಳಿ ಬರುತ್ತಿವೆ.
ಸಿದ್ದು ಲೆಕ್ಕಾಚಾರದ ಹಿನ್ನೆಲೆ: ಕೋಲಾರದ 2.24 ಲಕ್ಷ ಮತದಾರರ ಪೈಕಿ 1.72 ಲಕ್ಷ ಅಹಿಂದ ಮತಗಳಿವೆ. ಜಾತಿವಾರು ಲೆಕ್ಕಾಚಾರದ ಪ್ರಕಾರ ಕ್ಷೇತ್ರದಲ್ಲಿ 60,000 ಪರಿಶಿಷ್ಟರು, 41,000 ಮುಸ್ಲಿಮರು,25,000 ಕುರುಬರು, 38,000 ಒಕ್ಕಲಿಗರು, 5,000 ಬ್ರಾಹ್ಮಣರು ಹಾಗೂ 53,000 ಇತರೇ ಜಾತಿಯವರ ಮತಗಳಿವೆ. ಸಿದ್ದರಾಮಯ್ಯ ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದು, ಈ ಮತಗಳು ವಿಭಜನೆಯಾಗುವುದಿಲ್ಲ. ಕೆ.ಸಿ.ರೆಡ್ಡಿ ನಂತರ ‘ಮುಖ್ಯಮಂತ್ರಿ ಭಾಗ್ಯ’ ಜಿಲ್ಲೆಗೆ ಒಲಿಯಬಹುದೆಂಬ ಕಾರಣಕ್ಕೆ ಒಕ್ಕಲಿಗ ಮತ್ತು ಮೇಲ್ವರ್ಗದವರ ಮತಗಳೂ ‘ಕೈ’ಗೆ ಬೀಳಲಿವೆ ಎಂಬುದು ಸಿದ್ದು ಲೆಕ್ಕಾಚಾರ. ಈ ಮೇಲ್ನೋಟದ ಎಣಿಕೆಯಿಂದಲೇ ಕೋಲಾರದಲ್ಲಿ ಅವರು ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ವರುಣಾದಿಂದಲೂ ಸ್ಪರ್ಧೆ ಸಂಭವ
ಮೈಸೂರು: ಕೋಲಾರಕ್ಕಿಂತಲೂ ವರುಣ ಸುರಕ್ಷಿತ ಕ್ಷೇತ್ರವೆಂದು ಚೆನ್ನಾಗಿ ಅರಿತಿರುವ ಸಿದ್ದರಾಮಯ್ಯ ಅವರು ಕೊನೆ ಕ್ಷಣದಲ್ಲಿ ವರುಣ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ಪಕ್ಷದೊಳಗೆ ಕೇಳಿ ಬರುತ್ತಿವೆ.
ಕಳೆದ ಬಾರಿಯಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಸಲುವಾಗಿಯೇ ಅವರು ಮೊದಲಿಗೆ ಕೋಲಾರ ಕ್ಷೇತ್ರದ ಹೆಸರನ್ನು ಪ್ರಕಟಿಸಿದ್ದಾರೆ. ಕೋಲಾರ ಮತ್ತು ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ವರುಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಪುತ್ರನಿಗೆ ಅವಕಾಶ ಮಾಡಿಕೊಡುವ ತಂತ್ರ ರೂಪಿಸಿದ್ದಾರೆಂದು ಅವರ ಆಪ್ತ ಮೂಲಗಳು ಹೇಳಿವೆ.
2008ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಬದಲಿಗೆ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯ ವಿಪಕ್ಷ ನಾಯಕನಾದರೆ, 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾದರು. 2018ರ ಚುನಾವಣೆಯಲ್ಲಿ ಮೂಲ ಕ್ಷೇತ್ರ ಚಾಮುಂಡೇಶ್ವರಿ, ದೂರದ ಬಾಗಲಕೋಟೆಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಾಣಬೇಕಾಯಿತು. ಈ ಬಾರಿಯೂ ಸುರಕ್ಷತೆ ದೃಷ್ಟಿಯಿಂದ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರಿಗೆ ರಾಜ್ಯವ್ಯಾಪಿ ಜನಪ್ರಿಯತೆ ಇದೆ. ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರೆ ಮೈಸೂರು ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಆದರೆ, ಕೋಲಾರದಲ್ಲಿ ಸ್ಪರ್ಧೆ ಮಾಡುವುದನ್ನು ಘೋಷಣೆ ಮಾಡಿರುವುದರಿಂದ ಮುಂದೆ ಕಾದು ನೋಡಬೇಕು.
-ಆರ್.ಧ್ರುವನಾರಾಯಣ, ಕಾರ್ಯಾಧ್ಯಕ್ಷರು, ಕೆಪಿಸಿಸಿ.
ಬಳ್ಳಾರಿ: ಶಾಸಕ ಜನಾರ್ಧನ ರೆಡ್ಡಿ ನಿವಾಸದ ಮುಂದೆ ಬ್ಯಾನರ್ ವಿಚಾರವಾಗಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರು ಉನ್ನತ ಅಧಿಕಾರಿಯ…
ಬೆಂಗಳೂರು: ದೇವರಾಜ ಅರಸು ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತಕ್ಕೂ ಹೋಲಿಕೆ ಮಾಡುವುದು ಬೇಡ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ ಎಂದು ಮಾಜಿ…
ಪಿರಿಯಾಪಟ್ಟಣ: ತಾಲ್ಲೂಕಿನ ಬೈಲುಕುಪ್ಪೆಯಲ್ಲಿ ಖದೀಮರು 10 ಲಕ್ಷ ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಿದ್ದು, ಟಿಬೆಟಿಯನ್ ರೈತರೊಬ್ಬರು ಕಂಗಾಲಾಗಿದ್ದಾರೆ. ಬೈಲಕುಪ್ಪೆಯ ತಿರುಮಲಾಪುರ…
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆದಾಯ ತೆರಿಗೆ ಪಾವತಿದಾರರಲ್ಲಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿದ್ದಾರೆ. ಕಿರಿಕ್ ಪಾರ್ಟಿ ಮೂಲಕ…
ಬಳ್ಳಾರಿ: ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣ ಕುರಿತು ಮಾತನಾಡಿದ ಮಾಜಿ…
ರಾಜೇಶ್ ಬೆಂಡರವಾಡಿ ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮಂಗಳವಾರ ರಾತ್ರಿ ಮುಖಾಮುಖಿ…