ಒಂದೇ ದಿನ 18 ಸಾವಿರ ಕೋಟಿ ರೂ. ಟೆಂಡರ್ ಬಿಲ್ , ಎಲೆಕ್ಷನ್ ಫಂಡ್ ರೈಸ್ ಮಾಡಲು ಟೆಂಡರ್ ದಾರಿ: ಸಿದ್ದರಾಮಯ್ಯ, ಡಿಕೆಶಿ ಗಂಭೀರ ಆರೋಪ
ಬೆಂಗಳೂರು : ರಾಜ್ಯ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆರೋಪ, ಪ್ರತ್ಯಾರೋಪಗಳು ಬಿರುಸಾಗಿವೆ. ರಾಜ್ಯಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಶನ್ ಆರೋಪ ಮಾಡಿದ್ದ ಕಾಂಗ್ರೆಸ್. ಇದೀಗ ಮಂತ್ರಿ ಸ್ಥಾನ ಸಿಗದವರಿಗೆ ಸರಕಾರ ಟೆಂಡರ್ ಆಫರ್ ನೀಡಿದೆ ಎಂದು ಗಂಭೀರ ಆರೋಪ ಮಾಡಿದೆ.
ಬೆಂಗಳೂರಿನಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ಕರೆದಿದ್ದ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಆರೋಪಗಳ ಸುರಿಮಳೆಗೈದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಬೊಕ್ಕಸವನ್ನು ಸರ್ಕಾರವೇ ಲೂಟಿ ಮಾಡ್ತಿದೆ, ಯದ್ವಾತದ್ವಾ ಎಲ್ಲಾ ಪ್ರಾಜೆಕ್ಟ್ ಗಳಿಗೆ ಒಪ್ಪಿಗೆ ನೀಡುತ್ತಿದ್ದಾರೆ. ಜನರ ತೆರಿಗೆ ಹಣ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಟೆಂಡರ್ ಹಣ ಹೆಚ್ಚು ಮಾಡಿದ್ರೆ ಹೆಚ್ಚು ಕಮಿಷನ್ ನೀಡುತ್ತಿದ್ದಾರೆಂದು ಗುಡುಗಿದರು. ನಿಗಮ-ಮಂಡಳಿಗಳ ಸಭೆಗಳು ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ನಡೆಯೋದು. ಟೆಂಡರ್ ಮೊತ್ತ ಎಷ್ಟು ಹೆಚ್ಚಿಸಬೇಕು ಎಂದು ಅವರೇ ಹೇಳಿರುತ್ತಾರೆ. ಇದಕ್ಕೆಲ್ಲಾ ಬೊಮ್ಮಾಯಿಯೇ ಕಾರಣ ಎಂದು ಅವರು ಆರೋಪಿಸಿದರು.
ಮಂತ್ರಿಗಳು ಹೆಚ್ಚು ಕಮಿಷನ್ ಕೊಡುವವರಿಗೆ ಗುತ್ತಿಗೆ ಕೊಡುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್ ಹಗರಣದ ಮುಂದುವರೆದ ಭಾಗ ಇದು. ಕಾಂಟ್ರಾಕ್ಟರ್, ಅಧಿಕಾರಿಗಳಿಗೆ ವಾರ್ನ್ ಮಾಡ್ತಿದ್ದೇನೆ. ನಾವು ಇದನ್ನು ಲಾಜಿಕಲ್ ಎಂಡ್ಗೆ ತಗೆದುಕೊಂಡು ಹೋಗುತ್ತೇವೆ. ಕಾಂಟ್ರಾಕ್ಟರ್ಗಳು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕ್ತೀವಿ. ಯಾರನ್ನೂ ಬಿಡಲ್ಲ, ಎಲ್ಲರನ್ನೂ ಜೈಲಿಗೆ ಹಾಕ್ತೀವಿ. ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಕಾಮಗಾರಿಗಳ ತನಿಖೆ ಮಾಡಿಸ್ತೇವೆ. ಅಧಿಕಾರಕ್ಕೆ ಬಂದ ತಕ್ಷಣ 40% ಕಮಿಷನ್ ಹಗರಣ ತನಿಖೆ ಮಾಡಿಸುತ್ತೇವೆ ಎಂದರು.
ನೀತಿ ಸಂಹಿತೆ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಭ್ರಷ್ಟ BJP ಸರ್ಕಾರವು ಚುನಾವಣೆಗೆ ಹಣ ಹೊಂದಿಸಲು ಬೀದಿಯಲ್ಲಿ ನಿಂತು ಕಾಂಟ್ರಾಕ್ಟರ್ಗಳಿಂದ ಕಮಿಷನ್ ವಸೂಲಿ ಮಾಡುತ್ತಿದೆ. ಅವರ ಮನೆಬಾಗಿಲಿಗೆ ಹೋಗಿ ಟೆಂಡರ್ ನೀಡುತ್ತಿದೆ. ನೀರಾವರಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಯಲ್ಲಿನ ₹500 ಕೋಟಿ ಟೆಂಡರ್ ಅನ್ನು ₹1000 ಕೋಟಿಗೆ ಮಾಡಿಸಿದೆ.
1/2 pic.twitter.com/ouxqy6far1— DK Shivakumar (@DKShivakumar) February 15, 2023
ಒಂದೇ ದಿನದಲ್ಲಿ 18,000 ಕೋಟಿ ಬಿಲ್ ಆಗಿದೆ. ಬಿಜೆಪಿ ಎಂಎಲ್ಎ ಗೂಳಿಹಟ್ಟಿ ಶೇಖರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಎಲೆಕ್ಷನ್ ಫಂಡ್ ರೈಸ್ ಮಾಡಲು ಟೆಂಡರ್ ಹಗರಣ ಮಾಡುತ್ತಿದ್ದಾರೆ ಎಂದರು. ನಾವು ಆರೋಪ ಮಾಡಿದರೆ ಸಾಕ್ಷಿ ಕೊಡಿ, ನಿಮ್ಮ ಸರ್ಕಾರದಲ್ಲಿಯೂ ಭ್ರಷ್ಟಾಚಾರ ಆಗಿದೆ ಎನ್ನುತ್ತಾರೆ, ನಮ್ಮ ಸರ್ಕಾರದಲ್ಲಿ ಆಗಿದ್ದರೆ ಈಗ ಅಧಿಕಾರದಲ್ಲಿರುವ ಬಿಜೆಪಿಯವರು ತನಿಖೆ ನಡೆಸಲಿ ಎಂದು ಬೊಮ್ಮಾಯಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಯಿಂದ ಸಾವಿರಾರು ಕೋಟಿ ಟೆಂಡರ್ ಅಕ್ರಮ ಬಯಲಿಗೆ ಬಂದಿದೆ. ಅಸಮಾಧಾನಿತ ಶಾಸಕರ ಸಮಾಧಾನಕ್ಕೆ ಟೆಂಡರ್ ಹಣವಿದ್ದು, ಮಂತ್ರಿ ಸ್ಥಾನ ಸಿಗದವರಿಗೆ ಟೆಂಡರ್ ಆಫರ್ ನೀಡಿದ್ದಾರೆ. ಇದು ಅಂತಿಂಥ ಹಗರಣವಲ್ಲ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ವಸೂಲಿ ಹಣದಲ್ಲಿ ಎಲೆಕ್ಷನ್ ಮಾಡಲು ಹೊರಟಿದ್ದಾರೆಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಆಪಾದಿಸಿದರು.