ಚಾಮರಾಜನಗರ: ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಭಾನುವಾರ ದಲಿತ ಕೇರಿಯ ಜನರೆಲ್ಲರೂ ಒಟ್ಟು ಸೇರಿ ಗ್ರಾಮದ ಎಲ್ಲ 42 ತೊಂಬೆ ( ಮಿನಿ ಟ್ಯಾಂಕ್) ಗಳ ಬಳಿ ಹೋಗಿ ನೀರು ಕುಡಿದರು. ಅವರಿಗೆ ಇಷ್ಟೊಂದು ಕಡೆಗಳಲ್ಲಿ ನೀರು ಕುಡಿಯುವ ದಾಹವೇನೂ ಇರಲಿಲ್ಲ. ಆದರೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ಬಳಿಕವೂ ಅಸ್ಪೃಶ್ಯತೆ ಆಚರಿಸುವ ಮನಸ್ಸುಗಳ ವಿರುದ್ಧ ಸೆಣಸುವ ದಾಹವಿತ್ತು.
ಶುಕ್ರವಾರ ದಲಿತ ಮಹಿಳೆಯೊಬ್ಬರು ಗ್ರಾಮದ ಮಿನಿ ಟ್ಯಾಂಕ್ ನಲ್ಲಿಯಿಂದ ನೀರು ಕುಡಿದರು ಎಂಬ ಕಾರಣಕ್ಕೆ ಮೇಲ್ಜಾತಿಯ ವ್ಯಕ್ತಿಯೊಬ್ಬರು ಟ್ಯಾಂಕ್‌ನ ಎಲ್ಲ ನೀರು ಖಾಲಿ ಮಾಡಿಸಿ, ಗೋ ಮೂತ್ರ ಸಿಂಪಡಿಸಿ ಶುದ್ದೀಕರಿಸಿದ ಘಟನೆಗೆ ಪ್ರತಿಕ್ರಿಯೆಯಾಗಿ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ದಲಿತ ಮುಖಂಡರನ್ನು ಗ್ರಾಮದ ಎಲ್ಲ 42 ತೊಂಬೆಗಳ ಬಳಿ ಕರೆದೊಯ್ದು ನೀರು ಕುಡಿಸಿದರು. ಗ್ರಾಮದಲ್ಲಿರುವ ಕುಡಿಯುವ ನೀರಿನ ತೊಂಬೆಗಳು ಎಲ್ಲ ಸಮುದಾಯಗಳಿಗೂ ಸೇರಿದ್ದಾಗಿದೆ ಎಂದು ಸಂದೇಶ ಸಾರಿದರು.
ತಹಸೀಲ್ದಾರ್ ಬಸವರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಪಿಡಿಒ ಮಾದಪ್ಪ, ಗ್ರಾಮಾಂತರ ಠಾಣೆಯ ಸಬ್ ಇನ್ ಸ್ಪೆಕ್ಟರ್ ಜಯರಾಂ, ಹಾಸ್ಟೆಲ್ ವಾರ್ಡನ್ ರಾಜು ಹಾಗೂ ಇತರರ ಸಮ್ಮುಖದಲ್ಲಿ ದಲಿತ ಮುಖಂಡರು, ಯುವಕರು ಗ್ರಾಮದ ಎಲ್ಲ ಬೀದಿಗಳ ತೊಂಬೆಗಳನ್ನು ನಲ್ಲಿಯ ನೀರು ಕುಡಿದರು.
ಗ್ರಾಮದಲ್ಲಿರುವ ಕುಡಿಯುವ ನೀರಿನ ತೊಂಬೆಗಳು ಎಲ್ಲ ಸಮುದಾಯಗಳಿಗೂ ಸೇರಿದ್ದಾಗಿದೆ. ಯಾವುದೇ ಸಮುದಾಯಕ್ಕೆ ಸೀಮಿತವಲ್ಲ ಎಂಬುದರ ಕುರಿತು ಜಾಗೃತಿ ಮೂಡಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ “”ಇದು ಸಾರ್ವಜನಿಕರ ಕುಡಿಯುವ ನೀರಿನ ತೊಂಬೆಯಾಗಿದೆ. ಎಲ್ಲ ವರ್ಗದ ಸಾರ್ವಜನಿಕರು ಬಳಸಲು ಮುಕ್ತವಾಗಿದೆ ನೀರನ್ನು ಮಿತವಾಗಿ ಬಳಸಿʼʼ ಎಂದು ಎಲ್ಲ ಮಿನಿ ಟ್ಯಾಂಕ್ ಗಳ ಮೇಲೆ ಬರೆಸಲಾಯಿತು. ಇದಕ್ಕೂ ಮುನ್ನ ಉಪ ವಿಭಾಗಾಧಿಕಾರಿ ಗೀತಾ ಹುಡೇದ ಅವರು ಗ್ರಾಮಕ್ಕೆ ಆಗಮಿಸಿ ವಿವಾದಕ್ಕೆ ಕಾರಣವಾದ ತೊಂಬೆಯನ್ನು ಪರಿಶೀಲಿಸಿದರು.
ದೂರು ದಾಖಲು
ಇದೇ ವೇಳೆ ದಲಿತ ಮಹಿಳೆಯನ್ನು ಅವಮಾನಿಸಿದ ಘಟನೆ ಸಂಬಂಧ ಗ್ರಾಮದ ವ್ಯಕ್ತಿಯೊಬ್ಬರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾಗಿದೆ. ಗ್ರಾಮದ ಗಿರಿಯಪ್ಪ ಅವರು ಮಹದೇವಪ್ಪ ಎಂಬುವರ ವಿರುದ್ದ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಗ್ರಾಮದಲ್ಲಿ ಶುಕ್ರವಾರ ನಡೆದ ಮದುವೆಗೆ ಬಂದಿದ್ದ ಸರಗೂರು ತಾಲ್ಲೂಕಿನಿಂದ ಬಂದಿದ್ದ ಮಹಿಳೆ ಶಿವಮ್ಮ ಗ್ರಾಮದ ಕೃಷ್ಣದೇವರಾಯ ದೇವಾಲಯ ಬಳಿಯ ತೊಂಬೆಯಿಂದ ನೀರು ಕುಡಿದಿದ್ದರು. ಇದನ್ನು ಗಮನಿಸಿದ ಮಹದೇವಪ್ಪ ಎಂಬವರು ಆಕೆಯನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ತೊಂಬೆಯ ನೀರನ್ನೆಲ್ಲ ಖಾಲಿ ಮಾಡಿಸಿ ಗೋ ಮೂತ್ರದಿಂದ ಶುದ್ದಿಕರಿಸಿ ಅಸ್ಪೃಶ್ಯತೆ ಆಚರಿಸಿದ್ದಾರೆಂದು ಗ್ರಾಮದ ಯುವಕರು ಮೊಬೈಲ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಮಹದೇವಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಸಂತ್ರಸ್ತ ಮಹಿಳೆ ಶಿವಮ್ಮ ಸೋಮವಾರ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡಲಿದ್ದಾರೆ.
ಮುಖಂಡರ ಸಭೆ
ಭಾನುವಾರ ಬೆಳಗ್ಗೆ ಗ್ರಾಮಕ್ಕೆ ತೆರಳಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ತಹಸೀಲ್ಧಾರ್ ಅವರ ಸಮ್ಮುಖದಲ್ಲಿ ದಲಿತರ ಬೀದಿಯಲ್ಲಿ ಮುಖಂಡರ ಸಭೆಯಯನ್ನು ನಡೆಸಲಾಯಿತು. ಗ್ರಾಮಸ್ಥರಿಂದ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಸಭೆಗೆ ಸವರ್ಣೀಯ ಮುಖಂಡರನ್ನು ಆಹ್ವಾನಿಸಲಾಯಿತು. ಆದರೆ, ಯಾರೊಬ್ಬರೂ ಪಾಲ್ಗೊಳ್ಳಲಿಲ್ಲ. ಈ ಘಟನೆಗೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಅವರು ಆಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಮುಖಂಡರು ಯಾವುದೇ ಪ್ರಚೋದನೆಗೆ ಒಳಗಾಗಬಾರದು. ಗ್ರಾಮದಲ್ಲಿ ಶಾಂತಿ ಕಾಪಾಡಿಕೊಂಡು ಹೋಗಬೇಕು ಅಧಿಕಾರಿಗಳು ಎಚ್ಚರಿಸಿದರು.
ಸಭೆಯಲ್ಲಿ ಮುಖಂಡರಾದ ದುಂಡುಮಾದಯ್ಯ, ಕುಮಾರ್, ಗ್ರಾಪಂ ಸದಸ್ಯ ನಾಗೇಶ್, ದಿಲೀಪ್ ಇತರರು ಪಾಲ್ಗೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.
ರಾಮನಗರ: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಸಹೋದರಿ ಮಹಾದೇವಮ್ಮ ನಿಧನರಾಗಿದ್ದಾರೆ. ಕನಕಪುರ ತಾಲ್ಲೂಕಿನ…
ಹಾಸನ: ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಬಾಗಲಕೋಟೆ,…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪಿಡಬ್ಲ್ಯೂಡಿ ಎಇಇ ಸತೀಶ್ ಮನೆ…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದ್ದು, ಮನುಷ್ಯರಂತೆ ಮೃಗಾಲಯದ ವನ್ಯಜೀವಿಗಳೂ ಕೂಡ ತತ್ತರಿಸಿವೆ. ಪ್ರಾಣಿ-ಪಕ್ಷಿಗಳಿಗೆ…
ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಪ್ರಪಂಚದಾದ್ಯಂತ ತೈಲ ಮಾರುಕಟ್ಟೆಗಳು ಸಂಪೂರ್ಣವಾಗಿ ಅಲುಗಾಡುತ್ತಿವೆ. ಇದರ ಎಫೆಕ್ಟ್ ರಾಜ್ಯದ ಮೇಲೂ ತಟ್ಟಿದ್ದು, ಡ್ರೈಫ್ರೂಟ್ಸ್…
ನಂಜನಗೂಡು: ಸ್ವಚ್ಛತೆಯ ಮೂಲಕವೇ ಗ್ರಾಮದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರಿಗೆ ಸರ್ಕಾರ ಅಗತ್ಯ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುವುದರ ಜೊತೆ ಚರಂಡಿಗಳನ್ನು…