ಜಿಲ್ಲೆಯಲ್ಲಿ 3ನೇ ಶಿಬಿರ; ದುಬಾರೆಯಿಂದ ೬ ಆನೆಗಳ ಸ್ಥಳಾಂತರ
ಪುನೀತ್ ಮಡಿಕೇರಿ
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹಾರಂಗಿಯಲ್ಲಿ ಸಾಕಾನೆಗಳ ನೂತನ ಶಿಬಿರ ಆರಂಭಗೊಂಡಿದೆ.
ಈ ಹಿಂದೆ ದುಬಾರೆ ಮತ್ತು ಮತ್ತಿಗೋಡುಗಳಲ್ಲಿ ಸಾಕಾನೆಗಳ ಶಿಬಿರ ಆರಂಭಿಸಲಾಗಿತ್ತು. ದುಬಾರೆ ಶಿಬಿರದಲ್ಲಿ ಸಾಕಾನೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಒತ್ತಡ ಹಾಗೂ ನಿರ್ವಹಣೆ ಸಮಸ್ಯೆಯಿಂದ ಹೊಸ ಶಿಬಿರ ಆರಂಭಿಸಲಾಗಿದೆ. ಹಾರಂಗಿ ಜಲಾಶಯದ ಬಲಭಾಗದಲ್ಲಿರುವ ಅರಣ್ಯ ಇಲಾಖೆಯ ೪೦ ಎಕರೆ ಟ್ರೀಪಾರ್ಕ್ ಗೆ ಹೊಂದಿಕೊಂಡಂತೆ ಹಿನ್ನೀರು ಪ್ರದೇಶದಲ್ಲಿ ನೂತನ ಸಾಕಾನೆ ಶಿಬಿರ ನಿರ್ಮಿಸಲು ಸರ್ಕಾರ ೫೦ ಲಕ್ಷ ರೂ. ಅನುದಾನ ಒದಗಿಸಿತ್ತು. ಇತ್ತೀಚೆಗೆ ಸಾಕಾನೆ ಶಿಬಿರದ ಜತೆಗೆ ಟ್ರೀಪಾರ್ಕ್ ಕೂಡ ಲೋಕಾರ್ಪಣೆಗೊಂಡಿದೆ.
ದುಬಾರೆಯಲ್ಲಿ ಒಟ್ಟು ೩೧ ಸಾಕಾನೆಗಳಿವೆ. ಇಲ್ಲಿಂದ ೧೫ ಸಾಕಾನೆಗಳನ್ನು ಹಾರಂಗಿಗೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಪ್ರಾರಂಭಿಕ ಹಂತವಾಗಿ ಈಗಾಗಲೆ ಏಕದಂತ, ರಾಮ, ಮಾರುತಿ, ಸುಬ್ರಹ್ಮಣ್ಯ, ವಿಕ್ರಮ ಹೆಸರಿನ ೬ ಸಾಕಾನೆಗಳನ್ನು ಸ್ಥಳಾಂತರಿಸಲಾಗಿದೆ. ವಾವುತ, ಕವಾಡಿಗರಿಗೆಂದು ಈಗಾಗಲೇ ೪ ವಸತಿಗೃಹ ನಿರ್ಮಿಸಲಾಗಿದ್ದು, ಮತ್ತೆ ೪ ನಿರ್ಮಾಣ ಹಂತದಲ್ಲಿವೆ.
ಮುಂಬರುವ ದಿನಗಳಲ್ಲಿ ಪ್ರವಾಸಿಗರಿಗೆ ವಯಸ್ಕರಿಗೆ ತಲಾ ೩೦ ರೂ., ಮಕ್ಕಳಿಗೆ ೧೦ ರೂ. ಪ್ರವೇಶ ಶುಲ್ಕ ನಿಗದಿಪಡಿಸುವ ಉದ್ದೇಶವಿದೆ. ಎಂಟ್ರಿ ಗೇಟ್ ನಿಂದ ಸುಮಾರು ೮೦೦ ಮೀಟರ್ ಒಳಗಿರುವ ಶಿಬಿರಕ್ಕೆ ನಡೆದು ಸಾಗಬೇಕಿದೆ. ಈ ಶಿಬಿರ ಅತ್ತೂರು ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತಿದ್ದು, ಸುಮಾರು ೨ ಸಾವಿರ ಎಕರೆ ಪ್ರದೇಶ ಸಾಕಾನೆಗಳ ಓಡಾಟಕ್ಕೆ ಸೂಕ್ತವಾಗಿದೆ.
ಹಾರಂಗಿ ಹಿನ್ನೀರಿನಲ್ಲಿ ಎರಡು ಪೆಡಲ್ ಬೋಟ್ ಗಳಿದ್ದು ಬೋಟಿಂಗ್ ಮಾಡಲು ಪ್ರತ್ಯೇಕವಾಗಿ ಒಬ್ಬರಿಗೆ ೫೦ ರೂ. ನಿಗದಿಪಡಿಸುವ ಯೋಜನೆ ಸಿದ್ಧಗೊಂಡಿದೆ. ಹಿನ್ನೀರು ಪ್ರದೇಶದಲ್ಲಿ ಸೂರ್ಯಸ್ತ ವೀಕ್ಷಿಸಲು ವೀವ್ ಪಾಯಿಂಟ್ ಸಿದ್ಧಪಡಿಸಿ ಪ್ರವಾಸಿಗರಿಗೆ ಕುಳಿತುಕೊಳ್ಳಲು ಬೆಂಚ್ ಗಳ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದುಬಾರೆ ಮಾದರಿಯಲ್ಲಿ ಆನೆಗಳಿಗೆ ಫೀಡಿಂಗ್, ಬಾತಿಂಗ್ ಚಟುವಟಿಕೆಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಸಿಗಲಿದೆ.
ಶಿಬಿರ ಪ್ರಾರಂಭವಾದ ಬಳಿಕ ಹಂತಹಂತವಾಗಿ ಮತ್ತಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿ ಶಿಬಿರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಪಕ್ಕದಲ್ಲೇ ಹಾರಂಗಿ ಅಣೆಕಟ್ಟೆಯಿದ್ದು ಈ ಶಿಬಿರ ಸ್ಥಾಪನೆಯಿಂದ ಹಾರಂಗಿಯ ಮೆರುಗು ಮತ್ತಷ್ಟು ಹೆಚ್ಚಾಗಲಿದೆ.
ಹೈಕೋರ್ಟ್ ಆದೇಶ
ಸಾಕಾನೆ ಶಿಬಿರಗಳಲ್ಲಿ ಅಗತ್ಯ ಸಂಖ್ಯೆಗಿಂತ ಹೆಚ್ಚು ಸಾಕಾನೆಗಳಿದ್ದು, ಅವುಗಳ ಒತ್ತಡವನ್ನು ತಗ್ಗಿಸಲು ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಒಂದು ಶಿಬಿರದಲ್ಲಿ ೧೫ ಆನೆಗಳಿರಬೇಕು ಎಂಬ ನಿಯಮವಿದ್ದು, ಅದರಂತೆ ದುಬಾರೆ ಶಿಬಿರದಲ್ಲಿ ಒತ್ತಡ ತಪ್ಪಿಸುವ ನಿಟ್ಟಿನಲ್ಲಿ ಹೊಸ ಶಿಬಿರ ಆರಂಭಿಸಲಾಗಿದೆ. ಪ್ರಸ್ತುತ ದುಬಾರೆ ಶಿಬಿರದಲ್ಲಿ ೩೧ ಸಾಕಾನೆಗಳಿದ್ದು, ಒತ್ತಡ ಹೆಚ್ಚಿರುವ ಕಾರಣ ಪ್ರಾರಂಭಿಕವಾಗಿ ೬ ಆನೆಗಳನ್ನು ಹಾರಂಗಿಗೆ ಸ್ಥಳಾಂತರಿಸಲಾಗುತ್ತಿದೆ. ಹೆಚ್ಚಿನ ಅನುದಾನ ಬಿಡುಗಡೆಯಾದ ನಂತರ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಹಂತ ಹಂತವಾಗಿ ಮತ್ತಷ್ಟು ಆನೆಗಳನ್ನು ಹಾರಂಗಿ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್ ತಿಳಿಸಿದ್ದಾರೆ.
೬ ಆನೆಗಳ ಸ್ಥಳಾಂತರ
ದುಬಾರೆ ಸಾಕಾನೆಗಳಾದ ರಾಮ(೬೮ ವರ್ಷ) ಮಾವುತ ಎಂ.ಎನ್.ಮಂಜುನಾಥ್, ಕಾವಾಡಿಗ ಪೊನ್ನಪ್ಪ, ಏಕದಂತ(೫೨ ವರ್ಷ) ಮಾವುತ ನಾಗರಾಜ್ ಕಾವಡಿಗ ಜೀವನ್, ಮಾರುತಿ(೨೧ ವರ್ಷ) ಮಾವುತ ಭರತ್ ನಾಯಕ್, ಕಾವಾಡಿಗ ಸುನೀಲ್, ಸುಬ್ರಮಣಿ(೩೫ ವರ್ಷ) ಮಾವುತ ಮೇಘರಾಜ್ ಕಾವಾಡಿಗ ಕರಿಯಣ್ಣ, ವಿಕ್ರಮ(೫೮ ವರ್ಷ) ಮಾವುತ ಜೆ.ಕೆ.ಪುಟ್ಟ, ಕಾವಾಡಿಗ ಹೇಮಂತಕುಮಾರ, ವಿಜಯ(೪೮ ವರ್ಷ) ಮಾವುತ ಭೋಜಪ್ಪ, ಕಾವಾಡಿಗ ಭರತ್ ಅವರನ್ನು ಹಾರಂಗಿ ಶಿಬಿರಕ್ಕೆ ಪ್ರಥಮ ಹಂತದಲ್ಲಿ ಸ್ಥಳಾಂತರ ಮಾಡಲಾಗಿದೆ.
ಶಾಸಕರಿಂದ ಲೋಕಾರ್ಪಣೆ
ಹಾರಂಗಿಯಲ್ಲಿ ಸಾಕಾನೆಗಳ ನೂತನ ಶಿಬಿರ ಹಾಗೂ ಟ್ರೀ ಪಾರ್ಕನ್ನು ಶಾಸಕ ಅಪ್ಪಚ್ಚುರಂಜನ್ ಶನಿವಾರ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ.ಸಿ.ಸತೀಶ್, ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಬಿ.ಎನ್.ನಿರಂಜನ್ ಮೂರ್ತಿ, ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರು, ಕೂಡುಮಂಗಳೂರು ಗ್ರಾಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಡಿ.ಎಫ್.ಓ ಎ.ಟಿ.ಪೂರ್ವಯು, ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ್, ಎಸಿಎಫ್ ಗೋಪಾಲ್, ಆರ್‌ಎಫ್‌ಒಗಳಾದ ಶಿವರಾಂ, ಪ್ರಫುಲ್ಲ ಶೆಟ್ಟಿ, ಚೇತನ್, ಡಿವೈಎಸ್ಪಿ ಗಂಗಾಧರಪ್ಪ, ಸಿಐ ಮಹೇಶ್ ಮತ್ತು ಬಿಜೆಪಿ ಮುಖಂಡರು ಕೂಡಿಗೆ, ಕೂಡುಮಂಗಳೂರು, ಕುಶಾಲನಗರ ವ್ಯಾಪ್ತಿಯ ಜನಪ್ರತಿನಿಧಿಗಳು ಸೇರಿದಂತೆ ನೂರಾರು ಪ್ರವಾಸಿಗರು ಹಾಜರಿದ್ದರು. ಇದೇ ಸಂದರ್ಭ ಶಾಸಕರು, ಜಿಲ್ಲಾಧಿಕಾರಿಗಳು ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಹಣ್ಣು, ಬೆಲ್ಲ ತಿನಿಸಿ, ಶಿಬಿರದ ಆವರಣದಲ್ಲಿ ಗಿಡ ನೆಟ್ಟರು.
ಶಿಬಿರದಿಂದ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಸ್ಥಳೀಯ ಗೂಡಂಗಡಿ, ಆಟೋ ಚಾಲಕರಿಗೆ ಹೆಚ್ಚಿನ ಸಹಕಾರಿಯಾಗಲಿದೆ. ಅತ್ತೂರು, ಹಾರಂಗಿ, ಹುದುಗೂರು, ಯಡವನಾಡು ಗ್ರಾಮಸ್ಥರ ಪ್ರಮುಖ ಸಮಸ್ಯೆಯಾದ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಬರಲಿದೆ.
–ಭಾಸ್ಕರ್ ನಾಯಕ್, ಉಪಾಧ್ಯಕ್ಷ, ಕೂಡುಮಂಗಳೂರು ಗ್ರಾಪಂ
ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಗಳ ಸಂಖ್ಯೆ ಹೆಚ್ಚಾದ ಕಾರಣ ಹಾರಂಗಿಯಲ್ಲಿ ನೂತನ ಶಿಬಿರ ನಿರ್ಮಿಸಲಾಗಿದೆ. ಆನೆ ಸಫಾರಿ ಸೇರಿದಂತೆ ಸಾಕಾನೆ ಶಿಬಿರದಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ಹೆಚ್ಚಿನ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದಲ್ಲಿ ಆದಾಯವೂ ಕೂಡ ಹೆಚ್ಚುತ್ತದೆ. ಇದರಿಂದ ಸಾಕಾನೆಗಳ ನಿರ್ವಹಣೆ ಕೂಡ ಸಮರ್ಪಕವಾಗಿ ನಡೆಸಲು ಸಾಧ್ಯ.
ಅಪ್ಪಚ್ಚು ರಂಜನ್, ಶಾಸಕರು, ಮಡಿಕೇರಿ ವಿಧಾನ ಸಭಾ ಕ್ಷೇತ್ರ
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…
ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…
ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…
ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…
ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…