ಜಿಲ್ಲೆಗಳು

ದೊಡ್ಡಗೌಡರ ಕಾಲಿಗೆ ಎರಗಿ ಕಣ್ಣೀರಿಟ್ಟ ಜಿಟಿಡಿ

ಮೈಸೂರು: ಮೂರು ವರ್ಷಗಳಿಂದ ಜಾ.ದಳದೊಂದಿಗೆ ಮುನಿಸಿಕೊಂಡು ದೂರವೇ ಉಳಿದಿದ್ದ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅದೇ ಪಕ್ಷದಲ್ಲಿ ಉಳಿಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಜಿ.ಟಿ.ದೇವೇಗೌಡರನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದವು. ಪಕ್ಷದಲ್ಲೇ ಉಳಿಸಿಕೊಳ್ಳಲು ಮುಂದಾಗಿದ್ದ ಜಾ.ದಳದ ಪ್ರಯತ್ನ ಯಶಸ್ಸು ಕೊಟ್ಟಿದ್ದು, ತೀವ್ರ ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಅನಾರೋಗ್ಯದ ನಡುವೆಯೂ ಖುದ್ದು ಜಿ.ಟಿ.ದೇವೇಗೌಡರ ಮನೆಗೆ ಗುರುವಾರ ಆಗಮಿಸಿದ್ದರು. ಇದರಿಂದ ಭಾವುಕರಾದ ಜಿ.ಟಿ.ದೇವೇಗೌಡ ಅವರು ಕಣ್ಣೀರು ಹಾಕುತ್ತಲೇ ಜಾ.ದಳದಲ್ಲಿ ಉಳಿಯುತ್ತೇನೆ ಎಂದು ಪ್ರಕಟಿಸಿದರು. ಜಾ.ದಳವನ್ನು ಮತ್ತೆ ಅಧಿಕಾರಕ್ಕೆ ತರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಶ್ರಮಿಸುವುದಾಗಿಯೂ ತಿಳಿಸಿದರು. ಅಲ್ಲದೆ, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನನ್ನನ್ನು ಆಯಾ ಪಕ್ಷಗಳಿಗೆ ಆಹ್ವಾನಿಸಿದ್ದರು. ಉಭಯ ಪಕ್ಷಗಳ ನಾಯಕರಿಗೂ ಕ್ಷಮೆ ಕೋರುತ್ತೇನೆ ಎಂದೂ ಹೇಳಿದರು. ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸೈಲೆಂಟ್ ಶೋರ್ಸ್‌ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಜಾ.ದಳ ಕಾರ್ಯಾಗಾರದ ಗುರುವಾರದ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಧ್ಯಾಹ್ನ 1.30ರ ಒಳಗೆ ರಾಹುಕಾಲ ಆರಂಭವಾಗುವ ಮುನ್ನ ವಿ.ವಿ.ಪುರಂನಲ್ಲಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ನಿವಾಸಕ್ಕೆ ಪುತ್ರ ಎಚ್.ಡಿ.ಕುಮಾರಸ್ವಾಮಿ, ಮೊಮ್ಮಗ ಸೂರಜ್ ರೇವಣ್ಣ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರೊಂದಿಗೆ ಬಂದಿಳಿಯುತ್ತಿದ್ದಂತೆ ಕುಟುಂಬದವರು ಆತ್ಮೀಯವಾಗಿ ಬರಮಾಡಿಕೊಂಡರು. ಜಿ.ಟಿ.ದೇವೇಗೌಡರ ಪತ್ನಿ ಲಲಿತಾ, ಪುತ್ರಿ ಸೇರಿ ಎಚ್.ಡಿ.ದೇವೇಗೌಡರಿಗೆ ಆರತಿ ಬೆಳಗಿ ಬರಮಾಡಿಕೊಂಡರು.

ಜಿ.ಡಿ.ಹರೀಶ್‌ಗೌಡರನ್ನು ಎಡಗಡೆ ಕೂರಿಸಿಕೊಂಡರೆ, ಬಲಗಡೆ ಮರಿಗೌಡರನ್ನು ಕೂರಿಸಿ ಅವರ ಕೈ ಹಿಡಿದುಕೊಂಡರು. ಬೆನ್ನು ಮತ್ತು ತಲೆ ಸವರಿದಾಗ ಅವರ ಕಂಗಳಲ್ಲಿ ಆನಂದಬಾಷ್ಪ ಕಾಣಿಸಿತು. ಕುಟುಂಬದವರಿಗೆ ಆಶೀರ್ವಾದ ಮಾಡಿದ ದೇವೇಗೌಡರು ಮುಂದಿನ ದಿನಗಳಲ್ಲಿ ಒಟ್ಟಿಗೆ ಹೋಗುವ ಮತ್ತು ನಿಮ್ಮದೇ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಬೇಕೆಂಬ ಮಾತನ್ನು ಹೇಳಿದರು. ನಂತರ, ಜಿ.ಟಿ.ದೇವೇಗೌಡರು ದೊಡ್ಡಗೌಡರಿಗೆ ಹೂವಿನ ಹಾರ ಹಾಕಿ ಕಾಲಿಗೆ ಎರಗಿ ನಮಸ್ಕರಿಸಿದರಲ್ಲದೆ, ಕಣ್ಣೀರು ಸುರಿಸಿದರು. ಈ ವೇಳೆ ಎಚ್.ಡಿ.ದೇವೇಗೌಡರು ಭಾವುಕರಾದರಲ್ಲದೆ, ಪಕ್ಕದಲ್ಲೇ ಕೂರಿಸಿಕೊಂಡರು. ನಂತರ,ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಸೇರಿದಂತೆ ಅನೇಕರಿಗೆ ಶಾಲು ಹೊದಿಸಿ ಹಾರ ಹಾಕಿದರು. ಈ ವೇಳೆ ನೆರೆದಿದ್ದ ಮುಖಂಡರು ನಾಯಕರ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು.

ಹರೀಶ್‌ ಗೌಡರಿಗೆ ಟಿಕೆಟ್‌ ಖಚಿತ

“ನನ್ನ ಮಗ, ಮೊಮ್ಮಗ ಚುನಾವಣೆಯಲ್ಲಿ ನಿಲ್ಲುವಾಗ ಜಿ.ಟಿ.ದೇವೇಗೌಡರ ಮಗ ಯಾಕೆ ನಿಲ್ಲಬಾರದು? ಈ ಪ್ರಶ್ನೆಯನ್ನು ಯಾಕೆ ಕೇಳುತ್ತೀರಾ? ಈ ಮಾತನ್ನು ನಮ್ಮನ್ನೇ ಯಾಕೆ ಕೇಳ್ತೀರಾʼʼ ಎನ್ನುವ ಮೂಲಕ ದೇವೇಗೌಡರು ಜಿಟಿಡಿ ಜತೆಗೆ ಪುತ್ರ ಹರೀಶ್‌ ಗೌಡರಿಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡುವುದು ಪಕ್ಕಾ ಎನ್ನುವ ಸುಳಿವು ಮಾಡಿದರು. “ಜಿಟಿ ಅವರಿಗೆ ಈ ಭಾಗದ ನೇತೃತ್ವ ವಹಿಸುತ್ತೇವೆʼʼ ಎಂದು ಹೇಳುವ ಮೂಲಕ ನಾಯಕತ್ವದ ಗೊಂದಲವನ್ನೂ ಪರಿಹರಿಸಿದರು.

ಗೌಡರ ಕನಸು ನನಸು ಮಾಡುವೆ…

“ಮಾಜಿ ಪ್ರಧಾನಿ ದೊಡ್ಡಗೌಡರ ಪ್ರೀತಿ ಕಟ್ಟಿ ಹಾಕಿದೆ. ಮುಂದೆ ಜಾ.ದಳದಲ್ಲಿ ಉಳಿಯುತ್ತೇನೆ. ಮೂರು ವರ್ಷಗಳ ಕಾಲ ದೂರ ಇದ್ದರೂ ನನ್ನ ಬಗ್ಗೆ ಒಂದಿಷ್ಟು ಪ್ರೀತಿ ಕಡಿಮೆಯಾಗಿರಲಿಲ್ಲ. ಎಚ್.ಡಿ.ದೇವೇಗೌಡರು ಪ್ರಾದೇಶಿಕ ಪಕ್ಷ ಉಳಿಸಿದ್ದಾರೆ. ಅವರು ಕಂಡ ಕನಸು ನನಸು ಮಾಡುತ್ತೇವೆ-ʼʼ ಎನ್ನುವ ಮೂಲಕ ಜಿ.ಟಿ.ದೇವೇಗೌಡರು ಮೂರು ವರ್ಷಗಳ ತಮ್ಮ ರಾಜಕೀಯ ಗೊಂದಲಕ್ಕೆ ತೆರೆ ಎಳೆದರು

andolana

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

2 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

3 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

4 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

4 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

4 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

5 hours ago