ಮೈಸೂರು ವಿವಿ ವೇತನ ಪರಿಷ್ಕರಣೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಭಾರೀ ನಿರಾಶೆ*ಅಧಿಕ ಸಂಖ್ಯೆಯ ತಾತ್ಕಾಲಿಕ ಸಿಬ್ಬಂದಿ ಮರು ಪರಿಶೀಲನೆಗೆ ಸೂಚನೆ
ಕೆ.ಬಿ.ರಮೇಶನಾಯಕ
ಮೈಸೂರು: ಅಧ್ಯಾಪಕರ ಕೊರತೆ ಕಾಡುತ್ತಿರುವುದರಿಂದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿದ್ದ ಮೈಸೂರು ವಿವಿಯು ಮಂಜೂರಾಗಿದ್ದ ಹುದ್ದೆಗಳಿಗೂ ಮೀರಿ ಅಧಿಕ ಸಂಖ್ಯೆಯಲ್ಲಿ ನೇಮಿಸಿಕೊಂಡಿರುವವರನ್ನು ಮರು ಪರಿಶೀಲಿಸುವ ಜತೆಗೆ ವೇತನ ಪರಿಷ್ಕರಣೆ ಪ್ರಸ್ತಾವನೆಯನ್ನು ತಿರಸ್ಕರಿಸಿ ದೊಡ್ಡ ಶಾಕ್ ನೀಡಿದೆ.
ವೇತನ ಪರಿಷ್ಕರಣೆ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದ ವಿವಿಯ ತೀರ್ಮಾನಕ್ಕೆ ಬ್ರೇಕ್ ಹಾಕಿರುವ ಆರ್ಥಿಕ ಇಲಾಖೆಯು ವೇತನ ಪರಿಷ್ಕರಣೆ ವಾರ್ಷಿಕ 4.71 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ವೆಚ್ಚಕ್ಕೆ ಅನುಮೋದನೆ ಕೊಡದೆ ತಿರಸ್ಕರಿಸಿದೆ. ಇದರಿಂದಾಗಿ ಪ್ರತಿಭಟನೆ ವಾಪಸ್ ಪಡೆದುಕೊಂಡು ವೇತನ ಹೆಚ್ಚಳದ ಭರವಸೆಯಲ್ಲಿದ್ದ ಅತಿಥಿ ಉಪನ್ಯಾಸಕರಿಗೆ ಭಾರೀ ಹಿನ್ನಡೆ ಮತ್ತು ನಿರಾಶೆಯಾಗಿದೆ.
ಮೈಸೂರು ವಿವಿಯ ಹಣಕಾಸು ಸಮಿತಿ ಸಭೆಯ ಮುಂದೆ ವಿವಿಯ ವಿವಿಧ ವಿಭಾಗಗಳು ಹಾಗೂ ಪಿಜಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಮತ್ತು ಇತರೆ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಿರುವ ಹಿನ್ನಲೆಯಲ್ಲಿ 4.71 ಕೋಟಿ ರೂ.ಗಳ ಹೆಚ್ಚುವರಿ ವೇತನ ಪರಿಷ್ಕರಣೆ ತೀರ್ಮಾನ ಮಾಡಿ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಿತ್ತು. ಇದರಿಂದಾಗಿ ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಅವರು ಮೈಸೂರು ವಿವಿಯ ಹಣಕಾಸು ಸಮಿತಿ ವಿಶೇಷ ಸಭೆ ನಡೆಸಿ ಸಂಪೂರ್ಣವಾದ ವಿವರಣೆ ಪಡೆದುಕೊಂಡಿದ್ದರು. ಈ ವರದಿಯ ಪ್ರಕಾರ ವಿತ್ತೀಯ ಕೊರತೆ ಎದುರಿಸುವ ಜತೆಗೆ ಅಗತ್ಯಕ್ಕಿಂತಲೂ ಮೀರಿ ಖರ್ಚು ಮಾಡಿರುವ ಕಾರಣ ಅನುಮೋದನೆಗೆ ನಿರಾಕರಿಸಿ ವಿವಿಗೆ ಪತ್ರ ಬರೆದು ಸರಿಪಡಿಸಿಕೊಳ್ಳುವಂತೆ ಸೂಚಿಸಿದೆ.
ವರ್ಷದಿಂದ ವರ್ಷಕ್ಕೆ ಕೊರತೆ ಹೆಚ್ಚಳ: ಮೈಸೂರು ವಿವಿಯ ಹಣಕಾಸು ಸಮಿತಿ ಮುಂದೆ ಮಂಡಿಸಿದ ಪ್ರಕಾರ 2020-2021ನೇ ಸಾಲಿನ ಆದಾಯ ಮತ್ತು ವೆಚ್ಚದ ಪಟ್ಟಿಯ ಪ್ರಕಾರ ಒಟ್ಟು ಆದಾಯ ೩೦೧.೭೮ ಕೋಟಿ ರೂ. ಇದ್ದರೆ, 325.66 ಕೋಟಿ ರೂ. ವೆಚ್ಚವಾಗಿ 23.88 ಕೋಟಿ ರೂ. ವಿತ್ತೀಯ ಕೊರತೆ, 2021-22ನೇ ಸಾಲಿನಲ್ಲಿ 278.98 ಕೋಟಿ ರೂ. ಆದಾಯ, 319.15 ಕೋಟಿ ರೂ. ವೆಚ್ಚವಾಗಿದ್ದು, 40.17ಕೋಟಿ ರೂ. ವಿತ್ತೀಯ ಕೊರತೆಯಲ್ಲಿ ದುಪ್ಪಟ್ಟಾಗಿದೆ. ಮೈಸೂರು ವಿವಿಯು ಅತಿಥಿ ಉಪನ್ಯಾಸಕರ ಹಾಗೂ ತಾತ್ಕಾಲಿಕ ಬೋಧಕೇತರ ಸಿಬ್ಬಂದಿ ವೇತನ ಪಾವತಿಗಾಗಿ ಈಗಾಗಲೇ ವಾರ್ಷಿಕ 43.13 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಈ ಸಿಬ್ಬಂದಿಗಳ ವೇತನವನ್ನು ನವೆಂಬರ್ 2020ರಲ್ಲಿ ಪರಿಷ್ಕರಿಸಿದ್ದು, ಕೇವಲ ಎರಡು ವರ್ಷಗಳ ಅವಧಿಯಲ್ಲಿ ಪುನಃ ವೇತನ ಪರಿಷ್ಕರಿಸಲು ಯಾವುದೇ ಸಮರ್ಥನೆ ಇರುವುದಿಲ್ಲ. ಪ್ರಸ್ತಾಪಿತ ವೇತನ ಪರಿಷ್ಕರಣೆ ಗಮನಿಸಿದಾಗ ಎಲ್ಲ ಹಂತದಲ್ಲಿ ವೇತನವನ್ನು ಸರಿ ಸುಮಾರು ದುಪ್ಪಟ್ಟು ಹೆಚ್ಚು ಮಾಡಲಾಗಿರುತ್ತದೆ. 12 ಗಂಟೆಗಳ ಕಾರ್ಯಭಾರ ಹೊಂದಿರುವ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ವೇತನವನ್ನು 28ರಿಂದ 37 ಸಾವಿರ ರೂ., ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 24ರಿಂದ26.400 ರೂ. ಹಾಗೂ ಕೆಲವು ಉಪನ್ಯಾಸಕರಿಗೆ ಮಾಸಿಕ ಗರಿಷ್ಠ 60 ಸಾವಿರ ರೂ.ಗಳಿಗೆ ವೇತನ ಹೆಚ್ಚಿಸಿರುವುದು ಯುಜಿಸಿಯು ಪೂರ್ಣಕಾರ್ಯಭಾರಕ್ಕೆ ನಿಗದಿಪಡಿಸಿರುವ ಗರಿಷ್ಠ ವೇತನಕ್ಕಿಂತಲೂ ಹೆಚ್ಚಾಗಿರುತ್ತದೆ. ಇದಲ್ಲದೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನಿಗದಿಪಡಿಸಿರುವ ಸಂಭಾವನೆಗಿಂತಲೂ ಹೆಚ್ಚಿರುತ್ತದೆ. ಹಾಗಾಗಿ, ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ವಯ ವೇತನವನ್ನು ನಿಗದಿಪಡಿಸಲು ಕ್ರಮವಹಿಸುವಂತೆ ಸೂಚನೆ ಕೊಟ್ಟಿದೆ. ವಿಶೇಷವಾಗಿ ಬೋಧಕ-ಬೋಧಕೇತರ ವೃಂದಗಳಲ್ಲಿ ಮಂಜೂರಾಗಿರುವ ಹುದ್ದೆಗಳಿಗೂ ಮೀರಿ ಅಧಿಕ ಸಂಖ್ಯೆಯಲ್ಲಿ ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುವುದರಲ್ಲಿ ಮರುಪರಿಶೀಲಿಸುವಂತೆ ಕುಲಪತಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಸರ್ಕಾರದ ವಿರುದ್ಧ ನಿರ್ಣಯ ಮಾಡಲಾಗದು. ವಿವಿಯ ವ್ಯವಸ್ಥೆಯನ್ನು ಸರ್ಕಾರದ ಗಮನಕ್ಕೆ ತಂದು ಅನುಮೋದನೆಗೆ ಒಪ್ಪಿಗೆ ಪಡೆಯಲು ಪ್ರಯತ್ನ ಮಾಡುತ್ತೇವೆ. ಸಿಂಡಿಕೇಟ್ ಸಭೆಯಲ್ಲಿ ವೇತನ ಪರಿಷ್ಕರಣೆಗೆ ಒಪ್ಪಿಗೆ ಸಿಕ್ಕಿದರೂ ಸರ್ಕಾರ ನಿರಾಕರಿಸಿರುವುದರಿಂದ ಚಿಂತೆ ಮಾಡಬೇಕಿದೆ.
-ಪ್ರೊ.ಎಚ್.ರಾಜಶೇಖರ್, ಪ್ರಭಾರ ಕುಲಪತಿ.
ಹಣಕಾಸು ಸಮಿತಿ ಸಭೆಯಲ್ಲಿ ಆರ್ಥಿಕ ಇಲಾಖೆ ಕಾರ್ಯದರ್ಶಿಗಳು ನೀಡಿರುವ ಸೂಚನೆಯನ್ನು ಪರಿಗಣಿಸಲಾಗಿದೆ. ಈ ವಿಚಾರದಲ್ಲಿ ಕುಲಪತಿಗಳು ಮತ್ತು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಆಗಬೇಕಿದೆ.
-ವಿ.ಆರ್.ಶೈಲಜ, ಕುಲಸಚಿವರು.
ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…
ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…
ಗುಂಡ್ಲುಪೇಟೆ: ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಾಣಿಸಿಕೊಂಡಿ ಕಾಡುಬೆಕ್ಕನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ತಾಲ್ಲೂಕಿನ ಬರಗಿ ಗ್ರಾಮದಲ್ಲಿ…
ಗುಂಡ್ಲುಪೇಟೆ: ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲ್ಲೂಕಿನ ಬೆಟ್ಟದಮಾದಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಂಕರ್ ಎಂಬುವವರು ತಮಗೆ ಸೇರಿದ…
ಬೆಂಗಳೂರು: ಹೊಸ ವರ್ಷಾಚರಣೆ ನಡುವೆಯೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ಚಿತ್ರದುರ್ಗ: ಚಿತ್ರದುರ್ಗ ಬಸ್ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8ಕ್ಕೇ ಏರಿಕೆಯಾಗಿದೆ. ಮೃತರನ್ನು…