ಚಿಂತಾಜನಕ ಸ್ಥಿತಿಯಲ್ಲಿರುವ ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ
ಮೈಸೂರು: ತನ್ನ ಇಬ್ಬರು ಮಕ್ಕಳ ಮೇಲೆ ಸುತ್ತಿಗೆಯಿಂದ ಹೊಡೆದು ಪರಾರಿಯಾಗಿದ್ದ ಕ್ರೋರಿ ತಂದೆ ಮೈಸೂರು ತಾಲ್ಲೂಕು ಉದ್ಬೂರು ಗ್ರಾಮದ ಡಿ.ಸ್ವಾಮಿಯನ್ನು ಶನಿವಾರ ಬಂಧಿಸಿರುವ ಜಯಪುರ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಈತ ಗುರುವಾರ ರಾತ್ರಿ ತನ್ನ ಇಬ್ಬರು ಮಕ್ಕಳಾದ ಕುಸುಮ (೧೪), ಧನ್ಯಶ್ರೀ (೪) ಇಬ್ಬರಿಗೂ ಸುತ್ತಿಗೆಯಿಂದ ಹೊಡೆದು ಪರಾರಿಯಾಗಿದ್ದ. ಈ ಸಂಬಂಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಆರಂಭಿಸಿ, ಶನಿವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ನೀಡಿದ ಕಾರಣ: ನನಗೆ ವಿಪರೀತ ಸಾಲವಿತ್ತು. ಅಲ್ಲದೇ, ಬೆನ್ನು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದೆ. ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದು ಅನಿಸುತ್ತಿತ್ತು. ನಾನು ಸತ್ತು ಹೋದರೆ, ಆನಂತರ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಯಾರು ಎಂಬುದು ಮಾನಸಿಕವಾಗಿ ಕೊರೆಯುತಿತ್ತು. ಈ ಕಾರಣದಿಂದ ಕುಟುಂಬದ ನಾಲ್ವರೂ ಸಾಯುವುದೇ ಒಳ್ಳೆಯದು ಎಂದುಕೊಂಡು ಮೊದಲು ಮಕ್ಕಳು, ಹೆಂಡತಿಯನ್ನು ಕೊಂದು ಆನಂತರ ನಾನು ಸಾಯುವುದು ಎಂದು ನಿರ್ಧರಿಸಿ, ಮಕ್ಕಳ ಮೇಲೆ ಹಲ್ಲೆ ಮಾಡಿ, ಹೆಂಡತಿಯ ಮೇಲೆ ಹಲ್ಲೆ ಮಾಡಲು ಹೋದಾಗ ಆಕೆ ಚೀರಿಕೊಂಡಳು ಎಂದು ಆರೋಪಿ ಸ್ವಾಮಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಕುಸುಮ ಮತ್ತು ಧನ್ಯಶ್ರೀ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಸುಮ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಮದುವರಿಸಲಾಗಿದೆ. ಧನ್ಯಶ್ರೀಗೆ ಮಕ್ಕಳ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರು ಮಕ್ಕಳಲ್ಲಿ ಚಟುವಟಿಕೆ ಕಂಡು ಬರುತ್ತಿದ್ದರೂ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದಾರೆ. ಶ್ವಾಸಕೋಶದ ಮೇಲೆ ಕೊಂಚ ಪರಿಣಾಮ ಬೀರಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.