ಜಿಲ್ಲಾಡಳಿತದಿಂದ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ಬೀಳ್ಕೊಡುಗೆ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಕಾಡಿನಿಂದ ನಾಡಿಗೆ ಆಗಮಿಸಿ ಕಳೆದ ಎರಡು ತಿಂಗಳಿನಿಂದ ಸಾಂಸ್ಕೃತಿಕ ನಗರಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಕ್ಯಾಫ್ಟನ್ ಅಭಿಮನ್ಯು ನೇತೃತ್ವದ ಆನೆಗಳು ಜಂಬೂ ಸವಾರಿ ಯಶಸ್ವಿಗೊಳಿಸಿದ ಖುಷಿಯಲ್ಲಿ ಒಲ್ಲದ ಮನಸ್ಸಿನಿಂದಲೇ ಕಾಡಿನತ್ತ ಪ್ರಯಾಣ ಬೆಳೆಸಿದವು.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯನ್ನು ಯಶಸ್ವಿಗೊಳಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯನ್ನು ನಾಡಿನಿಂದ ಬೀಳ್ಕೊಡುವ ವೇಳೆ ಅರಮನೆ ಅಂಗಳದಲ್ಲಿ ಭಾವನಾತ್ಮಕ ಸನ್ನಿವೇಶ ನಿರ್ಮಾಣವಾಗಿತ್ತು. ನಮ್ಮೊಳಗೊಬ್ಬರಾಗಿದ್ದ ಗಜಪಡೆಯನ್ನು ಭಾರವಾದ ಮನಸ್ಸಿನಿಂದಲೇ ಹೋಗಿ ಬನ್ನಿ ಎಂದು ನೆರೆದಿದ್ದ ಸಾರ್ವಜನಿಕರು, ಅಭಿಮಾನಿಗಳು, ಅಧಿಕಾರಿಗಳು,ಅರಣ್ಯ ಇಲಾಖೆ ಸಿಬ್ಬಂದಿ ಅವರಿಂದ ಕಳುಹಿಸಿಕೊಡಲಾಯಿತು. ಆನೆಗಳೂ ಸಹ ತಮ್ಮ ಸ್ವಸ್ಥಾನಕ್ಕೆ ಮರಳಲು ಹಿಂದೇಟು ಹಾಕುತ್ತಿದ್ದವು. ಹೊಸ ವಾತಾವರಣಕ್ಕೆ ಬಂದು ಕುಣಿದು ಕುಪ್ಪಳಿಸುತ್ತಿದ್ದ ಮಾವುತರು, ಕಾವಾಡಿಗಳ ಮಕ್ಕಳು ಸಹ ಬೇಸರದಿಂದಲೇ ತಮ್ಮ ಗಂಟುಮೂಟೆ, ಬ್ಯಾಗುಗಳನ್ನು ಎತ್ತಿಕೊಂಡು ತಮ್ಮ ಊರಿನತ್ತ ಹೆಜ್ಜೆ ಹಾಕಿದರು. ಪ್ರತಿನಿತ್ಯ ಆನೆಗಳನ್ನು ನೋಡಿ ಖುಷಿ ಪಡುತ್ತಿದ್ದ ಮೈಸೂರಿನ ಜನತೆ ಸಪ್ಪೆ ಮೋರೆಯಲ್ಲಿೆುೀಂ ಗಜಪಡೆಯನ್ನು ಬೀಳ್ಕೊಟ್ಟರು.
ಸಾಂಪ್ರದಾಯಿಕ ಪೂಜೆ: ಪುರೋಹಿತ ಪ್ರಹ್ಲಾದರಾವ್ ನೇತೃತ್ವದಲ್ಲಿ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಪಾದಗಳನ್ನು ತೊಳೆದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನಂತರ ಬೂದುಗುಂಬಳ ಒಡೆದು ದೃಷ್ಟಿ ತೆಗೆದು ಆನೆಗಳಿಗೆ ವಿವಿಧ ಹಣ್ಣು ಹಂಪಲು ಹಾಗೂ ಕಬ್ಬು ನೀಡಲಾಯಿತು. ಪೂಜೆ ಬಳಿಕ ಮಾವುತರು ಹಾಗೂ ಕಾವಾಡಿಗರ ಕುಟುಂಬ ವರ್ಗದವರಿಗೆ ಉಪಹಾರ ನೀಡಿ ಆನೆಗಳೊಂದಿಗೆ ಅವರನ್ನು ಬೀಳ್ಕೊಡಲಾಯಿತು. ಆನೆ ಶಿಬಿರದತ್ತ ಮರಳಿದ ಮಾವುತರು, ಕಾವಾಡಿಗಳಿಗೆ ಅರಮನೆ ಮಂಡಳಿಯಿಂದ ತಲಾ ೧೦ ಸಾವಿರದಂತೆ ೫೦ ಜನರಿಗೆ ೫ ಲಕ್ಷ ರೂ. ಗೌರವಧನ ನೀಡಲಾಯಿತು.
ಬಂದಿದ್ದು ೧೪ ಹೋಗಿದ್ದು ೧೫: ದಸರಾ ಮಹೋತ್ಸವಕ್ಕೆ ಎರಡು ತಂಡಗಳಲ್ಲಿ ೧೪ ಆನೆಗಳು ಮೈಸೂರಿಗೆ ಆಗಮಿಸಿದ್ದವು. ಹೋಗುವಾಗ ೧ ಆನೆ ಹೆಚ್ಚಾಗಿ ೧೫ ಆನೆಗಳು ತವರಿಗೆ ಮರಳಿದವು. ಲಕ್ಮೀ ಆನೆ ದಸರಾಗೆ ಬರುವಾಗಲೇ ತುಂಬು ಗರ್ಭಿಣಿಯಾಗಿದ್ದರಿಂದ ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮನೀಡಿದ್ದಳು. ಹೀಗಾಗಿ ಈ ಬಾರಿಯ ದಸರಾ ಹೆಚ್ಚು ವಿಶೇಷವಾಯಿತು. ೧೪ ಆನೆಗಳ ಪೈಕಿ ಮರಿಗೆ ಜನ್ಮ ನೀಡಿದ್ದ ಲಕ್ಷೀತ್ಮ, ಅದರ ಮರಿ ಶ್ರೀದತ್ತಾತ್ರೇಯ ಹಾಗೂ ಚೈತ್ರ ಆನೆಯನ್ನು ಬೆಳಿಗ್ಗೆಯೇ ಲಾರಿಯಲ್ಲಿ ಕಳುಹಿಸಲಾಯಿತು. ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಗೋಪಿ, ಪಾರ್ಥಸಾರಥಿ, ಸುಗ್ರೀವ, ಮಹೇಂದ್ರ, ಭೀಮ, ಶ್ರೀರಾಮ, ಕಾವೇರಿ, ವಿಜಯ ಆನೆಗಳನ್ನು ಲಾರಿಗೆ ಹತ್ತಿಸಿ ಆಯಾಯ ಆನೆಗಳ ಶಿಬಿರಗಳಿಗೆ ಕಳುಹಿಸಲಾಯಿತು.
ಅರಮನೆ ಆವರಣದಿಂದ ಹೊರಟ ಆನೆಗಳಿಗೆ ಮೈಸೂರಿನ ಜನತೆ ಭಾವನಾತ್ಮಕ ವಿದಾಯ ಹೇಳಿದರು. ರಸ್ತೆಯಲ್ಲಿದ್ದವರು ಕೈಬೀಸಿ ಆನೆಗಳಿಗೆ ಅಭಿನಂದನೆ ಸಲ್ಲಿಸಿ ಬೀಳ್ಕೊಟ್ಟರು.
ಮಹಾಪೌರ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಡಿಸಿಎಫ್‌ಗಳಾದ ಡಾ.ವಿ. ಕರಿಕಾಳನ್, ಕಮಲಾ ವಿ.ಕರಿಕಾಳನ್, ಪಶು ವೈದ್ಯ ಡಾ.ಮುಜೀಬ್ ಸೇರಿದಂತೆ ಇತರರು ಹಾಜರಿದ್ದರು.
ಲಾರಿ ಹತ್ತದೆ ಸತಾಯಿಸಿದ ಶ್ರೀರಾಮ
ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿರುವ ಶ್ರೀರಾಮ ಆನೆ ಲಾರಿ ಹತ್ತಲು ಸತಾಯಿಸಿತು. ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಇದ್ದ ದಿಣ್ಣೆಯ ಬಳಿ ಲಾರಿ ನಿಲ್ಲಿಸಿ ಸುಮಾರು ಬೆಳಿಗ್ಗೆ ೧೦.೫೫ರ ಸುಮಾರಿಗೆ ಶ್ರೀರಾಮನನ್ನು ಲಾರಿ ಹತ್ತಿಸಲು ಕರೆತಂದರು. ಶಿಬಿರದಿಂದ ಮೈಸೂರಿಗೆ ಬರುವಾಗಲೂ ಸತಾಯಿಸಿದ್ದರಿಂದ ಕಾಲಿಗೆ ಸರಪಳಿ ಕಟ್ಟಿದ್ದರು. ಮಾವುತ ಗಣೇಶ ಲಾರಿ ಹತ್ತುವಂತೆ ಶ್ರೀರಾಮನಿಗೆ ಸೂಚಿಸಿದ. ಆದರೆ, ಮಾವುತನ ಸೂಚನೆಗೆ ಶ್ರೀರಾಮ ಕ್ಯಾರೇ ಎನ್ನಲಿಲ್ಲ. ಸರಪಳಿ ಕಟ್ಟಿ ಎಳೆದರೂ ಜಗ್ಗಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನಾನು ಮಾತ್ರ ಲಾರಿ ಹತ್ತುವುದೇ ಇಲ್ಲ ಎಂದು ಹಠ ಹಿಡಿದುಕೊಂಡು ನಿಂತು ಬಿಟ್ಟನು. ಕಾಲಿಗೆ ಸರಪಳಿ ಹಾಕಿ, ಧನಂಜಯ, ಸುಗ್ರೀವನ ಸಹಾಯದಿಂದ ಲಾರಿ ಹತ್ತಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಬಂದು ಗುದ್ದು ನೀಡಿ, ಹಿಂದಿನಿಂದ ನೂಕಿದರೂ ಶ್ರೀರಾಮ ಲಾರಿ ಹತ್ತಲೇ ಇಲ್ಲ. ಸುತ್ತಮುತ್ತ ಮಾವುತರು, ಸಿಬ್ಬಂದಿಯನ್ನು ನೋಡಿ ಗಾಬರಿಯಾಗಿದ್ದ ಶ್ರೀರಾಮ ಸ್ಥಳದಿಂದಲೇ ನೀರಿನ ಕೊಳದತ್ತ ಪೇರಿಕಿತ್ತ. ಲಾರಿಹತ್ತಿ ನಿಂತಿದ್ದ ಅರ್ಜುನನನ್ನು ಕೆಳಗಿಳಿಸಿ ಕರೆತಂದರು. ಬಳಿಕ ಕೆಲಕಾಲ ಸಮಾಧಾನಪಡಿಸಿ ಹತ್ತಿಸಲು ಪ್ರಯತ್ನಿಸಿದರೂ ಲಾರಿಗೆ ಕಾಲು ಹಾಕದೆ ಮಲಗಿೆುೀಂ ಬಿಟ್ಟ. ಕೊನೆಗೆ ಅಕ್ಕಪಕ್ಕ ಮಹೇಂದ್ರ, ಸುಗ್ರೀವನನ್ನು ನಿಲ್ಲಿಸಿ ಹಿಂದಿನಿಂದ ಅಭಿಮನ್ಯು ಜೋರಾಗಿ ನೂಕಿದ ಬಳಿಕ ಶ್ರೀರಾಮ ಲಾರಿ ಹತ್ತಿದನು. ಸತತ ಒಂದೂವರೆ ಗಂಟೆಯ ಪ್ರಯತ್ನದ ನಂತರ ಶ್ರೀರಾಮನನ್ನು ಲಾರಿ ಹತ್ತಿಸುವಲ್ಲಿ ಮಾವುತರು,ಕಾವಾಡಿಗಳು ಯಶಸ್ವಿಯಾದರು. ಆದರಂಭದಲ್ಲಿ ಮೊದಲ ಬಾರಿಗೆ ದಸರೆಗೆ ಆಗಮಿಸಿರುವ ಚಿಕ್ಕವಯಸ್ಸಿನ ಪಾರ್ಥಸಾರಥಿಯೂ ಸತಾಯಿಸಿದ್ದನು. ಒಟ್ಟಿನಲ್ಲಿ ನಗರದ ಅರಮನೆಯ ಅಂಗಳದಲ್ಲಿ ಓಡಾಡಿದ್ದ ಆನೆಗಳು ತವರು ಮನೆ ಬಿಟ್ಟು ಹೋಗಲು ಕಣ್ಣೀರು ಹಾಕುವ ಹೆಣ್ಣಿನಂತೆ ಗೋಳಾಡಿ ಲಾರಿಯನ್ನು ಹತ್ತಿದ್ದು ನೋಡುಗರ ಮನಸೆಳೆಯಿತು.
ಮುಂಜಾನೆಯೇ ಪುತ್ರನೊಂದಿಗೆ ಲಕ್ಷ್ಮೀ ಪಯಣ
ಅರಮನೆಗೆ ಬರುವಾಗ ಏಕಾಂಗಿಯಾಗಿ ಬಂದಿದ್ದ ಲಕ್ಷ್ಮೀ ಗಂಡು ಮರಿಗೆ ಜನನ ನೀಡಿದ್ದರಿಂದ ಕಾಡಿಗೆ ಹೋಗುವಾಗ ಪುತ್ರನೊಂದಿಗೆ ಪಯಣ ಬೆಳೆಸಿತು. ತಾಯಿ ಮತ್ತು ಮರಿ ಆನೆಯನ್ನು ಸಾರ್ವಜನಿಕರು ನೋಡಲು ಮುಗಿಬೀಳಬಹುದೆಂಬ ಕಾರಣಕ್ಕಾಗಿ ಶುಕ್ರವಾರ ೪.೩೦ರಲ್ಲೇ ಲಾರಿಗೆ ಹತ್ತಿಸಲಾಯಿತು. ತಾಯಿ ಮತ್ತು ಮರಿ ಆನೆಯು ನಿಂತು ಹೋಗಲು ಅಥವಾ ಕೂರಲು ಅನುಕೂಲವಾಗುವಂತೆ ಮಣ್ಣು, ಹುಲ್ಲಿನ್ನು ಹಾಕಿ ಅನುಕೂಲ ಮಾಡಿಕೊಡಲಾಗಿತ್ತು.
ಮೈಸೂರು ಅರಮನೆ ಆವರಣದಲ್ಲಿ ಬಿಡಾರ ಹೂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಜಿಲ್ಲಾಡಳಿತದಿಂದ ಬೀಳ್ಕೊಡಲಾಯಿತು. ಮಹಾಪೌರ ಶಿವಕುಮಾರ್, ಡಿಸಿ ಡಾ.ಬಗಾದಿ ಗೌತಮ್, ಡಿಸಿಎಫ್‌ಗಳಾದ ಡಾ.ವಿ.ಕರಿಕಾಳನ್, ಕಮಲಾ ಕರಿಕಾಳನ್,ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಇನ್ನಿತರರು ಹಾಜರಿದ್ದರು
ಈ ಬಾರಿಯ ದಸರಾ ಮಹೋತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ೬ ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದೇನೆ. ಈ ಬಾರಿ ಸೇರಿದ್ದ ಜನರನ್ನು ಯಾವ ವರ್ಷವೂ ನೋಡಿರಲಿಲ್ಲ. ತಾಯಿ ಚಾಮುಂಡೇಶ್ವರಿ ದೆುಂಯಿಂದ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಅಭಿಮನ್ಯು ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಬಾಯಿಸಿದ್ದಾನೆ. ದಸರಾ ಯಶಸ್ಸಿನಲ್ಲಿ ಮಾವುತರು, ಕಾವಾಡಿಗಳ ಪರಿಶ್ರಮವೂ ಇದೆ. ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. -ಡಾ.ವಿ. ಕರಿಕಾಳನ್, ಡಿಸಿಎಫ್ .
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…