ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡಬಲ್ ಡೆಕರ್ ಬಸ್ಗಳನ್ನುಓಡಿಸಲು ಮುಂದಾಗಿರುವ ಕೆಎಸ್ಆರ್ಟಿಸಿ ಮೈಸೂರು ಸೇರಿ ಪ್ರಮುಖ ನಗರಗಳಲ್ಲಿ ಡಬಲ್ ಡೆಕರ್ ಬಸ್ ಓಡಿಸಲು ಮುಂದಾಗಿದೆ.
ಬೆಂಗಳೂರು ನಗರದ ಬಿಎಂಟಿಸಿ ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ಅತ್ಯಾಧುನಿಕ ಡಬಲ್ ಡೆಕರ್ ಇ-ಬಸ್ಗಳು ರಸ್ತೆಗಿಳಿಯುವ ಸಾಧ್ಯತೆಯಿದೆ. 2023ರ ಅಂತ್ಯದ ವೇಳೆಗೆ ಮೈಸೂರು ಮತ್ತು ತುಮಕೂರು ನಗರಗಳಲ್ಲೂ ಡಬಲ್ ಡೆಕರ್ ಬಸ್ಗಳು ರಸ್ತೆಗೆ ಇಳಿಯಲಿವೆ. ಈ ಡಬಲ್ ಡೆಕರ್ ಬಸ್ಗಳಲ್ಲಿ ಎಸಿ ಸೌಲಭ್ಯವೂ ಇರಲಿದೆ ಎನ್ನಲಾಗಿದೆ. ಜೊತೆಗೆ ಈ ಡಬಲ್ ಡೆಕರ್ ಬಸ್ಗಳು ಎಲೆಕ್ಟ್ರಿಕ್ ಬಸ್ಗಳೂ ಆಗಿರಲಿವೆ ಅನ್ನೋದು ಇನ್ನೊಂದು ವಿಶೇಷವಾಗಿದೆ.
ಬೆಂಗಳೂರಿನ ರಸ್ತೆಗಳನ್ನು ಆಳಿದ್ದ ಡಬಲ್ ಡೆಕರ್ ಬಸ್ಗಳು
ಡಬಲ್ ಡೆಕರ್ ಡೀಸೆಲ್ ಬಸ್ಗಳು 1970-80ರ ದಶಕದಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯ ದೃಶ್ಯವಾಗಿತ್ತು. 1970-80 ರಲ್ಲಿ ಡಬಲ್ ಡೆಕರ್ಗಳು ಬೆಂಗಳೂರಿನ ರಸ್ತೆಗಳನ್ನು ಆಳಿದ್ದವು. ಹಳೆಯ ಕನ್ನಡ ಸಿನಿಮಾಗಳಲ್ಲಿ ಬೆಂಗಳೂರಿನ ಡಬಲ್ ಡೆಕರ್ ಬಸ್ಗಳ ಸವಾರಿಯನ್ನು ವೀಕ್ಷಿಸಬಹುದು. 1997ರ ವೇಳೆಗೆ ಅವುಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗಿತ್ತು.
ಮೂರು ಸಂಸ್ಥೆಗಳು – ಅಶೋಕ್ ಲೇಲ್ಯಾಂಡ್-ಬೆಂಬಲಿತ ಸ್ವಿಚ್ ಮೊಬಿಲಿಟಿ, ಕಾಸಿಸ್ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ ಯೋಜನೆಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿವೆ. ಮೊದಲ ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್ ಅನ್ನು ಏಪ್ರಿಲ್ ಮತ್ತು ಜೂನ್ ನಡುವೆ ಪರಿಚಯಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಬಲ್ ಡೆಕರ್ ಬಸ್ಗಳು ಎಲ್ಲ ರಸ್ತೆಗಳಲ್ಲೂ ಸಂಚರಿಸಲಾರವು. ರಸ್ತೆ ಬದಿ ಮರ ಇರುವಲ್ಲಿ, ಮೇಲ್ಸೇತುವೆ, ಕೆಳಸೇತುವೆ ಇರುವಲ್ಲಿ ಡಬಲ್ ಡೆಕರ್ ಬಸ್ ಸಂಚಾರ ಅಸಾಧ್ಯ.
ರಿಂಗ್ ರಸ್ತೆಯಲ್ಲಿ ಮೊದಲ ಸಂಚಾರ, 70 ಜನರ ಆಸನ ಸಾಮರ್ಥ್ಯ
ಸದ್ಯ ಆರಂಭವಾಗಲಿರುವ ಡಬಲ್ ಡೆಕರ್ ಬಸ್ಗಳ ಉದ್ದವು 9,500 ಎಂಎಂ ಮತ್ತು 11,000 ಎಂಎಂ ನಡುವೆ ಇರಲಿದೆ. ಮೊದಲ ಡಬಲ್ ಡೆಕರ್ ಇ-ಬಸ್ ಬೆಂಗಳೂರಿನ ಔಟರ್ ರಿಂಗ್ ರೋಡ್ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಈ ಬಸ್ಗಳು ಸುಮಾರು 70 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.