ಚಿರಂಜೀವಿ ಎಸ್. ಹುಲ್ಲಹಳ್ಳಿ
ಮೈಸೂರು: ಸಮಗ್ರ ಕೃಷಿ ಪದ್ಧತಿಯ ‘ಕೃಷಿ ಬ್ರಹ್ಮಾಂಡ’ ಸುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಸಣ್ಣ ಹಿಡುವಳಿದಾರರು ಒಂದು ಎಕರೆ ಪ್ರದೇಶದಲ್ಲಿ ಹಲವು ಬಗೆಯ ಬೆಳೆಗಳನ್ನು ಬೆಳೆದು ಹೇಗೆ ಜೀವನ ನಿರ್ವಹಣೆ ಮಾಡಬಹುದು ಎಂಬುದನ್ನು ಕೃಷಿ ಬ್ರಹ್ಮಾಂಡದಲ್ಲಿ ತೋರಿಸಿಕೊಡಲಾಗುತ್ತಿದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಯ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯೊಂದಿಗೆ ದೇಸಿ ಹಾಗೂ ವಿದೇಶಿ ತರಕಾರಿಗಳು ಗಮನಸೆಳೆಯುತ್ತಿವೆ.. ವಿಶೇಷವಾಗಿ ಸಿರಿಧಾನ್ಯ ಬೆಳೆಗಳ ಪ್ರಾತ್ಯಕ್ಷಿಕೆ, ಮಣ್ಣಿನ ಸವಕಳಿ ತಪ್ಪಿಸಲು ಹಾಗೂ ಔಷಧಿ ಬೆಳೆಯಾಗಿ ಲಾವಂಚ, ದ್ವಿದಳ ಧಾನ್ಯಗಳ ವಿವಿಧ ತಳಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರೈತರ ಅನುಕೂಲಕ್ಕಾಗಿ ನೂತನ ತಂತ್ರಜ್ಞಾನ ಡ್ರೋನ್ ಬಳಕೆ ಕುರಿತ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಸಮಗ್ರ ಬೆಳೆ ನಿರ್ವಹಣೆ, ವೈವಿಧ್ಯಮಯೂ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟದ ವ್ಯವಸ್ಥೆ ಮಾಡಲಾಗಿದೆ.
ಸಿರಿಧಾನ್ಯ ಬೆಳೆಗಳ ಪ್ರದರ್ಶನ, ವಿಚಾರಸಂಕಿರಣ, ಮಾರುಕಟ್ಟೆ ಕಂಡುಕೊಳ್ಳುವುದು ಮೌಲ್ಯವರ್ಧನೆ ಬಗ್ಗೆ ತಿಳಿಸಿಕೊಡುವುದು, ಚರ್ಚೆ, ಸಿರಿಧಾನ್ಯದಿಂದ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೊಸ ಸಾಧ್ಯತೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಹಸು, ಕುರಿ, ಮೇಕೆ, ಕೋಳಿ ದೇಸಿ ತಳಿಗಳ ಪ್ರದರ್ಶನವೂ ಇದೆ. ಸೊಪ್ಪು ತರಕಾರಿ, ಕಾಳುಕಡ್ಡಿ ಸೇರಿದಂತೆ ಆಹಾರ ಪದಾರ್ಥಗಳನ್ನು ಮಾರುಕಟ್ಟೆಯಿಂದ ಖರೀದಿಸದೆ ಹೇಗೆ ಬದುಕಬಹುದು ಎಂಬುದನ್ನು ತಿಳಿಸುವುದೇ ಕೃಷಿ ಬ್ರಹ್ಮಾಂಡದ ವಿಶೇಷತೆಯಾಗಿದೆ.
ಕೃಷಿ ಜಮೀನಿನ ಸುತ್ತ ಸರ್ವೆ, ಸಿಲ್ವರ್ ಓಕ್, ಕತ್ತಾಳೆ, ಗ್ಲಿರಿಸೀಡಿಯಾ, ಚೊಗಚೆ, ಬಾಗೆ, ಬಿದಿರು, ಹೊಂಗೆ, ಬೇವು, ಸೀಬೆ, ಅಂಟುವಾಳ, ದಾಸವಾಳ ಇವೆ. ಸೊಪ್ಪುಗಳಾದ ಹಸಿರು ದಂಟು, ಬಿಳಿ ದಂಟು, ಸಬ್ಬಸಿಗೆ, ಮೆಂತ್ಯೆ, ಬಿಳಿಕೀರೆ, ತರಕಾರಿಗಳಾದ ಟೊಮೆಟೋ, ಹಸಿಮೆಣಸು, ಸಿಹಿಕುಂಬಳ, ಸೋರೆಕಾಯಿ, ಹಾಗಲ, ಹೀರೆ, ಈರುಳ್ಳಿ ನಡುವೆ ಎಲೆಕೋಸು ಮುಂತಾದವುಗಳನ್ನು ಬೆಳೆಯಲಾಗಿದೆ. ಅಲಸಂದೆ, ಅವರೆ, ತೊಗರಿ, ಬಟಾಣಿ, ಹೆಸರು, ಸೋಯಾ ಅವರೆ, ಸೂರ್ಯಕಾಂತಿ ಮುಂತಾದವುಗಳನ್ನು ಬೆಳೆಯಲಾಗಿದೆ.
ಜಮೀನಿನ ಇನ್ನೊಂದು ಭಾಗದಲ್ಲಿ ಪಪ್ಪಾಯಿ ಹಾಗೂ ಬಾಳೆಯನ್ನು ಬೆಳೆಯಲಾಗಿದ್ದು, ಬಾಳೆಯ ನಡುವೆ ವಿವಿಧ ಬಗೆಯ ಎಲೆಕೋಸು, ಅವರೆ, ಮರಗೆಣಸು, ಸಿಹಿಗೆಣಸನ್ನು ನೆಡಲಾಗಿದೆ. ಪಕ್ಕದಲ್ಲಿ ಔಷಧಿ ಗುಣಗಳ ಸಸ್ಯಗಳಾದ ಪುದಿನ, ಚಕ್ರಮುನಿ, ಆಡುಸೋಗೆ, ಅಮೃತಬಳ್ಳಿ, ನಾಗದಾಳಿ, ನಿಂಬೆ, ಗುಲಗಂಜಿ, ಬಸಳೆ, ಬೆಳ್ಳುಳ್ಳಿ ಹೀಗೆ ಹತ್ತು ಹಲವು ಸೊಪ್ಪು, ತರಕಾರಿ, ಹಣ್ಣುಗಳನ್ನು ಬೆಳೆಯಲಾಗಿದೆ.
ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ತರಕಾರಿ, ಇನ್ನಿತರ ಬೆಳೆಗಳನ್ನು ಬೆಳೆಯುವುದರಿಂದ ಖರ್ಚು ಕಡಿಮೆ. ಆರೋಗ್ಯದಾಯಕ ತರಕಾರಿ ಪದಾರ್ಥಗಳನ್ನು ಪಡೆಯಲು ಸಾಧ್ಯ ಎಂಬುದನ್ನು ಕೃಷಿ ಬ್ರಹ್ಮಾಂಡದ ಮೂಲಕ ತೋರಿಸಿಕೊಡಲಾಗಿದೆ ಎಂದು ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಪ್ರಭಾರ ಮುಖ್ಯಸ್ಥೆ ಎಚ್.ವಿ.ದಿವ್ಯಾ ಮಾಹಿತಿ ನೀಡಿದರು.
ಕೃಷಿ ಬ್ರಹ್ಮಾಂಡಕ್ಕೆ ಭೇಟಿ ನೀಡುವ ರೈತರಿಗೆ ಇಲ್ಲಿನ ಹಲವಾರು ವೈಶಿಷ್ಟಗಳನ್ನು ಮತ್ತು ದೇಶಿ ಹಾಗೂ ವಿದೇಶಿ ತಳಿಗಳ ಮತ್ತು ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಯ ಬಗ್ಗೆ ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ತಿಳಿಸಿಕೊಡುತ್ತಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
– ಪ್ರೀತಮ್, ವಿದ್ಯಾರ್ಥಿ.
ಸುತ್ತೂರು ಜಾತ್ರೆಯು ಹಲವು ವೈಶಿಷ್ಟಗಳನ್ನು ಹೊಂದಿದ್ದರೂ ಕೃಷಿ ಮತ್ತು ವಸ್ತು ಪ್ರದರ್ಶನ ಮೇಳ ಪ್ರಮುಖ ಆಕರ್ಷಣೆಯಾಗಿದೆ. ನಾನು ಸುತ್ತೂರು ಜಾತ್ರೆಗೆ ಆಗಮಿಸಿದಾಗಲೆಲ್ಲವೂ ಕೃಷಿ ಬ್ರಹ್ಮಾಂಡ ನೋಡುತ್ತಿದ್ದೇನೆ. ಹೊಸ ಬಗೆಯ ವಿಧಾನಗಳನ್ನು ತಿಳಿದುಕೊಂಡು ನಮ್ಮ ಜಮೀನಿನ ಅಕ್ಕ ಪಕ್ಕದ ರೈತರೊಂದಿಗೆ ಚರ್ಚಿಸುತ್ತೇನೆ. ಒಟ್ಟಿಗೆ ಕೃಷಿ ಮೇಳ ಸೊಗಸಾಗಿದೆ.
– ಮನೋಜ್, ಯುವ ರೈತ.
ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…
ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…
ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…
ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…
ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…
ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…