ಗಂಟು ರೋಗದ ಬಗ್ಗೆ ಮನೇಕಾಗಾಂಧಿ ಸಂದೇಶದಿಂದ ಜನರಿಗೆ ಆತಂಕ, ಹಾಲು ರಸ್ತೆಗೆ ಚೆಲ್ಲುವ ವಿಡಿಯೋ ವೈರಲ್
ಆಂದೋಲನ ವಿಶೇಷ
ಮೈಸೂರು: ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಜಾನುವಾರುಗಳಿಗೆ ಗಂಟು ರೋಗ ಕಾಣಿಸಿಕೊಂಡಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ನಡುವೆ ಕೇಂದ್ರ ಪರಿಸರ ಖಾತೆ ಮಾಜಿ ಸಚಿವೆ, ಸಂಸದೆ ಮೇನಕಾ ಗಾಂಧಿ ಅವರು, ಗಂಟು ರೋಗವಿರುವ ಹಸುವಿನ ಹಾಲು ಕುಡಿಯುವುದು ಅಪಾಯಕಾರಿ ಎಂದು ಹೇಳಿದ್ದಾರೆನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಪ್ರತಿನಿತ್ಯ ಹಾಲು ಖರೀದಿಸುವ ಕೋಟ್ಯಂತರ ಮಂದಿ ಆತಂಕಕ್ಕೊಳಗಾಗಿದ್ದಾರೆ. ಆದರೆ ಈ ಅತಂಕ ಅನಗತ್ಯವಾಗಿದ್ದು, ಹಾಲನ್ನು ಬಿಸಿ ಮಾಡಿ ಕುಡಿಯುವುದರಿಂದ ಯಾವುದೇ ರೋಗಬಾಧೆಯ ಅಪಾಯ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಹಾಲು ಒಯ್ಯುತ್ತಿರುವ ಲಾರಿಯನ್ನು ನಿಲ್ಲಿಸಿ ಕ್ಯಾನ್ ಗಳಲ್ಲಿರುವ ಹಾಲನ್ನು ರಸ್ತೆಗೆ ಚೆಲ್ಲುವ, ಹಾಲಿನ ಪ್ಯಾಕೆಟ್ ಗಳನ್ನು ಚರಂಡಿಗೆ ಎಸೆಯುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಜತೆ ದೇಹವಿಡೀ ಹುಣ್ಣಾಗಿರುವ ಮನುಷ್ಯನ ಫೋಟೋವೊಂದನ್ನು ಶೇರ್ ಮಾಡಲಾಗಿದ್ದು, ಇದರ ಜತೆಗೆ ಮನೇಕಾ ಗಾಂಧಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು ಗಾಬರಿಗೊಳಗಾಗಿದ್ದು, ಇದು ಹೌದೇ, ಎಂದು ಎಲ್ಲೆಡೆ ಪ್ರಶ್ನಿಸುತ್ತಿದ್ದಾರೆ. ಜೀವನದ ದೈನಂದಿನ ಭಾಗವಾಗಿರುವ ಹಾಲಿನ ಬಗ್ಗೆ ಹರಡಿರುವ ಈ ವದಂತಿ ಎಲ್ಲರಲ್ಲೂ ಆತಂಕ ತರಿಸಿದ್ದು ನಾಗರಿಕರು ಮತ್ತು ಹೈನುಗಾರರಿಬ್ಬರನ್ನೂ ಕಂಗೆಡುವಂತೆ ಮಾಡಿದೆ.
ಈ ಪ್ರಶ್ನೆಯ ಬೆನ್ನು ಹತ್ತಿದ ಆಂದೋಲನ ದಿನ ಪತ್ರಿಕೆ, ರೈತರು, ವೈದ್ಯರು ಮತ್ತು ಅಧಿಕಾರಿಗಳ ಅಭಿಪ್ರಾಯ ಪಡೆದು ಸತ್ಯಾಸತ್ಯತೆಯನ್ನು ತಿಳಿಯುವ ಪ್ರಯತ್ನ ನಡೆಸಿದ್ದು, ಈ ವಿಡಿಯೋ ಸತ್ಯಕ್ಕೆ ದೂರ ಎಂಬ ಸ್ಪಷ್ಟ ಅಭಿಪ್ರಾಯವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.
ಗಂಟು ರೋಗ ಹೊಸ ರೋಗವೇನೂ ಅಲ್ಲ. ಹಿಂದಿನಿಂದಲೂ ಇರುವ ರೋಗ. ಈ ರೋಗ ಜಾನುವಾರುಗಳಿಂದ ಜಾನುವಾರುಗಳಿಗೆ ಹರಡುವ ಕಾರಣ ರೈತರು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಆದರೆ ಜಾನುವಾರುಗಳಿಂದ ಮನುಷ್ಯನಿಗೆ ಈ ರೋಗ ಹರಡುವುದಿಲ್ಲ ಎನ್ನುವುದು ಈಗಾಗಲೇ ದೃಢಪಟ್ಟಿದೆ ಎಂದು ಕೆ.ಆರ್. ನಗರ ತಾಲೂಕು ಭೇರ್ಯದ ಪಶುವೈದ್ಯ ಡಾ. ಹರೀಶ್ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಗಂಟು ರೋಗ ಬಾಧಿತ ಹಸುವಿನ ಹಾಲನ್ನು ಬಳಸುವ ರೈತರೂ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಗಂಟು ರೋಗ ಇಡೀ ದೇಶಕ್ಕೆ ಬಂದಿರುವ ದೊಡ್ಡ ಕಾಯಿಲೆಯಾಗಿದೆ. ಈ ಸಂದರ್ಭದಲ್ಲಿ ಹಾಲು ಕುಡಿಯುವುದು, ಮೊಸರು ಬಳಸುವುದು, ಹಾಲಿನಿಂದ ತಯಾರಿಸಿದ ಸಿಹಿತಿಂಡಿಗಳನ್ನು ತಿನ್ನುವುದರಿಂದ ದೂರವಿರಬೇಕು ಎಂದು ಮನೇಕಾ ಗಾಂಧಿ ನೀಡಿದ ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಇದು ಸತ್ಯಕ್ಕೆ ದೂರವಾಗಿದ್ದು ಹಾಲನ್ನು ಕುದಿಸಿ ಬಳಸುವುದರಿಂದ ಎಲ್ಲ ವೈರಾಣುಗಳು ಸಾಯುತ್ತವೆ. ಭಾರತೀಯರೆಲ್ಲರೂ ಹಾಲನ್ನು ಕುದಿಸಿ ಬಳಸುವ ಅಭ್ಯಾಸವುಳ್ಳವರು. ಪ್ಯಾಕೆಟ್ ಹಾಲಂತೂ ಕುದಿಸಿದ ನಂತರ ಪ್ಯಾಶ್ಚರೀಕರಣ ಮಾಡುವುರಿಂದ ಯಾವುದೇ ಪಶುಜನ್ಯ ರೋಗ ಹರಡುವ ಸಾಧ್ಯತೆ ಇಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಜಾನುವಾರುಗಳಿಗೆ ಬರುವ ಚರ್ಮ ಗಂಟು ರೋಗ ಯಾವುದೇ ಕಾರಣಕ್ಕೂ ಮನುಷ್ಯರಿಗೆ ಹರಡುವ ರೋಗ ಅಲ್ಲ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದು ಜಾನುವಾರುಗಳಿಂದ ಜಾನುವಾರುಗಳಿಂದ ಹರಡುವ ಕಾಯಿಲೆ. ರೋಗ ಪೀಡಿತ ಹಸು ಅಥವಾ ಎಮ್ಮೆಯ ಹಾಲು ಕುಡಿದರೂ ಮನುಷ್ಯನಿಗೆ ಈ ಕಾಯಿಲೆ ಬರುವುದಿಲ್ಲ. ಹಾಲನ್ನು ಉಪಯೋಗಿಸುವ ಮೊದಲು ಚೆನ್ನಾಗಿ ಕುದಿಸಿ ಬಳಸುವುದು ಉತ್ತಮ. ಹಾಲು ಕುಡಿಯುವುದರಿಂದ ಈ ರೋಗ ಬರುತ್ತದೆ ಎನ್ನುವುದು ಸುಳ್ಳು. ಸಾಮಾಜಿಕ ಜಾಲ ತಾಣಗಳಲ್ಲಿ ಈ ಸಂಬಂಧ ಬರುತ್ತಿರುವ ಸಂದೇಶಗಳನ್ನು ಕಂಡು ಜನರು ಗಾಬರಿ ಬೀಳುವ ಅವಶ್ಯಕತೆ ಇಲ್ಲ-. ರೋಗ ಕಾಣಿಸಿಕೊಂಡ ಸುತ್ತಮುತ್ತ ನಿಯಂತ್ರಣಕ್ಕೆ ಆರಂಭಿಕ ಹಂತದ ಕ್ರಮ ಜರುಗಿಸಿದ್ದೇವೆ. ಅ.15 ರಿಂದ ಮೈಸೂರು ಭಾಗದಲ್ಲಿ ಲಸಿಕೆ ಹಾಕುವ ಕೆಲಸ ಆರಂಭವಾಗಲಿದೆ.
– ಡಾ.ಷಡಕ್ಷರಮೂರ್ತಿ, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುಸಂಗೋಪನಾ ಇಲಾಖೆ, ಮೈಸೂರು
ಉತ್ತರ ಕರ್ನಾಟಕದ ಬಾಗಲ ಕೋಟೆ, ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ರಾಸುಗಳಿಗೆ ಚರ್ಮಗಂಟು ರೋಗ ಪತ್ತೆಯಾಗಿದ್ದು, ಇದೀಗ ಮೈಸೂರು ಭಾಗಗಳಲ್ಲೂ ಕಂಡುಬಂದಿದೆ. ಆದರೆ ಕೆ.ಆರ್.ನಗರ ತಾಲ್ಲೂಕಿನಲ್ಲಿ ಒಂದು ಜಾನುವಾರು ಸಾವನ್ನಪ್ಪಿದ್ದು ಬಿಟ್ಟರೆ ರೋಗಪೀಡಿತ 60ಕ್ಕೂ ಹೆಚ್ಚು ರಾಸುಗಳು ಚೇತರಿಸಿಕೊಂಡಿವೆ ಎಂದು ಮೈಸೂರು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಡಾ.ಷಡಕ್ಷರಮೂರ್ತಿ ತಿಳಿಸಿದ್ದಾರೆ.
ಜಾನುವಾರು ಸಂತೆ ನಿಷೇಧ
ರೋಗ ಹರಡುತ್ತಿರುವುದನ್ನು ನಿಯಂತ್ರಿಸಲು ಸರಕಾರ ಈಗಾಗಲೇ ರಾಜ್ಯದಾದ್ಯಂತ ಜಾನುವಾರುಗಳ ಜಾತ್ರೆ, ಸಂತೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ರೋಗಕ್ಕೆ ಏನು ಕಾರಣ ?
ಎಲ್‌ಎಸ್‌ಡಿ ಎಂಬ ವೈರಾಣುವಿನಿಂದ ಹಸುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದೆ. ಇದು ಪ್ರಾಣಿಗಳ ದುಗ್ದರಸ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದುಗ್ದರಸ ಗ್ರಂಥಿ ಹಿಗ್ಗಿ, ಚರ್ಮದ ಮೇಲೆ ಸಣ್ಣ ಸಣ್ಣ ಗಂಟುಗಳು ಕಾಣಿಸಿಕೊಳ್ಳುತ್ತವೆ. ಮುಂದೆ ಈ ಗಂಟುಗಳು ಹುಣ್ಣಾಗಿ ಬದಲಾಗುವ ಸಾಧ್ಯತೆ ಇದ್ದು, ಸಾವಿಗೂ ಕಾರಣವಾಗಬಹುದು. ರಾಸುಗಳಲ್ಲಿ ತೀವ್ರ ಜ್ವರಕ್ಕೆ ತುತ್ತಾಗುವುದು, ಕಡಿಮೆ ಹಾಲು ಉತ್ಪತ್ತಿ, ಕಣ್ಣು-ಮೂಗಲ್ಲಿ ನೀರು ಹಾಗೂ ಬಾಯಲ್ಲಿ ಜೊಲ್ಲು ಸುರಿಯುವುದು, ಮೇವು ತಿನ್ನದೇ ಇರುವುದು, ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು, ನಿತ್ರಾಣ ರೋಗ ಲಕ್ಷಣಗಳಾಗಿವೆ.
ರೈತರು ಏನೇನು ಕ್ರಮ ಅನುಸರಿಸಬೇಕು?
* ರೈತರು ರೋಗ ಕಾಣಿಸಿಕೊಂಡು ರಾಸುವನ್ನು ಪ್ರತ್ಯೇಕವಾಗಿ ಆರೈಕೆ ಮಾಡಬೇಕು.
* ಶುಚಿತ್ವ ಕಾಪಾಡಿಕೊಂಡು ಸೊಳ್ಳೆ, ನೊಣಗಳಿಂದ ರಕ್ಷಿಸಬೇಕು.
* ಬೇವಿನ ಸೊಪ್ಪಿನ ಎಲೆಯಿಂದ ಹೊಗೆ ಕೊಡುವುದನ್ನು ಮಾಡುವುದು.
* ಗಂಟು ಬಂದಿರುವ ಕಡೆಗಳಿಗೆ ಮತ್ತು ಮೈಗೆ ಬೇವಿನ ಎಣ್ಣೆಯನ್ನು ನಿರಂತರವಾಗಿ ಹಚ್ಚಬೇಕು.
* ಕೊಟ್ಟಿಗೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು.
* ರಾಸುಗಳಲ್ಲಿ ಗಂಟು ಕಾಣಿಸಿಕೊಂಡ ತಕ್ಷಣವೇ ಹತ್ತಿರದ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…