ಜಿಲ್ಲೆಗಳು

ಟಿಪ್ಪು ನಿಜ ಕನಸುಗಳು’ ಪುಸ್ತಕ ಮಾರಾಟ, ಹಂಚಿಕೆ ಮಾಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ ವಿಸ್ತರಿಸಿದ ನ್ಯಾಯಾಲಯ

ಬೆಂಗಳೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ರಚಿಸಿರುವ “ಟಿಪ್ಪು ನಿಜ ಕನಸುಗಳು” ಪುಸ್ತಕವನ್ನು ಆನ್‌ಲೈನ್‌ನಲ್ಲಿ ಸೇರಿದಂತೆ ಎಲ್ಲಿಯೂ ಮಾರಾಟ ಮತ್ತು ಹಂಚಿಕೆ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಈಚೆಗೆ ಮಾಡಿದ್ದ ತಾತ್ಕಾಲಿಕ ಪ್ರತಿಬಂಧಕಾದೇಶವನ್ನು ಸೋಮವಾರದವರೆಗೆ ವಿಸ್ತರಿಸಿದೆ.

ಬೆಂಗಳೂರು ನಿವಾಸಿಯಾದ ಜಿಲ್ಲಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ರಫಿವುಲ್ಲಾ ಬಿ ಎಸ್‌ ಎಂಬವರು ಸಲ್ಲಿಸಿದ್ದ ಅಸಲು ದಾವೆಯನ್ನು ಶನಿವಾರ ವಿಚಾರಣೆ ನಡೆಸಿದ 14ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಜೆ ಆರ್‌ ಮೆಂಡೋನ್ಸಾ ಅವರು ಮಧ್ಯಂತರ ಆದೇಶ ವಿಸ್ತರಿಸಿದರು.

“ಮುಂದಿನ ವಿಚಾರಣೆಯ ದಿನಾಂಕದಂದು ತಪ್ಪದೇ ವಾದ ಮಂಡನೆ ಮಾಡುವಂತೆ ನಿರ್ದೇಶಿಸಿ, ಮಧ್ಯಂತರ ಆದೇಶ ವಿಸ್ತರಣೆ ಮಾಡುವುದರಿಂದ ಪ್ರತಿವಾದಿಗಳಿಗೆ ಯಾವುದೇ ತೆರನಾದ ಪೂರ್ವಾಗ್ರಹ ಉಂಟಾಗುವುದಿಲ್ಲ ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿದೆ. ಹೀಗಾಗಿ, ಫಿರ್ಯಾದಿ ಸಲ್ಲಿಸಿರುವ ಮೂರನೇ ಮಧ್ಯಪ್ರವೇಶ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. 21.11.2022ರಂದು ಮಾಡಲಾಗಿರುವ ಮಧ್ಯಂತರ ಆದೇಶವು ಮುಂದಿನ ವಿಚಾರಣೆಯವರೆಗೆ ಅಸ್ತಿತ್ವದಲ್ಲಿರಲಿದೆ. ಫಿರ್ಯಾದಿಯು ಯಾವುದೇ ಕಾರಣಕ್ಕೂ ತಪ್ಪದೇ ಮುಂದಿನ ವಿಚಾರಣೆಯಲ್ಲಿ ಒಂದನೇ ಮಧ್ಯಪ್ರವೇಶ ಅರ್ಜಿಗೆ ಸಂಬಂಧಿಸಿದಂತೆ ವಾದಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಫಿರ್ಯಾದಿಯ ವಾದ ಆಲಿಸಿದ ಬಳಿಕ ಪ್ರತಿವಾದಿಗಳ ಪರ ವಕೀಲರ ಆಕ್ಷೇಪಣೆಯನ್ನು ನಿರ್ಧರಿಸಲಾಗುವುದು. ಇಲ್ಲಿಯವರೆಗೆ ಫಿರ್ಯಾದಿಗೆ ಮಧ್ಯಂತರ ಆದೇಶದ ಲಾಭ ದೊರೆತಿದೆ. ನ್ಯಾಯಾಲಯದ ಮುಂದಿನ ಕೆಲಸದ ದಿನದಂದು ವಾದ ಮಂಡಿಸುವುದಾಗಿ ಫಿರ್ಯಾದಿ ಹೇಳಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಪ್ರತಿವಾದಿಗಳ ಪರವಾಗಿ ವಕಾಲತ್ತು ಹಾಕಲಾಗಿದ್ದು, ಮೊದಲ ಮಧ್ಯಪ್ರವೇಶ ಅರ್ಜಿಗೆ ಆಕ್ಷೇಪಣೆಯನ್ನೂ ಸಲ್ಲಿಸಲಾಗಿದೆ. ಅಲ್ಲದೇ, ಫಿರ್ಯಾದಿಯು ನ್ಯಾಯಾಲಯದ ಆದೇಶ ಪಾಲಿಸಲು ವಿಫಲರಾಗಿದ್ದಾರೆ ಎಂದು ಪ್ರತಿವಾದಿಗಳು ಪೀಠಕ್ಕೆ ಮೆಮೊ ಸಲ್ಲಿಸಿದರು.

ಫಿರ್ಯಾದಿ ಪರ ವಕೀಲರು ನಾಗರಿಕ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಸೆಕ್ಷನ್‌ 151ರ ಅಡಿ ಮಧ್ಯಂತರ ಆದೇಶ ವಿಸ್ತರಿಸುವಂತೆ ಕೋರಿ ಮೂರನೇ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿವಾದಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಫಿರ್ಯಾದಿ ಹೂಡಿರುವ ದಾವೆಯೇ ಮಾನ್ಯವಾಗುವುದಿಲ್ಲ. ಮುಖ್ಯ ದಾವೆ ಮತ್ತು ಮಧ್ಯಂತರ ಅರ್ಜಿಯಲ್ಲಿನ ಕೋರಿಕೆಗಳು ನಿರರ್ಥಕವಾಗಿವೆ. ಅಲ್ಲದೇ, ನಿರ್ದಿಷ್ಟ ಕಾಲಾವಧಿಯಲ್ಲಿ ನ್ಯಾಯಾಲಯದ ನಿರ್ದೇಶನ ಪಾಲಿಸದಿರುವುದರಿಂದ ಮಧ್ಯಂತರ ಆದೇಶವು ಅಸ್ತಿತ್ವ ಕಳೆದುಕೊಂಡಿದೆ” ಎಂದು ಪ್ರತಿವಾದಿಗಳ ಪರ ವಕೀಲರು ವಾದಿಸಿದರು.

“ಟಿಪ್ಪು ನಿಜ ಕನಸುಗಳು” ಕೃತಿ ರಚಿಸಿರುವ ಅಡ್ಡಂಡ ಕಾರ್ಯಪ್ಪ, ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ, ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯವನ್ನು ಪುಸ್ತಕ ಹಂಚಿಕೆ ಮತ್ತು ಮಾರಾಟ ಮಾಡದಂತೆ ನ್ಯಾಯಾಲಯವು ಕಳೆದ ವಿಚಾರಣೆಯಲ್ಲಿ ನಿರ್ಬಂಧಿಸಿತ್ತು.

ಮುಂದುವರಿದು, “ನಾಟಕದಲ್ಲಿ ವ್ಯಕ್ತಪಡಿಸಿರುವ ವಿಚಾರಗಳು ತಪ್ಪಾಗಿದ್ದು, ಟಿಪ್ಪು ಸುಲ್ತಾನ್ ಬಗ್ಗೆ ತಪ್ಪು ಮಾಹಿತಿಯನ್ನು ಪುಸ್ತಕ ಒಳಗೊಂಡಿದೆ‌. ಇದನ್ನು ಹಂಚಿಕೆ ಮಾಡಿದರೆ, ಫಿರ್ಯಾದಿಗೆ ಸರಿಪಡಿಸಲಾರದ ನಷ್ಟ ಉಂಟು ಮಾಡಲಿದೆ. ಅಲ್ಲದೇ, ಪುಸ್ತಕವು ಕೋಮು ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದ್ದು, ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಅಪಾಯವಿದೆ. ಪ್ರತಿವಾದಿಗಳು ನ್ಯಾಯಾಲಯದ ಮುಂದೆ ಹಾಜರಾಗಲು ಬಾಕಿ ಇರುವಾಗ ಒಂದೊಮ್ಮೆ ಪುಸ್ತಕ ಹಂಚಿಕೆ ಮಾಡಿದರೆ ಅರ್ಜಿಯ ಉದ್ದೇಶ ಸೋಲಲಿದೆ. ಸಾಮಾನ್ಯವಾಗಿ ವಿವಾದ ಸೃಷ್ಟಿಸಿದ ಪುಸ್ತಕಗಳು ಬಹುಬೇಗ ಮಾರಾಟವಾಗುತ್ತವೆ. ಹೀಗಾಗಿ, ಈ ಹಂತದಲ್ಲಿ ಪ್ರಯೋಜನದ ಸಮತೋಲನವು ಫಿರ್ಯಾದಿಗಳ ಪರವಾಗಿದೆ” ಎಂದು ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿತ್ತು.

ವಾದ-ಪ್ರತಿವಾದ ಆಲಿಸಿದ ಪೀಠವು ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಡಿಸೆಂಬರ್‌ 5ಕ್ಕೆ ಮುಂದೂಡಿತು.

andolana

Recent Posts

ಓದುಗರ ಪತ್ರ: ಬಿಎಂಟಿಸಿ ಜನಹಿತ ಕಾಯಲಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ…

19 mins ago

ಓದುಗರ ಪತ್ರ: ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ…

22 mins ago

‘ಶಕ್ತಿ’ ಸ್ಕೀಮ್‌ನಿಂದ ಸಾರಿಗೆ ನಿಗಮಗಳಿಗೆ ನಿಶ್ಶಕ್ತಿ!

ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ…

48 mins ago

ಇಂದು ಪೋಲೀಯೋ ಲಸಿಕಾ ಅಭಿಯಾನ

ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…

5 hours ago

ಮರುಳಯ್ಯನ ಕೊಪ್ಪಲು ಕೊಂತನಾಯಕರಿಗೆ ಬೇಡರ ಕಣ್ಣಪ್ಪನೇ ದೇವರು

ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…

6 hours ago

ಮೈಸೂರಲ್ಲಿ ಎಸ್.ಎಲ್. ಭೈರಪ್ಪನವರ ಸ್ಮಾರಕ ಹೇಗಿರಬೇಕು?

ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…

6 hours ago