ಕಳವು ಪ್ರಕರಣಗಳ ಪತ್ತೆಗೆ ತಂಡ ರಚನೆ
ಚಾಮರಾಜನಗರ: ಕೊಳ್ಳೇಗಾಲ ಸೇರಿದಂತೆ ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗಿರುವ ಕಳವು ಪ್ರಕರಣಗಳನ್ನು ಭೇದಿಸಲು ತಂಡಗಳನ್ನು ರಚಿಸಲಾಗಿದ್ದು ಸಾರ್ವಜನಿಕರು ಯಾವಾಗಲೂ ಇಲಾಖೆಗೆ ಸಹಕಾರ ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ತಿಳಿಸಿದರು.
ಇಲ್ಲಿನ ತಮ್ಮ ಕಾರ್ಯಾಲಯದಲ್ಲೂ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾ.ನಗರದ ವಿವಿಧೆಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ದೂರುಗಳಿವೆ. ಖುದ್ದು ಪರಿಶೀಲಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಚಾಮರಾಜನಗರ ತಾಲ್ಲೂಕು ಬಿಸಲವಾಡಿ ಕ್ವಾರಿ ದುರಂತದಲ್ಲಿ ಇತ್ತೀಚೆಗೆ ಮೂವರು ಕೂಲಿಕಾರ್ಮಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಇನ್ನೂ ಪ್ರಮುಖ ಆರೋಪಿಗಳ ಬಂಧನ ಆಗದಿರುವ ಕುರಿತು ಕೇಳಲಾದ ಪ್ರಶ್ನೆಗೆ ಎಸ್ಪಿ ಅವರು ಸ್ಪಷ್ಟವಾಗಿ ಉತ್ತರಿಸಲಿಲ್ಲ. 20 ದಿನಗಳ ಹಿಂದೆಯಷ್ಟೇ ತಾವು ಅಧಿಕಾರ ವಹಿಸಿಕೊಂಡಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು. ಆರೋಪಿಗಳ ಬಂಧನ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಏನಾದರೂ ಇದೆಯಾ ಎಂಬುದರ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.
ಅಪಘಾತ ಸಂಭವಿಸಲು ಕೆಲವೊಮ್ಮೆ ಹದಗೆಟ್ಟ ರಸ್ತೆಗಳೂ ಕಾರಣವಾಗುವುದುಂಟು. ಇಂತಹ ಹಾಳಾದ ರಸ್ತೆಗಳನ್ನು ಗುರುತಿಸಿ ದುರಸ್ತಿಪಡಿಸಲು ಸಂಬಂಧಿಸಿದ ಇಲಾಖೆಯವರಿಗೆ ತಿಳಿಸಲಾಗುವುದು. ಇಲಾಖೆಯಲ್ಲಿ ಕೆಲವೊಂದು ಬದಲಾವಣೆ, ಸುಧಾರಣೆಗಳನ್ನು ತರಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ನುಡಿದರು.
ಒಂದೂವರೆ ವರ್ಷದಿಂದ ನಡೆಯದ ಪ್ರಾಪರ್ಟಿ ರಿಟರ್ನ್ ಪರೇಡ್: ಕಳವು ಮಾಲುಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸುವ ಪ್ರಾಪರ್ಟಿ ರಿಟರ್ನ್ ಪರೇಡ್‌ಅನ್ನು 3 ತಿಂಗಳಿಗೊಮ್ಮೆ ನಡೆಸಬೇಕು ಎಂದಿದ್ದರೂ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ನಡೆಸಿಲ್ಲ ಎಂದು ಎಸ್ಪಿ ಪದ್ಮಿನಿ ಸಾಹು ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಮುಂದಿನ ದಿನಗಳಲ್ಲಿ ನಿಯಮಾನುಸಾರ ನಡೆಸಲಾಗುವುದು ಎಂದು ಹೇಳಿದರು.
ಎಎಸ್‌ಐ, ಮುಖ್ಯಪೇದೆ ಹಾಗೂ ಪೇದೆಗಳ ಸಹಿತ ಹಲವರನ್ನು ಸೇವಾ ಅವಧಿ ಪೂರೈಸಿರುವ ಕಾರಣಕ್ಕೆ ಕೆಲವೊಂದು ಠಾಣೆಗಳಿಂದ ವರ್ಗಾವಣೆ ಮಾಡಲಾಗಿದ್ದರೂ ಅವರು ಅಲ್ಲಿಂದ ಬಿಡುಗಡೆಯಾಗದೇ ಮುಂದುವರಿಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್ ಹಾಜರಿದ್ದರು.
ತಲೆ ಎತ್ತಿದ ಸುಸಜ್ಜಿತ ಪೊಲೀಸ್ ಭವನ
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಬಳಿಯ ಆರಕ್ಷಕ ವಸತಿ ಗೃಹಗಳ ಹತ್ತಿರವೇ ಸಭೆ, ಸಮಾರಂಭ, ಮದುವೆ ಇನ್ನಿತರ ಕಾರ್ಯಗಳಿಗೆ ಬಳಕೆಯಾಗುವ ಸುಸಜ್ಜಿತ ಪೊಲೀಸ್ ಭವನ ತಲೆಎತ್ತಿದ್ದು, ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣ ಬಹುತೇಕ ಮುಕ್ತಾಯ ಹಂತದಲ್ಲಿದೆ ಎಂದು ಎಸ್ಪಿ ಪದ್ಮಿನಿ ಸಾಹು ತಿಳಿಸಿದರು. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ವಸತಿ ನಿಗಮವು 2018ರಲ್ಲೇ ಇದರ ಕಾಮಗಾರಿ ಕೈಗೆತ್ತಿಕೊಂಡಿದ್ದು ಇನ್ನೂ ಕೆಲವೊಂದು ಕೆಲಸ ಬಾಕಿ ಇರುವುದಾಗಿ ಹೇಳಿದರು.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…