ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಭೆ ನಡೆಸಿದರು.
ಮೈಸೂರು : ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ೧.೪೫ ಸಾವಿರ ಮತದಾರರ ಹೆಸರು ಕೈಬಿಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಮುಖಂಡರ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಮಾಡಿತು.
ಈ ಸಂಬಂಧ ಗುರುವಾರ, ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮತದಾರರ ಪಟ್ಟಿ ಪರಿಷ್ಕರಣೆಯ ವಿಧಾನದ ಬಗ್ಗೆ ಮಾಹಿತಿ ನೀಡಿ, ಕಾಂಗ್ರೆಸ್ ದೂರಿನ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು.
ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಮಾತನಾಡಿ, ಈ ಹಿಂದೆ ಎಂದೂ ಆಗದಷ್ಟು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ನಮ್ಮ ಬಳಿ ಇರುವ ಮತದಾರರ ಪಟ್ಟಿಯಲ್ಲಿ ಲೆಕ್ಕ ಹಾಕಿದಾಗ ೧.೪೫ ಸಾವಿರ ಹೆಸರುಗಳು ಕೈಬಿಟ್ಟಿರುವ ಬಗ್ಗೆ ಮಾಹಿತಿ ದೆ. ಮತದಾರರ ಹೆಸರನ್ನು ಭಾರೀ ಪ್ರಮಾಣದಲ್ಲಿ ಕೈಬಿಟ್ಟಿರುವುದು ಆಘಾತ ಉಂಟು ಮಾಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗ ಮತ್ತು ಎಸ್‌ಒಪಿ ನೀತಿ-ನಿಯಮಗಳಿಗೆ ಅನುಗುಣವಾಗಿ ನಡೆದಿಲ್ಲ ಎಂದು ದೂರಿದರು.
ಮತದಾರರ ಹೆಸರು ಕೈಬಿಡುವ ಮುನ್ನ ಸಂಬಂಧಿಸಿದ ಮತದಾರನಿಗೆ ಅಂಚೆ ಮೂಲಕ ನೊಟೀಸ್ ನೀಡಬೇಕು. ಭೌತಿಕವಾಗಿ ಪರಿಶೀಲಿಸಬೇಕು. ಆದರೆ, ಜಿಲ್ಲೆಯಲ್ಲಿ ಈ ಕೆಲಸವಾಗಿಲ್ಲ ಎಂದರು.
ಇಷ್ಟು ಪ್ರಮಾಣದ ಮತದಾರರ ಹೆಸರನ್ನು ತೆಗೆಯುವಾಗ ರಾಜಕೀಯ ಪಕ್ಷಗಳ ಗಮನಕ್ಕೆ ತರಬೇಕು. ಆದರೆ, ಹೆಸರು ಕೈಬಿಟ್ಟ ನಂತರ ಸಭೆ ಕರೆದಿದ್ದೀರಾ. ಈ ಮತದಾರರ ಪಟ್ಟಿ ಪರಿಷ್ಕರಣೆ ಸರ್ಕಾರಿ ಅಧಿಕಾರಿಗಳಿಂದ ಆಗಿದೆಯೋ, ಖಾಸಗಿ ಏಜೆನ್ಸಿಯಿಂದ ಆಗಿದೆಯೋ ಎಂಬುದನ್ನು ಖಾತರಿ ಮಾಡಬೇಕು. ಇದಕ್ಕಾಗಿ ವಿಶೇಷ ತಂಡ ರಚಿಸಿ, ಮರು ಪರಿಶೀಲನೆ ಮಾಡುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ನಮ್ಮ ಬಳಿ ಇರುವ ಮತದಾರರ ಪಟ್ಟಿಯಲ್ಲಿ ೧.೪೫ ಸಾವಿರ ಮತದಾರರ ಹೆಸರು ಕೈಬಿಟ್ಟಿರುವ ಲೆಕ್ಕ ಸಿಗುತ್ತಿದೆ. ನೀವು ೧.೨೦ ಸಾವಿರ ಮತದಾರರನ್ನು ಕೈಬಿಡಲಾಗಿದೆ ಎನ್ನುತ್ತೀರಾ ಇದು ಹೇಗೆ ಎಂದು ಪ್ರಶ್ನಿಸಿದರು.
ಗ್ರಾಮೀಣ ಭಾಗದಲ್ಲಿ ಚುನಾವಣೆ ಮತ್ತು ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸವಾಗುತ್ತಿಲ್ಲ. ಈ ಬಗ್ಗೆ ಹೆಚ್ಚು ಗಮನವಹಿಸಿ ಜಾಗೃತಿ ಮೂಡಿಸಬೇಕು ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಅವರು ಮಾತನಾಡಿ, ಕೆಲವು ಕ್ಷೇತ್ರಗಳಲ್ಲಿ ಸೇರ್ಪಡೆ ಕೂಡ ಅಧಿಕವಾಗಿದ್ದು, ಈ ಬಗ್ಗೆಯೂ ಅನುಮಾನವಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆ: ಡೀಸಿ
ಕಾಂಗ್ರೆಸ್ ನಿಯೋಗದ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಮ್ಮ ಅಧಿಕಾರಿಗಳೇ ಮಾಡುತ್ತಿದ್ದಾರೆ. ಯಾವ ಖಾಸಗಿ ಏಜೆನ್ಸಿಯೂ ಮಾಡುತ್ತಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆ, ನಿಮ್ಮ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಎಲ್ಲ ಬೂತ್ ಏಜೆಂಟ್‌ಗಳೊಂದಿಗೆ ಬೂತ್ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಲು ಸೂಚಿಸುತ್ತೇನೆ. ಬೂತ್‌ಏಜೆಂಟ್‌ಗಳೊಂದಿಗೆ ಅಧಿಕಾರಿಗಳು ಸರಿಯಾಗಿ ಸಹಕರಿಸುತ್ತಿಲ್ಲವೆಂದರೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು. ಹೆಸರು ಕೈಬಿಟ್ಟಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು. ಹೆಸರು ಸೇರ್ಪಡೆಗೂ ಅವಕಾಶವಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಕಡ್ಡಾಯವಿಲ್ಲ ಎಂದರು.
ಇವಿಎಂ ಪರಿಶೀಲನೆಗೆ ಅವಕಾಶ: ಮೈಸೂರು ಜಿಲ್ಲೆಗೆ ಎಂ೩ ಎಂಬ ಕಂಪನಿಯಿಂದ ಇವಿಎಂ ಬಂದಿದೆ. ಹೀಗೆ ಬಂದಿರುವ ೨೪ನೇ ಜಿಲ್ಲೆ ಮೈಸೂರು. ಈ ಬಗ್ಗೆ ನೋಟಿಫಿಕೇಷನ್ ಕೂಡ ಕೊಟ್ಟಿದ್ದೆವು. ಅವುಗಳನ್ನು ಇರಿಸಿರುವ ಬಗ್ಗೆ ವಿಡಿಯೋ ರೆಕಾರ್ಡ್ ಆಗಿದೆ. ಯಾವುದೇ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು ಕೂಡ ಯಾವುದೇ ಸಮಯದಲ್ಲಿ ಇವಿಎಂ ಪರಿಶೀಲನೆ ಮಾಡಲು ಅವಕಾಶವಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮುಖಂಡರಾದ ಭಾಸ್ಕರ್ ಎಲ್.ಗೌಡ, ಹೆಡತಲೆ ಮಂಜುನಾಥ್, ಪ್ರಸಾದ್, ಗೋಪಿನಾಥ್, ಮಹೇಶ್, ಶೌಕತ್ ಪಾಷ, ಸುರೇಶ್,ಶಿವಪ್ರಸಾದ್, ಸುರೇಶ್ ಪಾಳ್ಯ, ತಿಮ್ಮಯ್ಯ ಇತರರು ಹಾಜರಿದ್ದರು.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…