ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜೀಪುರ ಗ್ರಾಮದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಪಡಿಸುವಂತೆ ಹಾಗೂ ರಾಮಪುರ ಗ್ರಾಮಕ್ಕೆ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ರಾಮಪುರದಿಂದ ಅಂಬಿಕಾಪುರ ಗ್ರಾಮದವರೆಗೆ ಪಾದಯಾತ್ರೆ ಮಾಡುವ ಮೂಲಕ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯವರು ಪ್ರತಿಭಟನೆ ನಡೆಸಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಾಪುರ ಹೋಬಳಿಯ ಅಜ್ಜೀಪುರ ಗ್ರಾಮದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ದುರಸ್ತಿಗೊಂಡಿರುವುದರಿಂದ ದ್ವಿಚಕ್ರ ವಾಹನವು ಸಂಚರಿಸದಷ್ಟು ದೊಡ್ಡ ದೊಡ್ಡ ಗುಂಡಿಗಳಾಗಿದೆ. ಈ ರಸ್ತೆಯಲ್ಲಿ ಹಲವಾರು ಬಾರಿ ಲಾರಿ ಆಟೋ ದ್ವಿಚಕ್ರ ವಾಹನಗಳು ಅಪಘಾತಗೊಂಡು ಪ್ರಾಣವನ್ನೇ ಕಳೆದುಕೊಂಡಿದ್ದರೆ, ಕೆಲವರು ಕೈಕಾಲು ಮುರಿದುಕೊಂಡಿದ್ದಾರೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆರೋಪಿಸಿ ವಿವಿಧ ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಯವರು ರಾಮಪುರ ಗ್ರಾಮಸ್ಥರು ರಾಮಪುರ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನಾಕಾರರು ರಾಮಪುರದಿಂದ ಅಂಬಿಕಾಪುರ ಗ್ರಾಮದವರೆಗೆ ಪಾದಯಾತ್ರೆ ಹೊರಟು ನಂತರ ಅಂಬಿಕಾಪುರದಿಂದ ರಾಮಪುರಕ್ಕೆ ವಾಪಸ್ ಪಾದಯಾತ್ರೆಯ ಮೂಲಕ ವಾಪಸ್ ಆಗಮಿಸುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಗುಂಡಿಗಳಲ್ಲಿ ತೆಂಗಿನ ಮರ ಹಾಗೂ ಇನ್ನಿತರ ಗಿಡಗಳನ್ನು ನೆಡುವ ಮೂಲಕ ಆಕ್ರೋಶ ಹೊರ ಹಾಕಿದರು. ನಂತರ ರಾಮಾಪುರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹಾಗೂ ಶಾಸಕರಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ನಂತರ ರಾಮಾಪುರದ ಯುವ ಮುಖಂಡ ಅಶ್ವತ್ ಮಾತನಾಡಿ ಅಜ್ಜೀಪುರ ಗ್ರಾಮದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ದುರಸ್ತಿಗೊಂಡಿರುವುದರಿಂದ ಜೀವನ ಅಸ್ತವ್ಯಸ್ತವಾಗಿದೆ. ದ್ವಿಚಕ್ರ ವಾಹನ ಸವಾರರು ಸಂಚರಿಸಿದಷ್ಟ ಮಟ್ಟಿಗೆ ರಸ್ತೆ ಹಳ್ಳ ಗುಂಡಿಗಳಿಂದ ಕೂಡಿದೆ. ರಸ್ತೆ ಅಭಿವೃದ್ಧಿಪಡಿಸುವಂತೆ ಹಲವಾರು ವರ್ಷಗಳಿಂದ ಶಾಸಕರು, ಸಂಸದರು, ಸಚಿವರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಈ ನಿಟ್ಟಿನಲ್ಲಿ ಹೋಬಳಿ ವ್ಯಾಪ್ತಿಯ ಎಲ್ಲಾ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಮುಂದಿನ ದಿನಗಳಲ್ಲಿ ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದಲ್ಲದೆ ರಾಮಪುರ ಹೋಬಳಿ ಕೇಂದ್ರದಲ್ಲಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಒಳಚರಂಡಿ ರಸ್ತೆ ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ಮಾಡದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದಲ್ಲದೆ ಕೆಲವು ಕಡೆ ಸ್ವಚ್ಛತೆ ಇಲ್ಲದೆ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದರಿಂದ ಗ್ರಾಮ ಪಂಚಾಯಿತಿ ವತಿಯಿಂದ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಲೋಕೋಪಯೋಗಿ ಎಇಇ ಚಿನ್ನಣ್ಣ ಆಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಪಡೆದು ನಂತರ ಮಾತನಾಡಿದ ಅವರು ಅಜ್ಜಿಪುರದಿಂದ ಅಂಬಿಕಾಪುರ ಗ್ರಾಮದವರೆಗೆ 10 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಗುರುವಾರದಿಂದಲೇ ಚಾಲನೆ ನೀಡಲಾಗಿದೆ. ಈ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು. ರಾಮಪುರದಿಂದ ಗರಿಕೆಕಂಡಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಪಡಿಸಲು ಅನುದಾನವಿದೆ, ಆದರೆ ಟೆಂಡರ್‌ನಲ್ಲಿ ಹೆಚ್ಚು ಜನ ಭಾಗವಹಿಸದೆ ಇರುವುದರಿಂದ ಸಮಸ್ಯೆಯಾಗಿದೆ. ಈಗಾಗಲೇ ಮೂರನೇ ಬಾರಿ ಟೆಂಡರ್ ಕರೆಯಲಾಗಿದ್ದು ಸೆಪ್ಟೆಂಬರ್ 4ರಂದು ಟೆಂಡರ್ ತೆರೆಯಲಾಗುವುದು ನಂತರ ಒಂದು ತಿಂಗಳೊಳಗೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಸೂಕ್ತ ಪೊಲೀಸ್ ಬಂದೋಬಸ್ತ್: ವಿವಿಧ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಂಡಿದ್ದ ಹಿನ್ನೆಲೆ ರಾಮಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಈಶ್ವರ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತಿಭಟನೆಯಲ್ಲಿ ಭಗತ್ ಯುವ ಸೇನೆ, ಕನ್ನಡ ರಕ್ಷಣಾ ವೇದಿಕೆ, ಲಾರಿ, ಆಟೋ ಚಾಲಕರು ಮಾಲೀಕರ ಸಂಘ ವಿವಿಧ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…