ಚಾಮರಾಜನಗರ

ಮಹದೇಶ್ವರ ಬೆಟ್ಟ| ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿದ ಮಹಾರಥೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು 

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಶ್ರೀ ಸಾಲೂರು ಬೃಹನ್ಮಠದ ಅಧ್ಯಕ್ಷರಾದ ಡಾ.ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ವಿವಿಧ ಬಗೆಯ ಪುಷ್ಪಗಳು, ತಳಿರು ತೋರಣ, ಬಣ್ಣದ ಬಟ್ಟೆಗಳಿಂದ ಸಿಂಗರಿಸಲಾಗಿತ್ತು.

ರಥೋತ್ಸವಕ್ಕೂ ಮುನ್ನ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಆರ್ಚಕ ವೃಂದದವರು ದೇಗುಲದ ಗರ್ಭಗುಡಿಯಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಆನೆ ಉತ್ಸವ ನೆರವೇರಿಸಲಾಯಿತು. ನಂತರ ಮಲೆ ಮಹದೇಶ್ವರ ಬೆಟ್ಟದ ಸಾಕಾನೆ ಉಮಾ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದ ಬಳಿಕ ತೇರಿನ ಬಳಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿ, ನಂತರ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ ಸೂರಪಾನಿ, ಛತ್ರಿ, ಚಾಮರ, ನಂದಿಧ್ವಜ ಹಾಗೂ ಮಂಗಳ ವಾದ್ಯದೊಂದಿಗೆ ತೇರನ್ನು ಎಳೆಯಲಾಯಿತು. ಹುಲಿ ವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನೋತ್ಸವವು ನಡೆಯಿತು. ವೀರಗಾಸೆ ಕುಣಿತ ಭಕ್ತಾದಿಗಳ ಗಮನ ಸೆಳೆಯಿತು. ಭಕ್ತರು ತೇರಿಗೆ ಹಣ್ಣು ಜವನ ಎಸೆದು, ದವಸ ಧಾನ್ಯಗಳನ್ನು ಎರಚಿ ಪ್ರಾರ್ಥಿಸಿದರು.

ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನೆರೆದಿದ್ದ ಭಕ್ತರು ಉಘೇ ಮಾದಪ್ಪ ಉಘೇ ಮಾಯ್ಕಾರ ಎಂದು ತೇರನ್ನು ನಾ ಮುಂದು ತಾ ಮುಂದು ಎಂದು ಎಳೆಯಲು ಮುಂದಾದಾಗ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಐದು ದಿನಗಳಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೀಡು ಬಿಟ್ಟಿದ್ದ ಭಕ್ತಾದಿಗಳು ಬುಧವಾರ ರಥೋತ್ಸವ ಮುಗಿದ ಬಳಿಕ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದರು. ಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವಾರದ ಹಿಂದೆ 2 ಲಕ್ಷಕ್ಕೂ ಹೆಚ್ಚಿನ ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸಿ ಬೆಟ್ಟದಲ್ಲೇ ಬೀಡು ಬಿಟ್ಟಿದ್ದರು. ಅಲ್ಲದೆ ಎರಡು ದಿನಗಳಿಂದ ವಾಹನಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಸ್ಥಾನದ ರಂಗಮಂದಿರ ಹಾಗೂ ಇನ್ನಿತರ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿದ್ದರು.

ಮ.ಬೆಟ್ಟದಲ್ಲಿ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ 8 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.

ಗಮನ ಸೆಳೆದ ಬೇಡಗಂಪಣ ಹೆಣ್ಣು ಮಕ್ಕಳು ಮಹಾರಥೋತ್ಸವದಲ್ಲಿ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ಕೇಸರಿ ಬಣ್ಣದ ಸೀರೆ ಉಟ್ಟು, ಬೆಲ್ಲದಾರತಿ ಹಿಡಿದುಕೊಂಡಿದ್ದು ಭಕ್ತಾದಿಗಳ ಕಣ್ಮನ ಸೆಳೆದರು. ಕೆಲವು ಭಕ್ತಾದಿಗಳು ಅವರೊಡನೆ ಸೆಲ್ಫಿ ತೆಗೆದುಕೊಂಡರು.

ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ, ಅರ್ಚಕ ವೃಂದದವರು, ತಾಲೂಕು ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಮಹಾದೇಶ್ ಎಂ ಗೌಡ, ಉಪಾಧ್ಯಕ್ಷ ಗೋವಿಂದ್ ಕೆ ಸೋಮಶೇಖರ್ ಸದಸ್ಯರಾದ ಲಿಂಗರಾಜು, ಮಹದೇವಸ್ವಾಮಿ , ಅಭಿಲಾಶ್, ಪ್ರಭು ಕುಮಾರ್ ಭರತ್ ಪ್ರೀತಮ್ ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿ ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಮಂಡ್ಯ: ಜಿಲ್ಲೆಯ ನಾಗಮಂಗಲದ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಹುಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ…

1 min ago

ಅಂಡಮಾನ್‌ ಸಮುದ್ರದಲ್ಲಿ ಮುಳುಗಿದ ವಲಸಿಗರಿದ್ದ ದೋಣಿ: 250 ಜನ ಕಣ್ಮರೆ

ಢಾಕಾ: ಭಾರೀ ಬಿರುಗಾಳಿಯಿಂದ ಅಂಡಮಾನ್‌ ಸಮುದ್ರದಲ್ಲಿ ಜನದಟ್ಟಣೆಯಿಂದ ತುಂಬಿದ್ದ ದೋಣಿ ಮುಳುಗಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ…

33 mins ago

ಹನೂರು| ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ: ರೈತ ಮುಖಂಡರ ಆಕ್ರೋಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ನೀರಿನ…

47 mins ago

ಹನೂರು| ಕುಡಿಯುವ ನೀರಿಗೆ ಹಾಹಾಕಾರ: ಖಾಲಿ ಬಿಂದಿಗೆ ಹಿಡಿದು ಮಹಿಳೆಯರಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಹಲವಾರು ದಿನಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡದೆ…

54 mins ago

ಛತ್ತೀಸ್‌ಗಢ ವಿದ್ಯುತ್‌ ಸ್ಥಾವರ ಸ್ಫೋಟ ದುರಂತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ

ರಾಯಪುರ: ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ವಿದ್ಯುತ್‌ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ…

2 hours ago

ಓದುಗರ ಪತ್ರ: ನಂಜನಗೂಡು ಕೆ.ಹೆಚ್.ಬಿ. ಕಾಲೋನಿ ರಸ್ತೆ ದುರಸ್ತಿ ಮಾಡಿ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ಯಿಂದ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದು…

5 hours ago