ಆಲೂರು ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಘಟನೆ
ಟಿಸಿ ಪಡೆದು ಬೇರೆ ಶಾಲೆಗಳಿಗೆ ಸೇರ್ಪಡೆ
ಚಾಮರಾಜನಗರ : ತಾಲ್ಲೂಕಿನ ಆಲೂರು ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಹಿಳೆ ಬಿಸಿಯೂಟ ತಯಾರಿಸುತ್ತಿದ್ದಾರೆ ಹಾಗೂ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಪೋಷಕರು ವರ್ಗಾವಣೆ ಪತ್ರ ಪಡೆದು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುತ್ತಿರುವುದು ಬೆಳಕಿಗೆ ಬಂದಿದೆ.
ಪೋಷಕರು ಟಿಸಿ ಪಡೆದು ತಮ್ಮ ಮಕ್ಕಳನ್ನು ಸಮೀಪದ ಆಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುರುಮಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಬೇರೆ ಕಡೆ ಸೇರಿಸುತ್ತಿದ್ದಾರೆ. ಸದ್ಯ ಈ ಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳಿದ್ದು ಈ ಸರ್ಕಾರಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ.
ಹಿಂದೆ ಶಾಲೆಯಲ್ಲಿ ಮೂವರು ಶಿಕ್ಷಕರಿದ್ದರು. ಇವರ ಒಳ ಜಗಳದಿಂದ ಸಮರ್ಪಕವಾಗಿ ಪಾಠ ಪ್ರವಚನ ನಡೆಯದೆ ಪೋಷಕರು ಬೇಸತ್ತು ಹಲವು ಬಾರಿ ಈ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಮಕ್ಕಳ ಸಂಖ್ಯೆ ೨೧ಕ್ಕೆ ಕುಸಿದಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಹಿಂದುಳಿದ ಹಾಗೂ ದಲಿತ ಸಮುದಾಯದ ಸೇರಿದ ಇಬ್ಬರು ಅಡುಗೆ ಸಿಬ್ಬಂದಿ ಪೈಕಿ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಲಾಯಿತು.
ರೋಸ್ಟರ್ ಪದ್ಧತಿ ಪ್ರಕಾರ ದಲಿತ ಮಹಿಳೆಯನ್ನು ಅಡುಗೆ ಸಿಬ್ಬಂದಿಯಾಗಿ ನೇಮಕ ಮಾಡಲಾಗಿತ್ತು. ಬಳಿಕ ಮಕ್ಕಳ ಸಂಖ್ಯೆ ದಿಢೀರ್ ಕುಸಿಯಿತು. ೧೨ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದು ಪಕ್ಕದ ಆಲೂರು ಗ್ರಾಮದ ಶಾಲೆಗಳಿಗೆ ಸೇರಿಕೊಂಡಿದ್ದಾರೆ. ಉಳಿದ ೯ ಮಂದಿಯಲ್ಲಿ ನಾಲ್ವರು ಮಕ್ಕಳ ಪೋಷಕರು ಟಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಅಡುಗೆ ಮಾಡುವರು ದಲಿತ ಮಹಿಳೆ ಎಂಬುದೇ ಇದಕ್ಕೆಲ್ಲಾ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶಾಲೆಗೆ ಅಧಿಕಾರಿಗಳು ದೌಡು
ಈ ವಿಷಯ ಬಯಲಾಗುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಬಿಆರ್‌ಸಿ ರಾಜೀವ್, ಸಂತೇಮರಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಾಜುದ್ದೀನ್ ಅವರು ಸಂಜೆ ಶಾಲೆಗೆ ತೆರಳಿ ಶಿಕ್ಷಕರು, ಪೋಷಕರ ಜೊತೆ ಮಾತುಕತೆ ನಡೆಸಿದರು. ಶಾಲೆಯಲ್ಲಿ ಸರಿಯಾಗಿ ಪಾಠ ನಡೆಯುತ್ತಿಲ್ಲ. ಶಿಕ್ಷಕರ ನಡುವೆ ಹೊಂದಾಣಿಕೆಯಿಲ್ಲ ಆದ್ದರಿಂದ ವರ್ಗಾವಣೆ ಪಡೆದು ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತಿದ್ದೇವೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು. ಸದ್ಯ ಶಾಲೆಯಲ್ಲಿರುವ ಶಿಕ್ಷಕರಾದ ರವಿ ಮತ್ತು ನಟರಾಜು ಅವರನ್ನು ಬೇರೆಡೆಗೆ ವರ್ಗಾಯಿಸಿ ಬೇರೆ ಶಿಕ್ಷಕರನ್ನು ನೇಮಿಸಲಾಗುವುದು. ಹಾಲಿ ಶಾಲೆಯಲ್ಲಿರುವ ಮಕ್ಕಳಿಗೆ ಟಿಸಿಯನ್ನು ನೀಡುವುದಿಲ್ಲ. ಇಲ್ಲಿಂದ ಬೇರೆ ಶಾಲೆಗೆ ಹೋಗಿರುವ ವಿದ್ಯಾರ್ಥಿಗಳನ್ನು ಮತ್ತೆ ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಬಿಇಒ ಹನುಮಶೆಟ್ಟಿ ಭರವಸೆ ನೀಡಿದರು.
ಈ ಶಾಲೆಯಲ್ಲಿ ಕಳೆದ ೨೦ಕ್ಕೂ ಹೆಚ್ಚು ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ನನ್ನನ್ನು ಮುಖ್ಯ ಅಡುಗೆಯವರಾಗಿ ನೇಮಿಸಿದ ಬಳಿಕ ಮಕ್ಕಳು ಶಾಲೆ ಬಿಡುತ್ತಿದ್ದಾರೆ. ಶಾಲೆ ಮುಚ್ಚಿದರೆ ನಾನು ಎಲ್ಲಿಗೆ ಹೋಗಬೇಕು. -ನಂಜಮ್ಮ, ಅಡುಗೆ ಸಿಬ್ಬಂದಿ
ಬಿಇಒ, ಬಿಆರ್‌ಸಿ ಅವರು ಶಾಲೆಗೆ ಭೇಟಿ ಮಾಡಿ ಪೋಷಕರು ಹಾಗೂ ಶಿಕ್ಷಕರ ಜೊತೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಲು ಯತ್ನಿಸಿದ್ದಾರೆ. ಬುಧವಾರ ನಾನು ಶಾಲೆಗೆ ತೆರಳಿ ಪೋಷಕರ ಜೊತೆ ಮಾತನಾಡಿ ಮನವೊಲಿಸುತ್ತೇನೆ. -ರಾಮಚಂದ್ರರಾಜೇ ಅರಸ್, ಡಿಡಿಪಿಐ
ಮಕ್ಕಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಇಬ್ಬರು ಅಡುಗೆಯವರ ಪೈಕಿ ಒಬ್ಬರನ್ನು ೨ ತಿಂಗಳ ಹಿಂದೆ ಸರ್ಕಾರದ ನೀತಿ ನಿಯಮಾನುಸಾರ ತೆಗೆದು ಹಾಕಲಾಗಿದೆ. ನಂತರದ ಬೆಳವಣಿಗೆಯಲ್ಲಿ ಪೋಷಕರು ಮಕ್ಕಳ ಟಿಸಿ ಪಡೆದು ಕರೆದುಕೊಂಡು ಹೋಗಿದ್ದಾರೆ. ಯಾವ ಕಾರಣಕ್ಕೆ ಪಡೆಯುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ.
-ಚಿನ್ನಸ್ವಾಮಿ, ಮುಖ್ಯಶಿಕ್ಷಕ
ಉತ್ತರ ಪ್ರದೇಶ: ಇಲ್ಲಿನ ಪ್ರಯಾಗ್‌ರಾಜ್‌ನಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಭಾರತೀಯ ವಾಯುಪಡೆಯ ಮೈಕ್ರೋಲೈಟ್ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳನ್ನು…
ಬೆಂಗಳೂರು: ಕರ್ನಾಟಕದಲ್ಲಿ ಜೀವನೋಪಾಯಕ್ಕೆ ಅದರಲ್ಲೂ ಮಹಿಳೆಯರ ಜೀವನೋಪಾಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ನೃಸರ್ಗಿಕ ಕೃಷಿ ಪದ್ಧತಿಯ ಬಗ್ಗೆ…
ಮೈಸೂರು: ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಪಾರಂಪರಿಕತೆಗೆ ಯಾವುದೇ ಧಕ್ಕೆ ಆಗದಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ…
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್, ಕಮೆಂಟ್ ಮಾಡಿ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಸಿಸಿಬಿ ಪೊಲೀಸರು…
ಹಾಸನ: ಕುಡಿದ ಮತ್ತಿನಲ್ಲಿ ಗೆಳೆಯರು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ. ಗಣೇಶ್…
ಮೈಸೂರು: ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟವನ್ನು ಉಳಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಹಾಗೂ ಪರಿಸರವಾದಿಗಳು ಪ್ರತಿಭಟನೆ ನಡೆಸಿದರು. ಚಾಮುಂಡೇಶ್ವರಿ ದೇವಸ್ಥಾನದ…