ಚಾಮರಾಜನಗರ: ಯುವಜನರ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ’ಯುವನಿಧಿ’ ಯೋಜನೆಯ ೨೦೨೪ನೇ ಸಾಲಿನ ನೊಂದಣಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ’ಯುವನಿಧಿ ನೊಂದಣಿ ಪ್ರಕ್ರಿಯೆ ಆರಂಭ’ ಕುರಿತ ಪೋಸ್ಟರ್ ಅನ್ನು ಜಿಲ್ಲಾಧಿಕಾರಿಯವರು ಬಿಡುಗಡೆಗೊಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ವಿದ್ಯಾಭ್ಯಾಸ ಮುಗಿಸಿರುವ ಪದವಿ ಹಾಗೂ ಸ್ನಾತಕೋತ್ತರ ಪದವಿಧರರು ಹಾಗೂ ಡಿಪ್ಲೋಮಾ ತೇರ್ಗಡೆಯಾಗಿರುವ ನಿರುದ್ಯೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಜಾರಿಯಾಗಿರುವ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆ ಒಂದಾಗಿದೆ. ಯೋಜನೆಯ ಸದ್ಭಳಕೆ ಹಾಗೂ ಯಶಸ್ವಿಗಾಗಿ ನೊಂದಣಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜಿಲ್ಲೆಯ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು ಸಹಕರಿಸಿ ನಿರುದ್ಯೋಗಿ ಅಭ್ಯರ್ಥಿಗಳನ್ನು ಪ್ರೇರೇಪಿಸಬೇಕು ಎಂದರು.
೨೦೨೩ ಮತ್ತು ೨೦೨೪ರಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಠ ೬ ತಿಂಗಳವರೆಗೆ ಸರ್ಕಾರಿ ಆಥವಾ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಹಾಗೂ ಕರ್ನಾಟಕದಲ್ಲಿ ವಾಸವಿದ್ದು, ಕನಿಷ್ಠ ೬ ವರ್ಷಗಳವರೆಗೆ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ನೊಂದಾಯಿಸಿಕೊಳ್ಳಬಹುದು. ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಉತ್ತೀರ್ಣವಾಗಿರುವ ಬಗ್ಗೆ ಪ್ರಮಾಣಪತ್ರ ನೊಂದಣಿಗೆ ಅಗತ್ಯವಾಗಿರುವ ದಾಖಲಾತಿಗಳಾಗಿವೆ. ಅಲ್ಲದೆ ಪ್ರತಿ ಮಾಹೆ ದಿನಾಂಕ ೧ರಿಂದ ೨೫ರೊಳಗೆ ಮಾಸಿಕ ಸ್ವಯಂ ಘೋಷಣಾ ಪತ್ರ ನೀಡುವುದು ಕಡ್ಡಾಯವಾಗಿದೆ. ಯೋಜನೆಯ ನೊಂದಣಿ ಪ್ರಕ್ರಿಯೆಯಲ್ಲಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ವಿವರ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಪ್ರತಿ ಮಾಹೆ ೩ ಸಾವಿರ ರೂ. ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ೧೫೦೦ ರೂ.ಗಳನ್ನು ನಿರುದ್ಯೋಗ ಭತ್ಯೆಯಾಗಿ ನೊಂದಣಿಯಾಗುವ ಮುಂದಿನ ೨ ವರ್ಷಗಳವರೆಗೆ ನೀಡಲಾಗುವುದು. ಅಭ್ಯರ್ಥಿಗಳು ನೊಂದಣಿಗಾಗಿ ಸೇವಾಸಿಂಧು ಪೋರ್ಟಲ್ https://sevasindhugs.karnataka.gov.in ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ ಸಂಖ್ಯೆ ೧೮೦೦-೫೯೯-೭೧೫೪ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪಿ. ಲಕ್ಷ್ಮೀ, ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಅಧಿಕಾರಿ ಮಹಮ್ಮದ್ ಅಕ್ಬರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ ಪ್ರಸನ್ನ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಕೌಶಲ್ಯಾಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಾದ ಮಲ್ಲೇಶ್, ಆಪ್ತ ಸಮಾಲೋಚಕರು ಹಾಗೂ ತರಬೇತುದಾರರಾದ ಮಹದೇವಸ್ವಾಮಿ, ಉದ್ಯೋಗಾಭಿವೃದ್ಧಿ ನಿರ್ವಾಹಕರಾದ ಮೋಯಿನ್ ಖಾನ್, ಇತರರು ಇದೇ ಸಂದರ್ಭದಲ್ಲಿ ಇದ್ದರು.
ನವದೆಹಲಿ: ನಾಗ್ಪುರದಲ್ಲಿ ಎರಡು ಮಕ್ಕಳಲ್ಲಿ ಎಚ್‌ಎಂಪಿ ವೈರಸ್ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಒಟ್ಟು ಸೋಂಕಿತ ಮಕ್ಕಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.…
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ವಿಶ್ವ ದರ್ಜೆಯ ಉತ್ಕೃಷ್ಟ ಮಟ್ಟದ ತಾರಾಲಯದ ಸ್ಥಳಕ್ಕೆ ಇಂದು ಸಂಸದ…
ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಕುರಿತು ನಟಿ ರಮ್ಯಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.…
ಚಿಕ್ಕಮಗಳೂರು: ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಮೋಸ್ಟ್ ವಾಂಟೆಡ್ ಆರು ಮಂದಿ ನಕ್ಸಲರು ಶರಣಾಗಲು ನಿರ್ಧರಿಸಿದ್ದಾರೆ. ದಕ್ಷಿಣ ಭಾರತದ ನಾಲ್ಕು…
ಬೆಂಗಳೂರು: ಎಚ್ಎಂಪಿವಿ ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅಗತ್ಯವಿಲ್ಲ. ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಆರೋಗ್ಯ ಇಲಾಖೆಯವರು ಮಾರ್ಗಸೂಚಿಗಳನ್ನು ಬಿಡುಗಡೆ…
ಮಂಡ್ಯ: ಜಿಲ್ಲೆಯ ಸುಪ್ರಸಿದ್ಧ ತಾಣವಾದ ಮೇಲುಕೋಟೆಯಲ್ಲಿ ನೂತನ ನಾಡ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…