ಎಚ್ ಡಿಕೆ ಬ್ರಾಹ್ಮಣ ಸಿಎಂ ಅಸ್ತ್ರಕ್ಕೆ ಅಮಿತ್ ಷಾ ಪ್ರತ್ಯಸ್ತ್ರ, ಲಿಂಗಾಯತರ ಸಂಶಯ ನಿವಾರಣೆಗೆ ಯತ್ನ
ಪುತ್ತೂರು: ನವ ಕರ್ನಾಟಕದ ನಿರ್ಮಾಣಕ್ಕೆ ಬಿಜೆಪಿಯನ್ನು ಬೆಂಬಲಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕೈ ಬಲಪಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚಿಗೆ ಉರುಳಿಸಿದ್ದ ಬ್ರಾಹ್ಮಣ ಮುಖ್ಯಮಂತ್ರಿ ಅಸ್ತ್ರದಿಂದ ಬಿಜೆಪಿ ಬೆಂಬಲಿತ ಲಿಂಗಾಯತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಯತ್ನಿಸಿರುವ ಅಮಿತ್ ಷಾ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಕಾಲೇಜು ಮೈದಾನದಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅಮಿತ್ ಷಾ, ರಾಷ್ಟ್ರಭಕ್ತರ ಪರ ಇರುವ ಬಿಜೆಪಿ ಬೇಕೇ? ರಾಜ್ಯವನ್ನು ಎಟಿಎಂ ಮಾಡುವ ಕಾಂಗ್ರೆಸ್ ಅನ್ನು ಬೆಂಬಲಿಸಬೇಕೇ ಎಂದು ಪ್ರಶ್ನಿಸಿದರು.
ಜೆಡಿಎಸ್ ಗೆ ಹಾಕುವ ಒಂದೊಂದು ಮತವು ಕಾಂಗ್ರೆಸ್ ಪಕ್ಷಕ್ಕೆ ಹಾಕಿದಂತೆ ಎಂದ ಷಾ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಿ, ನವಕರ್ನಾಟಕ ನಿರ್ಮಾಣ ಮಾಡಲು ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಪಿಎಫ್ ಐ ಸಂಘಟನೆ ನಿಷೇಧ ಮಾಡುವ ಮೂಲಕ ಭದ್ರತೆ ಒದಗಿಸಲಾಗಿದೆ. ಕರ್ನಾಟಕದಲ್ಲಿ ಇದೀಗ ನೆಮ್ಮದಿ, ಶಾಂತಿ ಇದೆ. ಭಯೋತ್ಪಾದನೆ, ನಕ್ಸಲರನ್ನು ಯಶಸ್ವಿಯಾಗಿ ಮಟ್ಟ ಹಾಕಿರುವುದಾಗಿ ತಿಳಿಸಿದ ಅವರು, ದೇಶ ವಿರೋಧಿ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ವೋಟ್ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಟಿಪ್ಪುವನ್ನು ಬೆಂಬಲಿಸಿರುವ ಕಾಂಗ್ರೆಸ್ ಅಥವಾ ಜೆಡಿಎಸ್ಗೆ ಮತ ನೀಡುತ್ತೀರಾ? ಅಥವಾ ರಾಣಿ ಅಬ್ಬಕ್ಕಳನ್ನು ಪೂಜಿಸುವ ಬಿಜೆಪಿಗೆ ಮತ ನೀಡುತ್ತೀರಾ ಎಂದು ಪ್ರಶ್ನಿಸಿದ ಅವರು ಪಿಎಫ್ಐ ಸಂಘಟನೆಯನ್ನು ನಿಷೇಧಿಸುವ ಮೂಲಕ ದಕ್ಷಿಣ ಭಾರತ, ಕರಾವಳಿಯಲ್ಲಿ ನಡೆಯುತ್ತಿದ್ದ ಉಗ್ರ ಕೃತ್ಯವನ್ನು ನಿಲ್ಲಿಸಲಾಗಿದೆ. ದೇಶದಲ್ಲಿ ಉಗ್ರವಾದ, ನಕ್ಸಲ್ ಅಂತ್ಯಗೊಳಿಸಲು ಪ್ರಧಾನಿ ಮೋದಿ ಸತತ ಪ್ರಯತ್ನ ಮಾಡಿದ್ದಾರೆ ಎಂದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು 370 ನೇ ವಿಧಿ ಕಿತ್ತೆಸೆಯಲು ಅಡ್ಡಗಾಲು ಹಾಕಿತ್ತು. ಆದರೆ ಮೋದಿ ಸರ್ಕಾರ ಯಾರಿಗೂ ಹೆದರದೇ ರದ್ದುಗೊಳಿಸಿತು ಎಂದು ವಿವರಿಸಿದರು.
50 ವರ್ಷ ಎಂಬುದು ಪ್ರಾಮಾಣಿಕತೆಯ ಸರ್ಟಿಫಿಕೇಟ್ ಎಂದ ಅವರು ಕ್ಯಾಂಪ್ಕೊಗೆ ಅಭಿನಂದನೆ ಸಲ್ಲಿಸಿದರು. ಕ್ಯಾಂಪ್ಕೊ ಸ್ಥಾಪಿಸಲಿರುವ ಕೃಷಿಕರ ಮಾಲ್ ಸಹಕಾರಿ ರಂಗದ ಪ್ರಥಮ ಅಗ್ರಿ ಮಾಲ್ ಆಗಲಿದೆ ಎಂದ ಅವರು ಇಲ್ಲಿ ಕೃಷಿ ಸಲಕರಣೆ, ಕೀಟನಾಶಕ, ರಸಗೊಬ್ಬರ ಸೇರಿದಂತೆ ಎಲ್ಲವೂ ಒಂದೇ ಕಡೆ ಸಿಗಲಿದೆ. ಇದು ಸಹಕಾರಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತದ ಮೊದಲ ಅಗ್ರಿ ಮಾಲ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ತಿಳಿಸಿದರು. “ಕಲ್ಪʼ ಹೆಸರಿನ ಕ್ಯಾಂಪ್ಕೋದ ತೆಂಗಿನ ಎಣ್ಣೆ ಉತ್ಪನ್ನಕ್ಕೆ ಶುಭ ಕೋರಿದರು.
2 ಲಕ್ಷ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಸ್ಥಾಪನೆ-
ಮೂರು ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷ ಹೊಸ ಪ್ರಾಥಮಿಕ ಕೃಷಿ ಕ್ರೆಡಿಟ್ ಸೂಸೈಟಿ ಸ್ಥಾಪಿಸಲಾಗುವುದು. ಪ್ರತಿ ಪಂಚಾಯಿತಿಯಲ್ಲಿ ಬಹು ಆಯಾಮದ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಸ್ಥಾಪನೆಗೆ ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಪ್ರತಿಯೊಂದು ಪಂಚಾಯಿತಿಯೂ ಒಂದು ಸೊಸೈಟಿ ಹೊಂದಲಿವೆ ಎಂದು ಷಾ ತಿಳಿಸಿದರು. ಈ ಭಾಗದಲ್ಲಿ ರೈತರು ಅಡಕೆ, ತೆಂಗು, ರಬ್ಬರು, ಭತ್ತ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಾರೆ. ನಾವು ಗುಜರಾತಿ ಜನರು ಸುಪಾರಿ ತಿನ್ನುವಾಗ ಯಾವಾಗಲೂ ಮಂಗಳೂರು ಜನರನ್ನು ನೆನೆಪಿಸಿಕೊಳ್ಳುತ್ತೇವೆ. ಗುಜರಾತ್ ಜನರು ಸುಪಾರಿ ತಿಂದರೆ, ದಕ್ಷಿಣ ಕನ್ನಡ ಜನರು ಸುಪಾರಿ ಬೆಳೆಯುತ್ತಾರೆ ಎಂದರು.
ಬಸವರಾಜ ಬೊಮ್ಮಾಯಿ ಅವರ ಸರಕಾರವು ಅಭಿವೃದ್ಧಿಗೆ ಒತ್ತು ಕೊಟ್ಟಿದೆ. ಮೀನುಗಾರಿಕೆಗೆ ಸಂಬಂಧಿಸಿ ಮಾತ್ರವಲ್ಲದೆ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಲಾಗಿದೆ. ಮಂಗಳೂರು, ಬೆಂಗಳೂರನ್ನು ಸ್ಟಾರ್ಟಪ್ ಹಬ್ ಆಗಿ ಮಾಡಿದ್ದೇವೆ. ಶಿರಾಡಿ ಘಾಟ್ನಲ್ಲಿ ಸುರಂಗ ಮಾರ್ಗ ರಚಿಸಲಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಮಂಗಳೂರು ಬಂದರು ಸೇರಿ ಹಲವಾರು ಅಭಿವೃದ್ಧಿ ಯೋಜನೆ ಜಾರಿಗೊಳಿಸಿದ್ದನ್ನು ನೆನಪಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಡಿಕೆ ಸಂಶೋಧನಾ ಕೇಂದ್ರ ಬಲಪಡಿಸಲು ಬದ್ದವಾಗಿದ್ದು, ಬಜೆಟ್ ನಲ್ಲಿ ಇದಕ್ಕೆ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದರು.
ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ರಾಜ್ಯದ ಸಚಿವರಾದ ಆರಗ ಜ್ಞಾನೇಂದ್ರ, ಸೋಮಶೇಖರ್, ಸುನೀಲ್ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸಂಜೀವ ಮಠಂದೂರು, ಡಾ.ಕಲ್ಲಡ್ಕ ಪ್ರಭಾಕರ ಭಟ್ ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.