ರಂಗ ಹಬ್ಬಕ್ಕೆ ಸಿಂಗಾರಗೊಂಡ ರಂಗಾಯಣ, ಡಿ.೧೦ರಂದು ರಾಷ್ಟ್ರೀಯ ರಂಗೋತ್ಸವಕ್ಕೆ ಸಿಎಂ ಚಾಲನೆ
ಮೈಸೂರು : ‘ಭಾರತೀಯತೆ’ ಶೀರ್ಷಿಕೆಯಡಿ ಆಯೋಜಿಸಿರುವ ರಂಗಾಯಣದ ಬಹುನಿರೀಕ್ಷಿತ ಬಹುರೂಪಿ ರಾಷ್ಟ್ರೀಯ ರಂಗೋತ್ಸವ-೨೦೨೨ ಉದ್ಘಾಟನಾ ಕಾರ್ಯಕ್ರಮ ಡಿ.೧೦ರಂದು ನಡೆಯಲಿದ್ದು, ಈ ಬಾರಿ ಚಿತ್ರನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ರಂಗೋತ್ಸವಕ್ಕೆ ಮೆರುಗು ನೀಡಲಿದ್ದಾರೆ.
ಅಂದು ಸಂಜೆ ೫.೩೦ಕ್ಕೆ ವನರಂಗದಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ರಂಗೋತ್ಸವ ಪುಸ್ತಿಕೆಯನ್ನು ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಬಹುರೂಪಿ ಬುಲೆಟಿನ್ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಹಾಪೌರ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆವಹಿಸುವರು.
ನಾಟಕೋತ್ಸವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಸುಮಾರು ೬೦ ಕಲಾವಿದರು ನಾನಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇಡೀ ರಂಗಾಯಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಕಾವಾ ವಿದ್ಯಾರ್ಥಿಗಳು ಬುಲೆಟಿನ್ ತಯಾರಿಯಲ್ಲಿದ್ದಾರೆ ಎಂದರು.
ರಂಗಾಯಣ ದೊಡ್ಡದಾಗಿ ಬೆಳೆಯುತ್ತಿರುವ ಸಂಸ್ಥೆ. ಹಾಗಾಗಿ, ಇಲ್ಲಿ ಜಾಗ ಸಾಕಾಗುವುದಿಲ್ಲ. ಆದ್ದರಿಂದ ಬೇರೆ ಜಾಗವನ್ನು ನೀಡಬೇಕು ಎಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಮುಖ್ಯಮಂತ್ರಿಯವರಿಗೆ ಬೇಡಿಕೆಯಿಡಲಾಗುವುದು ಎಂದರು.
ರಂಗೋತ್ಸವದಲ್ಲಿ ಸುಮಾರು ೬೦ ಮಳಿಗೆಗಳನ್ನು ಹಾಕಲಾಗಿದೆ. ೨ ಲಕ್ಷದವರೆಗೂ ಜನರು ಸೇರುವ ನಿರೀಕ್ಷೆಯಿದೆ. ಪ್ರತಿ ನಾಟಕಕ್ಕೆ ೧೦೦ ರೂ. ಪ್ರವೇಶ ಶುಲ್ಕ ಇದೆ. ಈ ಬಗ್ಗೆ ಮಾಹಿತಿ ನೀಡಲು ಒಂದು ಕೌಂಟರ್ ಕೂಡ ಮಾಡಲಾಗಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ದೊರೆಯುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಉಪ ನಿರ್ದೇಶಕರಾದ ನಿರ್ಮಲ ಮಠಪತಿ, ಬಹುರೂಪಿ ಸಂಚಾಲಕ ಜಗದೀಶ್ ಮನವಾರ್ತೆ ಹಾಜರಿದ್ದರು.
ಚಲನಚಿತ್ರೋತ್ಸವ:
ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಬಹುರೂಪಿ ಚಲನಚಿತ್ರೋತ್ಸವವನ್ನು ಡಿ.೯ರಂದು ಭೂಮಿಗೀತದಲ್ಲಿ ಹಿರಿಯ ನಟ ದೊಡ್ಡಣ್ಣ ಉದ್ಘಾಟಿಸುವರು. ‘ಪ್ರಕೃತಿ ಮತ್ತು ಭಾರತೀಯತೆ’ ಎಂಬ ಶೀರ್ಷಿಕೆಯ ಮೂರು ನಿಮಿಷಗಳ ಉದ್ಘಾಟನಾ ಚಿತ್ರ ಪ್ರದರ್ಶಿಸಲಾಗುತ್ತದೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಶೋಕ್ ಕಶ್ಯಪ್ ಇರುವರು. ರಂಗೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ ಶ್ರೀರಂಗ ರಂಗಮಂದಿರಕ್ಕೆ ಡಾ.ಪುನೀತ್ ರಾಜ್ ಕುಮಾರ್ ಚಿತ್ರಮಂದಿರ ಎಂದು ಹೆಸರಿಟ್ಟಿದ್ದು, ಇಲ್ಲಿ ಡಿ.೯ರಿಂದ ೧೫ರ ವರೆಗೂ ಸಿನಿಮಾಗಳು ಪ್ರದರ್ಶನವಾಗುತ್ತವೆ. ಕೊನೆಯ ಚಿತ್ರವಾಗಿ ಪುನೀತ್ ರಾಜ್‌ಕುಮಾರ್ ಅವರ ‘ಗಂಧದಗುಡಿ’ ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ.
ಮಳಿಗೆಗಳ ಉದ್ಘಾಟನೆ:
ಕಲಾಮಂದಿರದ ಆವರಣದಲ್ಲಿ ೧೫ ಪುಸ್ತಕ ಮಳಿಗೆಗಳು ಮತ್ತು ೧೫ ಆಹಾರ ಮಳಿಗೆಗಳು, ಕರಕುಶಲ ಮಳಿಗೆಗಳು ಸೇರಿದಂತೆ ಒಟ್ಟು ೬೦ ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು, ಡಿ.೯ರಂದು ಸಂಜೆ ೪.೩೦ಕ್ಕೆ ಮೈಸೂರು ಬಣ್ಣ ಹಾಗೂ ಅರಗು ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ ಮಳಿಗೆಗಳ ಉದ್ಘಾಟನೆ ಮಾಡಲಿದ್ದಾರೆ. ಕಾವಾ ವಿದ್ಯಾರ್ಥಿಗಳಿ ಬಿಡಿಸಿರುವ ಚಿತ್ರಕಲೆಗಳ ಪ್ರದರ್ಶನವನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಉದ್ಘಾಟನೆ ಮಾಡುವರು. ಮುಖ್ಯಅತಿಥಿಯಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ.ಶಿವಕುಮಾರ್ ಭಾಗವಹಿಸುವರು.
ರಾಷ್ಟ್ರೀಯ ವಿಚಾರ ಸಂಕಿರಣ:
ಡಿ.೧೦ರಂದು ಬೆಳಿಗ್ಗೆ ೧೦.೩೦ಕ್ಕೆ ರಾಷ್ಟ್ರೀಯ ವಿಚಾರಸಂಕಿರಣವನ್ನು ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಲೇಖಕಿ ಡಾ.ಎಸ್.ಆರ್.ಲೀಲಾ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಯಾಗಿ ರಂಗಕರ್ಮಿ ಎಸ್.ಎನ್.ಸೇತುರಾಂ ಭಾಗವಹಿಸುವರು. ಮಧ್ಯಾಹ್ನ ೧೨.೧೫ರಿಂದ ಪ್ರಾಚೀನ ಸಂಸ್ಕೃತಿ ಮತ್ತು ಭಾರತೀಯತೆ ಎಂಬ ವಿಷಯದ ಕುರಿತು ಚಿಂತಕರಾದ ಡಾ.ವಿ.ಬಿ.ಆರತಿ, ಶಿಕ್ಷಣ ತಜ್ಞ ಕೆ.ಎಂ.ಅಶೋಕ ಗೌಡ ಮಾತನಾಡುವರು. ಮಧ್ಯಾಹ್ನ ೨.೩೦ರಿಂದ ಭವಿಷ್ಯದಲ್ಲಿ ಭಾರತೀಯ ಸಂಸ್ಕೃತಿ ವಿಷಯ ಕುರಿತು ಚಿಂತಕರಾದ ರಮಾನಂದ ಐನಕೈ, ಎಚ್.ವಿ.ನಾಗರಾಜರಾವ್ ಮಾತನಾಡುವರು. ಡಿ.೧೧ರಂದು ಬೆಳಿಗ್ಗೆ ೧೦ರಿಂದ ೪ ಗಂಟೆಯವರೆಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ‘ವೈವಿಧ್ಯತೆಯಲ್ಲಿ ಭಾರತೀಯತೆ’ ಎಂಬ ವಿಷಯ ಕುರಿತು ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ ೪ಕ್ಕೆ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ‘ಪ್ರಾಚೀನ ರಂಗಭೂಮಿ ಮತ್ತು ಭಾರತೀಯತೆ’ ಎಂಬ ಕುರಿತು ಸಾಹಿತಿ ಬಾಬು ಕೃಷ್ಣಮೂರ್ತಿ, ಸಂಸ್ಕೃತಿ ಚಿಂತಕ ಸು.ರಾಮಣ್ಣ ಮಾತನಾಡುವರು.
ರಸಘಳಿಗೆಗಳು
ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಡಿ.೧೨ರಿಂದ ೧೫ರವರೆಗೆ ಪ್ರತಿದಿನ ಸಂಜೆ ೪ರಿಂದ ೫ ಗಂಟೆಯವರೆಗೂ ರಸಘಳಿಗೆಗಳು ಕಾರ್ಯಕ್ರಮಗಳು ನಡೆಯಲಿವೆ. ಡಿ.೧೨ರಂದು ರಂಗಗೀತೆಗಳು-ಕಿರಗಸೂರು ರಾಜಪ್ಪ ಮತ್ತು ತಂಡ, ಡಿ.೧೩ರಂದು ದೇಸಿ ವೈಭವ ನೃತ್ಯ ರೂಪಕ-ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ತಂಡ, ಡಿ.೧೪ರಂದು ಗಝಲ್-ಶಾಂತಲಾ ವಟ್ಟಂ ತಂಡ, ಡಿ.೧೫ರಂದು ಜಾನಪದ ನೃತ್ಯ-ನಿತ್ಯ ನಿರಂತರ ಟ್ರಸ್ಟ್ ವತಿಯಿಂದ ಜಾನಪದ ನೃತ್ಯ(ವಿಕಲಾಂಗ ಮಕ್ಕಳು), ತಾಳಮದ್ದಲೆ-ದಿವಾಕರ ಹೆಗಡೆ.
ವನರಂಗದಲ್ಲಿ ಡಿ.೮ರಿಂದ ಪ್ರತಿದಿನ ಸಂಜೆ ೫ರಿಂದ ೬ ಗಂಟೆವರೆಗೂ ಬಹುರೂಪಿ ಜನಪದೋತ್ಸವ ನಡೆಯಲಿದೆ. ಡಿ.೯ರಂದು ಡಾ.ಮನೋನ್ಮಣಿ ಮತ್ತು ತಂಡದಿಂದ ಸಂಪ್ರದಾಯದ ಹಾಡು, ಸವಿತಾ ಚಿರಕುನ್ನಯ್ಯ ಅವರಿಂದ ಪೂಜಾಕುಣಿತ. ಡಿ.೧೦ರಂದು ಸುಂದರೇಶ್ ತಂಡದಿಂದ ಡೊಳ್ಳುಕುಣಿತ, ಯದುಕುಮಾರ್ ತಂಡದಿಂದ ನಾದಸ್ವರ, ಡಿ.೧೧ರಂದು ಶಿವಮಲ್ಲೇಗೌಡ ತಂಡದಿಂದ ಗೊರವರ ಕುಣಿತ, ಡಾ.ಮೈಸೂರು ಗುರುರಾಜ್ ತಂಡದಿಂದ ನೀಲಗಾರರ ಮೇಳ, ಡಿ.೧೨ರಂದು ರಂಗನಾಥ ಮತ್ತು ತಂಡದಿಂದ ಸೋಮನ ಕುಣಿತ, ಪುನೀತ್ ಮತ್ತು ಶ್ರೀರಾಂ ಜನಪದ ತಂಡದಿಂದ ಕರಗದ ಕುಣಿತ, ಡಿ.೧೩ರಂದು ದಕ್ಷಿಣ ಕನ್ನಡದ ಮಂಜುನಾಥ್ ಅವರಿಂದ ಕಂಗಿಲು, ಡಾ.ಮಳವಳ್ಳಿ ಮಹದೇವಸ್ವಾಮಿ ಅವರಿಂದ ಮಂಟೇಸ್ವಾಮಿ ಹಾಡುಗಳು, ಡಿ.೧೪ರಂದು ಓಂಕಾರ್ ಮೂರ್ತಿ ಮತ್ತು ತಂಡದಿಂದ ಚಿಟ್ ಮೇಳ, ಶುಭಾ ರಾಘವೇಂದ್ರ ತಂಡದಿಂದ ಜಾನಪದ ಗೀತೆ, ಕೆ.ಎನ್.ಮಹೇಶ್ ತಂಡದಿಂದ ವೀರಗಾಸೆ, ಸೂರಜ್ ತಂಡದಿಂದ ಬೊಳಕ್ಕಾಟ್ ನಡೆಯಲಿದೆ.
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…
ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.…