ರಶ್ಮಿ ಕೋಟಿ
ಅಂದು ಅಕ್ಟೋಬರ್ ೧೦, ೨೦೧೯. ಮೈಸೂರಿನಲ್ಲಿ ೧೦೦ ವರ್ಷಗಳಷ್ಟು ಇತಿಹಾಸ ಹೊಂದಿದ್ದ ಎನ್‌ಟಿಎಂ ಶಾಲೆಯನ್ನು ಸರ್ಕಾರ ಮುಚ್ಚಲು ಹೊರಟ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ನಮಗೆ ಅಪ್ಪಾಜಿಯ ಅಗಲಿಕೆ ಕಾಡಲಾರಂಭಿಸಿತು. ಎನ್‌ಟಿಎಂ ಶಾಲೆಯ ಉಳಿವಿಗಾಗಿ ಅಪ್ಪಾಜಿ ಕಟಿಬದ್ಧರಾಗಿದ್ದರು. ಪತ್ರಿಕೆಯ ಮೂಲಕ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದುದಷ್ಟೇ ಅಲ್ಲದೆ, ತಾವೂ ಕೂಡ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಎನ್‌ಟಿಎಂ ಶಾಲಾ ಮಕ್ಕಳಿಗೆ ʼಡ್ರೈವರ್ ಮಾಮʼ ಕೂಡ ಆಗಿದ್ದರು. ಹಾಗಾಗಿ ಎನ್‌ಟಿಎಂ ಶಾಲೆಯ ಹೋರಾಟ ನಮ್ಮ ಹೃದಯಕ್ಕೆ ಬಹಳ ಹತ್ತಿರದಾಗಿತ್ತು.
ಅಪ್ಪಾಜಿ ಅಗಲಿ ಇನ್ನೂ ಕೆಲವೇ ತಿಂಗಳುಗಳಾಗಿದ್ದವು. ಆ ಆಘಾತದಿಂದ ನಾವಿನ್ನೂ ಚೇತರಿಸಿಕೊಂಡಿರಲಿಲ್ಲ. ಆದರೆ ಪತ್ರಿಕೆಯ ಜವಾಬ್ದಾರಿಯನ್ನು ನಿಭಾಯಿಸುವುದರೊಂದಿಗೆ ಅಪ್ಪಾಜಿ ಭಾಗಿಯಾಗಿದ್ದ ಹೋರಾಟಗಳಿಗೂ ಪತ್ರಿಕೆಯ ಬೆಂಬಲ ನಿರಂತರವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಅಭಿಲಾಷೆಯಾಗಿತ್ತು. ಹಾಗಾಗಿ ಕುಟುಂಬದ ಸದಸ್ಯರೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ತೀರ್ಮಾನಿಸಿದೆವು. ಎಲ್ಲ ಪ್ರತಿಭಟನಾಕಾರರೂ ಸುಮಾರು ೧೦ ಗಂಟೆಗೆ ಶಾಲೆಯ ಆವರಣದಲ್ಲಿ ಸೇರುತ್ತಿರುವುದಾಗಿ ಕನ್ನಡ ಹೋರಾಟಗಾರರಾದ ಸ.ರ. ಸುದರ್ಶನ ತಿಳಿಸಿದ್ದರು. ನಾವೆಲ್ಲರೂ ಶಾಲಾ ಆವರಣದ ಬಳಿ ಹೋಗುವಷ್ಟರಲ್ಲಾಗಲೇ ಮಲ್ಲೇಶ್ ಮಾಮ ಅಲ್ಲಿ ಹಾಜರಿದ್ದರು, ನಿಗದಿಯಾಗಿದ್ದ ಸಮಯಕ್ಕಿಂತಲೂ ಮೊದಲು. ಕನ್ನಡಕ್ಕೆ ಯಾವ ಸ್ವರೂಪದಲ್ಲಿ ಅನ್ಯಾಯವಾದರೂ ಆ ಹಿರಿಯ ಚೇತನ ಸಹಿಸುತ್ತಿರಲಿಲ್ಲ; ಅದರ ಆಕ್ರೋಶ, ಕಿಚ್ಚು ಮಲ್ಲೇಶ್ ಮಾಮ ಅವರ ಕಣ್ಣುಗಳಲ್ಲಿ ಅಂದು ಕೂಡ ಎದ್ದು ಕಾಣುತ್ತಿತ್ತು. ಕನ್ನಡದ ಉಳಿವಿಗಾಗಿನ ಹೋರಾಟ ಎಂದಾಕ್ಷಣ ಮುಂಚೂಣಿಯಲ್ಲಷ್ಟೇ ಅಲ್ಲ, ಅವರೇ ಮೊದಲು ಹಾಜರಿರುತ್ತಿದ್ದರು, ಎನ್‌ಟಿಎಂ ಶಾಲೆಯ ಹೋರಾಟದಂತೆ.
ʼಆಂದೋಲನʼ ದಿನಪತ್ರಿಕೆ ಹಾಗೂ ಮಲ್ಲೇಶ್ ಮಾಮ ಅವರೊಂದಿಗಿನ ಸಂಬಂಧ ೪ ದಶಕಗಳನ್ನೂ ಮೀರಿದ್ದು. ಅಪ್ಪಾಜಿ ಹಾಗೂ ʼಆಂದೋಲನʼ ದಿನಪತ್ರಿಕೆ ಮೈಸೂರಿನಲ್ಲಿ ತಳವೂರುವಲ್ಲಿ ಮಲ್ಲೇಶ್ ಮಾಮ ಅವರ ಪಾತ್ರ ಬಹಳ ಮಹತ್ವದ್ದು. ಸಮಾಜವಾದದ ಸಿದ್ಧಾಂತವೇ ಅಪ್ಪಾಜಿ ಹಾಗೂ ಮಲ್ಲೇಶ್ ಮಾಮ ಅವರನ್ನು ಬೆಸೆದಿದ್ದ ಕೊಂಡಿಯಾಗಿತ್ತು. ಮಲ್ಲೇಶ್ ಮಾಮ ಹಾಗೂ ಅಪ್ಪಾಜಿಯ ಬಾಂಧವ್ಯ ಬಹಳ ಆತ್ಮೀಯವಾಗಿತ್ತು; ಅಪ್ಪಾಜಿಯನ್ನು ʼಕೋಟಿʼ ಎಂದು ಏಕವಚನದಲ್ಲಿ ಸಂಭೋದನೆ ಮಾಡುವಷ್ಟು ಆತ್ಮೀಯ ಬಾಂಧವ್ಯವಿತ್ತು. ಆ ಪ್ರೀತಿ ಕೊನೆಯವರೆಗೂ ಹಾಗೇ ಇತ್ತು. ಅಪ್ಪಾಜಿ ಯ ಸಮಯದಲ್ಲಿ ʼಆಂದೋಲನʼಕ್ಕೆ ಹೇಗೆ ಹೆಗಲುಕೊಟ್ಟು ನಿಂತರೋ ಹಾಗೆಯೇ ಅವರ ಕಾಲಾನಂತರವೂ ಪತ್ರಿಕೆಗೆ ಅವರ ಸಲಹೆ, ಸಹಕಾರಗಳು ನಿರಂತರವಾಗಿದ್ದವು. ೨೦೨೨ ರ ಜುಲೈನಲ್ಲಿ ಸಂಸ್ಥಾಪಕ ಸಂಪಾದಕರಿಲ್ಲದೆ ʼಆಂದೋಲನʼ ದಿನಪತ್ರಿಕೆಯ ಸುವರ್ಣ ಸಂಭ್ರಮದ ಆಚರಣೆ ಮಾಡುವುದಾದರೂ ಹೇಗೆ ಎಂಬ ದುಗುಡವು ನಮ್ಮಲ್ಲಿ ಮನೆಮಾಡಿದ್ದ ಸಂದರ್ಭದಲ್ಲಿ ನಮಗೆ ಸಮಾಧಾನದ ಮಾತುಗಳನ್ನು ಹೇಳಿ, ಧೈರ್ಯ ತುಂಬಿದ್ದರು. ನಾವು ಸಣ್ಣವರಿದ್ದಾಗ ಹೇಗೆ ಕಂಡಿದ್ದೆವೋ ಅದೇ ನೇರ, ನಿಷ್ಠುರ ನಡೆ, ನುಡಿ, ಸಿದ್ಧಾಂತಗಳನ್ನು ಕಡೆಯವರೆಗೂ ಮಾಮನಲ್ಲಿ ಕಂಡಿದ್ದೆ. ೮೦ರ ವಯಸ್ಸಿನಲ್ಲಿಯೂ ಪ್ರತಿಭಟನೆಯ ಕಿಚ್ಚು ಸ್ವಲ್ಪವೂ ತಗ್ಗಿರಲಿಲ್ಲ. ಎಂಥ ತರುಣರನ್ನೂ ನಾಚಿಸುವಷ್ಟು ಲವಲವಿಕೆಯಿಂದ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದರು.
ಈಗ ಆ ಕಿಚ್ಚು ಆರಿಹೋಗಿದೆ. ಸಮಾಜವಾದದ ಮತ್ತೊಂದು ಕೊಂಡಿ ಕಳಚಿಕೊಂಡಿದೆ. ಅನೀತಿ, ಅನ್ಯಾಯ, ಅಕ್ರಮ, ಅಸಮಾನತೆಗಳ ವಿರುದ್ಧ ಕೇಳಿಬರುತ್ತಿದ್ದ ದನಿ ಇಂದು ಮೌನಕ್ಕೆ ಜಾರಿದೆ. ತಮ್ಮ ಕೊನೆಯ ದಿನಗಳವರೆಗೂ ಹೋರಾಟವನ್ನೇ ಉಸಿರನ್ನಾಗಿಸಿಕೊಂಡಿದ್ದ ಹಿರಿಯ ಜೀವಕ್ಕೆ ಭಾರದ ಹೃದಯದೊಂದಿಗೆ ʼಆಂದೋಲನʼದ ನುಡಿನಮನ.
ಕಲಬುರ್ಗಿ: ರಾಜ್ಯದಲ್ಲಿ ನಾಯಕತ್ವ ಗೊಂದಲವನ್ನು ಹೈಕಮಾಂಡ್ ಸೃಷ್ಟಿ ಮಾಡಿಲ್ಲ. ಲೋಕಲ್‌ನವರೇ ಮಾಡಿಕೊಂಡಿದ್ದಾರೆ. ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್…
ಬೆಂಗಳೂರು: ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ.ನಗದು ಬಹುಮಾನ ಘೋಷಿಸಲಾಗಿದ್ದು, ಕರ್ನಾಟಕದ ಕ್ರೀಡಾಪಟುಗಳು ಚಿನ್ನದ ಪದಕ…
ಮಂಡ್ಯ: ಯಾರು ಇಲ್ಲದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ಅಮಾನವೀಯ ಕೃತ್ಯ ಪಾಂಡವಪುರ ತಾಲ್ಲೂಕಿನ ಚಿಕ್ಕಕೊಪ್ಪಲು…
ಬೆಂಗಳೂರು: ರಾಜ್ಯದ ಪ್ರತಿ ಯಜಮಾನಿಯರಿಗೆ ಹೊಸ ವರ್ಷಕ್ಕೂ ಮುನ್ನವೇ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ಸೋಮವಾರದಿಂದಲೇ ಪ್ರತಿ ಮನೆ ಗೃಹಲಕ್ಷ್ಮೀಯರ…
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಹುಲಿ ಕಾರ್ಯಾಚರಣೆಗೆ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.…
ಮಡಿಕೇರಿ: ಗೋವುಗಳನ್ನು ಸಾಕಣೆ ಮಾಡಲೆಂದು ಖರೀದಿಸಿ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಣೆ ಮಾಡಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಠಾಣೆ…