ಜಿಲ್ಲೆಗಳು

ಆಂದೋಲನ ಸಂದರ್ಶನ: ಸಾಮಾನ್ಯರಿಗೂ ಅತ್ಯಾಧುನಿಕ ರೈಲು ಸೌಲಭ್ಯ ಸಿಗಲಿ

ಸಾಮರ್ಥ್ಯದಲ್ಲಿ ನಾವೂ ಮುಂದಿದ್ದೇವೆ, ಬಳಸಿಕೊಳ್ಳಬೇಕಷ್ಟೆ: ವಂದೇಭಾರತ್ ರೈಲಿನ ರೂವಾರಿ ಸುಧಾಂಶು ಮಣಿ ಸಲಹೆ

ರವಿ ಕೋಟಿ/ ಕೆ.ಬಿ.ರಮೇಶ ನಾಯಕ

ಮೈಸೂರು: ಭಾರತೀಯ ರೈಲ್ವೆಗೆ ಸುದೀರ್ಘ ಇತಿಹಾಸವಿದೆ. ರೈಲ್ವೆ ವಲಯದಲ್ಲೂ ಪ್ರಯಾಣಿಕ ಸ್ನೇಹಿ ಸೌಲಭ್ಯಗಳು, ರೈಲುಗಳ ಸೇವೆಯನ್ನು ಒದಗಿಸುವಂತ ಬದಲಾವಣೆಗಳು ಆಗುತ್ತಿವೆ. ನಮ್ಮಲ್ಲೂ ಪ್ರತಿಭೆ, ಸಾಮರ್ಥ್ಯ ಇದೆ ಎನ್ನುವುದನ್ನು ರೈಲ್ವೆ ತೋರಿಸುವಂತಹ ಕಾಲವಿದು. ಸವಲತ್ತು ವಿಸ್ತರಣೆ ಜತೆ ಜತೆಗೆ ಬಡವರು ಹಾಗೂ ಮಧ್ಯಮ ವರ್ಗದವರಿಗೂ ಅತ್ಯುನ್ನತ ರೈಲು ಸೇವೆಗಳು ಸಿಗುವಂತಾಗಬೇಕು.

ಭಾರತೀಯ ರೈಲ್ವೆ ಇಲಾಖೆಯಲ್ಲಿಯೇ ಮೂರೂವರೆ ದಶಕ ಕಾಲ ಕೆಲಸ ಮಾಡಿ, ನಮ್ಮಲ್ಲಿ ವಂದೇಭಾರತ್ ರೈಲು ಯೋಜನೆ ಜಾರಿ ಹಿಂದಿನ ರೂವಾರಿ ಸುಧಾಂಶು ಮಣಿ ಅವರ ಖಚಿತ ಅಭಿಪ್ರಾಯವಿದು.

ಮೈಸೂರಿನ ಎನ್‌ಐಇ ಸಂಸ್ಥೆ ಆಯೋಜಿಸಿದ್ದ ಕಾರ‌್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಆಗಮಿಸಿದ್ದ ಮಣಿ ಅವರು ‘ಆಂದೋಲನ’ಕ್ಕೆ ವಿಶೇಷ ಸಂದರ್ಶನ ನೀಡಿದರು. ರೈಲ್ವೆ ಸುದೀರ್ಘ ಹಾದಿ, ಇತ್ತೀಚಿನ ಬೆಳವಣಿಗೆಗಳು, ಭವಿಷ್ಯದ ಕಲ್ಪನೆ ಸಹಿತ ಹಲವು ವಿಚಾರಗಳ ಕುರಿತು ಮುಕ್ತವಾಗಿಯೇ ಅವರು ಮಾತನಾಡಿದರು. ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಆಂದೋಲನ: ಭಾರತದಲ್ಲಿ ರೈಲು ಸಂಪರ್ಕ ವೇಗವಾಗಿ ಬೆಳೆದಿದ್ದರೂ ಇದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರಾಮುಖ್ಯತೆ ನೀಡಿಲ್ಲ ಅನಿಸುತ್ತದೆಯೇ?

ಎಸ್.ಮಣಿ: ನಮ್ಮ ಜನರು ತುಂಬಾ ವರ್ಷಗಳ ಕಾಲ ವಂದೇ ಭಾರತ್‌ನಂತಹ ರೈಲಿಗೆ ಕಾದಿದ್ದಾರೆ. ನಮ್ಮದೇ ವಿನ್ಯಾಸ, ಉತ್ಪಾದನೆ ಮಾಡುವ ಸಾಮರ್ಥ್ಯ ಇದ್ದರೂ ಅದು ಸಾಧ್ಯವಾಗದೆ ಬೇರೆ ದೇಶಗಳ ಎಂಎನ್‌ಸಿ ಕಂಪೆನಿಗಳನ್ನು ಅವಲಂಬಿಸಲಾಗಿತ್ತು. ನಾವು ವಿದೇಶಗಳಿಂದ ಆಮದು ಮಾಡಿಕೊಂಡು ಇಲ್ಲಿ ಕಟ್ಟುವ ಕೆಲಸ ಮಾಡುತ್ತಿದ್ದೆವು. ಆದರೆ, ನಮ್ಮ ದೇಶದಲ್ಲೇ ಯಾಕೆ ಇದನ್ನು ಮಾಡಬಾರದೆಂದು ಅನ್ನಿಸಿತ್ತು. ನಮ್ಮ ಸಾಮರ್ಥ್ಯ ಇದ್ದರೂ ಬಳಸುತ್ತಿರಲಿಲ್ಲ. ಇದನ್ನು ಬಳಸಿಕೊಂಡು ಈಗ ನಮ್ಮದೇ ರೈಲನ್ನು ಉತ್ಪಾದನೆ ಮಾಡಿದ್ದೇವೆ. ಚೆನ್ನೈನಲ್ಲಿರುವ ರೈಲು ಉತ್ಪಾದನಾ ಘಟಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿತ್ತು, ನುರಿತ ಸಿಬ್ಬಂದಿಗಳ ಸಾಮರ್ಥ್ಯವಿತ್ತು. ಇದನ್ನು ಮಾಡಲೇಬೇಕೆಂಬ ಕನಸು ಹೊಂದಿದ್ದೆವು. ಇದೊಂದು ಹಗಲು ಕನಸು ಆಗಬಾರದೆಂದು ಹಗಲು-ರಾತ್ರಿ ಕೆಲಸ ಮಾಡಿದ್ದರ ಪರಿಣಾಮವಾಗಿ ನಮ್ಮದೇ ಉತ್ಪಾದನೆಯ ರೈಲು ತಯಾರಿಸಿ ಸಂಚಾರಕ್ಕೆ ಬಿಟ್ಟಿರುವುದಕ್ಕೆ ತುಂಬಾ ಖುಷಿಯಾಗಿದೆ. ಅದರಲ್ಲಿ ಸಫಲವಾಗಿದ್ದೇವೆ.

ಆಂದೋಲನ: ಭಾರತೀಯ ರೈಲ್ವೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆಯೇ, ಬೇರೆ ದೇಶಗಳಲ್ಲಿ ತಂತ್ರಜ್ಞಾನ ಮುಂದುವರಿದಿರುವಾಗ ನಮ್ಮಲ್ಲಿ ಯಾಕೆ ಸಾಧ್ಯವಾಗಿಲ್ಲ?

ಎಸ್.ಮಣಿ: ದೇಶ ಸಾಮರ್ಥ್ಯವನ್ನು ಹೊಂದಿದೆ. ಜನಸಂಖ್ಯೆಗೆ ತಕ್ಕಂತೆ ನಾವು ಹಿಂದುಳಿದಿದ್ದೇವೆಯೇ ಹೊರತು ಬೇರೇನೂ ಇಲ್ಲ. ರೈಲು ತಂತ್ರಜ್ಞಾನದಲ್ಲಿ ನಾವು ಮುಂದುವರಿಯಬೇಕು. ವಂದೇ ಭಾರತ್ ರೈಲು ಉತ್ಪಾದನೆ ಮೊದಲ ಹಂತವಾಗಿದೆ. ಮತ್ತಷ್ಟು ಪ್ರಯಾಣ ಸಾಗಬೇಕಿದೆ. ನಮಗೆ ವೇಗವಾಗಿ ಚಲಿಸುವ ರೈಲುಗಳು, ಅರಾಮದಾಯಕ, ಸುಖಕರ ಪ್ರಯಾಣದ ರೈಲು, ವಿಮಾನ, ಸಾರಿಗೆಗಳಿಗೆ ಪೈಪೋಟಿ ನೀಡುವಂತಹ ರೈಲುಗಳು ಬರಬೇಕಿದೆ. ರೈಲ್ವೆ ಸಂಪರ್ಕದಲ್ಲಿ ಇಂಧನ ಬಳಕೆ ಕಡಿಮೆ ಮಾಡುತ್ತಿದ್ದೇವೆ.ರೈಲು ಸೇವೆಯಲ್ಲಿ ಸಾಮಾನ್ಯ ಜನರು ಕಡೆಗಣಿಸಲ್ಪಟ್ಟಿದ್ದಾರೆ. ದನಗಳಂತೆ ತುಂಬಿಕೊಂಡು ಹೋಗಲಾಗುತ್ತಿದೆ. ನಾಲ್ಕು ಜನರು ಕುಳಿತರೆ, ನಾಲ್ಕು ಜನರು ನಿಂತಿರುತ್ತಾರೆ. ರೈಲು ಸೇವೆಯನ್ನು ಜಾಸ್ತಿ ಬಳಸುವಂತೆ ಮಾಡಬೇಕು. ಶ್ರೀಮಂತರ ಜತೆಗೆ ಶ್ರೀ ಸಾಮಾನ್ಯರೂ ರೈಲಿನಲ್ಲಿ ಓಡಾಡುವ ವ್ಯವಸ್ಥೆ ಮಾಡಬೇಕು. ಇದರಿಂದಾಗಿ ರೈಲ್ವೆಗೆ ಆದಾಯ ಬರಲಿದೆ. ಈ ಆದಾಯದಿಂದ ರೈಲ್ವೆಗೆ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಸಾಮಾನ್ಯ ಜನರಿಗೂ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಸಾಮಾನ್ಯ ಜನರು ಕುಳಿತುಕೊಂಡು,ಆರಾಮವಾಗಿ ಮಲಗಿ ಪ್ರಯಾಣಿಸುವಂತಹ ರೈಲು ಬೋಗಿಗಳು, ಹವಾನಿಯಂತ್ರಿತ ಬೋಗಿಗಳು ದೊರೆಯಬೇಕು.

ಆಂದೋಲನ: ಶಿಕ್ಷಣ, ವಿಮೆ, ಬಿಎಸ್‌ಎನ್‌ಎಲ್‌ರೀತಿ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪ ಕೇಳಿಬಂದಿದೆಯಲ್ಲಾ

ಎಸ್.ಮಣಿ: ಶಿಕ್ಷಣ ಕ್ಷೇತ್ರದಲ್ಲಿ ಒಂದಿಷ್ಟು ಖಾಸಗೀಕರಣಗೊಳಿಸಿದ್ದರಿಂದ ಅನುಕೂಲವಾಗಿದೆ. ಬಿಎಸ್‌ಎನ್‌ಎಲ್, ಎಲ್‌ಐಸಿಯಂತೆ ಇದನ್ನು ಮಾಡಲಾಗದು. ನನ್ನ ಮಟ್ಟಿಗೆ ರೈಲ್ವೆಯನ್ನು ಖಾಸಗೀಕರಣ ಮಾಡದೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು. ಖಾಸಗಿಯವರಿಂದ ನಾವು ಅನುಕೂಲ ಪಡೆದುಕೊಳ್ಳುವುದನ್ನು ಮಾಡಬೇಕು. ಮುಂದುವರಿದ ರಾಷ್ಟ್ರಗಳಲ್ಲಿ ಕೆಲವು ಕ್ಷೇತ್ರಗಳನ್ನು ಖಾಸಗೀಕರಣ ಮಾಡಲಾಗಿದೆ. ದೊಡ್ಡ ರಾಷ್ಟ್ರ ಚೀನಾದಲ್ಲಿ ಉತ್ಪಾದನಾ ಕ್ಷೇತ್ರವನ್ನು ಖಾಸಗೀಕರಣ ಮಾಡಿದ್ದರಿಂದ ಸಾಕಷ್ಟು ಅನುಕೂಲವಾಗಿರುವುದು ನಮ್ಮ ಕಣ್ಣು ಮುಂದಿದೆ.

ಆಂದೋಲನ: ರೈಲ್ವೆಗೆ ಖರ್ಚು ಮಾಡುತ್ತಿರುವ ಹಣದ ಪ್ರಮಾಣ ಹೆಚ್ಚಾಗುತ್ತಿದೆಯೇ?

ಎಸ್.ಮಣಿ: ರೈಲ್ವೆ ಯೋಜನೆಗೆ ಖರ್ಚು ಮಾಡುತ್ತಿರುವ ಮೊತ್ತ ಹೆಚ್ಚಾಗುತ್ತಿದೆ.ಮುಂಚೆ ೪೦ ಸಾವಿರ ಕೋಟಿ ರೂ.ಅನುದಾನ ಮೀಸಲಿಡಲಾಗುತ್ತಿತ್ತು. ಈಗ ಅದರ ಹತ್ತು ಪಟ್ಟು ಜಾಸ್ತಿಯಾಗಿ ೫ ಲಕ್ಷ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇಷ್ಟೊಂದು ಹಣವನ್ನು ರೈಲ್ವೆಗೆ ಖರ್ಚು ಮಾಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುತ್ತಿಲ್ಲ. ರೈಲ್ವೆಗೆ ಶೇ.೩ರಿಂದ ೪ರಷ್ಟು ಆದಾಯ ಬರುತ್ತಿದೆ. ಉತ್ಪಾದನಾ ಕ್ಷೇತ್ರದಿಂದ ಬರುವ ತೆರಿಗೆಯಲ್ಲಿ ಹೆಚ್ಚಳವಾಗಿದೆ. ಹಾಗಾಗಿ,ನಾವು ಮುಂದಿನ ದಿನಗಳಲ್ಲಿ ಆದಾಯ ಹೆಚ್ಚಳ ಬರುವಂತೆ ಮಾಡಲು ಫೋಕಸ್ ಮಾಡಬೇಕು.

ಆಂದೋಲನ: ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಒಳ್ಳೆಯ ಸೇವೆ ಕೊಡಲಾಗುತ್ತಿದೆಯೇ?

ಎಸ್.ಮಣಿ: ಭಾರತದಲ್ಲಿ ಅತಿ ಹೆಚ್ಚು ಬೈಕು, ಖಾಸಗಿ ವಾಹನಗಳನ್ನು ಬಳಸುತ್ತಾರೆ. ಪ್ರತಿಯೊಬ್ಬರೂ ಸಾರಿಗೆ, ರೈಲ್ವೆ ವ್ಯವಸ್ಥೆ ಬಳಸಬೇಕು. ಹೊಸದಿಲ್ಲಿಯಲ್ಲಿ ಮೆಟ್ರೋ ರೈಲಿಗೆ ಮೂಲ ಸೌಕರ್ಯ ಕಲ್ಪಿಸಿ ನಿರ್ವಹಣೆ ಮಾಡಿಕೊಂಡು ಬರಲಾಗಿದೆ. ಭಾರತದಲ್ಲಿ ಸಂಪರ್ಕ ಸೇವೆ ಚೆನ್ನಾಗಿ ಇದೆ ಎನ್ನುವುದಕ್ಕೆ ಬೆಂಗಳೂರು ಮೆಟ್ರೋ ಮಾದರಿಯಾಗಿದೆ.

ಆಂದೋಲನ: ಮುಂದಿನ ಆಗಸ್ಟ್‌ಗೆ ೭೫ ವಂದೇ ಭಾರತ್ ರೈಲು ಸಂಪರ್ಕದ ಗುರಿ ಈಡೇರುವುದೇ?

ಎಸ್.ಮಣಿ: ದೇಶದಲ್ಲಿ ಈಗ ೮ ವಂದೇ ಭಾರತ್ ರೈಲುಗಳು ಆರಂಭವಾಗಿದೆ. ಈ ವಾರದಲ್ಲಿ ೨-೩ ರೈಲುಗಳು ಸೇವೆಗೆ ಸಜ್ಜಾಗಿವೆ. ಮುಂದಿನ ಆಗಸ್ಟ್ ಹೊತ್ತಿಗೆ ೩೦ ರೈಲುಗಳು ಸೇವೆಗೆ ಸಿಗುವ ಸಾಧ್ಯತೆ ಇದೆ. ಭಾರತದಲ್ಲೇ ತಯಾರಾಗುತ್ತಿರುವ ಕಾರಣ ಅದಕ್ಕೆ ಬೇಕಾದ ಮೂಲ ಸೌಕರ್ಯಗಳು ಬೇಕಿದೆ. ಒಂದು ಗಂಟೆಗೆ ೧೬೫ ಕಿ.ಮೀ ಚಲಿಸಬೇಕೆಂಬ ರೀತಿಯಲ್ಲಿ ಮಾಡಲಾಗುತ್ತಿದೆ. ಮೈಸೂರು-ಬೆಂಗಳೂರು ನಡುವೆ ಒಂದು ಗಂಟೆಗೆ ೧೧೦ ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರೈಲುಗಳನ್ನು ಉತ್ಪಾದನೆ ಮಾಡಿ ಸೇವೆಗೆ ನೀಡುವ ವಿಶ್ವಾಸವಿದೆ.

andolanait

Recent Posts

ವಿವಾದದ ನಡುವೆಯೂ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳದನಲ್ಲಿ ಬಾಡೂಟ ವಿತರಣೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…

45 seconds ago

ಕುವೈತ್‌ ಪ್ರವಾಸ: ಪ್ರಧಾನಿ ಮೋದಿಗೆ 20ನೇ ಅಂತರಾಷ್ಟ್ರೀಯ ಗೌರವ

ಕುವೈತ್‌/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್‌ ಮಿಶಾಲ್‌ ಅಲ್‌…

16 mins ago

ಮೈಸೂರಿನಲ್ಲಿ ನಿಮ್ಹಾನ್ಸ್‌ ಘಟಕ ಸ್ಥಾಪನೆಗೆ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…

21 mins ago

ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಪ್ರಹ್ಲಾದ್‌ ಜೋಶಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ಕಿಡಿ

ಬೆಂಗಳೂರು: ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೀಡಿರುವ ಹೇಳಿಕೆ ಅಮಿತ್‌…

51 mins ago

ಹೆಣ್ಣು ಕಾನೂನನ್ನು ಅರಿತರೆ ಅಷ್ಟೇ, ದೌರ್ಜನ್ಯ ಎದುರಿಸಲು ಸಾಧ್ಯ: ನಾಗಲಕ್ಷ್ಮೀ ಚೌಧರಿ

ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…

2 hours ago

ಮೈಸೂರು:  ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…

2 hours ago