-ಶಂಕರ್ ದೇವನೂರು
ಒಂದು ಮಾತಿದೆ. ‘ಶರಣರ ಜೀವನವನ್ನು ಮರಣದಲ್ಲಿ ನೋಡು’ ಎನ್ನುವಂತೆ ಇಂದು ಬಿಜಾಪುರದಲ್ಲಿ ಅಷ್ಟೊಂದು ಜನಸ್ತೋಮ ಸೇರಲು ಅವರೇನು ಆಸ್ತಿ ನೀಡಿದ್ದರೇ? ಹಣ ನೀಡಿದ್ದರೇ? ಇಲ್ಲ, ಅಲ್ಲಿ ಬಂದಿರುವ ಜನಸಾಗರ ಹಿಡಿದು ತಂದವರಲ್ಲ, ಬದಲಿಗೆ ಹುಡುಕಿ ಬಂದವರು. ತಮ್ಮ ಸರಳತೆ, ಸಹಜತೆಯಿಂದಲೇ ಕೋಟ್ಯಂತರ ಜನರನ್ನು ಸಂಪಾದಿಸಿದವರು ಶ್ರಿ ಸಿದ್ದೇಶ್ವರ ಸ್ವಾಮೀಜಿ.
ಸುಮಾರು 25 ವರ್ಷಗಳ ಹಿಂದೆ ನಾನು ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ವಿದ್ಯುತ್ ನಿಗಮದ ಕಾಳಿ ಜಲವಿದ್ಯುತ್ ಯೋಜನೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿನ ಸಮೀಪದಲ್ಲಿದ್ದ ಕೈಗಾ ಅಣು ವಿದ್ಯುತ್ ಸ್ಥಾವರ ಕೇಂದ್ರದಲ್ಲಿ ಸ್ನೇಹಿತರೆಲ್ಲ ಬಸವ ಜಯಂತಿಯನ್ನು ಆಚರಣೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸಿದ್ದೇಶ್ವರ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಬಂದಿದ್ದಾಗ ನನಗೆ ಅವರನ್ನು ನೋಡುವಂತೆ ಭಾಗ್ಯ ಸಿಕ್ಕಿದ್ದು. ಅದಕ್ಕೂ ಪೂರ್ವದಲ್ಲಿ ಅವರ ‘ಸಿದ್ಧಾಂತ ಶಿಖಾಮಣಿ’ ಸೇರಿದಂತೆ ಎಲ್ಲಾ ಕೃತಿಗಳನ್ನೂ ಓದಿ ಪ್ರಭಾವಿತನಾಗಿದ್ದೆ. ಮುಂದೆ ಅವರೊಂದಿಗೆ ಒಡನಾಟ ಹೆಚ್ಚಾಗಿ ಸಾಕಷ್ಟು ವಿಷಯಗಳ ಚರ್ಚೆಗಳಾದವು. ನಂತರ ಅವರೊಂದಿಗೆ ಪ್ರವಚನಗಳನ್ನು ಮಾಡಲೂ ಕೂಡ ಆರಂಭಿಸಿದೆ. ಆ ವೇಳೆ ಅವರು ‘ಶಂಕರ್ ನೀವೇ ಪ್ರವಚನ ಮಾಡಿ ನಾನೇ ಕೇಳುತ್ತೇನೆ’ ಎನ್ನುತ್ತಿದ್ದ ಮಾತುಗಳಲ್ಲಿ ನನಗೆ ಅವರ ಶಿಶುಸಹಜ ಮುಗ್ಧತೆಯ ಭಾವ ಕಾಣುತ್ತಿತ್ತು. ಅಹಂಕಾರವಿಲ್ಲ, ದರ್ಪವಿಲ್ಲ, ಎಲ್ಲವನ್ನು ತಿಳಿದು ಏನೂ ಗೊತ್ತಿಲ್ಲದ ಹಾಗೇ ಇದ್ದ ಅವರ ಅಂತಃಕರಣ ನನಗೆ ಇಷ್ಟವಾಯಿತು. ಅವರಿಂದ ನಾನು ಕಲಿತದ್ದು ವಿನಯತೆ, ಹಿತಮಿತ ಮಧುರ ಮಾತು. ಯಾರಿಗೂ ನೋವಾಗದ ಹಾಗೆ ನಡೆದುಕೊಳ್ಳುವ ರೀತಿ, ಅಷ್ಟೇ ಅಲ್ಲದೆ ತಾಯಿತನದ ಅಂತಃಕರಣ. ಇವುಗಳನ್ನು ಕಲಿತು ಅನೇಕ ಕಾರ್ಯಕ್ರಮಗಳಲ್ಲಿ ಪ್ರವಚನ ಆರಂಭಿಸಿದೆ.
ನಾನಿದ್ದ ಜಾಗ ಉಳುವಿಯ ಅವಿರೊಳ ಜ್ಞಾನಿ ಚೆನ್ನ ಬಸವನವರ ಕ್ಷೇತ್ರದ ಸಮೀಪ. ಪ್ರತಿ ಶನಿವಾರ ಕುಟುಂಬ ಸಮೇತ ಅಲ್ಲಿನ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿಗೆ ಬರುತ್ತಿದ್ದ ಬಸವ ಕಲ್ಯಾಣ ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತರೊಂದಿಗೆ ಬೆರೆತು ಬಸವ ಚಿಂತನೆಯ ಬಗ್ಗೆ ಚಿಂತಿಸ ತೊಡಗಿದೆ. ಅಲ್ಲಿ ಶರಣರ ಪರಂಪರೆಯ ದೊಡ್ಡ ಕೊಡುಗೆೆಯೇ ನನಗೆ ಸಿಕ್ಕಿತು.
ಸಾಕಷ್ಟು ಬಾರಿ ವೇದಿಕೆಗಳಲ್ಲಿ ನನ್ನ ಪ್ರವಚನಗಳಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಕೂಡ ಕಿವಿಯಾಗುತ್ತಿದ್ದರು. ನಾನು ಅವರ ಪ್ರವಚನಕ್ಕೆ ಕಿವಿಯಾಗುತ್ತಿದ್ದೆ. ಈ ವೇಳೆ ಅನೇಕ ಸಂದಿಗ್ಧ ವಿಚಾರಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ದೆನು. ಅವರ ಹಸನ್ಮುಖ ನನ್ನ ತಾಯಿಯನ್ನು ನೆನಪಾಗಿಸುತ್ತಿತ್ತು. ಅವರೆದುರಲ್ಲಿ ಒಮ್ಮೊಮ್ಮೆ ಭಾವುಕನಾಗಿ ಕಂಬನಿ ಮುಡಿಯುತ್ತಿದ್ದೆ.
ಚರ್ಚೆಯಲ್ಲಿ ಒಮ್ಮೆ ನಾನು ಅವರನ್ನು ಕೇಳಿದೆ ‘ಅಧ್ಯಾತ್ಮ’ ಎಂದರೆ ಏನು ಗುರುಗಳೆ? ಎಂದಾಗ ಬಂದ ಸರಳ ಸೂತ್ರ ‘ಸರಳತೆ ಮತ್ತು ಸಹಜತೆಯ ಬದುಕಿನ ದೈನಂದಿನ ನಡೆ’ ಅದೇ ಆಧ್ಯಾತ್ಮಿಕತೆ. ಅಧ್ಯಾತ್ಮವೆಂಬುದು ಬೋಧನೆಯ ವಸ್ತುವಲ್ಲ. ಅದು ಬದುಕಿನ ನಡೆ ಎಂದು ನನಗೆ ಪರಿಚಯಿಸಿದರು.
ಕೆಲವೊಮ್ಮ ಸಿದ್ದೇಶ್ವರರು ಯುವಜನರನ್ನು ಕುರಿತು ಹೇಳುವಾಗ, ‘ಯುವಸಮೂಹಕ್ಕೆ ಇದು ಬೆಳೆಯುವ ಕಾಲ. ಬುದ್ಧಿ, ದೇಹ, ಮನಸ್ಸು, ಸಾಮರ್ಥ್ಯ, ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಆದರೆ ಯುವ ಸಮೂಹವು ಜೀವಿಸಲು ಮುಂದಾಗಿದ್ದಾರೆ. ಅವರಿಗೆ ಜೀವಿಸುವ ಕಾಲವೇ ಬೇರೆ, ಬೆಳೆಯುವ ಕಾಲವೇ ಬೇರೆ ಎಂಬುದರ ಅರಿವಾಗಬೇಕಾಗಿದೆ. ಬೇಗ ಜೀವಿಸಲು ಮುಂದಾದರೆ ಜೀವಿತದ ಪರಿಮಿತಿಯ ಅವಧಿ ಕಡಿಮೆಯಾಗುತ್ತದೆ. ಉತ್ತಮವಾಗಿ ಜೀವಿಸಲು ಮೊದಲು ಉತ್ತಮವಾಗಿ ಬೆಳವಣಿಯಾಗಬೇಕು’ ಎಂದು ಹೇಳುತ್ತಿದ್ದರು.
ಸ್ವಾಮೀಜಿಗಳು ಅವರು ಸುತ್ತೂರಿಗೆ ಬಂದಾಗಲೆಲ್ಲ ನಾನು ಅವರನ್ನು ಮಠದಲ್ಲಿ ಭೇಟಿಯಾಗಿ ಅವರ ಪ್ರವಚನವನ್ನು ಕೇಳಿದಾಗ ನಮ್ಮ ಮನಸ್ಸಿನಲ್ಲಿದ್ದ ಭಾರ ದೂರವಾಗಿ ಮನಸ್ಸು ಹತ್ತಿಯುವಂತೆ ಹಗುರವಾಗುತ್ತಿತ್ತು. ಹಗುರವಾದಾಗ ಮನಸ್ಸು ಒಳ್ಳೆಯದನ್ನು ತುಂಬುತ್ತದೆ ಎಂಬುದು ಆ ದಾರ್ಶನಿಕರನ್ನು ನೋಡಿದಾಗ ತಿಳಿಯುತ್ತಿತ್ತು.
ಅತ್ಯಂತ ಸರಳವಾಗಿ ಜೀವಿಸಿದವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು. ಸರಳ ಜೀವನ ಕ್ರಮ, ಮುಂಜಾನೆ ವಾಯುವಿಹಾರ, ಹಗುರವಾದ ಮಿತ ಪ್ರಸಾದ ಸೇವನೆ, ಮಿತ ಮಾತು, ಹಸನ್ಮುಖ, ನಿಸರ್ಗದೊಂದಿಗಿನ ಸಂಪರ್ಕ ಅವರು ನಿಸರ್ಗವಾಗಿಯೇ ನಮಗೆ ಕಾಣುತ್ತಿದ್ದರು. ಮುಗುಳುನಗುತ್ತಿದ್ದ ಅವರ ಮುಖ ನೋಡುತ್ತಿದ್ದರೆ ಸಮಸ್ಯೆಗಳೇ ಹತ್ತಿರ ಬರುತ್ತಿರಲಿಲ್ಲ ಅನಿಸುತ್ತದೆ. ಆದ್ದರಿಂದಲೇ ಅವರನ್ನು ನೋಡಿದಾಗ ನನಗನಿಸಿದ್ದು, ‘ಮಾನವ ಚೈತನ್ಯದ ಅನಂತ ಸಾಧ್ಯತೆಗಳ ಅಸಾಧರಣ ಪ್ರತಿಮಾ ರೂಪವೇ ಸಿದ್ದೇಶ್ವರ ಸ್ವಾಮೀಜಿ’ ಎಂದು.
ಅವರೊಂದಗಿನ ನನ್ನ ಒಡನಾಟದಲ್ಲಿ ಗ್ರಹಿಸಿದ್ದು, ಯಾವುದೇ ಒಂದು ಜೀವಿಗೆ ಆಗುವ ದುಃಖ ಹಿಂಸೆಗಳು ಪರಿಸರದಲ್ಲಿರುವ ಎಲ್ಲ ಜೀವಿಗಳ ಮೇಲೂ ಪರಿಣಾಮ ಬೀರತ್ತದೆ. ಆದ್ದರಿಂದ ಅವರ ದೃಷ್ಟಿಯಲ್ಲಿ ಇಡೀ ಜೀವಕುಲವನ್ನೇ ಒಂದು ಎನ್ನಬಹುದಾಗಿದೆ. ಅವರು ಬಸವಣ್ಣನವರ ವಚನ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವವನೇ ಕುಲಜ ಎನ್ನುವ ಮಾತಿಗೆ ಬದ್ಧರಾಗಿದ್ದವರು.
ಒಮ್ಮೆ ಅವರ ಕಾಲಿಗೆ ಪೆಟ್ಟು ಬಿದ್ದಾಗ, ಪೂಜ್ಯರೇ ಹೇಗಿದ್ದೀರ? ಎಂದು ಕೇಳಿದಾಗ ಯಂತ್ರ ಕೆಟ್ಟಿದೆ. ನಾನಲ್ಲ, ಎಂದು ಹಸನ್ಮುಖದಿಂದ ಉತ್ತರಿಸಿದರು. ಆಗ ನನಗೆ ಅರ್ಥವಾದದ್ದು ಅಲ್ಲಮನ ವಚನ ‘ಕಂದಲು ಕರಗಿತ್ತು ಬೆಣ್ಣೆ ಉಳಿದಿತ್ತು ಗುಹೇಶ್ವರ’. ಈ ದೇಹ ಅಳಿಯುತ್ತದೆ ಆದರೆ ನಾವು ಮಾಡಿದ ಸೇವೆ, ಕೊಟ್ಟ ಪ್ರೀತಿ ಉಳಿಯುತ್ತದೆ ಎಂಬ ಮಾತು ಅವರಿಂದ ಅರ್ಥವಾಯಿತು.
ಅವರ ಚಿಂತನೆಗಳು ವಿಶ್ವ ಪ್ರಜ್ಞೆಯ ವಿರಾಟ ದರ್ಶನದ ತತ್ವವನ್ನು ಒಳಗೊಂಡಿದೆ. ಸಿದ್ದೇಶ್ವರ ವ್ಯಾಖ್ಯಾನಿಸಿರುವ ಜೆಎಸ್‌ಎಸ್ ಪುಸ್ತಕ ಪ್ರಕಟಣೆಯಿಂದ ಪ್ರಕಟಿಸಿರುವ ಅಲ್ಲಮ ಪ್ರಭುವಿನ ‘ವಚನ ನಿರ್ವಚನ ಕೃತಿಯೂ ಅನನ್ಯವಾಗಿದ್ದು, ಅನುಭಾವಾದ ನೆಲೆಯಲ್ಲಿ ಕನ್ನಡ ಭಾಷೆಯ ವಿಶ್ವ ರೂಪ ದರ್ಶನವನ್ನು ಕೃತಿಯಲ್ಲಿ ಕಾಣಬಹುದಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…
ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆಂಚಲಗೂಡು ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯಿಂದ ನಿರ್ಮಿಸಿರುವ ಬಡಾವಣೆಯಲ್ಲಿ ನೀರು,…
ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳುವವರು, ಅದರಲ್ಲೂ ಮುಖ್ಯವಾಗಿ ಒಬ್ಬರೇ ಪ್ರಯಾಣಿಸುವವರು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ…
ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ‘ಉದಯರವಿ’ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಸಾಹಿತ್ಯಾಸಕ್ತರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸಂಬಂಧಪಟ್ಟವರು…
ಪ್ರೊ.ಆರ್.ಎಂ.ಚಿಂತಾಮಣಿ ನುರಿತ ಹಣಕಾಸು ಆಡಳಿತಗಾರ ಮತ್ತು ದೇಶದ ಹಣಕಾಸು ಮತ್ತು ಬಂಡವಾಳ ಪೇಟೆಗಳ ಬೆಳವಣಿಗೆ ಮತ್ತು ನಿಯಂತ್ರಣದ ಉನ್ನತಾಧಿಕಾರವುಳ್ಳ ಭಾರತೀಯ…
ಲಕ್ಷ್ಮಿಕಾಂತ್ ಕೊಮಾರಪ್ಪ ಹತ್ತಾರು ಸಮಸ್ಯೆಗಳ ನಡುವೆಯೂ ಕಾಫಿ ಬೆಳೆದಿದ್ದವರಿಗೆ ನಷ್ಟದ ಭೀತಿ; ಮತ್ತಷ್ಟು ದರ ಕುಸಿತಗೊಳ್ಳುವ ಸಾಧ್ಯತೆ ಸೋಮವಾರಪೇಟೆ: ಕಾರ್ಮಿಕರ ಕೊರತೆ,…