ನಟ ವಿಷ್ಣುವರ್ಧನ್ ಸ್ಮಾರಕದ ಹಿಂದೆ ಮುಂದೆ
ಕನ್ನಡದ ಜನಪ್ರಿಯ ನಟ ವಿಷ್ಣುವರ್ಧನ್ ಸ್ಮಾರಕ ಅವರು ಇನ್ನಿಲ್ಲವಾಗಿ ಹದಿಮೂರು ವರ್ಷಗಳ ನಂತರ, ಇಂದು ಉದ್ಘಾಟನೆಯಾಗುತ್ತಿದೆ. ಅದು ಕೂಡ ಮೊದಲು ನಿಗದಿಪಡಿಸಿದಂತೆ, ಅವರ ಅಂತ್ಯಕ್ರಿಯೆ ನಡೆದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ಅಲ್ಲ. ಬದಲಿಗೆ, ಕುಟುಂಬಸ್ಥರ ಕೋರಿಕೆಯಂತೆ, ಅವರು ಆಡಿ ನಲಿದ ಮೈಸೂರಿನಲ್ಲಿ.
ವಿಷ್ಣುವರ್ಧನ್ ಅವರು ನಿಧನರಾದಾಗ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳು. ಮೂಲತಃ ಸರ್ಕಾರದ್ದೇ ಆಗಿದ್ದು, ಸ್ಟುಡಿಯೋ ನಿರ್ಮಾಣಕ್ಕೆ ಬಾಲಣ್ಣನವರಿಗೆ ದೀರ್ಘಾವಧಿ ಗುತ್ತಿಗೆಗೆ ನೀಡಲಾಗಿದ್ದ ಜಾಗ. ಅಲ್ಲಿ ಸ್ಮಾರಕ ನಿರ್ಮಾಣ ಮಾಡಲು, ಎಕರೆಗೆ ಒಂದು ಕೋಟಿ ರೂ.ಗಳಂತೆ, ಎರಡು ಎಕರೆ ಜಾಗ ಕೊಂಡುಕೊಳ್ಳುವುದಾಗಿ ಸರ್ಕಾರ ಪ್ರಕಟಿಸಿತು. ಅಲ್ಲಿಗೆ ಅಡಚಣೆಯೂ ಆರಂಭವಾಯಿತು.
ಎರಡು ಕೋಟಿ ರೂಪಾಯಿ ಕೊಟ್ಟು, ಕೊಂಡುಕೊಳ್ಳಬೇಕಾದ ಅಗತ್ಯವೇನೂ ಇರಲಿಲ್ಲ, ಸರ್ಕಾರ ಅದನ್ನು ಹಾಗೆೆಯೇ ಪಡೆಯಬಹುದಿತ್ತು ಎನ್ನುತ್ತಾರೆ ತಜ್ಞರು. ಬಾಲಣ್ಣನವರ ಮಕ್ಕಳಲ್ಲಿ ಒಬ್ಬಾಕೆ ಆ ಜಾಗದಲ್ಲಿ ತಮ್ಮದೂ ಪಾಲಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದರು. ಅದಕ್ಕೂ ಮೊದಲು, ಬಾಲಣ್ಣನವರು ನಿಧನರಾಗುತ್ತಲೇ ಅವರ ಗಂಡು ಮಕ್ಕಳಿಬ್ಬರೂ, ಅಭಿಮಾನ್ ಸ್ಟುಡಿಯೋದ 20 ಎಕರೆ ಜಾಗ ತಮ್ಮ ಅಪ್ಪನ ಪಿತ್ರಾರ್ಜಿತ ಆಸ್ತಿ ಎಂದು, ತಲಾ ಹತ್ತು ಎಕರೆಗಳಂತೆ ಪಾಲು ಮಾಡಿ ನೊಂದಾಯಿಸಿಕೊಂಡಿದ್ದರು.
ಪಾಲು ಮಾಡಿದ ನಂತರ, ಚಿತ್ರೀಕರಣಕ್ಕೆ ಬಳಸದ ಹತ್ತು ಎಕರೆಯನ್ನು ಮಾರಿ ಬಂದ ಹಣದಿಂದ ಅಭಿಮಾನ್ ಸ್ಟುಡಿಯೋ ಮೇಲ್ದರ್ಜೆಗೇರಿಸುವುದಾಗಿ ಬೆಂಗಳೂರು ನಗರ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿಗಳಿಗೆ ಬರೆದು ಅನುಮತಿ ಪಡೆದುಕೊಂಡರು. ಇನ್ನೆರಡು ವರ್ಷಗಳಲ್ಲಿ ಸ್ಟುಡಿಯೋವನ್ನು ಮೇಲ್ದರ್ಜೆಗೇರಿಸುವ ಷರತ್ತಿನೊಂದಿಗೆ, 2005ರ ಫೆಬ್ರವರಿಯಲ್ಲಿ, ಅದನ್ನು ಮಾರಿಯೂ ಬಿಟ್ಟರು. ಅದಾಗಿ ಹದಿನೆಂಟು ವರ್ಷಗಳಾಗಿವೆ. ಅಭಿಮಾನ್ ಮೇಲ್ದರ್ಜೆಗೇರಲಿಲ್ಲ.
ವಿಷ್ಣುವರ್ಧನ್ ನಿಧನರಾದದ್ದು 2009ರ ಡಿಸೆಂಬರ್ 30ರಂದು, ಮೈಸೂರಿನಲ್ಲಿ. ಅಂಬರೀಶ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಒತ್ತಾಯದಂತೆ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಯಿತು. ಅಲ್ಲಿ ಅವರ ಸ್ಮಾರಕ ಸ್ಥಾಪಿಸುವುದಾಗಿ ಸರ್ಕಾರ ಪ್ರಕಟಿಸಿತು. ಮೊದಲೇ ಹೇಳಿದಂತೆ ಅಲ್ಲಿ ಜಾಗದ ಕುರಿತಂತೆ ತಕರಾರು ಎದ್ದಿತು. ತಕರಾರು ಆರಂಭವಾಗುತ್ತಲೇ, ಸ್ಮಾರಕ ಯೋಜನೆ ನನೆಗುದಿಗೆ ಬಿದ್ದಂತಾಯಿತು. ಅಲ್ಲೇ ಪಕ್ಕದಲ್ಲಿಇನ್ನೊಂದು ಜಾಗವನ್ನು ಸರ್ಕಾರ ನೀಡಿತು. ಅಲ್ಲಿ ಸ್ಮಾರಕಕ್ಕೆ ಶಿಲಾನ್ಯಾಸವೂ ಆಯಿತು. ಅದಕ್ಕೆ ಅರಣ್ಯ ಇಲಾಖೆ ತನ್ನ ಬಫರ್‌ರೆನ್‌ನಲ್ಲಿದೆ ಎಂದು ತಕರಾರೆತ್ತಿತು. ಮತ್ತೆ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಎಂದಾಯಿತು. ಅಭಿಮಾನಿಗಳು ಅಲ್ಲೇ ಸ್ಮಾರಕ ಬೇಕು ಎಂದು ಒತ್ತಾಯವನ್ನೂ ಮಾಡಿದರು.
ಆದರೆ, ಭಾರತಿ ವಿಷ್ಣುವರ್ಧನ್ ಅವರು ವಿಷ್ಣುವರ್ಧನ್ ಅವರು ಹುಟ್ಟಿ ಬೆಳೆದ, ಕೊನೆಯುಸಿರೆಳೆದ ಮೈಸೂರಿನಲ್ಲಿ ಸ್ಮಾರಕ ಮಾಡಲು ಬಯಸಿದರು. ಅದಕ್ಕಾಗಿ ಸರ್ಕಾರ ಐದು ಎಕರೆ ಜಾಗವನ್ನೂ ಮಂಜೂರು ಮಾಡಿತು. ಭಾರತಿ ಅವರು ಅಲ್ಲಿ ಪೂಜೆ ಮಾಡಿ ಕೆಲಸ ಮುಂದುವರಿಸಿದರು.
ಆದರೆ ತಕರಾರು ಅಲ್ಲೂ ಮುಂದುವರಿಯಿತು. ಅದು ಗೋಮಾಳ ಜಾಗ ಎಂದು ರೈತರು ನ್ಯಾಯಾಲಯಕ್ಕೆ ಹೋಗಿ ತಾತ್ಕಾಲಿಕ ತಡೆಯಾಜ್ಞೆ ತಂದರು. ಅದು ತೆರವಾಗುತ್ತಲೇ 2020ರ ಸೆಪ್ಟೆಂಬರ್‌ನಲ್ಲಿ ಸ್ಮಾರಕದ ಕೆಲಸ ಆರಂಭವಾಯಿತು.
ಅಭಿಮಾನಿಗಳ ಪಾಲಿಗೆ ‘ಸಾಹಸಸಿಂಹ’ ಆಗಿದ್ದ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಜಾಗ ಪಡೆಯಲು, ಅದು ಪೂರ್ಣವಾಗಲು ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ ಅನಿರುದ್ಧ ಅವರ ಅನುಭವವೇ ಒಂದು ಸಾಹಸಗಾಥೆಯಾಗಬಹುದು.
ಚಿತ್ರರಂಗಕ್ಕೆ ವಿಷ್ಣು ಮೈಸೂರಿನ ಕೊಡುಗೆ
ವಿಷ್ಣುವರ್ಧನ್ ಅವರ ಜನನವಾಗಿದ್ದು ಮೈಸೂರಿನ ಚಾಮುಂಡಿಪುರಂನಲ್ಲಿ. ಸಂಪತ್‌ಕುಮಾರ್ ಹೆತ್ತವರಿಟ್ಟ ಹೆಸರು. ಅವರತಂದೆ ಎಚ್.ಎಲ್.ನಾರಾಯಣರಾವ್ ಸಾಹಿತಿ, ಪತ್ರಕರ್ತರು. ತಾಯಿ ಕಾಮಾಕ್ಷಮ್ಮ ಮೈಸೂರು ಆಕಾಶವಾಣಿ ಕಲಾವಿದೆಯಾಗಿದ್ದವರು. ಮೈಸೂರಿನ ಲಕ್ಷ್ಮೀಪುರದಲ್ಲಿ ಎಂ .ವಿ.ಗೋಪಾಲಸ್ವಾಮಿ ಶಿಶುವಿಹಾರದಲ್ಲಿ ಮಾಧ್ಯಮಿಕ ಶಿಕ್ಷಣ, ನಂತರ ಬೆಂಗಳೂರಿನ ಚಾಮರಾಜಪೇಟೆಯ ಮಾಡೆಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದ ಸಂಪತ್‌ಕುಮಾರ್, ಗೆಳೆಯರ ಪಾಲಿಗೆ ಕುಮಾರ್ ಆಗಿದ್ದರು.
‘ವಂಶವೃಕ್ಷ’ದಲ್ಲಿ ಬಾಲನಟ
ಓದಿನ ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ ಬೇಷ್ ಅನಿಸಿಕೊಂಡಿದ್ದ ಅವರಿಗೆ ಸಿನಿಮಾರಂಗದ ಸಂಪರ್ಕ ತಂದೆಯ ಕಾರಣದಿಂದ ಆಗಿತ್ತು. ಬಾಲನಟ, ಮಾ.ಕುಮಾರ್ ಆಗಿ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡ ಅವರು, ಕುಮಾರ್ ಆಗಿ ‘ವಂಶವೃಕ್ಷ’ ಚಿತ್ರದಲ್ಲಿ ಅಭಿನಯಿಸಿದರು. ‘ನಾಗರಹಾವು’ ಚಿತ್ರದ ರಾಮಾಚಾರಿ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದ ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್ ಎಂದು ಹೆಸರಿಟ್ಟರು. ಮೊದಲ ಚಿತ್ರದಿಂದಲೇ ಜನಪ್ರಿಯರಾದ ವಿಷ್ಣುವರ್ಧನ್ ಅಲ್ಲಿಂದಾಚೆ ತಿರುಗಿ ನೋಡಲಿಲ್ಲ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.
ಮೈಸೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ತಡೆಯಲು…
ನಂಜನಗೂಡು: ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ನಗರದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14…
ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…
ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…
ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…
ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…