7ನೇ ವೇತನ ಆಯೋಗದ ವರದಿ ಜಾರಿಯಾದರೆ ಸರಕಾರದ ಅರ್ಧಕ್ಕಿಂತ ಹೆಚ್ಚು ಆದಾಯ ವೇತನ, ಭತ್ಯೆಗೆ ಖರ್ಚು
ಬೆಂಗಳೂರು: ಸರ್ಕಾರಿ ನೌಕರರ ವೇತನ ಮತ್ತು ನಿವೃತ್ತಿ ನೌಕರರ ಪಿಂಚಣಿಗೆ ರಾಜ್ಯ ಸರ್ಕಾರದ ಆದಾಯದ ಶೇ.33ರಷ್ಟು ವ್ಯಯವಾಗುತ್ತಿದೆ. ರಾಜ್ಯ ಸರ್ಕಾರದ ಆದಾಯದಲ್ಲಿ ನೌಕರರ ವೇತನ ವೆಚ್ಚ ಶೇ.21.70ರಷ್ಟು ಆಗಲಿದ್ದು, ಪಿಂಚಣಿ ವೆಚ್ಚವು ಶೇ.12ರಷ್ಟಿದೆ. ಇದಲ್ಲದೆ ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಯ ವೇತನ ವೆಚ್ಚ, ಪಿಂಚಣಿ ನೀಡಲು ರಾಜ್ಯ ಸರ್ಕಾರ ಸಹಾಯಧನ ನೀಡುತ್ತಿದೆ.
7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ಹೊರಡಿಸಿರುವ ಪ್ರಶ್ನಾವಳಿಯಲ್ಲಿ ಈ ಮಾಹಿತಿ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರ ಕುಟುಂಬಗಳ ಸಂಖ್ಯೆ ಸುಮಾರು 5.11 ಲಕ್ಷವಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ನೌಕರರ ವೇತನಕ್ಕಾಗಿ 41,288 ಕೋಟಿ ರೂ. ಮತ್ತು 24,016 ಕೋಟಿ ರೂ.ಗಳನ್ನು ನಿವೃತ್ತ ನೌಕರರ ಕುಟುಂಬಗಳ ಪಿಂಚಣಿಗಾಗಿ ವ್ಯಯಿಸಲಾಗುತ್ತಿದೆ. ಒಟ್ಟು ನೌಕರರ ವೇತನ ಮತ್ತು ಪಿಂಚಣಿಗಾಗಿ 65,304 ಕೋಟಿ ರೂ. ವ್ಯಯವಾಗುತ್ತಿದೆ.
ನೌಕರರಿಗೆ ಬೆಂಗಳೂರಿನಲ್ಲಿ ಮಾಸಿಕ 26,850 ಹಾಗೂ ಗ್ರಾಮೀಣ ಪ್ರದೇಶದಲ್ಲಿ 23,630 ರೂ. ಕನಿಷ್ಠ ವೇತನ ನೀಡಲಾಗುತ್ತಿದೆ. ವಾರ್ಷಿಕ ವೇತನ ಬಡ್ತಿಯು ವಿವಿಧ ವೇತನ ಶ್ರೇಣಿಗಳನುಗುಣವಾಗಿ 400ರಿಂದ 3100 ರೂ.ಗಳವರೆಗೂ ಇದೆ. ಸರ್ಕಾರಿ ನೌಕರರಿಗೆ ವೈದ್ಯಕೀಯ ಮರುಪಾವತಿ ವೆಚ್ಚ ನೀಡುವುದರ ಜೊತೆಗೆ ನಗದುರಹಿತ ಚಿಕಿತ್ಸೆಗಾಗಿ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಇದಲ್ಲದೆ ವಿವಿಧ ಸೌಲಭ್ಯ ಮತ್ತು ಭತ್ಯೆಗಳನ್ನು ಸರ್ಕಾರಿ ನೌಕರರಿಗೆ ನೀಡಲಾಗುತ್ತಿದೆ. ಸರ್ಕಾರದ ವಿವಿಧ 43 ಇಲಾಖೆಗಳಲ್ಲಿ 7,69,981 ಹುದ್ದೆಗಳು ಮಂಜೂರಾಗಿದ್ದು, 5,11,272 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇನ್ನು 2,58,709 ಹುದ್ದೆಗಳು ಖಾಲಿ ಇವೆ. ಪೂರ್ಣ ಪ್ರಮಾಣದಲ್ಲಿ ಹುದ್ದೆಗಳು ಭರ್ತಿಯಾದರೆ ಸರ್ಕಾರಿ ನೌಕರರ ವೇತನ ಪ್ರಮಾಣ ದುಪ್ಪಟ್ಟಾಗುವ ಸಾಧ್ಯತೆ ಇದೆ.
ಹೀಗಾಗಿ ಸರ್ಕಾರದ ಬಹುಪಾಲು ಆದಾಯ ನೌಕರರ ವೇತನ, ಭತ್ಯೆ ಹಾಗೂ ನಿವೃತ್ತ ನೌಕರರ ಪಿಂಚಣಿಗಾಗಿ ವ್ಯಯವಾಗುತ್ತಿದೆ. ಈ ಸಂದರ್ಭದಲ್ಲೇ ರಾಜ್ಯ ಸರ್ಕಾರ ನೌಕರರ ವೇತನ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸಿದೆ. ಈ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಮಾಡಿದರೆ ಮತ್ತಷ್ಟು ಹೊರೆ ಸರ್ಕಾರದ ಮೇಲೆ ಬೀಳಲಿದೆ.