ಮೈಸೂರಿನಲ್ಲಿ ಧಮ್ಮಪದ ಉತ್ಸವ ಪ್ರಾರಂಭ: ಏನಿದರ ವಿಶೇಷ?

ಮೈಸೂರು: ಶಾಂತಿಯಿಂದ ಯುದ್ಧವನ್ನು ಗೆಲ್ಲಬಹುದೇ ಹೊರತು ವೈರತ್ವ, ದ್ವೇಷ, ಅಗೆತನದಿಂದ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ. ವೈರತ್ವ ಬೆಳೆದಷ್ಟು ಅಶಾಂತಿ ನಿರ್ಮಾಣವಾಗುತ್ತದೆ. ಆದ್ದರಿಂದ ಬುದ್ಧರು ಬೋಧಿಸಿದ ಶಾಂತಿ-ಮೈತ್ರಿ, ಕರುಣೆಯ ಗುಣಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆನಂದ ಭಂತೇಜಿ ಹೇಳಿದರು.


ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಬುದ್ಧವಿಹಾರದಲ್ಲಿ ಕರ್ನಾಟಕ ಬುದ್ಧಧಮ್ಮ ಸಮಿತಿ ಹಾಗೂ ಭಾರತೀಯ ಬೌದ್ಧ ಮಹಾಸಭಾದ ಸಹಂಗದಲ್ಲಿ 2566ನೇ ಬುದ್ಧ ಜಯಂತಿ ಅಂಗವಾಗಿ ಆಯೋಜಿಸಿದ್ದ ಎರಡು ದಿನಗಳ ‘ಧಮ್ಮಪದ ಉತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧಮ್ಮಪದ ಎಂದರೆ ಸತ್ಯದ ಮಾರ್ಗ ಎಂದರ್ಥ. ಸತ್ಯದ ಕಡೆಗೆ ಪ್ರತಿಯೊಬ್ಬರೂ ಸಾಗಬೇಕಿದೆ. ಮನಸ್ಸೇ ಎಲ್ಲವನ್ನೂ ಸೃಷ್ಟಿಸುತ್ತದೆ ಮತ್ತು ಎಲ್ಲವನ್ನೂ ನಿಯಂತ್ರಿಸುತ್ತದೆ. ಶರೀರದಲ್ಲಿ ಮನಸ್ಸು ಅತ್ಯಂತ ಮುಖ್ಯವಾದುದು. ಆದ್ದರಿಂದ ಮನಸ್ಸಿನಲ್ಲಿರುವ ವೈರತ್ವವನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಮನಸ್ಸು ಕ್ಷೀಣಿಸುತ್ತದೆ. ವೈರತ್ವದ ಮನಸ್ಸುಗಳೇ ಇಂದಿನ ಯುದ್ಧಕ್ಕೆ ಕಾರಣವಾಗಿವೆ. ಯುದ್ಧದಿಂದ ಜಗತ್ತು ನಾಶವಾಗುತ್ತದೆಯೇ ಹೊರತು ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ರಷ್ಯಾ-ಉಕ್ರೇನ್ ಘಟನೆಯನ್ನು ಸ್ಮರಿಸಿದರು.
ಕೊಳ್ಳೇಗಾಲ ತಾಲ್ಲೂಕಿನ ಚನ್ನಲಿಂಗಾನಹಳ್ಳಿ ಜೇತವನ ಬುದ್ಧವಿಹಾರದ ಮನೋರಕ್ಖಿತ ಭಂತೇಜಿ, ಮಹಾಬೋಧಿ ಸೊಸೈಟಿಯ ಕಶ್ಯಪ ಭಂತೇಜಿ ಮಾತನಾಡಿದರು. ತಿ.ನರಸೀಪುರ ಬುದ್ಧವಿಹಾರದ ಬೋಧಿರತ್ನ ಭಂತೇಜಿ, ಬೋಧಿದತ್ತ ಭಂತೇಜಿ, ನ್ಯಾನಲೋಕ ಭಂತೇಜಿ, ಬುದ್ಧರತ್ನ ಭಂತೇಜಿ, ಧಮ್ಮಪಾಲಾ ಭಂತೇಜಿ, ಬೋಧಿಪ್ರಿಯಾ ಭಂತೇಜಿ, ಗೌತಮಿ ಭಂತೇಜಿ , ಕರ್ನಾಟಕ ಬುದ್ಧ ಧಮ್ಮ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್ .ಮಹದೇವಪ್ಪ , ನಿವೃತ್ತ ಇಂಜಿನಿಯರ್ ಆರ್.ನಟರಾಜು, ಎಚ್.ಶಿವರಾಜು, ನೆಲೆ ಹಿನ್ನೆಲೆ ಗೋಪಾಲ್ ಡಾ.ಜಗನ್ನಾಥ್, ನಿಸರ್ಗ ಸಿದ್ದರಾಜು, ಪುಟ್ಟಸ್ವಾಮಿ, ಡಾ.ಕುಪ್ನಳ್ಳಿ ಎಂ.ಬೈರಪ್ಪ, ಡಾ.ಎಂ.ರಾಚಪ್ಪಾಜಿ, ಮೈವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಜೆ.ಸೋಮಶೇಖರ್, ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಜವರಪ್ಪ, ಸಂಶೋಧಕರಾದ ರೂಪೇಶ್, ಬ್ಯಾಡಮೂಡ್ಲು ಚಿನ್ನಸ್ವಾಮಿ, ನಿರಂಜನ್ ಹಾಜರಿದ್ದರು.

ಮೇ 16 ರಂದು ವೈಶಾಖ ಬುದ್ಧ ಪೂರ್ಣಿಮೆಯಂದು ಬುದ್ಧ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಕರ್ನಾಟಕದ ಅನೇಕ ಕಡೆಗಳಲ್ಲಿ 1 ವಾರಗಳ ಕಾಲ ಆಚರಿಸಲಾಗುತ್ತದೆ. ಧ್ಯಾನ, ಪ್ರವಚನ, ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ನಡೆಯುತ್ತಿರುವ ಯುದ್ಧದ ಮನಸ್ಸುಗಳನ್ನು ಮೆಟ್ಟಿ ನಿಲ್ಲಲ್ಲು ಭಗವಾನ್ ಬುದ್ಧರ ಶಾಂತಿಯ ಸಂದೇಶ ಜಗತ್ತಿಗೆ ಅನಿವಾರ್ಯವಾಗಿದ್ದು, ಇದನ್ನು ಬಿಟ್ಟರೆ ಬೇರೆ ಯಾವ ಮಾರ್ಗವೂ ಇಲ್ಲ. ವೈರತ್ವದಿಂದ ವೈರತ್ವ ಎಂದೂ ಹೋಗುವುದಿಲ್ಲ. ಬುದ್ಧರ ಸಂದೇಶ ಎಲ್ಲರ ಹೃದಯಕ್ಕೆ ತಲುಪುವಂತಾಗಬೇಕು.
-ಆನಂದ ಭಂತೇಜಿ, ಮಹಾಬೋಧಿ ಸೊಸೈಟಿ, ಬೆಂಗಳೂರು.