ಕೊಡಗಿನಲ್ಲಿ 19 ಮಂದಿಯಲ್ಲಿ ಡೆಲ್ಟಾ ವೈರಸ್‌ ಪತ್ತೆ

ಮಡಿಕೇರಿ: ಜಿಲ್ಲೆಯಲ್ಲಿ 19 ಮಂದಿಯಲ್ಲಿ ಡೆಲ್ಟಾ ರೂಪಾಂತರ ವೈರಸ್‌ ಪತ್ತೆಯಾಗಿರುವುದು ದೃಢಪಟ್ಟಿದೆ.

ಕೊಡಗು ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್ ರೇಟ್ ದಿನದಿಂದ ದಿನಕ್ಕೆ ಏರಿಳಿತದ ನಡುವೆ ಇದೀಗ ಕಳೆದ ಒಂದು ವಾರದಿಂದ ಶೇ.0.5 ಒಳಗೆ ಪಾಸಿಟಿವ್ ಪ್ರಮಾಣ ಬರುತ್ತಿದೆ. ಇದರ ನಡುವೆಯೇ ಡೆಲ್ಟಾ ವೈರಸ್‌ ಪತ್ತೆಯಾಗಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.

ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ರೂಪಾಂತರಿಯಾದ ಕೋವಿಡ್ ಡೆಲ್ಟಾ ವೇರಿಯಂಟ್ ತಳಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ನಿಮ್ಹಾನ್ಸ್‌ನಿಂದ ಬಂದಿರುವ ವರದಿಯಲ್ಲಿ 19 ಜನರಿಗೆ ಡೆಲ್ಟಾ ವೇರಿಯಂಟ್ ಇರುವುದು ದೃಢವಾಗಿದೆ. ಇದುವರೆಗೆ 67 ಸ್ಯಾಂಪಲ್ ಸಂಗ್ರಹಿಸಲಾಗಿದೆ. ಅದರಲ್ಲಿ 19 ಪ್ರಕರಣಗಳು ಪತ್ತೆಯಾಗಿವೆ.

ಈಗಾಗಲೇ ಆರೋಗ್ಯ ಇಲಾಖೆಯ ಬಳಿ ಎಲ್ಲರ ಸಂಪರ್ಕ ಇರುವುದರಿಂದ ಕೂಡಲೇ ಪತ್ತೆ ಹಚ್ಚಲಾಗುವುದು. ಅವರ ಆರೋಗ್ಯದ ಮೇಲೆ ನಿಗಾ ಇರಿಸಿ ಚಿಕಿತ್ಸೆ ಕೊಡಲಾಗುವುದು ಎಂದು ಕೊಡಗು ಡಿಎಚ್‍ಓ ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೇ ಜಿಲ್ಲೆಯ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಇಲ್ಲದೇ ಹೋದರೆ ಡೆಲ್ಟಾ ವೇರಿಯಂಟ್ ಪ್ರಕರಣ ಬೇರೆ ಜಿಲ್ಲೆಗಳಲ್ಲಿ ಹರಡುವ ಸಾಧ್ಯತೆ ಇದೆ. ಹೀಗಾಗಿ, ಜಿಲ್ಲೆಯ ಜನರು ಡೆಲ್ಟಾ ವೇರಿಯಂಟ್ ಪತ್ತೆ ಆಗಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.