ಡಿ.ಉಮಾಪತಿ

ರಾಜ್ಯಪಾಲ ರಬ್ಬರ್ ಸ್ಟ್ಯಾಂಪ್ ಅಲ್ಲ, ಕೇಂದ್ರದ ಏಜೆಂಟೂ ಆಗಬೇಕಿಲ್ಲ

“ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ” ಎಂದು ಪಂಜಾಬಿನ ರಾಜ್ಯಪಾಲರಿಗೆ ಸುಪ್ರೀಂಕೋರ್ಟು ನಿನ್ನೆ ಶುಕ್ರವಾರ (11-11-2023) ಚಾವಟಿ ಬೀಸಿದ್ದು ದೊಡ್ಡ ಅಲೆಗಳನ್ನು ಎಬ್ಬಿಸಬೇಕಿತ್ತು.

ರಾಜ್ಯಪಾಲರ ಪಕ್ಷಪಾತ, ಪೂರ್ವಗ್ರಹದ ನಡೆಗಳ ಕುರಿತು ಸರ್ವೋಚ್ಚ ನ್ಯಾಯಾಲಯ ಬಿರುನುಡಿಗಳನ್ನು ಆಡಿರುವುದು ಇದೇ ಮೊದಲಲ್ಲ. ಆದರೆ ಈ ನೆಲದ ಅತ್ಯುನ್ನತ ನ್ಯಾಯಾಲಯವನ್ನೂ ಯಾಮಾರಿಸುವ ಭಂಡತನವನ್ನು ಆಳುವವರು ಇತ್ತೀಚಿನ ವರ್ಷಗಳಲ್ಲಿ ತೋರುತ್ತ ಬಂದಿದ್ದಾರೆ. ಅಷ್ಟೇ ಅಲ್ಲ, ಅಂತಹ ಭಂಡತನವನ್ನು ಅರಗಿಸಿಕೊಂಡೂ ಇದ್ದಾರೆ.

ಚುನಾಯಿತ ಸರ್ಕಾರಗಳನ್ನು ಕೆಡವುವ ರಾಜಕಾರಣದಲ್ಲಿ ರಾಜ್ಯಪಾಲರು ಸಕ್ರಿಯವಾಗಿ ಭಾಗಿಗಳಾಗುತ್ತಿದ್ದಾರೆಂದು ಸುಪ್ರೀಂ ಕೋರ್ಟು ಆರೇಳು ತಿಂಗಳ ಹಿಂದೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಗಂಭೀರ ಕಳವಳದ ಸಂಗತಿಯಿದು ಎಂದು ಬಿರುನುಡಿಗಳನ್ನು ಬಳಸಿತ್ತು.

ಹದಿನೇಳು ತಿಂಗಳುಗಳ ಹಿಂದೆ ಮಹಾರಾಷ್ಟ್ರದ ಉದ್ಧವಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಕೆಡುವುವ ಬಿಜೆಪಿ ಕೃತ್ಯದಲ್ಲಿ ಅಲ್ಲಿನ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಶಾಮೀಲಾಗಿದ್ದನ್ನು ನ್ಯಾಯಾಲಯ ಉಲ್ಲೇಖಿಸಿತ್ತು. ಶಿವಸೇನೆಯಲ್ಲಿ ಬಂಡಾಯದ ಕಾರಣವನ್ನು ಮುಂದೆ ಮಾಡಿ ಸದನದಲ್ಲಿ ವಿಶ್ವಾಸಮತ ಯಾಚಿಸುವಂತೆ ಕೋಶಿಯಾರಿ ನೀಡಿದ ಆದೇಶ ನ್ಯಾಯಬಾಹಿರ ಎಂದು ಸಾರಿತ್ತು. ಹಾಗೆಯೇ ನಿರ್ದಿಷ್ಟ ರಾಜ್ಯ ಮಂತ್ರಿಮಂಡಲ ಶಿಫಾರಸಿನ ನಂತರವೂ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಕರೆಯಲು ತಿರಸ್ಕರಿಸಿರುವ ಉದಾಹರಣೆಗಳು ಉಂಟು.

ಶುಕ್ರವಾರ ಸುಪ್ರೀಂ ಕೋರ್ಟ್ ಕೆಂಗಣ್ಣು ಬೀರಿದ್ದು ಪಂಜಾಬಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರತ್ತ. ಪಂಜಾಬ್ ವಿಧಾನಸಭೆ ಜೂನ್ ತಿಂಗಳಲ್ಲಿ ಅಂಗೀಕರಿಸಿ ಕಳಿಸಿದ್ದ ನಾಲ್ಕು ವಿಧೇಯಕಗಳನ್ನು ಅಕ್ರಮವಾಗಿ ತಡೆಹಿಡಿದಿರುವ ಆರೋಪ ಪುರೋಹಿತ್ ಮೇಲಿದೆ. ಈ ವಿಧೇಯಕಗಳನ್ನು ಅಂಗೀಕರಿಸಿದ್ದ ವಿಧಾನಸಭೆ ಅಧಿವೇಶನವೇ ಅಸಿಂಧು ಎಂದು ಪುರೋಹಿತ್ ಸಾರಿದ್ದರು. ನಿಮ್ಮ ಅಧಿಕಾರ ವ್ಯಾಪ್ತಿ ಮೀರಿ, ಸ್ಪೀಕರ್ ಅಧಿಕಾರ ಕ್ಷೇತ್ರವನ್ನು ಅತಿಕ್ರಮಿಸಿದ್ದೀರಿ, ನೀವು ಮಾಡಿರುವ ಕೃತ್ಯದ ಗಾಂಭೀರ್ಯದ ಅರಿವಿದೆಯೇ? ವಿಧೇಯಕಗಳು ಸಂವಿಧಾನಬಾಹಿರ ಎಂಬುದು ನಿಮ್ಮ ನಿಲುವಾದರೆ ಅವು ಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಕಳಿಸುವ, ವಿಧಾನಮಂಡಲಕ್ಕೆ ಹಿಂತಿರುಗಿಸುವ ಸಂವಿಧಾನಬದ್ಧ ಅಧಿಕಾರ ನಿಮಗಿದೆ. ಅದನ್ನು ಬಿಟ್ಟು ವಿಧಾನ ಮಂಡಲ ಅಧಿವೇಶನವೇ ಅಸಿಂಧು ಎಂದು ತೀರ್ಮಾನಿಸುವ ಅಧಿಕಾರ ನಿಮಗೆ ಇಲ್ಲ. ಇಂತಹ ಅಧಿಕಾರವನ್ನು ನಿಮಗೆ (ರಾಜ್ಯಪಾಲರಿಗೆ) ನೀಡಿದರೆ ಸಂಸದೀಯ ಪ್ರಜಾಪ್ರಭುತ್ವಕ್ಕೇನು ಅರ್ಥ ಉಳಿಯಿತು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ಅಧಿವೇಶನವು ಸಿಂಧುವಾಗಿದ್ದು, ವಿಧೇಯಕಗಳನ್ನು ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಪರಿಗಣಿಸಿ ಎಂದು ಕಟು ನಿರ್ದೇಶನ ನೀಡಿತು.

ತಮಿಳುನಾಡು, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ ಹೀಗೆ ಹಲವು ರಾಜ್ಯಗಳು ರಾಜ್ಯಪಾಲರು ಪಕ್ಷ ರಾಜಕಾರಣದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಸುಪ್ರೀಂ ಕೋರ್ಟ್ ಕದ ಬಡಿದಿವೆ. ಸಂವಿಧಾನದ ಅಡಿಪಾಯವನ್ನೇ ಅಲುಗಿಸುವ ಕೃತ್ಯಗಳಲ್ಲಿ ರಾಜ್ಯಪಾಲರು ತೊಡಗಿದ್ದಾರೆಂಬ ಆರೋಪ ಕಳೆದ ಏಳೆಂಟು ವರ್ಷಗಳಲ್ಲಿ ಅತ್ಯಧಿಕವಾಗಿ ಕೇಳಿಬರುತ್ತಿದೆ.

ಈ ಅಸಹನೆ, ಅಸಹಕಾರ ವಿಶೇಷವಾಗಿ ಪ್ರತಿಪಕ್ಷಗಳ ಸರ್ಕಾರಗಳಿಗೆ ಮೀಸಲು. ರಾಜ್ಯಪಾಲರು ರಬ್ಬರ್ ಸ್ಟ್ಯಾಂಪುಗಳಲ್ಲ, ಆದರೆ ಅವರು ರಾಜ್ಯ ಸರ್ಕಾರಗಳ ತಲೆಯ ಮೇಲೆ ಕುಳಿತುಕೊಂಡು ಕಾರುಬಾರು ನಡೆಸುವ ‘ಸೂಪರ್ ಸರ್ಕಾರ’ಗಳೂ ಅಲ್ಲ. ರಾಜ್ಯಪಾಲರು ರಾಜ್ಯಗಳಲ್ಲಿ ರಾಷ್ಟ್ರಪತಿಯವರ ಪ್ರತಿನಿಧಿಗಳೇ ವಿನಾ ಕೇಂದ್ರ ಸರ್ಕಾರದ ರಾಜಕೀಯ ಏಜೆಂಟರಲ್ಲ. ಪ್ರತಿಪಕ್ಷ ಗಳ ಸರ್ಕಾರಗಳಿಗೆ ಅಡ್ಡಿ ಆತಂಕಗಳನ್ನು ಒಡ್ಡುವುದು ಕೇಂದ್ರ ಬಿಜೆಪಿ ಸರ್ಕಾರ ನೇಮಕ ಮಾಡಿದ ರಾಜ್ಯಪಾಲರ ನೇರ ಕಾರ್ಯಸೂಚಿಯೇ ಆಗಿಬಿಟ್ಟಿದೆ. ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ವಿಧೇಯಕಗಳನ್ನು ಅನಿರ್ದಿಷ್ಟಕಾಲ ತಡೆಹಿಡಿಯುತ್ತಿರುವುದು ಇತ್ತೀಚಿನ ದುಷ್ಟ ತಂತ್ರ. ಅಂಕಿತ ನೀಡುವ ಈ ಅಧಿಕಾರವನ್ನು ರಾಜ್ಯಪಾಲರು ಅಸ್ತ್ರವನ್ನಾಗಿ ಬಳಸತೊಡಗಿದ್ದಾರೆ. ಈ ತಂತ್ರವನ್ನು ಅಕ್ರಮ, ಸಂವಿಧಾನಬಾಹಿರವೆಂದು ಸಾರುವಂತೆ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟನ್ನು ವಿನಂತಿಸಿವೆ.

ಕೇರಳ ವಿಧಾನಸಭೆ ಅಂಗೀಕರಿಸಿದ ಕೆಲ ವಿಧೇಯಕಗಳು ಎರಡು ವರ್ಷಗಳಿಗೂ ಮೀರಿ ತಿರುವನಂತಪುರದ ರಾಜಭವನದಲ್ಲಿ ದೂಳು ಹಿಡಿಯುತ್ತಿವೆ. ಇಷ್ಟು ದೀರ್ಘಕಾಲ ಅಂಗೀಕಾರ ನೀಡದೆ ರಾಜ್ಯಪಾಲರು ಅವುಗಳನ್ನು ಬಾಕಿ ಇರಿಸಿಕೊಳ್ಳಲು ಕಾರಣಗಳೇ ಇಲ್ಲ. ಅಗತ್ಯವಿದ್ದರೆ ಸ್ಪಷ್ಟೀಕರಣಗಳನ್ನು ಕೇಳಬಹುದು, ವಿಧಾನಸಭೆಗೆ ವಾಪಸು ಕಳಿಸಬಹುದು ಇಲ್ಲವೇ ರಾಷ್ಟ್ರಪತಿಯವರ ಅಂಕಿತಕ್ಕೆ ರವಾನಿಸಬಹುದು. ನ್ಯಾಯಬದ್ಧ ಕಾರಣವಿಲ್ಲದೆ ಅವುಗಳನ್ನು ತಡೆದು ಇರಿಸಿಕೊಳ್ಳುವುದು ಉದ್ದೇಶಪೂರ್ವಕ ಅಡಚಣೆ. ಮತದಾರರು ಆರಿಸಿದ ವಿಧಾನಸಭೆಗೆ ಮಾಡುವ ಅವಹೇಳನ, ಚುನಾಯಿತ ಸರ್ಕಾರಗಳ ಕೆಲಸ ಮಾಡದಂತೆ ತಡೆಯುವ ಕುಕೃತ್ಯ. ರಾಜ್ಯ ಸರ್ಕಾರಗಳ ಆಡಳಿತದಲ್ಲಿ ವಿನಾಕಾರಣ ಮೂಗುತೂರಿಸುವ ಜನತಂತ್ರ ವಿರೋಧಿ ನಡೆ. ಸಂವಿಧಾನವನ್ನು ಕಾಯಬೇಕಾದವರೇ ಅದರ ಆಶಯಗಳನ್ನು ಕೆಡವುವ ದುರುಳತನ. ರಾಜ್ಯ ಸರ್ಕಾರಗಳ ವಿರುದ್ಧ ಬಹಿರಂಗವಾಗಿ ರಾಜಕೀಯ ನಿಲುವು ತಳೆಯುವುದೇ ಮುಂತಾದ ಅನಪೇಕ್ಷಿತ ನಡೆಗಳಲ್ಲಿ ನಿರತರಾಗಿರುವ ರಾಜ್ಯಪಾಲರ ಸಂಖ್ಯೆಯೇ ಹೆಚ್ಚು.

ಸಂವಿಧಾನದ ಪ್ರಕಾರ ಚುನಾಯಿತ ವಿಧಾನಸಭೆ ಮತ್ತು ಸರ್ಕಾರಗಳಲ್ಲೇ ನೈಜ ಅಽಕಾರ ಅಂತರ್ಗತ. ಈ ಅಧಿಕಾರವನ್ನು ರಾಜ್ಯಪಾಲರು ಗೌರವಿಸಿ ವಿಧೇಯಕಗಳನ್ನು ಆದಷ್ಟೂ ಶೀಘ್ರ ಅಂಗೀಕಾರ ನೀಡಬೇಕು. ಸಂವಿಧಾನದ ೨೦೦ನೆಯ ಪರಿಚ್ಛೇದವು ರಾಜ್ಯಪಾಲರಿಗೆ ಮೂರು ಆಯ್ಕೆಗಳನ್ನು ನೀಡಿದೆ. ಅಂಕಿತ ಹಾಕುವುದು, ರಾಷ್ಟ್ರಪತಿಯವರಿಗೆ ಕಳಿಸುವುದು ಹಾಗೂ ಮೂರನೆ ಯದಾಗಿ ಒಪ್ಪಿಗೆಯನ್ನು ತಡೆಹಿಡಿದು ಟೀಕೆ ಟಿಪ್ಪಣಿಗಳ ಸಹಿತ ವಿಧಾನ ಮಂಡಲಕ್ಕೆ ಆದಷ್ಟೂ ಶೀಘ್ರವಾಗಿ ವಾಪಸು ಕಳಿಸುವುದು. ಹೀಗೆ ವಾಪಸು ಕಳಿಸಿದ ವಿಧೇಯಕವನ್ನು ವಿಧಾನಮಂಡಲ ಮತ್ತೊಮ್ಮೆ ಅಂಗೀಕರಿಸಿ ಕಳಿಸಿದರೆ ಅದಕ್ಕೆ ಅಂಕಿತ ಹಾಕದೆ ರಾಜ್ಯಪಾಲರಿಗೆ ಬೇರೆ ದಾರಿಯೇ ಇಲ್ಲ. ಆದರೆ ರಾಜ್ಯಪಾಲರು ಈ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದೆ ವಿಧೇಯಕವನ್ನು ಎಷ್ಟು ಕಾಲ ಇಟ್ಟುಕೊಳ್ಳಬಹುದು ಎಂಬುದನ್ನು ಸಂವಿಧಾನ ನಿರ್ದಿಷ್ಟ ವಾಗಿ ಗೊತ್ತುಪಡಿಸಿಲ್ಲ. ರಾಜ್ಯಪಾಲರು ಈ ಅಂಶದ ದುರ್ಲಾಭ ಪಡೆಯುತ್ತಿದ್ದಾರೆ.

ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರ ವರ್ತನೆ ಹದ್ದು ಮೀರಿದ್ದು. ರಾಜ್ಯ ಸರ್ಕಾರದ ನೀತಿ ನಿರ್ಧಾರಗಳನ್ನು ಒಳಗೊಂಡ ರಾಜ್ಯಪಾಲರ ಭಾಷಣದ ಹಲವು ಭಾಗಗಳನ್ನು ಅವರು ಓದಲು ನಿರಾಕರಿಸಿದ್ದು ಸಂವಿಧಾನಬಾಹಿರ. ಸಂವಿಧಾನವನ್ನು ವ್ಯಾಖ್ಯಾನ ಮಾಡುವ ದುಸ್ಸಾಹಸಕ್ಕೂ ಅವರು ಕೈಹಾಕಿದ್ದಾರೆ. ವಿಧೇಯಕವೊಂದನ್ನು ಅನಿರ್ದಿಷ್ಟಕಾಲ ಇಟ್ಟುಕೊಳ್ಳುವು ದೆಂದರೆ ಅದನ್ನು ತಿರಸ್ಕರಿಸಿದಂತೆಯೇ ಅರ್ಥ ಎಂದಿದ್ದಾರೆ. ಆದರೆ, ತಿರಸ್ಕರಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಶಾಸನಗಳನ್ನು ರೂಪಿಸುವ ಅಥವಾ ತಿರಸ್ಕರಿಸುವ ಅಧಿಕಾರ ಶಾಸನಸಭೆಗಳಿಗೇ ಮೀಸಲು. ಈ ಮಾತನ್ನು ಸುಪ್ರೀಂ ಕೋರ್ಟ್ ಹಲವು ಸಲ ಹೇಳಿದ್ದರೂ ಪಕ್ಷ ರಾಜಕೀಯ ಕಾಯಿಲೆ ಪೀಡಿತ ರಾಜ್ಯಪಾಲರು ಜಾಣಕಿವುಡನ್ನು ನಟಿಸುತ್ತಲೇ ಬಂದಿದ್ದಾರೆ.

ರಾಜ್ಯಪಾಲರಾಗಿ ನೇಮಕಗೊಳ್ಳುವ ವ್ಯಕ್ತಿ ಈ ಹಿಂದೆ ಯಾವುದೇ ಪಕ್ಷದ ಸದಸ್ಯನಾಗಿರಬಹುದು. ಆದರೆ ಒಮ್ಮೆ ಈ ಹುದ್ದೆಗೆ ನೇಮಕ ಹೊಂದಿದ ನಂತರ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆದರೆ ಇಂದಿನ ಬಹುತೇಕ ರಾಜ್ಯಪಾಲರು ರಾಜ್ಯದ ಹಿತಕ್ಕಿಂತ ತಮ್ಮನ್ನು ನೇಮಕ ಮಾಡಿದ ರಾಜಕೀಯ ಪಕ್ಷದ ಹಿತವನ್ನೇ ಕಾಯುತ್ತಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ನಿವೃತ್ತರಾಗಿ ರುವ ಎ.ರವೀಂದ್ರ ಅವರ ಪ್ರಕಾರ ರಾಜ್ಯಪಾಲರ ಹುದ್ದೆಯನ್ನೇ ರದ್ದು ಮಾಡುವುದು ಲೇಸು. “ಸಂವಿಧಾನದ ಅಡಿಯಲ್ಲಿ ರಾಜ್ಯಪಾಲರು ತಾವಾ ಗಿಯೇ ಸ್ವತಂತ್ರವಾಗಿ ನಿರ್ವಹಿಸಬಹುದಾದ ಯಾವ ಕೆಲಸ ಕಾರ್ಯಗಳೂ ಇಲ್ಲವೇ ಇಲ್ಲ” ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತನ್ನು ರವೀಂದ್ರ ಉಲ್ಲೇಖಿಸಿದ್ದಾರೆ. ಹೀಗಿದ್ದಾಗ ತೆರಿಗೆದಾರನಿಗೆ ಹೊರೆಯಾಗುವ ಈ ಅಲಂಕಾರಿಕ ಹುದ್ದೆ ಇರಬೇಕಾದರೂ ಯಾಕೆ ಎಂಬುದು ಅವರ ಪ್ರಶ್ನೆ.

ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತರಬೇಕಾದೀತು. ಈ ಹುದ್ದೆಯು ರಾಜ್ಯ ಸರ್ಕಾರಗಳ ಬೊಕ್ಕಸಗಳ ಮೇಲೆ ಅನಗತ್ಯ ಹೊರೆ. ರಾಜ್ಯಪಾಲರ ಸಿಬ್ಬಂದಿಯನ್ನು ಸಾಕಲು ಮತ್ತು ರಾಜಭವನದ ನಿರ್ವಹಣೆಗೆಂದು ವರ್ಷಕ್ಕೆ ಗಣನೀಯ ಪ್ರಮಾಣದ ವೆಚ್ಚ ಮಾಡಬೇಕಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧದಲ್ಲಿ ಮುಳ್ಳಾಗಿ ಪರಿಣಮಿಸಿರುವ ಹುದ್ದೆಯಿದು. ಬ್ರಿಟಿಷ್ ವಸಾಹತುಶಾಹಿ ಪಳೆಯುಳಿಕೆ. ಈ ಭವ್ಯ ರಾಜಭವನಗಳನ್ನು ವಿಶಾಲ ಉದ್ಯಾನಗಳನ್ನಾಗಿಯೋ, ಆಯಾ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಸ್ತುಸಂಗ್ರಹಾಲಯಗಳನ್ನಾಗಿಯೋ, ಆರ್ಟ್ ಗ್ಯಾಲರಿಗಳನ್ನಾಗಿಯೋ ಪರಿವರ್ತಿಸಬಹುದು ಎಂಬ ಅವರ ಸಲಹೆ ಗಂಭೀರ ಪರಿಶೀಲನೆಗೆ ಅರ್ಹವಾದದ್ದು.

lokesh

Share
Published by
lokesh

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

11 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

38 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago