ಸರ್ಕಾರದ ಗಮನಕ್ಕೆ ತರದೇ ದೇಗುಲ ತೆರವಿಗೆ ಸಿಎಸ್‌ ಸೂಚಿಸಲು ಸಾಧ್ಯವಿಲ್ಲ: ಸಿದ್ದು

ಬೆಂಗಳೂರು: ಸರ್ಕಾರದ ಗಮನಕ್ಕೆ ತರದೇ ದೇವಸ್ಥಾನ ತೆರವು ಬಗ್ಗೆ ಮುಖ್ಯಕಾರ್ಯದರ್ಶಿಗಳು ಸೂಚನೆ ನೀಡಲು ಸಾಧ್ಯವಿಲ್ಲ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, 15ನೇ ತಾರೀಖಿನಿಂದ ಜಿಲ್ಲಾಧಿಕಾರಿಗಳು ಹಾಗೂ ತಹಸಿಲ್ದಾರರು ಸುಪ್ರೀಂ ಕೋರ್ಟ್‌ನ ತೀರ್ಮಾನದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾದ ಮೇಲೆ ತಮ್ಮ ಮಾನ ಉಳಿಸಿಕೊಳ್ಳಲು ಸರ್ಕಾರ ಬಣ್ಣ ಬದಲಾಯಿಸಿದೆ. ಈಗ ಅವರಿಗೆ ಒಡೆಯಬೇಡಿ ಎಂಬ ಸೂಚನೆ ಕೊಡುತ್ತೇವೆ ಎನ್ನುತ್ತಿದ್ದಾರೆ. ಸರ್ಕಾರದ ಗಮನಕ್ಕೆ ಬಾರದೆ ದೇವಾಲಯ ಒಡೆದಿದ್ದಾರಾ? ಮೈಸೂರು ಸಂಸದರು ಈಗ ದೇವಾಲಯ ಒಡೆದು ಆದ್ಮೇಲೆ ಮಾತಾಡುತ್ತಾರೆ. ಇದರ ಬದಲು ಸರ್ಕಾರದ ಗಮನಕ್ಕೆ ತಂದು ದೇವಸ್ಥಾನ ಒಡೆಯುವುದನ್ನು ತಡೆಯಬೇಕಿತ್ತು ಎಂದು ಟೀಕಿಸಿದರು.

ಹಿಂದೂ ದೇವಾಲಯಗಳನ್ನು ಬಿಜೆಪಿಯವರೇ ನಾಶ ಮಾಡುವುದು. ಮಾತೆತ್ತಿದರೆ ರಾಮನ ಜಪ ಮಾಡುತ್ತಾರೆ. ರಾಮ ಮಂದಿರ ಕಟ್ಟುತ್ತೇವೆ ಅಂತ ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸ್ಥಳೀಯರ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಮಾಡಿ ಆಮೇಲೆ ದೇವಸ್ಥಾನ ಕೆಡವಬಹುದಿತ್ತು. ಏಕಾಏಕಿ ದೇವಸ್ಥಾನ ದ್ವಂಸ ಮಾಡಿರುವುದು ಬಿಜೆಪಿಯವರ ಢೋಂಗಿತನವನ್ನು ತೋರಿಸುತ್ತದೆ. ಹಿಂದುತ್ವವಾದ ಎನ್ನುವುದು ಕೇವಲ ರಾಜಕಾರಣಕ್ಕಾಗಿ, ಓಟಿಗಾಗಿ ಮಾತ್ರ. ಅಸಲಿಗೆ ಬಿಜೆಪಿಯವರಿಗೆ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸುಪ್ರೀಂ ಕೋರ್ಟ್ ನಿರ್ಣಯ ಇಂದು ನಿನ್ನೆಯದಲ್ಲ. ಸರ್ಕಾರ ಇಷ್ಟು ದಿನ ಏನು ಮಾಡುತ್ತಿತ್ತು? ಬಿಜೆಪಿ ಸರ್ಕಾರ ಬಂದು ಎರಡೂವರೆ ವರ್ಷ ಆಯ್ತು, ಈಗ ಯಾಕೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ನಾಟಕ? ಇದು ಢೋಂಗಿತನವಲ್ಲದೆ ಇನ್ನೇನು? ನಾವು ಬಿಜೆಪಿಯವರಂತೆ ರಾಜಕೀಯಕ್ಕಾಗಿ ಧರ್ಮ, ದೇವರನ್ನು ಬಳಸಿಕೊಳ್ಳಲ್ಲ ಎಂದು ತಿಳಿಸಿದರು.

ನಾವು ಯಾವ ಆಪರೇಷನ್ ಮಾಡಲ್ಲ, ಯಾರನ್ನೂ ಬಲವಂತವಾಗಿ ಪಕ್ಷಕ್ಕೆ ಕರೆತರಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ, ಪಕ್ಷಕ್ಕೆ ಬದ್ಧರಾಗಿ ಇರುತ್ತೇನೆಂದು ಬರುವವರಿಗೆ ಪಕ್ಷದಲ್ಲಿ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.

× Chat with us