ಕೆ.ಆರ್.ಕ್ಷೇತ್ರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ: ಹಾಲಿ ಶಾಸಕನ ವಿರುದ್ಧ ಮಾಜಿ ಶಾಸಕ ಕಿಡಿ

ಮೈಸೂರು: ಕೆ.ಆರ್.ಕ್ಷೇತ್ರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಗಮನ ಹರಿಸದಿರುವ ಶಾಸಕ ಎಸ್.ಎ.ರಾಮದಾಸ್ ಕ್ಷೇತ್ರವನ್ನು ಅಪರಾಧ ಮುಕ್ತ ಮಾಡಲು ಹೊರಟ್ಟಿದ್ದೇನೆ ಎನ್ನುವುದು ನಗೆಪಾಟಲಿಗೀಡಾಗಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮೂದಲಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಂಗಳ ಹಿಂದೆ ಚಿನ್ನದಂಗಡಿಯಲ್ಲಿ ದರೋಡೆ ಮತ್ತು ಶೂಟೌಟ್ ನಡೆದು ಅಮಾಯಕ ಯುವಕ ಬಲಿಯಾಗಿದ್ದಾರೆ. ಆದಾದ ಬಳಿಕ ಅಮಾಯಕ ಯುವಕನ ಕೊಲೆಯಾಗಿದೆ. ಕೆಲವು ತಿಂಗಳ ಹಿಂದೆ ಜೋಡಿ ಕೊಲೆ ನಡೆದ ಸ್ಥಳದಲ್ಲಿಯೇ ಈ ಘಟನೆ ನಡೆದಿದೆ. ಹೀಗೆ ಕೆ.ಆರ್. ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ 9 ಕೊಲೆಗಳಾಗಿವೆ. 18 ಸರಗಳ್ಳತನ ಪ್ರಕರಣಗಳು ನಡೆದಿವೆ. ಮಹಿಳೆಯರು, ವಯೋವೃದ್ಧರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಈ ಬಗ್ಗೆ ಗಮನ ನೀಡದ ಶಾಸಕ ರಾಮದಾಸ್ ತಮ್ಮ ಕ್ಷೇತ್ರವನ್ನು ಅಪರಾಧ ಮುಕ್ತ ಕ್ಷೇತ್ರ ಮಾಡುತ್ತೇನೆಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಕನಕಗಿರಿ ಹಾಗೂ ಗುಂಡೂರಾವ್ ನಗರದ ನಡುವೆ ಇರುವ ತೋಟದಲ್ಲಿ ನಿರಂತರವಾಗಿ ಯುವಕರ ಗುಂಪು ಗಾಂಜಾ ಸೇವನೆಯಲ್ಲಿ ನಿರತವಾಗಿರುತ್ತದೆ. ಪ್ರತಿನಿತ್ಯ ಸುಮಾರು 100 ಮಂದಿಯಾದರೂ ಆ ಜಾಗದಲ್ಲಿ ಗಾಂಜಾ ಹೊಡೆಯುತ್ತಾರೆ. ಗಾಂಜಾ ಸೇವನೆ ಮಾಡುವ ಯುವಕರು ಮಚ್ಚು ಲಾಂಗುಗಳನ್ನು ಹಿಡಿದು ತಿರುಗಾಡುತ್ತಿದ್ದಾರೆ. ಈ ವಿಚಾರ ತೋಟದ ಮಾಲೀಕರ ಗಮನಕ್ಕೆ ಬಂದಿಲ್ಲ. ತೋಟದ ಮಾಲೀಕರಿಗೂ ಯುವಕರು ಗಾಂಜಾ ಸೇವನೆ ಮಾಡುತ್ತಿರುವುದಕ್ಕೂ ಸಂಬಂಧವಿಲ್ಲ. ಗಾಂಜಾ ಸೇವನೆ ಮಾಡುವ ಯುವಕರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಂಡರೆ ಅಪರಾಧ ಕೃತ್ಯಗಳು ತಾನಾಗಿಯೇ ಕಡಿಮೆಯಾಗುತ್ತವೆ. ಈ ವಿಚಾರದಲ್ಲಿ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ದೂರಿದರು.

ಶಾಸಕ ಎಸ್.ಎ.ರಾಮದಾಸ್ ಆಗಾಗ ಪೊಲೀಸ್ ಠಾಣೆಗೆ ಭೇಟಿ ನೀಡದೆ, ಪೊಲೀಸ್ ಅಧಿಕಾರಿಗಳ ಸಭೆ ಕರೆಯದೆ ಕಾಲಹರಣ ಮಾಡುತ್ತಿದ್ದಾರೆ. ಬರೀ ಸುಳ್ಳು ಹೇಳುವ ಕೆಲಸ ಮುಂದುವರಿಸಿದ್ದಾರೆ. ಕೂಡಲೇ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು. ಆ ಮೂಲಕ ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದರು.

× Chat with us