ಬೆಂಗಳೂರು : ಆರೋಪಿಗೆ ಜಾಮೀನು ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಯ ಸವಿತಾ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್ಐ ಎಂಬುದಾಗಿ ತಿಳಿದುಬಂದಿದೆ. ವಶದಲ್ಲಿದ್ದ ಆರೋಪಿಯೊಬ್ಬನ ಜಾಮೀನು ಸ್ವೀಕರಿಸಲು ಐವತ್ತು ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಸವಿತಾಗೆ ಆರೋಪಿಯ ಕಡೆಯವರು ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದಿದ್ದರು.
ಅಂತಿಮವಾಗಿ ಹದಿನೈದು ಸಾವಿರಕ್ಕೆ ಬೇಡಿಕೆಯಿಟ್ಟಿದ್ದ ಸವಿತಾ ವಿರುದ್ಧ ಆರೋಪಿ ಕಡೆಯವರಾದ ಅನಂತ್ ಕುಮಾರ್ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಸವಿತಾ ಅವರನ್ನು ಬಂಧನಕ್ಕೊಳಪಡಿಸಲು ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದರು. ಇದರಂತೆ ಹಣ ಸ್ವೀಕರಿಸುತ್ತಿದ್ದ ವೇಳೆ ಸವಿತಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಲೋಕಾಯುಕ್ತ ಪೊಲೀಸರು ಸವಿತಾ ಅವರನ್ನು ಬಂಧನಕ್ಕೊಳಪಡಿಸಿದ್ದಾರೆ.