ಮಿಸೌರಿ (ಅಮೆರಿಕ): ಲಾಸ್ ಏಂಜಲೀಸ್ – ಶಿಕಾಗೋಗೆ ಹೋಗುವ ರೈಲು ಸೋಮವಾರದಂದು ಮಿಸೌರಿ ರಾಜ್ಯದಲ್ಲಿ ಡಂಪ್ ಟ್ರಕ್ಗೆ ಡಿಕ್ಕಿ ಹೊಡೆದ ನಂತರ ನೆಲಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದು, ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿವೆ.
ಮಿಸೌರಿಯ ಮೆಂಡನ್ ಬಳಿ ರೈಲ್ವೆ ಕ್ರಾಸಿಂಗ್ ಗೇಟ್ ಬಳಿ ಡಂಪ್ ಟ್ರಕ್ ಮತ್ತು ರೈಲಿನ ಮಧ್ಯೆ ಡಿಕ್ಕಿ ಸಂಭವಿಸಿದೆ. ರೈಲಿನಲ್ಲಿ ಸುಮಾರು 243 ಪ್ರಯಾಣಿಕರು ಮತ್ತು 12 ಉದ್ಯೋಗಿಗಳು ಪ್ರಯಾಣಿಸುತ್ತಿದ್ದರು. ಅಪಘಾತದ ಪರಿಣಾಮವಾಗಿ ಎಂಟು ರೈಲುಗಳು ಮತ್ತು ಎರಡು ಇಂಜಿನ್ಗಳು ಹಳಿತಪ್ಪಿವೆ ಎಂದು ರೈಲ್ವೆ ನಿರ್ವಾಹಕ ಆಮ್ಟ್ರಾಕ್ ಹೇಳಿದ್ದಾರೆ.
ಅಪಘಾತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ರೈಲಿನಲ್ಲಿದ್ದರೆ, ಮೂರನೆಯವರು ಸ್ವತಃ ಟ್ರಕ್ ಚಾಲಕರಾಗಿದ್ದಾರೆ. ತನಿಖೆಯು ಆರಂಭಿಕ ಹಂತದಲ್ಲಿದೆ. ಹೆಚ್ಚಿನ ಮಾಹಿತಿ ಲಭ್ಯವಾದ ನಂತರ ನಾವು ಮಾಧ್ಯಮಗಳಿಗೆ ತಿಳಿಸುತ್ತೇವೆ ಎಂದು ಮಿಸೌರಿ ರಾಜ್ಯ ಹೆದ್ದಾರಿ ಗಸ್ತು ವಕ್ತಾರ ಜಸ್ಟಿನ್ ಡನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈಲುಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯಗಳು ಭರದಿಂದ ಸಾಗಿದ್ದವು. ಕಾನ್ಸಾಸ್ ನಗರದ ಈಶಾನ್ಯಕ್ಕೆ ಸುಮಾರು 100 ಮೈಲಿಗಳು (161 ಕಿಲೋಮೀಟರ್) ದೂರದಲ್ಲಿರುವ ಮೆಂಡನ್ಗೆ ಕನಿಷ್ಠ ಆರು ಹೆಲಿಕಾಪ್ಟರ್ಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಬಳಿಕ ಹೆಲಿಕಾಪ್ಟರ್ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಆಮ್ಟ್ರಾಕ್ ಹೇಳಿದರು.
ಚಿಕಾಗೋದಲ್ಲಿ ಫ್ಯೂಚರ್ ಬಿಸಿನೆಸ್ ಲೀಡರ್ಸ್ ಆಫ್ ಅಮೆರಿಕ ಸಮ್ಮೇಳನಕ್ಕೆ ತೆರಳುತ್ತಿದ್ದ ಕಾನ್ಸಾಸ್ನ ಪ್ರೌಢಶಾಲಾ ವಿದ್ಯಾರ್ಥಿಗಳ ಗುಂಪೂ ರೈಲಿನಲ್ಲಿತ್ತು. ಆದರೆ ವಿದ್ಯಾರ್ಥಿಗಳಿಗೆ ಯಾವುದೇ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಆಮ್ಟ್ರಾಕ್ ಹೇಳಿದರು. ಅಮೆರಿಕ ಇತ್ತೀಚಿನ ದಿನಗಳಲ್ಲಿ ಕಂಡ ಎರಡನೇ ಮಾರಣಾಂತಿಕ ರೈಲು ಅಪಘಾತ ಇದಾಗಿದೆ.